ಜೆಡಿಎಸ್ ಶೀಘ್ರವೇ ಬಿಜೆಪಿ ಜೊತೆ ವಿಲೀನ: ಭವಿಷ್ಯ ನುಡಿದ ಡಿ.ಕೆ. ಶಿವಕುಮಾರ್
x

ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಕ್ಷವು ಸದ್ಯದಲ್ಲೇ ಬಿಜೆಪಿ ಜೊತೆ ವಿಲೀನವಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. 

ಜೆಡಿಎಸ್ ಶೀಘ್ರವೇ ಬಿಜೆಪಿ ಜೊತೆ ವಿಲೀನ: ಭವಿಷ್ಯ ನುಡಿದ ಡಿ.ಕೆ. ಶಿವಕುಮಾರ್

ಕುಮಾರಸ್ವಾಮಿ ಅವರು ಎಷ್ಟು ಬೇಗ ಬಿಜೆಪಿಯೊಂದಿಗೆ ವಿಲೀನವಾಗುತ್ತಾರೋ ಅಷ್ಟು ನಮಗೆ ಒಳ್ಳೆಯದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ತಿಳಿಸಿದ್ದಾರೆ.


Click the Play button to hear this message in audio format

ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ ಪಕ್ಷ ಸದ್ಯದಲ್ಲೇ ಬಿಜೆಪಿ ಜೊತೆ ವಿಲೀನವಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಗುರುವಾರ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಎಷ್ಟು ಬೇಗ ಬಿಜೆಪಿಯೊಂದಿಗೆ ವಿಲೀನವಾಗುತ್ತಾರೋ ಅಷ್ಟು ನಮಗೆ ಒಳ್ಳೆಯದು. ಜೆಡಿಎಸ್ ಮತ್ತು ಬಿಜೆಪಿ ಲೀಡರ್‌ಗಳೇ ಈಗ ತಮ್ಮ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಮೈತ್ರಿಯ ಗೊಂದಲದಿಂದಾಗಿ ಆ ಪಕ್ಷದ ನಾಯಕರು ನಮ್ಮ ಹಾದಿ ಏನು ಎಂದು ಕೇಳುತ್ತಿದ್ದಾರೆ. ಎರಡು ಪಕ್ಷಗಳು ವಿಲೀನವಾದರೆ ರಾಜ್ಯದಲ್ಲಿ ನೇರ ಫೈಟ್ ನಡೆಸಲು ನಾವು ಸಿದ್ಧರಿದ್ದೇವೆ. ರಾಜ್ಯದಲ್ಲಿ ಕೇವಲ ಎರಡು ಪಕ್ಷಗಳು ಮಾತ್ರ ಇದ್ದರೆ ಒಳ್ಳೆಯದು ಎಂಬುದು ನನ್ನ ವೈಯಕ್ತಿಕ ಭಾವನೆ ಎಂದು ಅವರು ತಿಳಿಸಿದರು.

ಜೆಡಿಎಸ್ ಪಕ್ಷದ ಅಸ್ತಿತ್ವದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಜನತಾ ದಳ ಪಕ್ಷವು ಒಂದು ರಾಜಕೀಯ ಪಕ್ಷದ ರೀತಿ ಕಾರ್ಯನಿರ್ವಹಿಸುತ್ತಿಲ್ಲ. ಅದು ಕೇವಲ ಒಂದು ಕುಟುಂಬದ 'ಪರ್ಸನಲ್ ಪ್ರಾಪರ್ಟಿ' ಯಂತಿದೆ. ಆ ಪಕ್ಷಕ್ಕೆ ಯಾವುದೇ ನಿರ್ದಿಷ್ಟ ಸಿದ್ಧಾಂತ ಅಥವಾ ಐಡಿಯಾಲಜಿ ಇಲ್ಲ" ಎಂದು ಕಟುವಾಗಿ ಟೀಕಿಸಿದರು.

