ಶೈಕ್ಷಣಿಕ ಪ್ರಗತಿ ಕಂಡರತೂ ಸಿಗದ ಉದ್ಯೋಗ: ಅಸ್ತಿತ್ವಕ್ಕಾಗಿ ಬೀದಿಗಿಳಿದ ಕೊರಗ ಸಮುದಾಯ
x

ಉದ್ಯೋಗಕ್ಕಾಗಿ ಉಡುಪಿ ಡಿಸಿ ಕಚೇರಿ ಎದುರು ಕೊರಗ ಸಮುದಾಯದ ಬೃಹತ್ ಪ್ರತಿಭಟನೆ

ಶೈಕ್ಷಣಿಕ ಪ್ರಗತಿ ಕಂಡರತೂ ಸಿಗದ ಉದ್ಯೋಗ: ಅಸ್ತಿತ್ವಕ್ಕಾಗಿ ಬೀದಿಗಿಳಿದ ಕೊರಗ ಸಮುದಾಯ

ಸಮುದಾಯದ ಯುವಕರು ಪದವಿ, ಉನ್ನತ ಶಿಕ್ಷಣ ಪಡೆದಿದ್ದರೂ ಅವರಿಗೆ ಕೇವಲ ಪೌರಕಾರ್ಮಿಕ ಅಥವಾ ಕಸ ಗುಡಿಸುವ ಕೆಲಸಗಳೇ ಸಿಗುತ್ತಿವೆ ಎಂದು ಸಮುದಾಯದ ಮುಖಂಡರು ಬೇಸರ ವ್ಯಕ್ತಪಡಿಸಿದರು.


Click the Play button to hear this message in audio format

ಕರಾವಳಿ ಮತ್ತು ಮಲೆನಾಡು ಭಾಗದ ಅತ್ಯಂತ ಹಿಂದುಳಿದ ಹಾಗೂ ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳಲ್ಲಿ (PVTG) ಒಂದಾದ ಕೊರಗ ಸಮುದಾಯವು ಈಗ ಅಳಿವು-ಉಳಿವಿನ ಹೋರಾಟಕ್ಕೆ ಇಳಿದಿದೆ. ಪದವಿ ಪಡೆದರೂ ಉದ್ಯೋಗವಿಲ್ಲದೆ, ಅನಿವಾರ್ಯವಾಗಿ ಪೌರಕಾರ್ಮಿಕ ಕೆಲಸಕ್ಕೆ ಸೀಮಿತವಾಗಿರುವ ಈ ಸಮುದಾಯದ ಯುವಜನತೆಯ ಸ್ಥಿತಿ ಶೋಚನೀಯವಾಗಿದೆ. ಪರಿಶಿಷ್ಟ ಪಂಗಡದ (ST) ಮೀಸಲಾತಿಯ ಲಾಭವು ಕೇವಲ ಪ್ರಬಲ ಸಮುದಾಯಗಳ ಪಾಲಾಗುತ್ತಿದೆ ಎಂದು ಆರೋಪಿಸಿರುವ 'ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ', ನೇರ ನೇಮಕಾತಿಗೆ ಆಗ್ರಹಿಸಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದೆ. ಸರ್ಕಾರವು ಬಜೆಟ್‌ನಲ್ಲಿ ನೀಡಿದ್ದ ಭರವಸೆಗಳು ಕೇವಲ ಕಾಗದದ ಮೇಲೆಯೇ ಉಳಿದಿರುವುದು ಈ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.

