
ಲಕ್ಷ್ಮೀ ಹೆಬ್ಬಾಳಕರ್
ಗೃಹಲಕ್ಷ್ಮಿ ಗದ್ದಲ| ಸರ್ಕಾರಕ್ಕೆ ಮುಜುಗರ; ಸುಳ್ಳು ಮಾಹಿತಿಗೆ ಲಕ್ಷ್ಮಿ ಹೆಬ್ಬಾಳಕರ್ ವಿಷಾದ
ಫೆಬ್ರವರಿ, ಮಾರ್ಚ್ ತಿಂಗಳ ಕಂತು ಪಾವತಿಸದಿದ್ದರೂ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ತಪ್ಪು ಮಾಹಿತಿ ನೀಡಿದ್ದನ್ನು ಪ್ರತಿಪಕ್ಷಗಳು ಗಂಭೀರವಾಗಿ ಪರಿಗಣಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ.
ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ಹಣ ಪಾವತಿ ವಿಚಾರವು ದೊಡ್ಡ ಮಟ್ಟದ ಮುಜುಗರ ತಂದೊಡ್ಡಿದೆ. ಆಗಸ್ಟ್ ತಿಂಗಳವರೆಗಿನ ಗೃಹಲಕ್ಷ್ಮಿ ಹಣ ಜಮೆ ಮಾಡಿರುವ ಕುರಿತು ಈಚೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದು, ರಾಜ್ಯ ಸರ್ಕಾರಕ್ಕೆ ಮುಖಭಂಗ ತಂದಿದೆ.
ಫೆಬ್ರವರಿ, ಮಾರ್ಚ್ ತಿಂಗಳ ಕಂತು ಪಾವತಿಸದೇ ಹೋದರೂ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ತಪ್ಪು ಮಾಹಿತಿ ನೀಡಿದ್ದನ್ನು ಪ್ರತಿಪಕ್ಷಗಳು ಗಂಭೀರವಾಗಿ ಪರಿಗಣಿಸಿ ತರಾಟೆಗೆ ತೆಗೆದುಕೊಂಡಿವೆ.
ಬುಧವಾರ ಅಧಿವೇಶನದಲ್ಲಿ ಗೃಹ ಲಕ್ಷ್ಮಿ ಹಣದ ಕುರಿತು ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಸದಸ್ಯರು ಕೂಡಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಸದನಕ್ಕೆ ಕರೆಸುವಂತೆ ಒತ್ತಾಯಿಸಿದರು.
ಲಕ್ಷ್ಮಿ ಹೆಬ್ಬಾಳಕರ್ ನೀಡಿದ್ದ ಉತ್ತರವೇನು?
ರಾಜ್ಯ ಸರ್ಕಾರ ಆಗಸ್ಟ್ ವರೆಗಿನ ಗೃಹಲಕ್ಷ್ಮಿ ಕಂತುಗಳನ್ನು ಫಲಾನುಭವಿಗಳ ಖಾತೆ ಜಮೆ ಮಾಡಿದೆ. ಯೋಜನೆ ಆರಂಭವಾದಗಿನಿಂದ 1.24 ಕೋಟಿ ಮಹಿಳೆಯರಿಗೆ ರೂ.54,000 ಕೋಟಿ ಗೃಹಲಕ್ಷ್ಮಿ ಹಣ ಸಂದಾಯ ಮಾಡಲಾಗಿದೆ. ಒಟ್ಟು 23 ಕಂತುಗಳಲ್ಲಿ ನೋಂದಾಯಿತ ಪ್ರತಿ ಕುಟುಂಬದ ಯಜಮಾನಿಗೆ ತಲಾ ರೂ.46,000 ಪಾವತಿಸಲಾಗಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಸದನಕ್ಕೆ ಉತ್ತರ ನೀಡಿದ್ದರು. ಸೆಪ್ಟೆಂಬರ್, ಅಕ್ಟೋಬರ್ ಹಾಗೂ ನವೆಂಬರ್ ತಿಂಗಳ ಕಂತುಗಳ ಪಾವತಿಗೂ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು.
