
ಕೊರಗ ಸಮುದಾಯದಲ್ಲಿ ಶೈಕ್ಷಣಿಕ ಕ್ರಾಂತಿ ಎಬ್ಬಿಸಿರುವ ಮಹಿಳೆಯರು
ಬುಟ್ಟಿ ಹೆಣೆಯುವ ಕೈಗಳಲ್ಲಿ ಈಗ ಜ್ಞಾನದ ಜ್ಯೋತಿ: ಕೊರಗ ಸಮುದಾಯದ ಶೈಕ್ಷಣಿಕ ಕ್ರಾಂತಿ
ಒಂದು ಕಾಲದಲ್ಲಿ ಶಾಲೆಯ ಹೊಸ್ತಿಲು ತುಳಿಯಲು ಹಿಂಜರಿಯುತ್ತಿದ್ದ ಸಮುದಾಯದಲ್ಲಿ ಇಂದು ಸುಮಾರು 1,000 ಪದವಿಪೂರ್ವ ಶಿಕ್ಷಣ ಪಡೆದವರು, 150ಕ್ಕೂ ಹೆಚ್ಚು ಸ್ನಾತಕೋತ್ತರ ಪದವೀಧರರು ಮತ್ತು ಐವರು ಪಿಎಚ್.ಡಿ ಸಾಧಕರಿದ್ದಾರೆ.
ಭಾರತೀಯ ಸಂವಿಧಾನ ಜಾರಿಗೆ ಬಂದು ದಶಕಗಳೇ ಕಳೆದರೂ, ಇಂದಿಗೂ ಸಮಾಜದ ಮುಖ್ಯವಾಹಿನಿಯಿಂದ ದೂರವಿರುವ ಬುಡಕಟ್ಟು ಸಮುದಾಯಗಳು ಹತ್ತು ಹಲವು ಸವಾಲುಗಳನ್ನು ಎದುರಿಸುತ್ತಲೇ ಇವೆ. ಜಾತಿ ಪದ್ಧತಿ, ಸಾಮಾಜಿಕ ಕಳಂಕ ಮತ್ತು ಬಹಿಷ್ಕಾರದಂತಹ ಅನಿಷ್ಟಗಳ ನಡುವೆಯೂ ಕರಾವಳಿಯ ಮಣ್ಣಿನ ಮಕ್ಕಳಾದ ಕೊರಗ ಸಮುದಾಯದ ಬದುಕು ಇಂದು ಕೇವಲ ಬಿದಿರಿನ ಬುಟ್ಟಿ ಹೆಣೆಯುವ ಸಾಂಪ್ರದಾಯಿಕ ಚೌಕಟ್ಟನ್ನು ಮೀರಿ ಬೆಳೆಯುತ್ತಿದೆ.
ಅತೀ ಹಿಂದುಳಿದ ಬುಡಕಟ್ಟು ಸಮುದಾಯ (PVTG) ಎಂಬ ಹಣೆಪಟ್ಟಿಯ ನಡುವೆಯೂ, ಸಂಪ್ರದಾಯದ ಬೇರುಗಳನ್ನು ಗಟ್ಟಿಯಾಗಿ ಹಿಡಿದುಕೊಂಡೇ ಈ ಜನಾಂಗ ಆಧುನಿಕತೆಯ ಶಿಖರವನ್ನು ಏರುತ್ತಿರುವುದು ಆಶಾದಾಯಕ ಬೆಳವಣಿಗೆ. ಸವಾಲುಗಳ ಸುಳಿಯ ನಡುವೆಯೇ ಸುಸ್ಥಿರ ಅಭಿವೃದ್ಧಿಯ ಹೊಸ ಹಾದಿಯನ್ನು ಕಂಡುಕೊಳ್ಳುತ್ತಿರುವ ಕೊರಗರು, ಕರಾವಳಿ ಮತ್ತು ಕಾಸರಗೋಡು ಭಾಗದಲ್ಲಿ ಹೊಸ ಇತಿಹಾಸ ಬರೆಯುತ್ತಿದ್ದಾರೆ.
