ಸಿಎಂ ಸಿದ್ದರಾಮಯ್ಯ ಅವರ ನೆಚ್ಚಿನ ಮೈಸೂರಿನ 'ಮೈಲಾರಿ ದೋಸೆ' ಬೆಂಗಳೂರಿನಲ್ಲಿ ಆರಂಭ
ಮೈಸೂರಿಗರು ಮಾತ್ರವಲ್ಲದೆ ಪ್ರವಾಸಿಗರು, ವಿದೇಶಿಯರು ಮತ್ತು ಸೆಲೆಬ್ರಿಟಿಗಳ ನೆಚ್ಚಿನ ತಾಣವಾಗಿರುವ ಮೈಲಾರಿ ಹೋಟೆಲ್, ತನ್ನ ಪರಂಪರೆಯ ರುಚಿಯನ್ನು ಈಗ ಸಿಲಿಕಾನ್ ಸಿಟಿಯ ಜನರಿಗೂ ಉಣಬಡಿಸಲು ಸಜ್ಜಾಗಿದೆ.

1938ರಲ್ಲಿ ಆರಂಭಗೊಂಡಿರುವ ವಿನಾಯಕ ಮೈಲಾರಿ ದೋಸೆಯ ಆಕರ್ಷಣೆ ಎಂದಿಗೂ ಕಡಿಮೆಯಾಗಿಲ್ಲ.
ಹೊರಗಡೆ ಗರಿಗರಿಯಾಗಿ, ಒಳಗಡೆ ಮೃದುವಾಗಿ, ಬೆಣ್ಣೆಯ ಘಮದೊಂದಿಗೆ ಬಾಯಲ್ಲಿಟ್ಟರೆ ಕರಗುವಂತಹ ಮೈಸೂರಿನ ವಿಶ್ವವಿಖ್ಯಾತ 'ಮೈಲಾರಿ ದೋಸೆ'ಯ ರುಚಿ ಸವಿಯಲು ಇನ್ಮುಂದೆ ಮೈಸೂರಿಗೆ ಹೋಗಬೇಕಿಲ್ಲ. ಮೈಸೂರಿನ 88 ವರ್ಷಗಳ ಇತಿಹಾಸವಿರುವ 'ಓಲ್ಡ್ ಒರಿಜಿನಲ್ ವಿನಾಯಕ ಮೈಲಾರಿ ಹೋಟೆಲ್' ಇದೇ ವಾರ ಬೆಂಗಳೂರಿನಲ್ಲಿ ತನ್ನ ಬೃಹತ್ ಶಾಖೆಯನ್ನು ತೆರೆಯುತ್ತಿದೆ. ಅಂದ ಹಾಗೆ ಸಿಎಂ ಸಿದ್ದರಾಮಯ್ಯ ಅವರ ಅತ್ಯಂತ ನೆಚ್ಚಿನ ಹೋಟೆಲ್ ಇದು.
ಮೈಸೂರಿಗರು ಮಾತ್ರವಲ್ಲದೆ ಪ್ರವಾಸಿಗರು, ವಿದೇಶಿಯರು ಮತ್ತು ಸೆಲೆಬ್ರಿಟಿಗಳ ನೆಚ್ಚಿನ ತಾಣವಾಗಿರುವ ಮೈಲಾರಿ ಹೋಟೆಲ್, ತನ್ನ ಪರಂಪರೆಯ ರುಚಿಯನ್ನು ಈಗ ಸಿಲಿಕಾನ್ ಸಿಟಿಯ ಜನರಿಗೂ ಉಣಬಡಿಸಲು ಸಜ್ಜಾಗಿದೆ.
ಇಂದಿರಾನಗರದ ಹೊಸ ಹೋಟೆಲ್ನಲ್ಲಿ ತೂಗು ಹಾಕಿರುವ ಚಿತ್ರ.,
ನಾಲ್ಕನೇ ತಲೆಮಾರಿನ ಉಸ್ತುವಾರಿ
ಹೋಟೆಲ್‌ನ ಪ್ರಸ್ತುತ ಮಾಲೀಕ ಮತ್ತು ಕುಟುಂಬದ ನಾಲ್ಕನೇ ತಲೆಮಾರಿನ ಸಚಿನ್ ಎಂ.ಸಿ. ಅವರು ಈ ಬಗ್ಗೆ 'ದ ಫೆಡರಲ್'ಗೆ ಮಾಹಿತಿ ನೀಡಿದ್ದು, "ಹೌದು, ಅಂತಿಮವಾಗಿ ನಾವು ಬೆಂಗಳೂರಿನಲ್ಲಿ ನಮ್ಮ ಶಾಖೆಯನ್ನು ತೆರೆಯುತ್ತಿದ್ದೇವೆ. ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದ್ದು, ಜನವರಿ 24ರಂದು ಅಧಿಕೃತವಾಗಿ ಹೋಟೆಲ್ ಕಾರ್ಯಾರಂಭ ಮಾಡಲಿದೆ," ಎಂದು ತಿಳಿಸಿದ್ದಾರೆ.
ಮೈಲಾರಿ ಇತಿಹಾಸ ಮತ್ತು ಹಿನ್ನೆಲೆ
1938ರಲ್ಲಿ ಸಚಿನ್ ಅವರ ಮುತ್ತಜ್ಜಿ ಗೌರಮ್ಮ ಅವರು ಈ ಪುಟ್ಟ ಹೋಟೆಲ್ ಅನ್ನು ಪ್ರಾರಂಭಿಸಿದರು. ಮೈಲಾರಿ (ಶಿವನ ಅವತಾರ) ದೇವರ ಭಕ್ತೆಯಾಗಿದ್ದ ಗೌರಮ್ಮ, ತಾವು ಮಾಡುವ ವಿಶೇಷ ದೋಸೆಗೆ ತಮ್ಮ ಇಷ್ಟದ ದೇವರ ಹೆಸರನ್ನೇ ಇಟ್ಟರು. ಹೀಗೆ 'ಮೈಲಾರಿ ದೋಸೆ'ಯ ಪಯಣ ಆರಂಭವಾಯಿತು. ಬೆಣ್ಣೆಯೊಂದಿಗೆ ಮಡಚಿದ ದೋಸೆ, ಅದರ ಜೊತೆಗೆ ತೆಂಗಿನಕಾಯಿಯ ಬಿಳಿ ಚಟ್ನಿ ಮತ್ತು ಸಾಗು.. ಆಹಾ! ಸ್ವರ್ಗದ ರುಚಿ!
ಇಂದಿರಾನಗರದಲ್ಲಿ ಅರಮನೆ ಮಾದರಿಯ ಹೋಟೆಲ್
ಬೆಂಗಳೂರಿನ ಇಂದಿರಾನಗರದ 80 ಅಡಿ ರಸ್ತೆಯಲ್ಲಿ ಮೈಸೂರು ಅರಮನೆ ಥೀಮ್‌ನಲ್ಲಿ ಈ ಹೊಸ ರೆಸ್ಟೋರೆಂಟ್ ನಿರ್ಮಾಣವಾಗಿದೆ. ಮೈಸೂರಿನಲ್ಲಿ ಹಳೆಯ ಕಟ್ಟಡದಲ್ಲಿ ಕೇವಲ 20 ಜನರಿಗೆ ಆಸನ ವ್ಯವಸ್ಥೆಯಿದ್ದರೆ, ಬೆಂಗಳೂರಿನ ಶಾಖೆಯಲ್ಲಿ 150ಕ್ಕೂ ಹೆಚ್ಚು ಜನರು ಕುಳಿತು ಊಟ ಮಾಡುವ ವ್ಯವಸ್ಥೆಯಿದೆ.
ಮೆನುವಿನಲ್ಲಿ ಏನೇನಿದೆ?
ಮೈಸೂರಿನಲ್ಲಿ ದೋಸೆ, ಇಡ್ಲಿ, ಕಾಫಿ ಮತ್ತು ಕಾಶಿ ಹಲ್ವಾ ಮಾತ್ರ ಲಭ್ಯವಿದ್ದರೆ, ಬೆಂಗಳೂರಿನ ಶಾಖೆಯಲ್ಲಿ ಮೆನು ವಿಸ್ತಾರವಾಗಿದೆ. ಇಲ್ಲಿ ವಿವಿಧ ರೀತಿಯ ಥಾಲಿಗಳು, ಉತ್ತರ ಭಾರತೀಯ ತಿನಿಸುಗಳು ಮತ್ತು ಚೈನೀಸ್ ಖಾದ್ಯಗಳೂ ಲಭ್ಯವಿರುತ್ತವೆ. ಆದರೆ, ನೆಲಮಹಡಿಯನ್ನು ಪ್ರತ್ಯೇಕವಾಗಿ 'ಮೈಲಾರಿ ದೋಸೆ'ಗಾಗಿಯೇ ಮೀಸಲಿಡಲಾಗಿದೆ ಎಂದು ಆಪರೇಷನಲ್ ಮ್ಯಾನೇಜರ್ ದೀಪುರಾಜ್ ತಿಳಿಸಿದ್ದಾರೆ.
