ಒಳ ಮೀಸಲಾತಿ ಶಾಶ್ವತವಲ್ಲ: ಜನಸಂಖ್ಯೆ ಬದಲಾದರೆ ಮೀಸಲಾತಿ ಪರಿಷ್ಕರಣೆ; ನ್ಯಾ.ನಾಗಮೋಹನ್‌ ದಾಸ್‌ ವರದಿಯಲ್ಲಿ ಬಹಿರಂಗ
x

ಒಳ ಮೀಸಲಾತಿ ಶಾಶ್ವತವಲ್ಲ: ಜನಸಂಖ್ಯೆ ಬದಲಾದರೆ ಮೀಸಲಾತಿ ಪರಿಷ್ಕರಣೆ; ನ್ಯಾ.ನಾಗಮೋಹನ್‌ ದಾಸ್‌ ವರದಿಯಲ್ಲಿ ಬಹಿರಂಗ

ನ್ಯಾ. ನಾಗಮೋಹನ್‌ ದಾಸ್‌ ಅವರು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷಾ ವರದಿಯ ಪ್ರತಿ ʼದ ಫೆಡರಲ್‌ ಕರ್ನಾಟಕʼಕ್ಕೆ ಲಭ್ಯವಾಗಿದೆ. ಇದರಲ್ಲಿ ಪರಿಶಿಷ್ಟ ಜಾತಿಯವರ ಶೈಕ್ಷಣಿಕ, ಉದ್ಯೋಗ, ರಾಜಕೀಯ, ಸಾಮಾಜಿಕ ಸ್ಥಾನಮಾನ ವಿವರಿಸಲಾಗಿದೆ.


ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆ, ಶೈಕ್ಷಣಿಕ, ಔದ್ಯೋಗಿಕ ಮತ್ತು ಸಾಮಾಜಿಕ ಹಿಂದುಳಿದಿರುವಿಕೆ ಪರಿಗಣಿಸಿ ನಿವೃತ್ತ ನ್ಯಾ. ಎಚ್‌.ಎನ್‌. ನಾಗಮೋಹನ್‌ ದಾಸ್‌ ನೇತೃತ್ವದ ಏಕಸದಸ್ಯ ಆಯೋಗ ಒಳ ಮೀಸಲಾತಿಯನ್ನು 101 ಉಪಜಾತಿಗಳಿಗೆ ಹಂಚಿಕೆ ಮಾಡಿದೆ.

ನ್ಯಾ. ನಾಗಮೋಹನ್‌ ದಾಸ್‌ ಅವರು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷಾ ವರದಿಯ ಪ್ರತಿ ʼದ ಫೆಡರಲ್‌ ಕರ್ನಾಟಕʼಕ್ಕೆ ಲಭ್ಯವಾಗಿದೆ. ಇದರಲ್ಲಿ ಪರಿಶಿಷ್ಟ ಜಾತಿಯವರ ಶೈಕ್ಷಣಿಕ, ಉದ್ಯೋಗ, ರಾಜಕೀಯ, ಸಾಮಾಜಿಕ ಸ್ಥಾನಮಾನದ ಕುರಿತಂತೆಯೂ ಅಂಕಿ ಅಂಶಗಳ ಸಮೇತ ವಿವರಿಸಿದೆ.

ಒಳ ಮೀಸಲಾತಿ ಶಾಶ್ವತವಲ್ಲ

ಆಯೋಗ ಹಂಚಿಕೆ ಮಾಡಿರುವ ಒಳಮೀಸಲಾತಿ ಶಾಶ್ವತವೂ ಅಲ್ಲ, ಅಂತಿಮವೂ ಅಲ್ಲ. ಜನಸಂಖ್ಯೆ ಬದಲಾದಂತೆ ಮೀಸಲಾತಿಯೂ ಬದಲಾಗಲಿದೆ. ಬದಲಾದ ಸನ್ನಿವೇಶಕ್ಕೆ ಅನುಗುಣವಾಗಿ ಒಳಮೀಸಲಾತಿ ಪರಿಷ್ಕರಣೆಯಾಗಲಿದೆ ಎಂದು ನಾಗಮೋಹನ್‌ ದಾಸ್‌ ಆಯೋಗ ಸ್ಪಷ್ಟಪಡಿಸಿದೆ.