ಕೊರಗ ಸಮುದಾಯದ ಶೈಕ್ಷಣಿಕ ಪಯಣವನ್ನು ಗಮನಿಸಿದಾಗ ಅಲ್ಲಿ ದೊಡ್ಡ ಮಟ್ಟದ ಪರಿವರ್ತನೆಯ ಇಂದು ಕಂಡು ಬರುತ್ತಿದೆ. ಒಂದು ಕಾಲದಲ್ಲಿ ಈ ಸಮುದಾಯದ ಮಕ್ಕಳು ಶಾಲೆಯ ಹೊಸ್ತಿಲು ತುಳಿಯಲು ಹಿಂಜರಿಯುತ್ತಿದ್ದರು. ಸಾಮಾಜಿಕ ಅಂತರ, ಆರ್ಥಿಕ ಮುಗ್ಗಟ್ಟು ಮತ್ತು ಅಲೆಮಾರಿ ಬದುಕು ಅವರನ್ನು ಅಕ್ಷರ ಲೋಕದಿಂದ ದೂರವಿಟ್ಟಿತ್ತು. ಶಿಕ್ಷಣ ಎನ್ನುವುದು ತಲುಪಲಾಗದ ಕನಸಾಗಿದ್ದು, ಬದುಕು ಕೇವಲ ಕಾಡಿನ ಉತ್ಪನ್ನಗಳು ಮತ್ತು ಬುಟ್ಟಿ ಹೆಣೆಯುವ ಕಸುಬಿಗೆ ಸೀಮಿತವಾಗಿತ್ತು. ಮುಖ್ಯವಾಹಿನಿಯಿಂದ ಸಂಪೂರ್ಣವಾಗಿ ಕತ್ತರಿಸಲ್ಪಟ್ಟಿದ್ದ ಈ ಕಾಲಘಟ್ಟದಲ್ಲಿ ಬೌದ್ಧಿಕ ಪ್ರಗತಿ ಎಂಬುದು ಮರೀಚಿಕೆಯಾಗಿತ್ತು.
ಇಂದು ಅದೇ ಸಮುದಾಯದ ಮಕ್ಕಳು ಅಂಕೋಲಾ, ಕುಂದಾಪುರದ ಸರ್ಕಾರಿ ಶಾಲೆಗಳಿಂದ ಹಿಡಿದು ಹೆಬ್ರಿಯ ಜವಾಹರ್ ನವೋದಯ ಮತ್ತು ಆಳ್ವಾಸ್‌ನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಪ್ರತಿಷ್ಟಿತ ಆಳ್ವಸ್ ಕಾಲೇಜಿನಲ್ಲಿಯೇ ಸುಮಾರು 50ಕ್ಕೂ ಹೆಚ್ಚು ಮಕ್ಕಳು ಪದವಿ ಶಿಕ್ಷಣವನ್ನು ಉಚಿತವಾಗಿ ಪಡೆದಿದ್ದಾರೆ.
ಶಿಕ್ಷಣವೇ ಶ್ರೇಷ್ಠ ಅಸ್ತ್ರ ಎಂದು ನಂಬಿರುವ ಇಂದಿನ ಯುವ ಪೀಳಿಗೆ ಬೌದ್ಧಿಕ ಸಂಪತ್ತಾಗಿ ಹೊರಹೊಮ್ಮುತ್ತಿದೆ. ಅಂಕಿಅಂಶಗಳ ಪ್ರಕಾರ, ಪ್ರಸ್ತುತ ಈ ಸಮುದಾಯದಲ್ಲಿ ಸುಮಾರು 1,000 ಜನರು ಪದವಿಪೂರ್ವ ಶಿಕ್ಷಣ ಮುಗಿಸಿದ್ದಾರೆ, 150ಕ್ಕೂ ಹೆಚ್ಚು ಮಂದಿ ಸ್ನಾತಕೋತ್ತರ ಪದವೀಧರರಾಗಿದ್ದಾರೆ ಮತ್ತು ಐವರು ಪಿಎಚ್‌ಡಿ ಸಾಧನೆ ಮಾಡಿದ್ದಾರೆ.
