
ಸಾಂದರ್ಭಿಕ ಚಿತ್ರ
ಅಲೈಡ್ ಹೆಲ್ತ್ ಸೈನ್ಸ್ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್: ಖಾಲಿ ಇರುವ ಸೀಟುಗಳನ್ನು ಭರ್ತಿ ಮಾಡಲು ಅನುಮತಿ
ಸರ್ಕಾರಿ ಮತ್ತು ಖಾಸಗಿ ಅಲೈಡ್ ಆರೋಗ್ಯ ವಿಜ್ಞಾನ ಕಾಲೇಜುಗಳಲ್ಲಿನ ಉಳಿಕೆ ಸೀಟುಗಳಿಗೆ ಪ್ರವೇಶಾತಿ ಕುರಿತು ಪೂರ್ವ ಪ್ರಚಾರ ಕೈಗೊಂಡು, ನಿಯಮಾನುಸಾರ ಪಾರದರ್ಶಕವಾಗಿ ಸೀಟು ಭರ್ತಿ ಮಾಡಬೇಕು ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ತಿಳಿಸಿದೆ.
ರಾಜ್ಯ ಸರ್ಕಾರಿ ಹಾಗೂ ಖಾಸಗಿ ಅಲೈಡ್ ಕಾಲೇಜುಗಳಲ್ಲಿ ಖಾಲಿ ಇರುವ ಆರೋಗ್ಯ ವಿಜ್ಞಾನ ಕೋರ್ಸ್ ಸೀಟುಗಳನ್ನು ಕೌನ್ಸಿಲಿಂಗ್ ಮೂಲಕ ಮೆರಿಟ್ ಆಧಾರದಲ್ಲಿ ಭರ್ತಿ ಮಾಡಿಕೊಳ್ಳುವಂತೆ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹೊಸದಾಗಿ ಸೇರ್ಪಡೆಯಾಗಿರುವ ಕೆಲವು ಕಾಲೇಜುಗಳು ಮತ್ತು ಕೋರ್ಸ್ಗಳಿಗೆ ಸೀಟ್ ಮ್ಯಾಟ್ರಿಕ್ ತಯಾರಿಸಿ ಅನುಮೋದನೆ ಪಡೆಯಲಾಗಿದೆ. ಸದರಿ ಕೋರ್ಸಗಳ ಸೀಟುಗಳಿಗೆ ಪ್ರವೇಶ ಕೊಡುವ ಮೂಲಕ ಆಯಾ ಸರ್ಕಾರಿ ಅಲೈಡ್ ಆರೋಗ್ಯ ವಿಜ್ಞಾನ ಮತ್ತು ವೈದ್ಯಕೀಯ ಕಾಲೇಜಿನ ನಿರ್ದೇಶಕರುಗಳ ಅಧ್ಯಕ್ಷತೆಯಲ್ಲಿ, ಕಾಲೇಜಿನ ಮುಖ್ಯ ