
"ಕೊಳ್ಳೆ ಹೊಡೆಯೋದು ನನ್ನ ಅನುಭವ ಅಲ್ಲ ಡಿಕೆಶಿಯವರೇ"- ಗುಡುಗಿದ ಕುಮಾರಸ್ವಾಮಿ
ಬಳ್ಳಾರಿಯಲ್ಲಿ ಪೊಲೀಸ್ ಸಭೆ ವಿಚಾರವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡುವಿನ ವಾಕ್ಸಮರ ತಾರಕಕ್ಕೇರಿದೆ.
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನಡುವಿನ ವಾಕ್ಸಮರ ಈಗ ತಾರಕಕ್ಕೇರಿದೆ. ಆಡಳಿತಾನುಭವದ ಕುರಿತು ಡಿ.ಕೆ. ಶಿವಕುಮಾರ್ ನೀಡಿದ್ದ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಾಕುವ ಮೂಲಕ ಕುಮಾರಸ್ವಾಮಿ ಅವರು ಕಟುವಾಗಿ ತಿರುಗೇಟು ನೀಡಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಹೆಚ್‌ಡಿಕೆ, “ನನ್ನ ಅನುಭವ ಕೊಳ್ಳೆ ಹೊಡೆಯುವುದಲ್ಲ. ನಾನು ಎರಡು ಬಾರಿ ಸಿಎಂ ಆಗಿದ್ದವನು, ಈಗ ಕೇಂದ್ರ ಮಂತ್ರಿ. ನಮ್ಮಿಬ್ಬರ ಆಡಳಿತಾನುಭವದ ಬಗ್ಗೆ ಜನರೇ ಹೇಳುತ್ತಾರೆ. ಕೊಳ್ಳೆ, ಸುಲಿಗೆ, ಬೇಲಿ, ಚದರಡಿ, ಕಮಿಷನ್ ಮತ್ತು ಫಿಕ್ಸಿಂಗ್ ಮಾಡುವುದು ನನ್ನ ಅನುಭವವಲ್ಲ. ಅಂತಹ ಭಾರೀ ಅನುಭವ ನನಗಿಲ್ಲ ಎಂದು ವಿನಮ್ರವಾಗಿ ಒಪ್ಪಿಕೊಳ್ಳುತ್ತೇನೆ" ಎಂದು ವ್ಯಂಗ್ಯವಾಡಿದ್ದಾರೆ.
ಖಾತೆ ಒತ್ತುವರಿ ನಿಸ್ಸೀಮರು
ಡಿಸಿಎಂ ಹುದ್ದೆಗೆ ಹೆಚ್ಚುವರಿ ಕೊಂಬು ಅಥವಾ ಕೋಡು ಇರುವುದಿಲ್ಲ ಎಂದು ಕುಟುಕಿರುವ ಕುಮಾರಸ್ವಾಮಿ, "ನಿಮಗೆ ಭೂ ಕಬ್ಜ ಮತ್ತು ಒತ್ತುವರಿ ಕರತಲಾಮಲಕ. ಅದೇ ರೀತಿ ಮತ್ತೊಬ್ಬ ಸಚಿವರ ಖಾತೆಯನ್ನು ಒತ್ತುವರಿ ಮಾಡುವುದರಲ್ಲಿಯೂ ನೀವು ನಿಸ್ಸೀಮರು" ಎಂದು ಡಿ.ಕೆ. ಶಿವಕುಮಾರ್ ಅವರನ್ನು ಟೀಕಿಸಿದ್ದಾರೆ.
ಗೃಹ ಸಚಿವರು ರಬ್ಬರ್ ಸ್ಟ್ಯಾಂಪಾ?
ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಡಿ.ಕೆ. ಶಿವಕುಮಾರ್ ಅವರ ಕ್ರಮವನ್ನು ಪ್ರಶ್ನಿಸಿರುವ ಹೆಚ್‌ಡಿಕೆ, "ಪೊಲೀಸ್ ಸಭೆ ನಡೆಸಲು ಗೃಹ ಸಚಿವರಿಗೆ ಅಥವಾ ಸಿಎಂಗೆ ಮಾತ್ರ ಅಧಿಕಾರವಿದೆ. ನೀವು ಸಭೆ ನಡೆಸಿದ್ದು ಶಿಷ್ಟಾಚಾರದ ಉಲ್ಲಂಘನೆ. ಗೃಹ ಸಚಿವರೇನು ಹೆಬ್ಬೆಟ್ಟು ಗೃಹ ಮಂತ್ರಿಗಳಾ? ಅಥವಾ ರಬ್ಬರ್ ಸ್ಟ್ಯಾಂಪ್‌ಗಳಾ?" ಎಂದು ಪ್ರಶ್ನೆ ಮಾಡಿದ್ದಾರೆ.
ಸಂವಿಧಾನದಲ್ಲಿ ತಿದ್ದುಪಡಿ ಮಾಡಿಸಿದ್ದೀರಾ?
"ಒಬ್ಬ ಹಿರಿಯ ಮಂತ್ರಿಯ ಖಾತೆಯನ್ನು ನೀವು ಹೀಗೆ ಅಕ್ರಮವಾಗಿ ಒತ್ತುವರಿ ಮಾಡುವುದಕ್ಕೆ ಸಂವಿಧಾನದಲ್ಲಿ ವಿಶೇಷ ತಿದ್ದುಪಡಿ ಏನನ್ನಾದರೂ ಮಾಡಿಸಿದ್ದೀರಾ? ನಿಮ್ಮ ಸೀನಿಯಾರಿಟಿಗೆ ಇಷ್ಟು ಸಣ್ಣ ವಿಷಯ ತಿಳಿಯಲಿಲ್ಲವೇ ಮಿಸ್ಟರ್ ಡಿಕೆಶಿ?" ಎಂದು ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಡಿ.ಕೆ. ಶಿವಕುಮಾರ್ ಹೇಳಿದ್ದೇನು?
ಇತ್ತೀಚೆಗೆ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ. ಶಿವಕುಮಾರ್, ಬುಧವಾರ ಬಳ್ಳಾರಿಗೆ ಭೇಟಿ ನೀಡಿ ಪೊಲೀಸರ ಸಭೆ ನಡೆಸಿದ್ದರು. ಅಲ್ಲದೇ ಗಲಭೆಯಲ್ಲಿ ಮೃತಪಟ್ಟ ಪಕ್ಷದ ಕಾರ್ಯಕರ್ತನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು. ಬಳಿಕ ಈ ಬಗ್ಗೆ ಟೀಕಿಸಿದ್ದ ಕುಮಾರಸ್ವಾಮಿಯವರು, ಡಿಕೆಶಿಯವರು ಗೃಹಸಚಿವರ ಕೆಲಸದಲ್ಲೂ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, "ನಾನು ಮುಖ್ಯಮಂತ್ರಿ ಆಗಿಲ್ಲದಿರಬಹುದು, ಆದರೆ ಕುಮಾರಸ್ವಾಮಿಗಿಂತ ರಾಜಕೀಯದಲ್ಲಿ ಹೆಚ್ಚಿನ ಅನುಭವವಿದೆ,ಆಡಳಿತದ ಉತ್ತಮ ಅನುಭವವಿದೆ. ನಾನು ಬಹಳ ಕಾಲದಿಂದ ಸಚಿವನಾಗಿದ್ದೇನೆ. ಆಡಳಿತ ಎಂದರೇನು, ಹೇಗೆ ಕೆಲಸ ಮಾಡಬೇಕು, ಯಾರನ್ನು ಕರೆಯಬೇಕು ಮತ್ತು ಯಾರನ್ನು ಕರೆಯಬಾರದು ಎಂದು ನನಗೆ ತಿಳಿದಿದೆ ಎಂದು ಹೆಚ್‌ಡಿಕೆಗೆ ತಿರುಗೇಟು ನೀಡಿದ್ದರು.