ಸಮುದಾಯದ ಮೊದಲ ಮಹಿಖ ಪಿಎಚ್‌ಡಿ ಪದವೀಧರೆ ಮತ್ತು ಸಮಾಜಶಾಸ್ತ್ರದ ಸಹಾಯಕ ಪ್ರಾಧ್ಯಾಪಕಿ ಸಬಿತಾ ಕೊರಗ ಹಾಗೂ ಡಾ. ಸ್ನೇಹ ಅವರಂತಹ ಸಾಧಕಿಯರು ಇಂದು ಸಾವಿರಾರು ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ಸಬಿತಾ ಅವರು ಹೇಳುವಂತೆ, ʻʻನಿರಂತರ ಜಾಗೃತಿ ಕಾರ್ಯಕ್ರಮಗಳಿಂದಾಗಿ ಇಂದು ಸಮಾಜವು ವಿದ್ಯಾಭ್ಯಾಸದತ್ತ ಮುಖ ಮಾಡುತ್ತಿದೆ. ಈ ಪ್ರತಿಭಾವಂತರ ಸಾಧನೆಯು ಕೊರಗ ಸಮುದಾಯದಲ್ಲಿ ಶೈಕ್ಷಣಿಕ ಕ್ರಾಂತಿ ಆರಂಭವಾಗಿರುವುದಕ್ಕೆ ಸಾಕ್ಷಿಯಾಗಿದೆ. ಕರಾವಳಿ ಜಿಲ್ಲೆಗಳು ಹಾಗೂ ಕಾಸರಗೋಡು ಸೇರಿದಂತೆ ಒಟ್ಟು 15 ರಿಂದ 16 ಸಾವಿರ ಜನಸಂಖ್ಯೆ ಹೊಂದಿರುವ ಕೊರಗ ಸಮುದಾಯದಲ್ಲಿ ಇಂದು ಸಾಕಷ್ಟು ಜಾಗೃತಿ ಕಾರ್ಯಕ್ರಮದಿಂದಾಗಿ ಅನೇಕ ಮಂದಿ ಶಿಕ್ಷಣ ಪಡೆಯಲು ಮುಂದಾಗುತ್ತದೆ. ಇಂದು ನಮ್ಮ ಸಮಾಜದಲ್ಲಿ ಸುಮಾರು 150 ಜನರು ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ ಮತ್ತು ಐದು ಜನರು ಪಿಹೆಚ್‌ಡಿ ಪದವಿ ಹೊಂದಿದ್ದಾರೆ. ಸುಮಾರು 1,000 ಜನರು ಪದವಿಪೂರ್ವ ಅಧ್ಯಯನವನ್ನು ಪೂರ್ಣಗೊಳಿಸಿದ್ದಾರೆ" ಎಂದು ಅವರು ಹೇಳಿದರು.
ʻʻಇಷ್ಟು ಶಿಕ್ಷಣವನ್ನು ಪಡೆದರೂ ಇಂದು ಕೊರಗ ಸಮುದಾಯದಲ್ಲಿ ವಿದ್ಯಾವಂತರಿಗೆ ಸರಿಯಾದ ರೀತಿಯದಲ್ಲಿ ಸರ್ಕಾರಿ ಹುದ್ದೆಗಳು ಲಭಿಸುತ್ತಿಲ್ಲ. ಇತರ ಪ್ರಬಲ ಸಮುದಾಯಗಳ ಮುಂದೆ ಕೊರಗ ಸಮುದಾಯದ ವಿದ್ಯಾರ್ಥಿಗಳು ಕೆಲಸ ಪಡೆಲು ಸಾಧ್ಯವಾಗುತ್ತಿಲ್ಲ. ಈ ಸಮುದಾಯಕ್ಕೆ ನೇರ ಮೀಸಲಾತಿ ಮೂಲಕ ಸರ್ಕಾರಿ ಕೆಲಸ ಕೊಡಬೇಕುʼʼ ಎಂದು ಸಬಿತಾ ಅವರ ಅಭಿಪ್ರಾಯ.
