
ಇಂದಿರಾನಗರದ ಮೈಲಾರಿ ಹೊಟೇಲ್‌ನಲ್ಲಿ ದೋಸೆ ಸವಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರಿನಲ್ಲೂ ಸಿಗಲಿದೆ ಫೇಮಸ್ ಮೈಲಾರಿ ದೋಸೆ: ಹೊಸ ಶಾಖೆ ಉದ್ಘಾಟಿಸಿದ ಸಿಎಂ
ಆಹಾರ ಪ್ರಿಯರು ಇನ್ನು ಮುಂದೆ ಮೈಲಾರಿ ದೋಸೆಗಾಗಿ ಮೈಸೂರಿಗೆ ಹೋಗುವ ಅಗತ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಮೈಸೂರಿನ ಪ್ರಸಿದ್ಧ ಹಾಗೂ ಐತಿಹಾಸಿಕ ರುಚಿಯನ್ನು ಹೊತ್ತ 'ಒರಿಜಿನಲ್ ವಿನಾಯಕ ಮೈಲಾರಿ-1938' ಹೋಟೆಲ್ ಈಗ ಬೆಂಗಳೂರಿನಲ್ಲಿ ತನ್ನ ನೂತನ ಶಾಖೆಯನ್ನು ತೆರೆದಿದೆ. ಇಂದು ಈ ನೂತನ ಶಾಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. 1938ರಿಂದ ಮೈಸೂರಿನಲ್ಲಿ ತನ್ನದೇ ಆದ ವಿಶಿಷ್ಟ ರುಚಿಯಿಂದ ಹೆಸರುವಾಸಿಯಾಗಿರುವ ಈ ಹೋಟೆಲ್, ಈಗ ಬೆಂಗಳೂರಿನ ದೋಸೆ ಪ್ರಿಯರಿಗೂ ಮೈಸೂರಿನ ಸ್ವಾದವನ್ನು ಉಣಬಡಿಸಲು ಸಜ್ಜಾಗಿದೆ.
ಶುಕ್ರವಾರ(ಜ.23) ಇಂದಿರಾನಗರದ 80 ಅಡಿ ರಸ್ತೆಯಲ್ಲಿ ನಡೆದ ಸಮಾರಂಭದಲ್ಲಿ ಹೋಟೆಲ್ ಉದ್ಘಾಟಿಸಿದ ಬಳಿಕ, ಸಿಎಂ ಸಿದ್ದರಾಮಯ್ಯ ಅವರು ಖುದ್ದಾಗಿ ಕುಳಿತು ಪ್ರಸಿದ್ಧ ಬೆಣ್ಣೆ ಖಾಲಿ ದೋಸೆ ಮತ್ತು ಕಾಶಿ ಹಲ್ವಾವನ್ನು ಸವಿದರು. ದೋಸೆಯ ರುಚಿಗೆ ತಲೆದೂಗಿದ ಅವರು, "ನಾನು ಮೈಸೂರಿನಲ್ಲಿ ಅನೇಕ ಬಾರಿ ಈ ದೋಸೆ ಸವಿದಿದ್ದೇನೆ. ಈಗ ಬೆಂಗಳೂರಿನಲ್ಲೂ ಅದೇ ಅಪ್ಪಟ ರುಚಿ ಸಿಗುತ್ತಿದೆ. ಆಹಾರ ಪ್ರಿಯರು ಇನ್ನು ಮುಂದೆ ಮೈಲಾರಿ ದೋಸೆಗಾಗಿ ಮೈಸೂರಿಗೆ ಹೋಗುವ ಅಗತ್ಯವಿಲ್ಲ, ಅದು ಈಗ ನಮ್ಮ ಇಂದಿರಾನಗರದಲ್ಲೇ ಸಿಗುತ್ತಿದೆ," ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಳಿಗೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಗಣ್ಯಾತಿಗಣ್ಯರ ಸಾಕ್ಷಿ
ಕಾರ್ಯಕ್ರಮದಲ್ಲಿ ರಾಜಕೀಯ ಮತ್ತು ಸಿನಿಮಾ ರಂಗದ ಹಲವು ಗಣ್ಯರು ಉಪಸ್ಥಿತರಿದ್ದು, 87 ವರ್ಷಗಳ ಇತಿಹಾಸವಿರುವ ಮೈಲಾರಿ ಪರಂಪರೆ ಬೆಂಗಳೂರಿಗೆ ಕಾಲಿಟ್ಟಿರುವುದಕ್ಕೆ ಶುಭ ಹಾರೈಸಿದರು. ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿಗಳು ಮತ್ತು ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಅವರು ಸಾನ್ನಿಧ್ಯ ವಹಿಸಿದ್ದರು.
ನಾಲ್ಕನೇ ತಲೆಮಾರಿನ ಸಾರಥ್ಯ
1938ರಲ್ಲಿ ಗೌರಮ್ಮನವರು ಮೈಸೂರಿನ ನಜರ್‌ಬಾದ್‌ನಲ್ಲಿ ಆರಂಭಿಸಿದ್ದ ಈ ರುಚಿಯ ಪರಂಪರೆಯನ್ನು, ಇದೀಗ ನಾಲ್ಕನೇ ತಲೆಮಾರಿನ ಸಚಿನ್ ಮತ್ತು ಸಿಂಧು ದಂಪತಿ ಬೆಂಗಳೂರಿಗೆ ವಿಸ್ತರಿಸಿದ್ದಾರೆ. ಬಾಳೆ ಎಲೆ ಊಟ ಮತ್ತು ಹಳ್ಳಿ ಸೊಗಡಿನ ದೇಸಿ ರುಚಿಯನ್ನು ಉಳಿಸಿಕೊಂಡು ಹೋಗುವುದು ತಮ್ಮ ಗುರಿ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.