ಇದೇ ವೇಳೆ ಬಳ್ಳಾರಿಯಲ್ಲಿ ನಡೆದ ಗಲಭೆ ವಿಚಾರವಾಗಿ ಡಿಸಿಎಂ ಬಳ್ಳಾರಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ವಿಚಾರವಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವ್ಯಕ್ತಪಡಿಸಿದ್ದ ಆಕ್ರೋಶಕ್ಕೆ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದ್ದು, "ಮಿಸ್ಟರ್ ಕುಮಾರಸ್ವಾಮಿ, ನನಗೆ ನಿಮಗಿಂತ ಹೆಚ್ಚಿನ ಅನುಭವವಿದೆ. ನಾನು ಸದ್ಯ ಈ ರಾಜ್ಯದ ಡಿಸಿಎಂ ಆಗಿದ್ದೇನೆ. ನನಗೆ ಆಡಳಿತ ಹೇಗೆ ನಡೆಸಬೇಕು ಮತ್ತು ಸಭೆಗಳನ್ನು ಹೇಗೆ ಮಾಡಬೇಕು ಎಂಬುದು ಚೆನ್ನಾಗಿ ಗೊತ್ತು. ರಾಜಕೀಯದಲ್ಲಿ ಮತ್ತು ಆಡಳಿತದಲ್ಲಿ ನಾನು ನಿಮಗಿಂತ ಹಿರಿಯ ಮತ್ತು ಹೆಚ್ಚಿನ ಅನುಭವ ಹೊಂದಿದ್ದೇನೆ. ಹೀಗಾಗಿ ಸಭೆ ನಡೆಸುವ ಬಗ್ಗೆ ನಿಮ್ಮಿಂದ ನಾನು ಕಲಿಯಬೇಕಿಲ್ಲʼʼ ಎಂದು ಅವರು ತಿಳಿಸಿದ್ದಾರೆ.

ಅಸ್ಸಾಂ ಚುನಾವಣೆಗೆ ವೀಕ್ಷಕ

ಮುಂಬರುವ ಅಸ್ಸಾಂ ವಿಧಾನಸಭಾ ಚುನಾವಣೆಗೆ ಎಐಸಿಸಿ ವತಿಯಿಂದ ಹಿರಿಯ ವೀಕ್ಷಕರನ್ನಾಗಿ ಡಿ.ಕೆ. ಶಿವಕುಮಾರ್ ಅವರನ್ನು ನೇಮಕ ಮಾಡಲಾಗಿದ್ದು, ಪಕ್ಷದ ಆದೇಶಕ್ಕೆ ತಲೆಬಾಗಿ ಅಸ್ಸಾಂಗೆ ತೆರಳುವುದಾಗಿ ಅವರು ತಿಳಿಸಿದರು. "ಪಕ್ಷ ಏನು ಹೇಳುತ್ತದೋ ಅದನ್ನು ಮಾಡುವುದು ನನ್ನ ಕರ್ತವ್ಯ. ಅಸ್ಸಾಂ ಚುನಾವಣಾ ವೀಕ್ಷಕನಾಗಿ ಕೆಲಸ ಮಾಡಲು ನನಗೆ ಬೇರೆ ಆಯ್ಕೆಗಳಿಲ್ಲ, ಪಕ್ಷದ ಜವಾಬ್ದಾರಿಯನ್ನು ನಾನು ನಿಭಾಯಿಸಲೇಬೇಕು. ಈಗಾಗಲೇ ಎಐಸಿಸಿಯಿಂದ ಈ ಕುರಿತು ಪ್ರೆಸ್ ರಿಲೀಸ್ ಕೂಡ ಹೊರಬಿದ್ದಿದೆ. ಈ ಹಿಂದೆಯೂ ಪಕ್ಷ ನನಗೆ ಇಂತಹ ಹಲವು ಜವಾಬ್ದಾರಿಗಳನ್ನು ನೀಡಿತ್ತು, ಈಗಲೂ ಕೊಟ್ಟಿದ್ದಾರೆ. ನಾನು ಅಸ್ಸಾಂಗೆ ಹೋಗಿ ಕೆಲಸ ಮಾಡುತ್ತೇನೆ" ಎಂದು ತಿಳಿಸಿದರು.

ಚುನಾವಣೆ ಸಿದ್ದತೆ ಹಾಗೂ ಜನಗಣತಿಯ ಬಗ್ಗೆ ಮಾತನಾಡಿದ ಅವರು, ಈ ವರ್ಷವನ್ನು 'ಚುನಾವಣಾ ವರ್ಷ' ಎಂದೇ ಭಾವಿಸಬೇಕು. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಾಂಗ್ರೆಸ್ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳುತ್ತಿದೆ. ಪಂಚಾಯತ್ ಮತ್ತು ಪುರಸಭೆಗಳನ್ನು ಮೇಲ್ದರ್ಜೆಗೇರಿಸುವ ಕೆಲಸಗಳು ಪ್ರಗತಿಯಲ್ಲಿವೆ. ಇನ್ನು ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಜನಗಣತಿ ಪ್ರಕ್ರಿಯೆ ಕೂಡ ಆರಂಭವಾಗಲಿದ್ದು, ನಾವು ಎಲ್ಲಾ ಹಂತದ ಚುನಾವಣೆಗಳಿಗೆ ತಯಾರಾಗುತ್ತಿದ್ದೇವೆ ಎಂದು ಅವರು ತಿಳಿಸಿದರು.

Read More
Next Story