
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ
ಬೆಂಗಳೂರು-ಮಂಗಳೂರು- ಗೋವಾ ವಂದೇ ಭಾರತ್ ರೈಲು: ಕರಾವಳಿ ಜನತೆಗೆ ಗುಡ್‌ನ್ಯೂಸ್?
ಬೆಂಗಳೂರಿನಿಂದ ಹಾಸನ, ಮಂಗಳೂರು ಜಂಕ್ಷನ್, ಉಡುಪಿ ಮತ್ತು ಕಾರವಾರ ಮಾರ್ಗವಾಗಿ ಗೋವಾದ ಮಡಗಾಂವ್‌ವರೆಗೆ ಅತಿವೇಗದ ವಂದೇ ಭಾರತ್ ರೈಲು ಸೇವೆ ಆರಂಭಿಸುವಂತೆ ಕೋರಿದ್ದಾರೆ.
ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಕರಾವಳಿ ಪ್ರದೇಶಗಳ ನಡುವೆ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭಿಸುವಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಮಂಗಳವಾರ(ಡಿ.23) ಪತ್ರ ಬರೆದಿರುವ ಅವರು, ಬೆಂಗಳೂರಿನಿಂದ ಹಾಸನ, ಮಂಗಳೂರು ಜಂಕ್ಷನ್, ಉಡುಪಿ ಮತ್ತು ಕಾರವಾರ ಮಾರ್ಗವಾಗಿ ಗೋವಾದ ಮಡಗಾಂವ್‌ವರೆಗೆ ಅತಿವೇಗದ ವಂದೇ ಭಾರತ್ ರೈಲು ಸೇವೆ ಆರಂಭಿಸುವಂತೆ ಕೋರಿದ್ದಾರೆ. ಈ ಭಾಗದಲ್ಲಿ ವಂದೇ ಭಾರತ್ ರೈಲು ಸಂಚಾರಕ್ಕೆ ಅವಕಾಶ ನೀಡುವುದರಿಂದ ಕರಾವಳಿ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಅಭಿವೃದ್ಧಿಗೂ ಹೆಚ್ಚು ಪೂರಕವಾಗಿರುತ್ತದೆ ಎಂದು ರೈಲ್ವೆ ಸಚಿವರಿಗೆ ಮಾಹಿತಿ ನೀಡಿದ್ದಾರೆ.
ಪಶ್ಚಿಮಘಟ್ಟ ಪ್ರದೇಶ ಸೇರಿದಂತೆ ಈ ಮಾರ್ಗದಲ್ಲಿ ವಿದ್ಯುದೀಕರಣ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ವೇಗದ ರೈಲು ಸೇವೆ ಆರಂಭಿಸಲು ಇದೀಗ ಸರ್ವ ರೀತಿಯ ಅನುಕೂಲಕರ ಮೂಲಸೌಲಭ್ಯಗಳಿವೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ಯಾವ ಮಾರ್ಗದಲ್ಲಿ ಸಂಚಾರ ?
ಬೆಂಗಳೂರಿನಿಂದ ಹಾಸನ, ಮಂಗಳೂರು ಜಂಕ್ಷನ್, ಉಡುಪಿ, ಕಾರವಾರ ಮಾರ್ಗವಾಗಿ ಗೋವಾದ ಮಡಗಾಂವ್‌ಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ್ ರೈಲು ಸೇವೆಯಿಂದ ಪ್ರವಾಸೋದ್ಯಮಕ್ಕೆ ಹೆಚ್ಚು ಅನುಕೂಲವಾಗಲಿದೆ. ಅಲ್ಲದೆ, ಕರಾವಳಿ ಭಾಗದಲ್ಲಿರುವ ಪುಣ್ಯಕ್ಷೇತ್ರಗಳಿಗೆ ಯಾತ್ರಾರ್ಥಿಗಳು ಹೋಗಿ ಬರುವುದು ಸುಲಭವಾಗುತ್ತದೆ. ಶಿಕ್ಷಣ ಹಾಗೂ ವೃತ್ತಿಪರ ಕಾರಣಗಳಿಗಾಗಿ ಈ ಮಾರ್ಗದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಹೆಚ್ಚಿನ ಪ್ರಯೋಜನ ಆಗಲಿದೆ ಎಂದು ತಿಳಿಸಿದ್ದಾರೆ.
