
ನೇಮಕಾತಿಗಳಲ್ಲಿ ವಯೋಮಿತಿ ಎರಡು ವರ್ಷ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರಿ ನೌಕರಿ ಆಕಾಂಕ್ಷಿಗಳಿಗೆ ಸಿಹಿಸುದ್ದಿ: ನೇಮಕಗಳಿಗೆ ಮರುಚಾಲನೆ, ವಯೋಮಿತಿಯೂ ಸಡಿಲಿಕೆ
ನ್ಯಾಯಮೂರ್ತಿ ಎಚ್.ಎನ್ ನಾಗಮೋಹನ್ ದಾಸ್ ಅವರ ಆಯೋಗದಿಂದ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ನೀಡಿ ಪರಿಷ್ಕರಿಸುವ ಹಿನ್ನೆಲೆಯಲ್ಲಿ, ಈ ಹಿಂದೆ 2024ರ ಅಕ್ಟೋಬರ್ 28ರಂದು ಹೊರಡಿಸಲಾಗಿದ್ದ ಆದೇಶದ ಪ್ರಕಾರ ಎಲ್ಲಾ ನೇಮಕಾತಿ ಪ್ರಕ್ರಿಯೆಗಳನ್ನು ತಡೆಹಿಡಿಯಲಾಗಿತ್ತು.
ರಾಜ್ಯದ ಲಕ್ಷಾಂತರ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ಸರ್ಕಾರವು ಅವಳಿ ಸಿಹಿಸುದ್ದಿ ನೀಡಿದೆ. ಈ ಹಿಂದೆ ತಡೆಹಿಡಿಯಲಾಗಿದ್ದ ನೇಮಕಾತಿ ಪ್ರಕ್ರಿಯೆಗಳಿಗೆ ಮರುಚಾಲನೆ ನೀಡಲು ನಿರ್ಧರಿಸಿರುವ ಸರ್ಕಾರ, ಇದರೊಂದಿಗೆ ನೇರ ನೇಮಕಾತಿಯ ಗರಿಷ್ಠ ವಯೋಮಿತಿಯನ್ನು ಒಂದು ಬಾರಿಯ ಕ್ರಮವಾಗಿ ಎರಡು ವರ್ಷಗಳಷ್ಟು ಸಡಿಲಿಕೆ ಮಾಡಿ ಮಹತ್ವದ ಆದೇಶ ಹೊರಡಿಸಿದೆ.
ನ್ಯಾಯಮೂರ್ತಿ ಎಚ್.ಎನ್ ನಾಗಮೋಹನ್ ದಾಸ್ ಅವರ ಆಯೋಗದಿಂದ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ನೀಡಿ ಪರಿಷ್ಕರಿಸುವ ಹಿನ್ನೆಲೆಯಲ್ಲಿ, ಈ ಹಿಂದೆ 2024ರ ಅಕ್ಟೋಬರ್ 28ರಂದು ಹೊರಡಿಸಲಾಗಿದ್ದ ಆದೇಶದ ಪ್ರಕಾರ ಎಲ್ಲಾ ನೇಮಕಾತಿ ಪ್ರಕ್ರಿಯೆಗಳನ್ನು ತಡೆಹಿಡಿಯಲಾಗಿತ್ತು. ಇದೀಗ, ಪರಿಷ್ಕೃತ ಮೀಸಲಾತಿ ನೀತಿಯನ್ನು ಅಳವಡಿಸಿ, ಸ್ಥಗಿತಗೊಂಡಿದ್ದ ನೇಮಕಾತಿ ಪ್ರಕ್ರಿಯೆಗಳಿಗೆ ಶೀಘ್ರದಲ್ಲೇ ಮರುಚಾಲನೆ ನೀಡಲು ಸರ್ಕಾರ ನಿರ್ಧರಿಸಿದೆ.
ಪರಿಷ್ಕೃತ ಮೀಸಲಾತಿ ನೀತಿಯ ಪ್ರಕಾರ ಪರಿಶಿಷ್ಟ ಜಾತಿಯ 101 ಜಾತಿಗಳನ್ನು ಒಳಗೊಂಡಿದ್ದು, ಪ್ರವರ್ಗ ʼಎʼ ಗೆ ಶೇ. 6ರಷ್ಟು ಮೀಸಲಾತಿ, ಪ್ರವರ್ಗ ʼಬಿʼಗೆ ಶೇ. 6ರಷ್ಟು ಮೀಸಲಾತಿ ಹಾಗೂ ಪ್ರವರ್ಗ ʼಸಿʼಗೆ ಶೇ. 5ರಷ್ಟು ಮೀಸಲಾತಿ ಕೊಡಲಾಗಿದೆ.
ವಯೋಮಿತಿ ಸಡಿಲಿಕೆಯ ವಿವರ
ಸೆಪ್ಟೆಂಬರ್ 6ರಂದು ಹೊರಡಿಸಿದ ಸರ್ಕಾರದ ಆದೇಶದ ಪ್ರಕಾರ ರಾಜ್ಯ ಸಿವಿಲ್ ಸೇವೆಗಳ ಗ್ರೂಪ್-ಬಿ ಮತ್ತು ಗ್ರೂಪ್-ಸಿ ಹುದ್ದೆಗಳ ನೇರ ನೇಮಕಾತಿಯಲ್ಲಿ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಎರಡು ವರ್ಷಗಳ ಸಡಿಲಿಕೆ ನೀಡಲಾಗಿದೆ.
ಈ ಆದೇಶವು ಶನಿವಾರದಿಂದ ಹಿಡಿದು 2027ರ ಡಿಸೆಂಬರ್ 31ರ ಒಳಗೆ ಹೊರಡಿಸಲಾಗುವ ನೇಮಕಾತಿ ಅಧಿಸೂಚನೆಗಳಿಗೆ ಮಾತ್ರ ಅನ್ವಯವಾಗಲಿದೆ. ಇದು ಒಂದು ಬಾರಿಯ ವಿಶೇಷ ಕ್ರಮವಾಗಿದ್ದು, ಕೋವಿಡ್ ಹಾಗೂ ಇತರ ಕಾರಣಗಳಿಂದ ವಯೋಮಿತಿ ಮೀರುತ್ತಿದ್ದ ಅನೇಕ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶವನ್ನು ಕಲ್ಪಿಸಿದೆ.