
ಬಸ್ ಚಾಲಕರ ತಪಾಸಣೆ ನಡೆಸುತ್ತಿರುವ ಪೊಲೀಸರು(ಸಾಂದರ್ಭಿಕ ಚಿತ್ರ)
ಶಾಲಾ ಮಕ್ಕಳ ಪ್ರಾಣದ ಜೊತೆ ಚೆಲ್ಲಾಟ- ಪಾನಮತ್ತ 26 ಚಾಲಕರ ವಿರುದ್ಧ ಕೇಸ್!
ಶುಕ್ರವಾರ ಮುಂಜಾನೆ 7 ರಿಂದ 10 ಗಂಟೆಯವರೆಗೆ ಶಾಲಾ ವಾಹನಗಳ ಚಾಲಕರನ್ನು ತಪಾಸಣೆ ನಡೆಸಲಾಗಿದೆ. ಒಟ್ಟು 510 ವಾಹನಗಳನ್ನು ತಪಾಸಣೆ ಮಾಡಲಾಗಿದ್ದು, ಈ ಪೈಕಿ 26 ಚಾಲಕರು ಪಾನಮತ್ತರಾಗಿರುವುದು ದೃಢಪಟ್ಟಿದೆ.
ಬೆಂಗಳೂರು ನಗರದಲ್ಲಿ ಶಾಲಾ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಸಂಚಾರಿ ಪೊಲೀಸರು ಶುಕ್ರವಾರ ಬೆಳ್ಳಂಬೆಳಗ್ಗೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಶಾಲಾ ವಾಹನಗಳ ಚಾಲಕರೇ ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸಿರುವುದು ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ನಡೆಸಿದ ವಿಶೇಷ ತಪಾಸಣೆಯಲ್ಲಿ ಆಘಾತಕಾರಿ ಸತ್ಯಗಳು ಬಯಲಾಗಿವೆ. ಮುಂಜಾನೆಯೇ ಮಕ್ಕಳನ್ನು ಶಾಲೆಗೆ ಬಿಡಲು ಹೊರಟಿದ್ದ ನೂರಾರು ವಾಹನಗಳನ್ನು ತಡೆದು ತಪಾಸಣೆ ನಡೆಸಿದ ಪೊಲೀಸರು, ನಿಯಮ ಉಲ್ಲಂಘಿಸಿ ಕುಡಿದು ವಾಹನ ಚಲಾಯಿಸುತ್ತಿದ್ದ ಚಾಲಕರಿಗೆ ಸರಿಯಾದ ಬಿಸಿ ಮುಟ್ಟಿಸಿದ್ದಾರೆ.
ಸಂಚಾರಿ ಪೊಲೀಸರು ನಡೆಸಿದ ಈ ಮಿಂಚಿನ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ಚಾಲಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗಿದ್ದು, ಮಕ್ಕಳ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದ ಇವರ ಚಾಲನಾ ಪರವಾನಗಿಯನ್ನೇ ರದ್ದುಗೊಳಿಸಲು ಸಾರಿಗೆ ಇಲಾಖೆಗೆ ಮಹತ್ವದ ಶಿಫಾರಸು ಮಾಡಲಾಗಿದೆ. ಬುಧವಾರ ಮತ್ತು ಗುರುವಾರ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಏಕಮುಖ ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ 5,458 ಪ್ರಕರಣಗಳು ದಾಖಲಾಗಿವೆ.
ಸಂಚಾರಿ ಪೊಲೀಸರು ಹೇಳಿದ್ದೇನು?
ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಸಂಚಾರಿ ಪೊಲೀಸರು ಈ ಕಠಿಣ ಕ್ರಮ ಕೈಗೊಂಡಿದ್ದಾರೆ. ಸಂಚಾರಿ ಜಂಟಿ ಆಯುಕ್ತರು ತಿಳಿಸಿರುವಂತೆ, ರಸ್ತೆ ಅಪಘಾತಗಳನ್ನು ತಡೆಗಟ್ಟಲು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಇಂತಹ ವಿಶೇಷ ಕಾರ್ಯಾಚರಣೆಗಳು ಮುಂದಿನ ದಿನಗಳಲ್ಲೂ ನಿರಂತರವಾಗಿ ಮುಂದುವರಿಯಲಿವೆ ಎಂದು ತಿಳಿಸಿದ್ದಾರೆ.
ವಿಶೇಷವಾಗಿ ಏಕಮುಖ ರಸ್ತೆಗಳಲ್ಲಿ ವಿರುದ್ಧವಾಗಿ ಚಲಿಸುವವರ ಮೇಲೆ ಪೊಲೀಸರು ಹೆಚ್ಚಿನ ನಿಗಾ ಇರಿಸಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ವಾಹನಗಳ ಬಗ್ಗೆ ಮತ್ತು ಚಾಲಕರ ನಡವಳಿಕೆಯ ಬಗ್ಗೆ ಎಚ್ಚರದಿಂದಿರಲು ಪರೋಕ್ಷವಾಗಿ ಸೂಚಿಸಿದ್ದಾರೆ.
ಸಂಚಾರ ಪೊಲೀಸರು ಶಾಲಾ ಮಕ್ಕಳ ಸುರಕ್ಷತೆಗಾಗಿ 2025ರ ಸಾಲಿನಲ್ಲಿ ಹಲವಾರು ಬಾರಿ ವಿಶೇಷ ಕಾರ್ಯಾಚರಣೆ ನಡೆಸಿದ್ದು, 2025 ಜೂನ್ 16 ಅಂತ್ಯಕ್ಕೆ 4,559 ವಾಹನ ತಪಾಸಣೆ ಮಾಡಿದ್ದು 58 ಪ್ರಕರಣ, ಅಕ್ಟೋಬರ್ 24ರ ಅಂತ್ಯಕ್ಕೆ 5,881 ವಾಹನ ತಪಾಸಣೆ ಮಾಡಿ 36 ಪ್ರಕರಣ ಹಾಗೂ ನವೆಂಬರ್ 25ರ ಅಂತ್ಯದ ವೇಳೆಗೆ ಸುಮಾರು 25,000ಕ್ಕೂ ಹೆಚ್ಚು ವಾಹನ ತಪಾಸಣೆ ಮಾಡಲಾಗಿದ್ದು, ಒಟ್ಟು 150ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

