
ಬೆಂಗಳೂರಿನಲ್ಲಿ 1.74 ಲಕ್ಷ ಚದರ ಅಡಿ ಕಚೇರಿ ಸ್ಥಾಪಿಸಿದ ಡಿಸ್ನಿ; ಭರಪೂರ ಉದ್ಯೋಗವಕಾಶ
ಬೆಂಗಳೂರಿನಲ್ಲಿ ಲಭ್ಯವಿರುವ ವಿಫುಲ ತಂತ್ರಜ್ಞಾನ ಮತ್ತು ಸೃಜನಶೀಲ ಪ್ರತಿಭೆಗಳನ್ನು ಬಳಸಿಕೊಳ್ಳುವುದು ಡಿಸ್ನಿಯ ಪ್ರಮುಖ ಉದ್ದೇಶ ಎಂದು ಹೇಳಲಾಗುತ್ತಿದೆ.
ಜಾಗತಿಕ ಮನರಂಜನಾ ಕ್ಷೇತ್ರದ ದಿಗ್ಗಜ ಸಂಸ್ಥೆ 'ವಾಲ್ಟ್ ಡಿಸ್ನಿ' (Walt Disney) ಬೆಂಗಳೂರಿನಲ್ಲಿ ತನ್ನ ಅಸ್ತಿತ್ವವನ್ನು ಭದ್ರಪಡಿಸಿಕೊಳ್ಳಲು ಮುಂದಾಗಿದೆ. ನಗರದ ಹೊರವರ್ತುಲ ರಸ್ತೆಯಲ್ಲಿರುವ (ORR) 'ಆರ್‌ಎಂಝಡ್ ಎಕೋವರ್ಲ್ಡ್ 20' (RMZ Ecoworld 20) ನಲ್ಲಿ ಬರೋಬ್ಬರಿ 1.74 ಲಕ್ಷ ಚದರ ಅಡಿ ಕಚೇರಿ ಜಾಗವನ್ನು ಕಂಪನಿ ಭೋಗ್ಯಕ್ಕೆ ಪಡೆದುಕೊಂಡಿದೆ.
ಈ ಬೆಳವಣಿಗೆಯ ಮೂಲಕ, ಡಿಸ್ನಿ ಕಂಪನಿಯು ಮುಂಬೈಗಿಂತ ಹೆಚ್ಚಾಗಿ ಬೆಂಗಳೂರಿನತ್ತ ತನ್ನ ಚಿತ್ತ ಹರಿಸಿದ್ದು, ದೀರ್ಘಾವಧಿಯ ಕಾರ್ಯಾಚರಣೆಗಾಗಿ ಸಿಲಿಕಾನ್ ಸಿಟಿಯನ್ನು ಆಯ್ದುಕೊಂಡಿದೆ.
ಬೆಂಗಳೂರಿನಲ್ಲಿ ಲಭ್ಯವಿರುವ ವಿಫುಲ ತಂತ್ರಜ್ಞಾನ ಮತ್ತು ಸೃಜನಶೀಲ ಪ್ರತಿಭೆಗಳನ್ನು ಬಳಸಿಕೊಳ್ಳುವುದು ಡಿಸ್ನಿಯ ಪ್ರಮುಖ ಉದ್ದೇಶವಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, 2025ರಲ್ಲಿ ಭಾರತದ ಗ್ರೇಡ್-ಎ (Grade-A) ಕಚೇರಿ ಸ್ಥಳಗಳ ಗುತ್ತಿಗೆಯಲ್ಲಿ ಬೆಂಗಳೂರು ಶೇ. 25ರಷ್ಟು ಪಾಲನ್ನು ಹೊಂದುವ ಮೂಲಕ ಮುಂಚೂಣಿಯಲ್ಲಿದೆ ಎಂದು ಜೆಎಲ್‌ಎಲ್ (JLL) ದತ್ತಾಂಶಗಳು ತಿಳಿಸಿವೆ.
ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ
ಡಿಸ್ನಿಯ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಇದು ನಗರದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ನಿರೀಕ್ಷಿಸಲಾಗಿದೆ. ವಿಶೇಷವಾಗಿ ಹೊರವರ್ತುಲ ರಸ್ತೆಯ ಸಂಪರ್ಕ ಮತ್ತು ಮೂಲಸೌಕರ್ಯಗಳು ಇಂತಹ ಬೃಹತ್ ಕಂಪನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ ಎಂಬ ಅಭಿಪ್ರಾಯಗಳು ಕೇಳಿಬಂದಿವೆ.
ಹೈದರಾಬಾದ್‌ನಿಂದ ಪೈಪೋಟಿ
ದಕ್ಷಿಣ ಭಾರತದಲ್ಲಿ ಮಾಧ್ಯಮ ಕ್ಷೇತ್ರ ಭರ್ಜರಿಯಾಗಿ ಬೆಳೆಯುತ್ತಿದೆ. ಒಂದೆಡೆ ಬೆಂಗಳೂರು ಡಿಸ್ನಿಯನ್ನು ಸೆಳೆದರೆ, ಇತ್ತೀಚೆಗೆ ಹೈದರಾಬಾದ್‌ನಲ್ಲಿ ನೆಟ್‌ಫ್ಲಿಕ್ಸ್ (Netflix) ಮತ್ತು ವಾರ್ನರ್ ಬ್ರದರ್ಸ್ (Warner Bros) ನಂತಹ ಕಂಪನಿಗಳು ತಮ್ಮ ಕಚೇರಿಗಳನ್ನು ವಿಸ್ತರಿಸುತ್ತಿವೆ. ಇದು ಭಾರತದ ಮಾಧ್ಯಮ ಕ್ಷೇತ್ರದಲ್ಲಿ ಆರೋಗ್ಯಕರ ಪೈಪೋಟಿ ಮತ್ತು ಬೆಳವಣಿಗೆಯನ್ನು ಸೂಚಿಸುತ್ತದೆ.