ಮೈಲಾರಿ ದೋಸೆಯನ್ನು ಚಟ್ನಿ ಅಥವಾ ಸಾಗು ಜತೆ ಸವಿಯಲು ಚಂದ.
ರುಚಿ ರಹಸ್ಯ ಬಿಟ್ಟುಕೊಡದ ಮಾಲೀಕರು!
ಇತರ ದೋಸೆಗಳಂತೆ ಮೈಲಾರಿ ದೋಸೆ ತೆಳುವಾಗಿ ಅಥವಾ ಗರಿಗರಿಯಾಗಿರುವುದಿಲ್ಲ. ಇದು ಸ್ವಲ್ಪ ದಪ್ಪ ಮತ್ತು ಮೆತ್ತಗಿರುತ್ತದೆ. ಇದರ ಹಿಟ್ಟು ತಯಾರಿಸುವ ವಿಧಾನವೇ ಇದರ ಗುಟ್ಟು. "ಬೆಂಗಳೂರಿನಲ್ಲಿಯೂ ಸಹ ಹಿಟ್ಟನ್ನು ನಮ್ಮ ಕುಟುಂಬದ ಸದಸ್ಯರು ಮತ್ತು ಆಯ್ದ ಸಿಬ್ಬಂದಿ ಮಾತ್ರ ಪ್ರವೇಶಿಸಬಹುದಾದ ಕೇಂದ್ರೀಯ ಅಡುಗೆಮನೆಯಲ್ಲಿ ತಯಾರಿಸಲಾಗುತ್ತದೆ. ನನ್ನ ತಾಯಿ ಉಷಾ ರಾಣಿ ಅವರ ಉಸ್ತುವಾರಿಯಲ್ಲಿ ಮೈಸೂರಿನ ಬಾಣಸಿಗರೆ ಇಲ್ಲಿ ಅಡುಗೆ ಮಾಡಲಿದ್ದಾರೆ," ಎಂದು ಸಚಿನ್ ಹೇಳುತ್ತಾರೆ.
ಸಿಎಂ ಸಿದ್ದರಾಮಯ್ಯ ಮೆಚ್ಚಿನ ತಾಣ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಲಾರಿ ದೋಸೆಯ ದೊಡ್ಡ ಅಭಿಮಾನಿ. 2 ಹೋಟೆಲ್‌ಗೆ ಭೇಟಿ ನೀಡಿದ್ದ ಅವರು, "ನನ್ನ ಕಾಲೇಜು ದಿನಗಳಲ್ಲಿ ಇಲ್ಲಿ ತಿಂಡಿ ತಿನ್ನುತ್ತಿದ್ದೆ. ಹಳೆಯ ನೆನಪುಗಳು ಮರುಕಳಿಸುತ್ತಿವೆ," ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದ್ದರು.
ಸಿಎಂ ಸಿದ್ದರಾಮಯ್ಯ ಅವರು ಮೈಸೂರಿಗೆ ತೆರಳಿದಾಗ ಸದಾ ಭೇಟಿ ನೀಡುವ ಮೈಲಾರಿ ದೋಸೆ ಹೋಟೆಲ್.
ನಕಲಿಗಳ ಹಾವಳಿ ನಡುವೆ ಅಸಲಿ ಮೈಲಾರಿ
ಮೈಸೂರಿನ ನಜರ್‌ಬಾದ್ ರಸ್ತೆಯಲ್ಲಿ ಅಸಲಿ ಮೈಲಾರಿ ಹೋಟೆಲ್ ಹುಡುಕುವುದು ಸಾಹಸವೇ ಸರಿ. ಏಕೆಂದರೆ ಅಲ್ಲಿ ಒಂದೇ ಹೆಸರಿನ ಹತ್ತಾರು ಹೋಟೆಲ್‌ಗಳಿವೆ. ಗೂಗಲ್ ಮ್ಯಾಪ್ ಕೂಡ ಕೆಲವೊಮ್ಮೆ ದಾರಿ ತಪ್ಪಿಸುತ್ತದೆ. ಆದರೆ, ಈಗ ಬೆಂಗಳೂರಿನ ಜನರಿಗೆ ಅಸಲಿ ಮೈಲಾರಿ ದೋಸೆಯ ರುಚಿ ತಮ್ಮೂರಿನಲ್ಲೇ ಸಿಗಲಿದೆ.