ಈ ಮಧ್ಯೆ, ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಕಂತು ಪಾವತಿಯಾಗದಿರುವ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಪ್ರತಿಪಕ್ಷ ಬಿಜೆಪಿಯು ಲಕ್ಷ್ಮಿ ಹೆಬ್ಬಾಳಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಹಲವರು ಗೃಹಲಕ್ಷ್ಮಿ ಕಂತು ಬಾಕಿ ಇರುವ ಬಗ್ಗೆ ಪ್ರಸ್ತಾಪಿಸಿದ್ದರು.
ವಿಳಂಬಕ್ಕೆ ಕಾರಣವೇನು?
ಗೃಹ ಲಕ್ಷ್ಮಿ ಫಲಾನುಭವಿಗಳಿಗೆ ಈ ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದಲೇ ರೂ.2000 ಹಣ ಜಮೆ ಮಾಡಲಾಗುತ್ತಿತ್ತು. ಈಗ ತಾಲ್ಲೂಕು ಪಂಚಾಯಿತಿಗಳಿಂದ ಫಲಾನುಭವಿಗಳ ಖಾತೆ ಹಣ ಜಮೆ ಮಾಡುತ್ತಿರುವುದರಿಂದ ಕೆಲ ತಾಂತ್ರಿಕ ಕಾರಣಗಳು ಎದುರಾಗಿವೆ.
1.24 ಲಕ್ಷ ಫಲಾನುಭವಿಗಳಿಗೆ ಒಟ್ಟಿಗೆ ಹಣ ಪಾವತಿ ಮಾಡುವಾಗೂ ಸರ್ವರ್ ಸಮಸ್ಯೆಗಳು ಎದುರಾಗಿ ಕಂತು ಪಾವತಿ ವಿಳಂಬವಾಗಿದೆ. ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಗೃಹಲಕ್ಷ್ಮಿ ಕಂತು ಪಾವತಿಗೂ ಇದೇ ತಾಂತ್ರಿಕ ಸಮಸ್ಯೆ ಕಾರಣವಾಗಿದೆ. ಕೂಡಲೇ ಸಮಸ್ಯೆ ಬಗೆಹರಿಸಿ, ಪಾವತಿಸಲಾಗುವುದು ಎಂದು ಇಲಾಖೆ ಮೂಲಗಳು ತಿಳಿಸಿವೆ.
ಇದೇ ವಿಚಾರವಾಗಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅವರು ಫೆಬ್ರವರಿ, ಮಾರ್ಚ್ ತಿಂಗಳ ಕಂತನ್ನು ಶೀಘ್ರವೇ ಪಾವತಿಸುವುದಾಗಿ ಭರವಸೆ ನೀಡಿದ್ದರು. ಜತೆಗೆ ಸೆಪ್ಟೆಂಬರ್, ಅಕ್ಟೋಬರ್ ಹಾಗೂ ನವೆಂಬರ್ ತಿಂಗಳ ಹಣವನ್ನು ಸದ್ಯದಲ್ಲೇ ಪಾವತಿಸಲಾಗುವುದು ಎಂದು ಹೇಳಿದ್ದರು.
ಸದನದ ಕ್ಷಮೆ ಕೇಳಿದ ಸಚಿವೆ
ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಬುಧವಾರ ಸದನಕ್ಕೆ ಹಾಜರಾಗಿ ಗೃಹಲಕ್ಷ್ಮಿ ಗದ್ದಲಕ್ಕೆ ಸ್ಪಷ್ಟನೆ ನೀಡಿದರು. ಆಗಸ್ಟ್ ತಿಂಗಳವರೆಗಿನ ಕಂತು ಪಾವತಿಸಿರುವ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದರು. ಆದರೆ, ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಕಂತು ಪಾವತಿಯಾಗದಿರವ ಮಾಹಿತಿ ಇರಲಿಲ್ಲ. ಕೊನೆಗೆ ಅಧಿಕಾರಿಗಳನ್ನು ವಿಚಾರಿಸಿದಾಗ ನನ್ನ ಗಮನಕ್ಕೆ ಬಂತು. ನಾನು ಉದ್ದೇಶಪೂರ್ವಕವಾಗಿ ಸದನಕ್ಕೆ ಸುಳ್ಳು ಹೇಳಿಲ್ಲ. ಇದಕ್ಕಾಗಿ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.

