
ಒಳಮೀಸಲಾತಿ ನಿರ್ಧಾರದ ನಂತರವೇ ವೈದ್ಯಕೀಯ ಕಾಲೇಜುಗಳಲ್ಲಿ ನೇಮಕ: ಸಚಿವ ಡಾ. ಶರಣಪ್ರಕಾಶ್ ಪಾಟೀಲ್
ಒಳಮೀಸಲಾತಿ ಕುರಿತು ಸರ್ಕಾರವು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವವರೆಗೂ ಯಾವುದೇ ಇಲಾಖೆಯಲ್ಲಿ ನೇಮಕಾತಿ ನಡೆಸದಂತೆ ಮುಖ್ಯಮಂತ್ರಿಯವರು ಸೂಚನೆ ನೀಡಿದ್ದಾರೆ ಎಂದು ಸಚಿವರು ಹೇಳಿದ್ದಾರೆ.
ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಖಾಲಿ ಇರುವ 12,000ಕ್ಕೂ ಹೆಚ್ಚು ಹುದ್ದೆಗಳ ಭರ್ತಿಯು, ಒಳಮೀಸಲಾತಿ ಕುರಿತ ಸರ್ಕಾರದ ಅಂತಿಮ ತೀರ್ಮಾನವನ್ನು ಅವಲಂಬಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲಿಯವರೆಗೂ ಯಾವುದೇ ನೇಮಕಾತಿ ಪ್ರಕ್ರಿಯೆ ನಡೆಯುವುದಿಲ್ಲ, ಆದರೆ ಬೋಧನೆ ಮತ್ತು ಆಸ್ಪತ್ರೆ ಸೇವೆಗಳಿಗೆ ಯಾವುದೇ ಅಡಚಣೆಯಾಗದಂತೆ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಿಸಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಸೋಮವಾರ ವಿಧಾನ ಪರಿಷತ್ನ ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಮಂಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, "ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅವರು ಒಳಮೀಸಲಾತಿ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಈ ಬಗ್ಗೆ ಈಗಾಗಲೇ ಸಚಿವ ಸಂಪುಟದಲ್ಲಿ ಚರ್ಚೆಯಾಗಿದ್ದು, ಶೀಘ್ರದಲ್ಲೇ ನಡೆಯಲಿರುವ ವಿಶೇಷ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ" ಎಂದು ಹೇಳಿದರು.
"ಒಳಮೀಸಲಾತಿ ಕುರಿತು ಸರ್ಕಾರವು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವವರೆಗೂ ಯಾವುದೇ ಇಲಾಖೆಯಲ್ಲಿ ನೇಮಕಾತಿ ನಡೆಸದಂತೆ ಮುಖ್ಯಮಂತ್ರಿಯವರು ಸೂಚನೆ ನೀಡಿದ್ದಾರೆ. ಹೀಗಾಗಿ, ಅಲ್ಲಿಯವರೆಗೂ ನಾವು ಏನು ಮಾಡಲು ಸಾಧ್ಯವಿಲ್ಲ" ಎಂದು ಅವರು ನೇಮಕಾತಿ ವಿಳಂಬಕ್ಕೆ ಕಾರಣವನ್ನು ವಿವರಿಸಿದರು.
ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಒಟ್ಟು 21,860 ಹುದ್ದೆಗಳಿದ್ದು, ಇದರಲ್ಲಿ 9,413 ಹುದ್ದೆಗಳು ಭರ್ತಿಯಾಗಿವೆ ಮತ್ತು 12,447 ಹುದ್ದೆಗಳು ಖಾಲಿ ಇವೆ ಎಂದು ಸಚಿವರು ಅಂಕಿಅಂಶ ಸಹಿತ ಮಾಹಿತಿ ನೀಡಿದರು. "ಹುದ್ದೆಗಳು ಖಾಲಿ ಇದ್ದರೂ, ವಿದ್ಯಾರ್ಥಿಗಳ ಬೋಧನೆಗಾಗಲೀ, ಆಸ್ಪತ್ರೆಗಳಲ್ಲಿ ರೋಗಿಗಳ ಚಿಕಿತ್ಸೆಗಾಗಲೀ ಯಾವುದೇ ಸಮಸ್ಯೆಯಾಗಿಲ್ಲ. ಅಗತ್ಯವಿರುವ ಕಡೆ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಿಸಿಕೊಳ್ಳಲು ವೈದ್ಯಕೀಯ ಕಾಲೇಜುಗಳ ನಿರ್ದೇಶಕರು ಮತ್ತು ಆಸ್ಪತ್ರೆ ಮುಖ್ಯಸ್ಥರಿಗೆ ನಿರ್ದೇಶನ ನೀಡಲಾಗಿದೆ. ಯಾದಗಿರಿ, ರಾಯಚೂರು, ಕಲಬುರಗಿಯಂತಹ ಕಡೆ ಇದ್ದ ಸಿಬ್ಬಂದಿ ಕೊರತೆಯನ್ನು ಈಗಾಗಲೇ ಈ ಮೂಲಕ ಬಗೆಹರಿಸಲಾಗಿದೆ. ಒಂದು ವೇಳೆ ಎಲ್ಲಾದರೂ ಸಮಸ್ಯೆ ಇದ್ದರೆ, ನಮ್ಮ ಗಮನಕ್ಕೆ ತಂದ ತಕ್ಷಣವೇ ಅದನ್ನು ಪರಿಹರಿಸಲಾಗುವುದು" ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ಅವರು ಸದನಕ್ಕೆ ಭರವಸೆ ನೀಡಿದರು.