ಪದವಿ ಇದ್ದರೂ ತಪ್ಪದ ಪೌರಕಾರ್ಮಿಕ ಕೆಲಸ

ಕೊರಗ ಸಮುದಾಯದ ಯುವಕರು ವಿದ್ಯಾವಂತರಾದರೂ ಅವರಿಗೆ ದೊರೆಯುತ್ತಿರುವುದು ಕೇವಲ ಪೌರಕಾರ್ಮಿಕ ಅಥವಾ ಕಸ ಗುಡಿಸುವ ಕೆಲಸಗಳು ಮಾತ್ರ. ಸಾವಿರಾರು ಯುವಕರು ಉನ್ನತ ಶಿಕ್ಷಣ ಪಡೆದಿದ್ದರೂ ಸರ್ಕಾರಿ ಉದ್ಯೋಗದ ಕನಸು ಕನಸಾಗಿಯೇ ಉಳಿದಿದೆ. ಪರಿಶಿಷ್ಟ ಪಂಗಡದ (ST) ಮೀಸಲಾತಿ ಪಟ್ಟಿಯಲ್ಲಿ 52 ಜನಾಂಗಗಳಿದ್ದರೂ, ಅದರ ಲಾಭ ಕೇವಲ ಕೆಲವು ಪ್ರಬಲ ಗುಂಪುಗಳಿಗೆ ಮಾತ್ರ ಸೀಮಿತವಾಗುತ್ತಿದೆ. ಇದರಿಂದಾಗಿ ತೀರಾ ಹಿಂದುಳಿದ ಕೊರಗ ಮತ್ತು ಜೇನು ಕುರುಬರಂತಹ ಸಮುದಾಯಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಸೋಲುತ್ತಿವೆ ಎಂದು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷ ಸುಶೀಲ ನಾಡಾ ಅವರು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಕೊರಗರ ಮೂಲಕಸುಬು ಬಿದಿರಿನ ಬುಟ್ಟಿಯೊಂದಿಗೆ ಸುಶೀಲಾ ನಾಡಾ

ಸರ್ಕಾರವು 2024-25ನೇ ಸಾಲಿನ ಬಜೆಟ್‌ನಲ್ಲಿ ಅರಣ್ಯ ಬುಡಕಟ್ಟು ಸಮುದಾಯದ ವಿದ್ಯಾವಂತರಿಗೆ ಸಿವಿಲ್ ಸೇವೆಗಳಲ್ಲಿ ನೇರ ನೇಮಕಾತಿ ಮಾಡುವ ಭರವಸೆ ನೀಡಿತ್ತು. ಆದರೆ, ಈವರೆಗೂ ಆ ಭರವಸೆ ಆದೇಶವಾಗಿ ಬದಲಾಗಿಲ್ಲ ಎಂದು ಅವರು ತಿಳಿಸಿದರು.

ಪರಿಶಿಷ್ಟ ಪಂಗಡಗಳ ಸ್ಪರ್ಧೆಯ ಸವಾಲು

ರಾಜ್ಯದ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಅಡಿಯನ್, ಜೇನು ಕುರುಬ, ಕಾಡು ಕುರುಬ, ಸೋಲಿಗ, ಸಿದ್ದಿ ಸೇರಿದಂತೆ ಒಟ್ಟು 52 ಜನಾಂಗಗಳಿವೆ. ಈ ಎಲ್ಲಾ ಜನಾಂಗಗಳಿಗೂ ಒಂದೇ ಮೀಸಲಾತಿ ಅಡಿಯಲ್ಲಿ ಅವಕಾಶ ನೀಡಲಾಗುತ್ತಿದೆ. ಪ್ರಸ್ತುತ ರಾಜ್ಯದಲ್ಲಿ 7% (3% ರಿಂದ ಹೆಚ್ಚಿಸಲಾಗಿದೆ)ಮೀಸಲಾತಿ ಪರಿಶಿಷ್ಟ ಪಂಗಡದ ಜನಾಂಗದವರಿಗೆ ಕಲ್ಪಿಸಲಾಗಿದೆ.

ಡೋಲು ಬಡಿಯುವ ಮೂಲಕ ಕೊರಗ ಸಮುದಾಯಕ್ಕೆ ನೇರ ಮೀಸಲಾತಿಗಾಗಿ ಪ್ರತಿಭಟನೆ ನಡೆಸಿದರು.

ಸಮುದಾಯದ ಮೊದಲ ಪಿಹೆಚ್‌ಡಿ ಪದವೀಧರೆ ಡಾ. ಸಬಿತಾ ಕೊರಗ ಅವರು ʼ ದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡುತ್ತಾ, ʼʼನಮ್ಮ ಸಮುದಾಯದಲ್ಲಿ ಪದವಿ ಪಡೆದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ನಿರುದ್ಯೋಗಿಗಳು . ಪ್ರಬಲ ಸಮುದಾಯಗಳ ಪೈಪೋಟಿಯ ನಡುವೆ ಇವರು ಉದ್ಯೋಗ ಪಡೆಯುವುದು ಅಸಾಧ್ಯವಾಗಿದೆ, ಹಾಗಾಗಿ ಸರ್ಕಾರವು ಕೊರಗ ಸಮುದಾಯಕ್ಕೆ ನೇರ ನೇಮಕಾತಿ ಮೂಲಕ ಮೀಸಲಾತಿ ಕಲ್ಪಿಸಬೇಕುʼʼ ಎಂದು ಆಗ್ರಹಿಸಿದ್ದಾರೆ.