ಡಾ. ರಾಜ್‌ಕುಮಾರ್‌ರಿಂದ ಹಿಡಿದು ಸಚಿನ್ ತೆಂಡೂಲ್ಕರ್‌ವರೆಗೆ ಮತ್ತು ಬಿಬಿಸಿ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದ ಈ ಹೋಟೆಲ್, ಇಂದಿನಿಂದ ಅಧಿಕೃತವಾಗಿ ಬೆಂಗಳೂರಿಗರ ಸೇವೆಗೆ ಲಭ್ಯವಾಗಿದೆ.
ದೋಸೆ ಸವಿದ ಸಿಎಂ ಸಿದ್ದರಾಮಯ್ಯ
ಮೈಲಾರಿ ಇತಿಹಾಸ ಮತ್ತು ಹಿನ್ನೆಲೆ
1938ರಲ್ಲಿ ಸಚಿನ್ ಅವರ ಮುತ್ತಜ್ಜಿ ಗೌರಮ್ಮ ಅವರು ಈ ಪುಟ್ಟ ಹೋಟೆಲ್ ಅನ್ನು ಪ್ರಾರಂಭಿಸಿದರು. ಮೈಲಾರಿ (ಶಿವನ ಅವತಾರ) ದೇವರ ಭಕ್ತೆಯಾಗಿದ್ದ ಗೌರಮ್ಮ, ತಾವು ಮಾಡುವ ವಿಶೇಷ ದೋಸೆಗೆ ತಮ್ಮ ಇಷ್ಟದ ದೇವರ ಹೆಸರನ್ನೇ ಇಟ್ಟರು. ಹೀಗೆ 'ಮೈಲಾರಿ ದೋಸೆ'ಯ ಪಯಣ ಆರಂಭವಾಯಿತು. ಬೆಣ್ಣೆಯೊಂದಿಗೆ ಮಡಚಿದ ದೋಸೆ, ಅದರ ಜೊತೆಗೆ ತೆಂಗಿನಕಾಯಿಯ ಬಿಳಿ ಚಟ್ನಿ ಮತ್ತು ಸಾಗು.. ಆಹಾ! ಸ್ವರ್ಗದ ರುಚಿ!
ಅರಮನೆ ಮಾದರಿಯ ಹೋಟೆಲ್
ಬೆಂಗಳೂರಿನ ಇಂದಿರಾನಗರದ 80 ಅಡಿ ರಸ್ತೆಯಲ್ಲಿ ಮೈಸೂರು ಅರಮನೆ ಥೀಮ್‌ನಲ್ಲಿ ಈ ಹೊಸ ರೆಸ್ಟೋರೆಂಟ್ ನಿರ್ಮಾಣವಾಗಿ ಉದ್ಘಾಟನೆಯಾಗಿದೆ. ಮೈಸೂರಿನಲ್ಲಿ ಹಳೆಯ ಕಟ್ಟಡದಲ್ಲಿ ಕೇವಲ 20 ಜನರಿಗೆ ಆಸನ ವ್ಯವಸ್ಥೆಯಿದ್ದರೆ, ಬೆಂಗಳೂರಿನ ಶಾಖೆಯಲ್ಲಿ 150ಕ್ಕೂ ಹೆಚ್ಚು ಜನರು ಕುಳಿತು ಊಟ ಮಾಡುವ ವ್ಯವಸ್ಥೆಯಿದೆ.
ಮೆನುವಿನಲ್ಲಿ ಏನೇನಿದೆ?
ಮೈಸೂರಿನಲ್ಲಿ ದೋಸೆ, ಇಡ್ಲಿ, ಕಾಫಿ ಮತ್ತು ಕಾಶಿ ಹಲ್ವಾ ಮಾತ್ರ ಲಭ್ಯವಿದ್ದರೆ, ಬೆಂಗಳೂರಿನ ಶಾಖೆಯಲ್ಲಿ ಮೆನು ವಿಸ್ತಾರವಾಗಿದೆ. ಇಲ್ಲಿ ವಿವಿಧ ರೀತಿಯ ಥಾಲಿಗಳು, ಉತ್ತರ ಭಾರತೀಯ ತಿನಿಸುಗಳು ಮತ್ತು ಚೈನೀಸ್ ಖಾದ್ಯಗಳೂ ಲಭ್ಯವಿರುತ್ತವೆ. ಆದರೆ, ನೆಲಮಹಡಿಯನ್ನು ಪ್ರತ್ಯೇಕವಾಗಿ 'ಮೈಲಾರಿ ದೋಸೆ'ಗಾಗಿಯೇ ಮೀಸಲಿಡಲಾಗಿದೆ ಎಂದು ಆಪರೇಷನಲ್ ಮ್ಯಾನೇಜರ್ ದೀಪುರಾಜ್ ತಿಳಿಸಿದ್ದಾರೆ.