ರಾಜ್ಯ ಸರ್ಕಾರ ಹೊಸದಾಗಿ ಜಾತಿ ಸಮೀಕ್ಷೆ ನಡೆಸಲು ಕ್ರಮ ಕೈಗೊಂಡಿದೆ. ಇದೇ ರೀತಿ ಕೇಂದ್ರ ಸರ್ಕಾರವೂ ಕೂಡ ರಾಷ್ಟ್ರೀಯ ಜನಗಣತಿ ಮತ್ತು ಜಾತಿಗಣತಿ ನಡೆಸಲು ಪ್ರಕ್ರಿಯೆ ಪ್ರಾರಂಭಿಸಿದೆ. ಇವುಗಳಿಂದ ಲಭ್ಯವಾಗುವ ದತ್ತಾಂಶದಲ್ಲಿ ಗಣನೀಯ ಏರುಪೇರಾದರೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಪರಿಷ್ಕರಣೆಗೆ ಒಳಪಡಲಿದೆ ಎಂದು ಹೇಳಿದೆ.

ಹಲವು ಜಾತಿಗಳಿಗೆ ದಕ್ಕದ ಮೀಸಲಾತಿ

75 ವರ್ಷಗಳಲ್ಲಿ ಪರಿಶಿಷ್ಟ ಜಾತಿಯ ಕೆಲ ಒಳ ಜಾತಿಗಳು ಮೀಸಲಾತಿ ಸೌಲಭ್ಯ ಪಡೆದು ಸಬಲೀಕರಣಗೊಂಡಿವೆ. ಆದರೆ, ಬಹುತೇಕ ಜಾತಿಗಳು ಇಂದಿಗೂ ಮೀಸಲಾತಿ ಸವಲತ್ತು ಪಡೆಯದ ಕಾರಣ ಆ ಜನರ ಜೀವನ ಇಂದಿಗೂ ಹೀನಾಯವಾಗಿದೆ. ಆದ್ದರಿಂದ ಪ್ರವರ್ಗವಾರು ಜನಸಂಖ್ಯೆ, ಅವರ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆ ಆದ್ಯತೆ ಮೇರೆಗೆ ಮೀಸಲಾತಿ ಹಂಚಿಕೆ ಮಾಡಲಾಗಿದೆ ಎಂದು ಆಯೋಗ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಆಯೋಗವು ನಡೆಸಿದ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಒಟ್ಟು 1,07,01,982 ಜನರಿದ್ದಾರೆ. ಬುಡ್ಗ ಜಂಗಮ-ಬೇಡ ಜಂಗಮ ಜನಸಂಖ್ಯೆ 1,77,662 ಮತ್ತು ಅಂತರ್ಜಾತಿ ವಿವಾಹವಾದವರು ಪರಿಶಿಷ್ಟ ಜಾತಿಯವರಲ್ಲ ಎಂದು ಕಂಡುಬಂದಿರುವ ಸಂಖ್ಯೆ 14,449. ಈ ಜನಸಂಖ್ಯೆಯನ್ನು ಐದು ಪ್ರವರ್ಗಗಳನ್ನಾಗಿ ವಿಂಗಡಿಸಿದ್ದು, ಒಂದೊಂದು ಪ್ರವರ್ಗದಲ್ಲಿ ಹಲವು ಜಾತಿಗಳನ್ನು ಸೇರಿಸಲಾಗಿದೆ. ಆ ಮೂಲಕ ಲಭ್ಯವಿರುವ ಶೇ 17 ರಷ್ಟು ಮೀಸಲಾತಿ ಹಂಚಿಕೆ ಮಾಡಲಾಗಿದೆ.

