
ಸಚಿವ ಶರಣಪ್ರಕಾಶ ಪಾಟೀಲ ಉದ್ಯೋಗ ಮೇಳದ ಪೋಸ್ಟರ್‌ನ್ನು ಬಿಡುಗಡೆ ಮಾಡಿದರು.
ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಇದೇ ಮೊದಲ ಬಾರಿಗೆ ಶೇ.15 ಎನ್‌ಆರ್‌ಐ ಕೋಟಾ: ಡಾ. ಶರಣಪ್ರಕಾಶ್
ಹೊಸದಾಗಿ ಮಂಜೂರಾದ 450 ಸೀಟುಗಳ ಪೈಕಿ, 400 ಸೀಟುಗಳು 8 ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಮತ್ತು 50 ಸೀಟುಗಳು ಹುಬ್ಬಳ್ಳಿಯ ಒಂದು ಸ್ವಾಯತ್ತ (ಡೀಮ್ಡ್) ವಿಶ್ವವಿದ್ಯಾಲಯಕ್ಕೆ ಹಂಚಿಕೆಯಾಗಿವೆ.
ರಾಜ್ಯದ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಉತ್ತೇಜನ ದೊರೆತಿದ್ದು, 2025-26ನೇ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ 450 ಹೆಚ್ಚುವರಿ ವೈದ್ಯಕೀಯ ಸೀಟುಗಳನ್ನು ಮಂಜೂರು ಮಾಡಿ ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಆದೇಶ ಹೊರಡಿಸಿದೆ. ಇದರೊಂದಿಗೆ, ರಾಜ್ಯದ ಇತಿಹಾಸದಲ್ಲಿ ಇದೇ ಪ್ರಪ್ರಥಮ ಬಾರಿಗೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಅನಿವಾಸಿ ಭಾರತೀಯರಿಗೆ (NRI) ಶೇ.15ರಷ್ಟು ಕೋಟಾ ನಿಗದಿಪಡಿಸಲು ಸರ್ಕಾರ ನಿರ್ಧರಿಸಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ತಿಳಿಸಿದ್ದಾರೆ.
ಶನಿವಾರ ಬೆಂಗಳೂರಿನ ವಿಕಾಸಸೌಧದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವೈದ್ಯಕೀಯ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಬೇಕೆಂಬ ಬಹುದಿನಗಳ ಬೇಡಿಕೆ ಇದೀಗ ಈಡೇರಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸೀಟು ಹಂಚಿಕೆ ಮತ್ತು ಎನ್‌ಆರ್‌ಐ ಕೋಟಾ
ಹೊಸದಾಗಿ ಮಂಜೂರಾದ 450 ಸೀಟುಗಳ ಪೈಕಿ, 400 ಸೀಟುಗಳು 8 ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಮತ್ತು 50 ಸೀಟುಗಳು ಹುಬ್ಬಳ್ಳಿಯ ಒಂದು ಸ್ವಾಯತ್ತ (ಡೀಮ್ಡ್) ವಿಶ್ವವಿದ್ಯಾಲಯಕ್ಕೆ ಹಂಚಿಕೆಯಾಗಿವೆ. ಸರ್ಕಾರಿ ಕಾಲೇಜುಗಳಿಗೆ ದೊರೆತ 400 ಸೀಟುಗಳಲ್ಲಿ ಶೇ.15ರಷ್ಟು, ಅಂದರೆ 60 ಸೀಟುಗಳನ್ನು ಎನ್‌ಆರ್‌ಐ ಕೋಟಾದಡಿ ಭರ್ತಿ ಮಾಡಲಾಗುವುದು. ಈ ಕೋಟಾದಡಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ವಾರ್ಷಿಕ 25 ಲಕ್ಷ ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಈ ಕ್ರಮದಿಂದ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಲು ಮತ್ತು ಸರ್ಕಾರದ ಅನುದಾನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ ಎಂದು ಸಚಿವರು ವಿವರಿಸಿದರು.
ಈ ಹೆಚ್ಚುವರಿ ಸೀಟುಗಳಿಂದಾಗಿ, ಈ ಹಿಂದೆ ಮೊದಲ ಸುತ್ತಿನ ಸೀಟು ಹಂಚಿಕೆಯಲ್ಲಿ ಲಭ್ಯವಿದ್ದ 9,263 ಸೀಟುಗಳ ಸಂಖ್ಯೆಯು ಇದೀಗ 9,663ಕ್ಕೆ ಏರಿಕೆಯಾಗಿದೆ.