ಆರ್ಥಿಕ ಚಟುವಟಿಕೆ ಚುರುಕು
ಭಾರತದ ಐಟಿ ರಾಜಧಾನಿ ಬೆಂಗಳೂರು ಮತ್ತು ಬಂದರು ನಗರ ಮಂಗಳೂರು ಸೇರಿದಂತೆ ಕರಾವಳಿ ಕರ್ನಾಟಕದ ಉಳಿದೆಲ್ಲಾ ಪ್ರಮುಖ ವಾಣಿಜ್ಯ ಕೇಂದ್ರಗಳು, ಬಂದರುಗಳು ಮತ್ತು ಪ್ರವಾಸಿ ತಾಣಗಳಿಗೆ ಹಾಗೂ ಗೋವಾ ನಡುವೆ ನೇರ ಹಾಗೂ ವೇಗದ ರೈಲು ಸಂಪರ್ಕ ಕಲ್ಪಿಸುವುದರಿಂದ ಆರ್ಥಿಕ ಚಟುವಟಿಕೆಗಳು ಮತ್ತಷ್ಟು ಚುರುಕಾಗಲಿವೆ.
ಈ ರೈಲು ಸೇವೆ ಆರಂಭಿಸುವುದರಿಂದ ಪ್ರಯಾಣಿಕರ ಬೇಡಿಕೆ ಈಡೇರಿಸಿದಂತೆ ಆಗುತ್ತದೆ. ಪ್ರಾದೇಶಿಕ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ. ಉದ್ಯೋಗಾವಕಾಶಗಳ ವೃದ್ಧಿಗೂ ಸಹಕಾರಿಯಾಗಲಿದೆ ಎಂದು ಕುಮಾರಸ್ವಾಮಿ ಪ್ರತಿಪಾದಿಸಿದ್ದಾರೆ.
ರಾಜ್ಯದಲ್ಲಿರುವ ವಂದೇ ಭಾರತ್ ರೈಲುಗಳು
ರಾಜ್ಯದಲ್ಲಿ ಇಲ್ಲಿಯವರೆಗೂ ಕೆಎಸ್‌ಆರ್ ಬೆಂಗಳೂರು - ಬೆಳಗಾವಿ, ಕಲಬುರಗಿ - ಎಸ್‌ಎಂವಿಟಿ, ಮೈಸೂರು - ಎಂಜಿಆರ್ ಚೆನ್ನೈ ಸೆಂಟ್ರಲ್, ಯಶವಂತಪುರ - ಕಾಚಿಗುಡ, ಬೆಂಗಳೂರು ಕಂಟೋನ್ಮೆಂಟ್ - ಕೊಯಮತ್ತೂರು, ಬೆಂಗಳೂರು ಕಂಟೋನ್ಮೆಂಟ್ - ಮಧುರೈ, ಕೆಎಸ್‌ಆರ್ ಬೆಂಗಳೂರು - ಎರ್ನಾಕುಲಂ, ಮಂಗಳೂರು ಸೆಂಟ್ರಲ್ - ತಿರುವನಂತಪುರ, ಮಂಗಳೂರು ಸೆಂಟ್ರಲ್ - ಮಡಗಾಂವ್ ಹಾಗೂ ಹುಬ್ಬಳ್ಳಿ - ಪುಣೆ ಮಾರ್ಗದಲ್ಲಿ ಸಂಚರಿಸುತ್ತಿವೆ. ಇದೀಗ ಬೆಂಗಳೂರು ಹಾಗೂ ಮಡಗಾಂವ್‌ಗೆ ರೈಲು ಸಂಚರಿಸಿದರೆ ಹೆಚ್ಚಿನ ಅನುಕೂಲವಾಗಲಿದೆ.