ಮೀಸಲಾತಿ ಸೌಲಭ್ಯ ಪಡೆದ ಕೆಲವು ಜಾತಿಗಳಲ್ಲಿ ಶೈಕ್ಷಣಿಕ, ಔದ್ಯೋಗಿಕ, ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಚಲನಶೀಲತೆ ಕಾಣಬಹುದು. ಅದೇ ಸಮಯದಲ್ಲಿ ಕೆಲ ಜಾತಿಗಳಿಗೆ ಮೀಸಲಾತಿ ಸವಲತ್ತು ತಲುಪಿಲ್ಲ. ಇದನ್ನು ಅರ್ಥ ಮಾಡಿಕೊಂಡು ಉತ್ತಮ ಸ್ಥಿತಿಯಲ್ಲಿರುವವರು ಸೌಲಭ್ಯ ವಂಚಿತರಿಗಾಗಿ ಎಳ್ಳಷ್ಟು ತ್ಯಾಗ ಮಾಡಬೇಕಿದೆ. ಹಸಿದವರಿಗೆ ಮೊದಲು ಉಣಲು ಕೊಡಬೇಕು. ಚೆನ್ನಾಗಿ ಉಂಡವರು ಸ್ವಲ್ಪ ತ್ಯಾಗ ಮಾಡಬೇಕು. ಈ ನೀತಿಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಆದ್ಯತೆ ಮೇಲೆ ಹಂಚಿಕೆ ಮಾಡಲಾಗಿದೆ ಎಂದು ಆಯೋಗ ತಿಳಿಸಿದೆ.

ʼಪ್ರವರ್ಗ- ಎʼ ಗುಂಪಿನಲ್ಲಿ ಒಟ್ಟು 59 ಜಾತಿಗಳು ಬರಲಿದ್ದು, ಶೇ 1 ರಷ್ಟು ಮೀಸಲಾತಿ ನೀಡಲಾಗಿದೆ. ʼಪ್ರವರ್ಗ- ಬಿʼ ಯಲ್ಲಿ 18 ಜಾತಿಗಳಿಗೆ ಶೇ 6 ರಷ್ಟು ಮೀಸಲಾತಿ ಹಂಚಿಕೆ ಮಾಡಲಾಗಿದೆ. ʼಪ್ರವರ್ಗ- ಸಿʼ ಯಲ್ಲಿ 17ಜಾತಿಗಳಿದ್ದು, ಶೇ 5ರಷ್ಟು, ʼಪ್ರವರ್ಗ-ಡಿʼ ನಲ್ಲಿ 4ಜಾತಿಗಳು ಬರಲಿದ್ದು, ಶೇ 4 ರಷ್ಟು , 'ಪ್ರವರ್ಗ-ಇ' ನಲ್ಲಿ 3ಜಾತಿಗಳು ಬರಲಿದ್ದು, ಶೇ 1 ರಷ್ಟು ಮೀಸಲಾತಿ ಹಂಚಿಕೆ ಮಾಡಲಾಗಿದೆ.

ಆಯೋಗದ ಶಿಫಾರಸುಗಳೇನು?

1. ರಾಜ್ಯದಲ್ಲಿರುವ 101 ಪರಿಶಿಷ್ಟ ಜಾತಿಗಳಿಗೆ ಲಭ್ಯವಿರುವ ಶೇ.17ರಷ್ಟು ಮೀಸಲಾತಿಯನ್ನು ವರ್ಗೀಕರಿಸಿ ಹಂಚಲಾಗಿದೆ.

2. ಸರ್ಕಾರದ ಸುತ್ತೋಲೆ ದಿನಾಂಕ 28-10-2024ರಿಂದ ಪುನಃ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗುವ ದಿನಾಂಕದವರೆಗೆ ವಯೋಮಿತಿ ಮೀರಿದಂತಹ ಅಭ್ಯರ್ಥಿಗಳಿಗೆ ವಯೋಮಿತಿ ರಿಯಾಯಿತಿ ನೀಡಿ, ಅವಕಾಶ ಕಲ್ಪಿಸಬೇಕು. ಈ ಸಂಬಂಧ ಸರ್ಕಾರ ಸೂಕ್ತ ಆದೇಶ ಹೊರಡಿಸಬೇಕು.