ಒಳಮೀಸಲಾತಿ ಅತ್ಯಗತ್ಯ

ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರು ʼ ದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡುತ್ತಾ, ದೇಶದ ಜನಸಂಖ್ಯೆಯಲ್ಲಿ ಎಸ್‌ ಸಿ ಮತ್ತು ಎಸ್‌ಟಿ ವರ್ಗದವರು ಕೋಟ್ಯಂತರ ಸಂಖ್ಯೆಯಲ್ಲಿದ್ದಾರೆ. ಇಷ್ಟು ದೊಡ್ಡ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಥಾನ ಪಡೆಯಬೇಕಾದರೆ ಕಠಿಣ ಪರಿಶ್ರಮ ಅನಿವಾರ್ಯ. ಬೇರೆ ಬೇರೆ ಜನಾಂಗದಲ್ಲಿ ಅಂತರ, ಕಂದಕ ಇದೆ. ಕರಾವಳಿ ಜಿಲ್ಲೆ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಸುಮಾರು 16, 973 ಕೊರಗ ಸಮುದಾಯದ ಜನಸಂಖ್ಯೆ ಇದೆ. ಪರಿಶಿಷ್ಟ ಪಂಗಡದಲ್ಲಿ 52 ಜನಾಂಗದಲ್ಲಿ ಕೊರಗ ಸಮುದಾಯ ಕೂಡ ಒಂದು. ಎಸ್‌ ಸಿ ಮತ್ತು ಎಸ್‌ಟಿವರ್ಗದ ಅಡಿಯಲ್ಲಿ ಬರುವ ಎಲ್ಲಾ ಜನಾಂಗಗಳ ಸ್ಥಿತಿಗತಿಗಳು ಒಂದೇ ತೆರನಾಗಿಲ್ಲ. ಜಾತಿಗಳ ನಡುವೆ ಇರುವ ಶೈಕ್ಷಣಿಕ ಮತ್ತು ಸಾಮಾಜಿಕ ಅಂತರವನ್ನು ಹೋಗಲಾಡಿಸಲು 'ಒಳಮೀಸಲಾತಿ' ಅತ್ಯಗತ್ಯ. ಅರ್ಹರು ಲಭ್ಯವಿಲ್ಲದಿದ್ದಾಗ ಮಾತ್ರ ಆ ಉದ್ಯೋಗಗಳನ್ನು ಇತರರಿಗೆ ನೀಡುವ ಮೂಲಕ ಕಟ್ಟಕಡೆಯ ಸಮುದಾಯದ ವ್ಯಕ್ತಿಯೂ ಅಭಿವೃದ್ಧಿಯ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಈ ಕೆಲಸವನ್ನು ಸರ್ಕಾರ ಸರಿಯಾದ ರೀತಿಯಲ್ಲಿ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟರು.

