
ನಮ್ಮ ಮೆಟ್ರೋ’ ದರ ಏರಿಕೆ ಪ್ರಸ್ತಾಪಕ್ಕೆ ಪ್ರಯಾಣಿಕರ ಒಕ್ಕೂಟದಿಂದ ತೀವ್ರ ವಿರೋಧ
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಹಣದುಬ್ಬರದಿಂದ ಕಂಗಾಲಾಗಿರುವ ನಾಗರಿಕರಿಗೆ, ಮೆಟ್ರೋ ದರ ಏರಿಕೆ ಮತ್ತಷ್ಟು ಸಂಕಷ್ಟ ತಂದೊಡ್ಡಲಿದೆ ಎಂದು ಪ್ರಯಾಣಿಕರ ಒಕ್ಕೂಟ ಆರೋಪಿಸಿದೆ.
2026ರ ಫೆಬ್ರವರಿ ತಿಂಗಳಲ್ಲಿ ನಮ್ಮ ಮೆಟ್ರೋ ಪ್ರಯಾಣ ದರವನ್ನು ಶೇ. 5ರಷ್ಟು ಅಥವಾ ಅದಕ್ಕಿಂತ ಹೆಚ್ಚು ಏರಿಕೆ ಮಾಡಲು ಉದ್ದೇಶಿಸಿರುವ ಪ್ರಸ್ತಾಪವನ್ನು 'ಸೇವ್ ಬೆಂಗಳೂರು ಕಮಿಟಿ' ಹಾಗೂ 'ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಘ' ತೀವ್ರವಾಗಿ ಖಂಡಿಸಿವೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಮಿತಿಯು, ಬಿಎಂಆರ್‌ಸಿಎಲ್‌ನ ಈ ನಡೆ ಜನಸಾಮಾನ್ಯರ ಮೇಲೆ ಗದಾಪ್ರಹಾರ ಮಾಡಿದಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಹಣದುಬ್ಬರದಿಂದ ಕಂಗಾಲಾಗಿರುವ ನಾಗರಿಕರಿಗೆ, ಮೆಟ್ರೋ ದರ ಏರಿಕೆ ಮತ್ತಷ್ಟು ಸಂಕಷ್ಟ ತಂದೊಡ್ಡಲಿದೆ. ಕಳೆದ ವರ್ಷವಷ್ಟೇ ಭಾರಿ ಪ್ರಮಾಣದ ದರ ಏರಿಕೆ ಕಂಡಿದ್ದ ಪ್ರಯಾಣಿಕರಿಗೆ, ಕೇವಲ ಒಂದು ವರ್ಷದ ಅಂತರದಲ್ಲಿ ಮತ್ತೊಮ್ಮೆ ದರ ಹೆಚ್ಚಿಸುವುದು ಸಾರ್ವಜನಿಕ ನಂಬಿಕೆಗೆ ದ್ರೋಹ ಬಗೆದಂತೆ. ಆಡಳಿತ ಮಂಡಳಿ ತನ್ನ ಸಂಪನ್ಮೂಲ ಕ್ರೂಢೀಕರಣದ ವೈಫಲ್ಯವನ್ನು ಮುಚ್ಚಿಹಾಕಲು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲು ಮುಂದಾಗಿದೆ ಎಂದು ಸಮಿತಿ ಆರೋಪಿಸಿದೆ.
ಕಾನೂನಿನ ನೆಪವಷ್ಟೇ!
ದರ ನಿಗದಿ ಸಮಿತಿ ಶಿಫಾರಸು ಮತ್ತು ಮೆಟ್ರೋ ರೈಲ್ ಕಾಯ್ದೆ-2002ರ ಸೆಕ್ಷನ್ 33ರ ಅನ್ವಯ ದರ ಏರಿಕೆ ಅನಿವಾರ್ಯ ಎಂಬ ಬಿಎಂಆರ್‌ಸಿಎಲ್ ವಾದವನ್ನು ಸಮಿತಿ ತಳ್ಳಿಹಾಕಿದೆ. "ಇದು ಕೇವಲ ಕಾನೂನಾತ್ಮಕ ನೆಪವಷ್ಟೇ ಹೊರತು, ನೈತಿಕವಾಗಿ ಸರಿಯಲ್ಲ. ಕಾಯ್ದೆಯು ಒಂದು ಚೌಕಟ್ಟನ್ನು ಒದಗಿಸುತ್ತದೆಯೇ ಹೊರತು, ನಾಗರಿಕರ ಹಿತಾಸಕ್ತಿ ಕಾಪಾಡುವ ಜವಾಬ್ದಾರಿಯಿಂದ ಬಿಎಂಆರ್‌ಸಿಎಲ್ ನುಣುಚಿಕೊಳ್ಳಲು ಸಾಧ್ಯವಿಲ್ಲ. ಸಮಿತಿಯ ಶಿಫಾರಸುಗಳು ಸಲಹಾತ್ಮಕ ಸ್ವರೂಪದ್ದೇ ಹೊರತು ಕಡ್ಡಾಯವಲ್ಲ," ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪರ್ಯಾಯ ಮಾರ್ಗಗಳನ್ನು ಹುಡುಕಿ
ದರ ಏರಿಕೆಯು ಆಡಳಿತಾತ್ಮಕ ವೈಫಲ್ಯವನ್ನು ತೋರುತ್ತದೆ. ಪ್ರಯಾಣಿಕರ ಮೇಲೆ ಹೊರೆ ಹೇರುವ ಬದಲು, ಮೆಟ್ರೋ ಆಸ್ತಿಗಳ ವಾಣಿಜ್ಯ ಬಳಕೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುವ ಮೂಲಕ ಆದಾಯಗಳಿಸುವ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು. ದರ ಹೆಚ್ಚಾದರೆ ಪ್ರಯಾಣಿಕರು ಮೆಟ್ರೋ ಬಿಟ್ಟು ಮತ್ತೆ ಸ್ವಂತ ವಾಹನಗಳಿಗೆ ಮರಳುತ್ತಾರೆ. ಇದರಿಂದ ಸಂಚಾರ ದಟ್ಟಣೆ ಮತ್ತು ಮಾಲಿನ್ಯ ನಿಯಂತ್ರಣದ ಮೂಲ ಉದ್ದೇಶವೇ ವಿಫಲವಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಕೂಡಲೇ ದರ ಏರಿಕೆ ಪ್ರಸ್ತಾಪವನ್ನು ಕೈಬಿಡಬೇಕು. ಇಲ್ಲದಿದ್ದಲ್ಲಿ, ಸಾರ್ವಜನಿಕರನ್ನು ಸಂಘಟಿಸಿ ಪ್ರಜಾಸತ್ತಾತ್ಮಕ ಮಾರ್ಗಗಳ ಮೂಲಕ ಹೋರಾಟ ನಡೆಸಲಾಗುವುದು ಎಂದು ಸೇವ್ ಬೆಂಗಳೂರು ಕಮಿಟಿಯ ಸಂಚಾಲಕ ಜಿ. ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ. ಮೆಟ್ರೋ ಒಂದು ಐಷಾರಾಮಿ ಸೇವೆಯಾಗದೆ, ಜನಸಾಮಾನ್ಯರಿಗೆ ಕೈಗೆಟುಕುವ ಜೀವನಾಡಿಯಾಗಿ ಉಳಿಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