3. ಒಂದು ಪ್ರವರ್ಗದಲ್ಲಿ ಭರ್ತಿಯಾಗದೆ ಉಳಿದ ಹುದ್ದೆಗಳನ್ನು Carry Forward ನಿಯಮದಂತೆ ಭರ್ತಿ ಮಾಡಬೇಕು. ಅಲ್ಲಿಗೂ ಸೂಕ್ತ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಾಗ ಅಂತಹ ಹುದ್ದೆಗಳನ್ನು ಪರಿಶಿಷ್ಟ ಜಾತಿಯ ಮತ್ತೊಂದು ಪ್ರವರ್ಗಕ್ಕೆ ವರ್ಗಾವಣೆ ಮಾಡಬೇಕು. ಈ ಸಂಬಂಧ ನೇಮಕಾತಿ ನಿಯಮಗಳಿಗೆ ಸೂಕ್ತ ತಿದ್ದುಪಡಿ ತರಬೇಕು.

4. ಕೆಲ ಜಾತಿಗಳ ಹೆಸರು ಅಪಹಾಸ್ಯ, ನಗೆಪಾಟಲಿಗೆ ಈಡಾಗುತ್ತಿರುವುದನ್ನು ಮನಗಂಡು ತಮ್ಮ ಜಾತಿಯ ಹೆಸರನ್ನು ಮಾರ್ಪಾಡು ಮಾಡಿಕೊಳ್ಳಲು ಅಪೇಕ್ಷಿಸಿದರೆ ಸರ್ಕಾರ ಅವಕಾಶ ನೀಡಿ ಸೂಕ್ತ ಕಾನೂನು ಕ್ರಮ ವಹಿಸಬೇಕು.

5. ಕರ್ನಾಟಕದಲ್ಲಿರುವ ಪರಿಶಿಷ್ಟ ಜಾತಿಯ ಜನರ ಪೈಕಿ ಕೆಲವರು ಆದಿ ಆಂಧ್ರ, ಆದಿ ಕರ್ನಾಟಕ ಮತ್ತು ಆದಿ ದ್ರಾವಿಡ ಎಂದು ಜಾತಿ ಪ್ರಮಾಣ ಪತ್ರ ಪಡೆದುಕೊಂಡು ಮೀಸಲಾತಿ ಅನುಭವಿಸಿಕೊಂಡು ಬರುತ್ತಿದ್ದಾರೆ. ಕೆಲವರಿಗೆ ತಮ್ಮ ಮೂಲ ಜಾತಿ ಯಾವುದೆಂದು ತಿಳಿದಿದೆ. ಉದಾಹರಣೆಗೆ ಮನ್ನ, ಕೆಂಬಟ್ಟಿ, ಮೇರ, ಮಾದಿಗ ದಾಸರಿ ಇತ್ಯಾದಿಯಾಗಿ. ಆದರೆ, ಇವರ ಮೂಲ ಹೆಸರು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ. ಇದರ ಬಗ್ಗೆ ಅಧ್ಯಯನ ನಡೆಸಿ ಜಾತಿಗಳ ಹೆಸರನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸಲು ಸರ್ಕಾರ ಕ್ರಮ ವಹಿಸಬೇಕು.

6. ಆಯೋಗವು ನಡೆಸಿದ ಸಮೀಕ್ಷೆಯಲ್ಲಿ ಲಕ್ಷಾಂತರ ಜನರು ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಎಂಬ ಹೆಸರುಗಳ ಜೊತೆಗೆ ತಮ್ಮ ಮೂಲ ಜಾತಿಯ ಹೆಸರನ್ನು ತಿಳಿಸಿದ್ದಾರೆ. ಇವರಿಗೆ ಮೂಲ ಜಾತಿಯ ಹೆಸರನ್ನು ಒಳಗೊಂಡಿರುವ ಜಾತಿ ಪ್ರಮಾಣಪತ್ರ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

Read More
Next Story