ರಾಜ್ಯದ ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಕೊರಗ, ಜೇನು ಕುರುಬ ಸೇರಿದಂತೆ ನಾಯಕ, ವಾಲ್ಮೀಕಿ, ಸಿದ್ಧಿ, ಗೌಡಲು, ಹಕ್ಕಿಪಿಕ್ಕಿ ಹೀಗೆ ಅನೇಕ ವೈವಿಧ್ಯಮಯ ಸಮುದಾಯಗಳಿವೆ. ಆದರೆ ಈ ಪಟ್ಟಿಯಲ್ಲಿರುವ ಪ್ರತಿಯೊಂದು ಸಮುದಾಯಕ್ಕೂ ಸಮಾನ ಅವಕಾಶಗಳು ಸಿಗುತ್ತಿಲ್ಲ ಎಂಬುದು ಸದ್ಯದ ವಾಸ್ತವ. ಸರ್ಕಾರವು ಈ ಬಾರಿ ಮಾಡದೆ ಪಿವಿಟಿಜಿ ಗುಂಪುಗಳಿಗೆ ನೇರ ನೇಮಕಾತಿಯ ಭಾಗ್ಯ ಕಲ್ಪಿಸಬೇಕಿದೆ. ವಿದ್ಯಾವಂತ ಯುವಕರ ಕಣ್ಣಲ್ಲಿರುವ ನಿರುದ್ಯೋಗದ ಕತ್ತಲೆಯನ್ನು ಹೋಗಲಾಡಿಸಿ, ಅವರಿಗೆ ಉದ್ಯೋಗ ಭದ್ರತೆ ನೀಡುವ ಮೂಲಕ ಸರ್ಕಾರ ಅವರಿಗೂ ಆದ್ಯತೆ ನೀಡಬೇಕು ಎಂಬುವುದು ಕೊರಗ ಸಮುದಾಯದವರ ಕೂಗು. ಮುಂದಿನ ಎರಡು ತಿಂಗಳಲ್ಲಿ ಹೊಸ ಬಜೆಟ್ ಮಂಡನೆಯಾಗಲಿದ್ದು, ಅದಕ್ಕೂ ಮುನ್ನವೇ ಸರ್ಕಾರವು ಈ ಸಮುದಾಯದ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಆದೇಶ ಹೊರಡಿಸಬೇಕೆಂದು ಹೋರಾಟಗಾರರು ಎಚ್ಚರಿಸಿದ್ದಾರೆ. ಈ ಅಹೋರಾತ್ರಿ ಧರಣಿಯು ಸರ್ಕಾರಕ್ಕೆ ಕೊನೆಯ ಎಚ್ಚರಿಕೆಯಾಗಿದ್ದು, ಸಾಮಾಜಿಕ ನ್ಯಾಯ ದೊರೆಯುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಸಮುದಾಯದ ಮುಖಂಡರು ತಿಳಿಸಿದ್ದಾರೆ.

ಕೊರಗ ಸಮುದಾಯಕ್ಕೆ ನೇರ ಮೀಸಲಾತಿ ಕಲ್ಪಿಸಲು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಕರಾವಳಿ ಭಾಗದ ಅತ್ಯಂತ ಹಿಂದುಳಿದ ಅಸ್ಪೃಶ್ಯತೆಯ ದೌರ್ಜನ್ಯಕ್ಕೆ ಒಳಗಾಗಿರುವ ಕೊರಗ ಸಮುದಾಯವು ಸಾವಿರಾರು ವರ್ಷಗಳಿಂದ ತನ್ನ ಘನತೆ ಮತ್ತು ಗೌರವವನ್ನು ಕಳೆದುಕೊಂಡು ಬದುಕುತ್ತಿದೆ. ಕಳೆದ ನಾಲ್ಕು ದಶಕಗಳಿಂದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮೂಡಿರುವ ಜಾಗೃತಿಯ ಫಲವಾಗಿ ಸಮುದಾಯದ ಯುವಜನತೆ ಇಂದು ಉನ್ನತ ಶಿಕ್ಷಣದತ್ತ ಮುಖ ಮಾಡಿದ್ದಾರೆ. ಆದರೆ, ಇಷ್ಟೆಲ್ಲಾ ಪ್ರಗತಿಯ ನಡುವೆಯೂ ಸರ್ಕಾರಿ ಉದ್ಯೋಗ ಎಂಬುದು ಈ ಸಮುದಾಯದ ಪಾಲಿಗೆ ಇಂದಿಗೂ ಎಟುಕದ ಕನಸಾಗಿಯೇ ಉಳಿದಿದೆ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬಲಾಢ್ಯವಾಗಿರುವ ಇತರ ಸಮುದಾಯಗಳೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಮಾನವಾಗಿ ಪೈಪೋಟಿ ನಡೆಸುವುದು ಕೊರಗ ಸಮುದಾಯದ ಯುವಕರಿಗೆ ಸದ್ಯದ ಪರಿಸ್ಥಿತಿಯಲ್ಲಿ ಅಸಾಧ್ಯದ ಮಾತಾಗಿದೆ.

ಈ ನ್ಯಾಯಸಮ್ಮತ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪ್ರಮುಖ ನಾಯಕರಾದ ಸುಂದರ್ ಮಾಸ್ತರ್, ಶ್ಯಾಮ್‌ರಾಜ್ ಬಿರ್ತಿ ಹಾಗೂ ಮಂಜುನಾಥ್ ಗಿಳಿಯಾರು ಅವರುಗಳು ಭಾಗವಹಿಸಿ ತಮ್ಮ ಬೆಂಬಲ ಸೂಚಿಸಿದ್ದಾರೆ.

Read More
Next Story