ಸರ್ಕಾರದ ಪ್ರಯತ್ನ ಮತ್ತು ಯಶಸ್ಸು
ದೇಶಾದ್ಯಂತ ಪ್ರಸಕ್ತ ವರ್ಷ 8,000 ವೈದ್ಯಕೀಯ ಸೀಟುಗಳನ್ನು ಹೆಚ್ಚಿಸಲಾಗುವುದು ಎಂದು ಎನ್‌ಎಂಸಿ ಅಧ್ಯಕ್ಷ ಡಾ. ಅಭಿಜಿತ್ ಚಂದ್ರಕಾಂತ್ ಸೇಠ್ ಅವರು ಘೋಷಿಸಿದ ತಕ್ಷಣ, ತಾವು ನವದೆಹಲಿಗೆ ತೆರಳಿ ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಹೆಚ್ಚುವರಿ ಸೀಟುಗಳನ್ನು ಮಂಜೂರು ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದಾಗಿ ಡಾ. ಪಾಟೀಲ್ ಹೇಳಿದರು. "ಕರ್ನಾಟಕದಲ್ಲಿ ಪ್ರತಿ ವರ್ಷ ವೈದ್ಯಕೀಯ ಶಿಕ್ಷಣಕ್ಕೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಖಾಸಗಿ ಕಾಲೇಜುಗಳಲ್ಲಿ ಅಧಿಕ ಶುಲ್ಕ ಪಾವತಿಸಿ ಪ್ರವೇಶ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ, ರಾಜ್ಯಕ್ಕೆ ಹೆಚ್ಚುವರಿ ಸೀಟುಗಳನ್ನು ಮಂಜೂರು ಮಾಡುವಂತೆ ನಾವು ಮನವಿ ಮಾಡಿದ್ದೆವು," ಎಂದು ಅವರು ಹೇಳಿದರು.
ಹೆಚ್ಚುವರಿ ಸೀಟು ಪಡೆದ ಕಾಲೇಜುಗಳು
ಬೆಳಗಾವಿ, ಚಿಕ್ಕಬಳ್ಳಾಪುರ, ಕಲಬುರಗಿ, ಹಾಸನ, ಮೈಸೂರು, ರಾಯಚೂರು, ವಿಜಯನಗರ ಮತ್ತು ಬೆಂಗಳೂರಿನ ಶ್ರೀ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜುಗಳಿಗೆ ತಲಾ 50 ಸೀಟುಗಳು ಹೆಚ್ಚುವರಿಯಾಗಿ ಹಂಚಿಕೆಯಾಗಿವೆ. ಇದರೊಂದಿಗೆ, ಹುಬ್ಬಳ್ಳಿಯ ಜಗದ್ಗುರು ಗಂಗಾಧರ ಮಹಾಸ್ವಾಮಿಗಳ ಮೂರುಸಾವಿರ ಮಠದ ವೈದ್ಯಕೀಯ ಕಾಲೇಜಿಗೂ 50 ಸೀಟುಗಳು ಲಭಿಸಿವೆ.
ಕೌಶಲ್ಯಾಭಿವೃದ್ಧಿಗೆ ಸರ್ಕಾರದ ಆದ್ಯತೆ: ಸ್ಕಿಲ್ ಸಮ್ಮಿಟ್, ಉದ್ಯೋಗ ಮೇಳ ಆಯೋಜನೆ
ಬೆಂಗಳೂರು ಟೆಕ್ ಸಮ್ಮಿಟ್ ಮಾದರಿಯಲ್ಲಿ, ಇದೇ ನವೆಂಬರ್ 4, 5 ಮತ್ತು 6ರಂದು ಮೂರು ದಿನಗಳ ಕಾಲ "ಸ್ಕಿಲ್ ಸಮ್ಮಿಟ್" ಅನ್ನು ಆಯೋಜಿಸಲಾಗುವುದು ಎಂದು ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಘೋಷಿಸಿದರು.
ದಸರಾ ಹಬ್ಬದ ನಂತರ ಮೈಸೂರಿನಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗುವುದು. ಇದಕ್ಕಾಗಿ ನೋಂದಣಿ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದ್ದು, ಸಚಿವರು ಉದ್ಯೋಗ ಮೇಳದ ಪೋಸ್ಟರ್ ಅನ್ನು ಸಹ ಬಿಡುಗಡೆ ಮಾಡಿದರು. ಅಲ್ಲದೆ, ಮುಂದಿನ ಅಕ್ಟೋಬರ್ ತಿಂಗಳಿನಲ್ಲಿ "ನರ್ಸಿಂಗ್ ಶೃಂಗಸಭೆ"ಯನ್ನು ಆಯೋಜಿಸಲಾಗುವುದು ಮತ್ತು ವಿದೇಶಗಳಲ್ಲಿ ರೋಡ್ ಶೋ ನಡೆಸುವ ಮೂಲಕ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಆದ್ಯತೆ ನೀಡಲಾಗುವುದು ಎಂದು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಕೆಎಸ್‌ಡಿಸಿ ಅಧ್ಯಕ್ಷರಾದ ಶಿವಕಾಂತಮ್ಮ ನಾಯ್ಕ್, ಪ್ರಧಾನ ಕಾರ್ಯದರ್ಶಿಗಳಾದ ಮನೋಜ್‌ಕುಮಾರ್ ಮೀನಾ, ಮೊಹಮ್ಮದ್ ಮೋಶಿನ್ ಮತ್ತು ಕೆಎಸ್‌ಡಿಸಿ ವ್ಯವಸ್ಥಾಪಕ ನಿರ್ದೇಶಕ ಎನ್.ಎಂ. ನಾಗರಾಜ್ ಅವರು ಉಪಸ್ಥಿತರಿದ್ದರು.