ಗೃಹಲಕ್ಷ್ಮಿಯರಿಗೆ ಶುಭ ಸುದ್ದಿ;  24ನೇ ಕಂತಿನ ಮೊತ್ತ ಜಮೆಯಾಗುವ ದಿನಾಂಕ ಪ್ರಕಟ
x

ಗೃಹಲಕ್ಷ್ಮಿಯರಿಗೆ ಶುಭ ಸುದ್ದಿ; 24ನೇ ಕಂತಿನ ಮೊತ್ತ ಜಮೆಯಾಗುವ ದಿನಾಂಕ ಪ್ರಕಟ

ಗೃಹಲಕ್ಷ್ಮಿ ಯೋಜನೆಯ 24ನೇ ಕಂತಿನ ಹಣ ಬಿಡುಗಡೆ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಹತ್ವದ ಮಾಹಿತಿ ನೀಡಿದ್ದಾರೆ. ಡಿಸೆಂಬರ್ 22 ರಿಂದ 27ರ ಅವಧಿಯಲ್ಲಿ 2,000 ಹಣ ಖಾತೆಗೆ ಜಮೆ ಆಗಲಿದೆ.


Click the Play button to hear this message in audio format

ರಾಜ್ಯದ ಕೋಟ್ಯಂತರ ಮಹಿಳೆಯರು ಕಾತರದಿಂದ ಕಾಯುತ್ತಿದ್ದ 'ಗೃಹಲಕ್ಷ್ಮಿ' ಯೋಜನೆಯ 24ನೇ ಕಂತಿನ ಹಣ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. ಸೋಮವಾರದಿಂದ ಶನಿವಾರದೊಳಗೆ (ಡಿ.22 ರಿಂದ 27) ಫಲಾನುಭವಿಗಳ ಖಾತೆಗೆ ಹಣ ಸಂದಾಯವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.

ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "24ನೇ ಕಂತಿನ ಹಣ ಬಿಡುಗಡೆಗೆ ಆರ್ಥಿಕ ಇಲಾಖೆ ಈಗಾಗಲೇ ಅನುಮತಿ ನೀಡಿದೆ. ಹೀಗಾಗಿ ನಾಳೆಯಿಂದಲೇ (ಸೋಮವಾರ) ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡುವ ಪ್ರಕ್ರಿಯೆ ಆರಂಭವಾಗಲಿದೆ," ಎಂದು ಸ್ಪಷ್ಟಪಡಿಸಿದರು.

ಮೃತಪಟ್ಟವರ ಖಾತೆಗೂ ಹಣ: ತಡೆಗೆ ಸಾಫ್ಟ್‌ವೇರ್ ಅಸ್ತ್ರ

ಮೃತಪಟ್ಟ ಫಲಾನುಭವಿಗಳ ಖಾತೆಗೂ ಗೃಹಲಕ್ಷ್ಮಿ ಹಣ ಹೋಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, "ಇದು ನಮ್ಮ ಗಮನಕ್ಕೆ ಬಂದಿದ್ದು, ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಈಗಾಗಲೇ ಎರಡು ಬಾರಿ ಸಭೆ ನಡೆಸಲಾಗಿದೆ. ಮೃತರ ಖಾತೆಗೆ ಹಣ ಹೋಗುವುದನ್ನು ತಡೆಯಲು ಪ್ರತ್ಯೇಕ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗಿದ್ದು, ಅಂಗನವಾಡಿ ಕಾರ್ಯಕರ್ತೆಯರು ಈ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ತಪ್ಪಾಗಿ ಜಮೆಯಾದ ಹಣವನ್ನು ಹಿಂಪಡೆಯಲು (ರಿಕವರಿ) ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿದೆ," ಎಂದರು.

ಬಾಗಲಕೋಟೆ ಬುದ್ಧಿಮಾಂದ್ಯ ಶಾಲೆ ಮುಚ್ಚಿಸಲು ಕ್ರಮ

ಬಾಗಲಕೋಟೆಯಲ್ಲಿ ಬುದ್ಧಿಮಾಂದ್ಯ ಬಾಲಕನ ಮೇಲೆ ನಡೆದ ಹಲ್ಲೆ ಪ್ರಕರಣವನ್ನು 'ಅಮಾನವೀಯ' ಎಂದು ಖಂಡಿಸಿದ ಸಚಿವರು, "ಸಾಮಾನ್ಯ ಮಕ್ಕಳ ಮೇಲಿನ ಹಲ್ಲೆಯೇ ಅಪರಾಧ ಎಂದಿರುವಾಗ, ವಿಶೇಷ ಚೇತನ ಮಕ್ಕಳ ಮೇಲಿನ ದೌರ್ಜನ್ಯ ಸಹಿಸಲು ಸಾಧ್ಯವಿಲ್ಲ. ಸರ್ಕಾರಿ ಅನುಮತಿ ಇಲ್ಲದೆ ಅನಧಿಕೃತವಾಗಿ ನಡೆಯುತ್ತಿದ್ದ ಈ ವಸತಿ ಶಾಲೆಯನ್ನು ತಕ್ಷಣವೇ ಮುಚ್ಚಿಸಲು ಜಿಲ್ಲಾಧಿಕಾರಿ ಮತ್ತು ಎಸ್ಪಿ ಅವರಿಗೆ ಸೂಚನೆ ನೀಡಿದ್ದೇನೆ. ಮಕ್ಕಳ ರಕ್ಷಣಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ," ಎಂದು ತಿಳಿಸಿದರು.

ನಾಯಕತ್ವ ಬದಲಾವಣೆ: ಹೈಕಮಾಂಡ್‌ಗೆ ನಿರ್ಧಾರ

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಅಥವಾ ಸಂಪುಟ ವಿಸ್ತರಣೆಯ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಈ ಬಗ್ಗೆ ನನಗೇನೂ ತಿಳಿದಿಲ್ಲ. ಎಲ್ಲವನ್ನೂ ಹೈಕಮಾಂಡ್ ನಿರ್ಧರಿಸುತ್ತದೆ ಮತ್ತು ನಾವು ಅವರ ತೀರ್ಮಾನಕ್ಕೆ ಬದ್ಧರಾಗಿದ್ದೇವೆ," ಎಂದು ಹೇಳಿದರು.

ಮೊಮ್ಮಕ್ಕಳಿಗೆ ಲಸಿಕೆ ಹಾಕಿ ಅಭಿಯಾನಕ್ಕೆ ಚಾಲನೆ

ಇದೇ ವೇಳೆ, ಬೆಳಗಾವಿಯ ತಮ್ಮ ಗೃಹ ಕಚೇರಿಯಲ್ಲಿ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನಕ್ಕೆ ಸಚಿವರು ಚಾಲನೆ ನೀಡಿದರು. ತಮ್ಮ ಪುತ್ರ ಮೃಣಾಲ್ ಹೆಬ್ಬಾಳಕರ್ ಅವರ ಮಕ್ಕಳಾದ ಐರಾ, ಅಥರ್ವ ಹಾಗೂ ಸಹೋದರ ಮತ್ತು ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಅವರ ಪುತ್ರ ಧೀರಜ್ ಹಟ್ಟಿಹೊಳಿಗೆ ಸ್ವತಃ ಸಚಿವರೇ ಪೋಲಿಯೊ ಹನಿ ಹಾಕಿದರು.

Read More
Next Story