ಸಮುದಾಯದ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದವರು
ಡಾ. ಬಾಬು ಕೊರಗ: 2011ರಲ್ಲಿ ಡಾಕ್ಟರೇಟ್ ಪಡೆದ ಸಮುದಾಯದ ಮೊದಲ ವ್ಯಕ್ತಿ
ಡಾ. ಸಬಿತಾ ಗುಂಡ್ಮಿ: ಸಮುದಾಯದ ಮೊದಲ ಮಹಿಳಾ ಪಿಎಚ್.ಡಿ ಪದವೀಧರೆ. ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಮಾಜಶಾಸ್ತ್ರದ ಸಹಾಯಕ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಡಾ. ದಿನಕರ ಕೆಂಜೂರ್: ಸಬಿತಾ ಅವರ ಪತಿಯಾಗಿದ್ದು, ಇವರೂ ಸಹ 2014ರಲ್ಲಿ ಪಿಎಚ್.ಡಿ ಪಡೆದಿದ್ದಾರೆ.
ಡಾ. ಕಲಾವತಿ ಸೂರಾಲಿನ: ಹಂಪಿ ಕನ್ನಡ ವಿವಿಯಿಂದ 'ಕೊರಗ ಅದಿಮ ಬುಡಕಟ್ಟಿನ ಸಮಾಜೋ-ಸಾಂಸ್ಕೃತಿಕ ಅಧ್ಯಯನ' ವಿಷಯದಲ್ಲಿ ಪಿಎಚ್.ಡಿ ಪಡೆದ ನಾಲ್ಕನೇ ಸಾಧಕಿ.
ಡಾ.ಸ್ನೇಹ: ಕುಂದಾಪುರ ತಾಲೂಕಿನ ಉಳ್ತೂರು ನಿವಾಸಿ ಗಣೇಶ್ ವಿ. ಮತ್ತು ಜಯಶ್ರೀ ದಂಪತಿಯ ಹಿರಿಯ ಪುತ್ರಿ ಡಾ.ಕೆ. ಸ್ನೇಹಾ ಎ.ಜೆ. ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪೂರೈಸಿ ಮತ್ತು ನ್ಯೂಡೆಲ್ಲಿ ಯುನಿವರ್ಸಿಟಿ ಕಾಲೇಜ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಎಂಡಿ ಪದವಿ ಪಡೆಯುವ ಮೂಲಕ ಸಮುದಾಯದ ಮೊದಲ ವೈದ್ಯೆಯಾಗಿ ಹೊರಹೊಮ್ಮಿದ್ದಾರೆ.
ಕಾಡಿನ ಮೌನದಲ್ಲಿ ಕಳೆದುಹೋಗಿದ್ದ ಕೊರಗ ಸಮುದಾಯ ಇಂದು ಜ್ಞಾನದ ದೀವಿಗೆಯನ್ನು ಹಿಡಿದು ಸಮಾಜದ ಮುಖ್ಯವಾಹಿನಿಗೆ ಹೆಜ್ಜೆ ಹಾಕುತ್ತಿದೆ. ಈ ಶೈಕ್ಷಣಿಕ ಪಯಣ ಕೇವಲ ಒಂದು ಸಮುದಾಯದ ಏಳಿಗೆಯಲ್ಲ, ಬದಲಾಗಿ ಅಸಾಧ್ಯವಾದುದನ್ನು ಸಾಧ್ಯವಾಗಿಸಿ ತೋರಿಸಿದ ಮಾನವ ಸಂಕಲ್ಪದ ಗೆಲುವಾಗಿದೆ.

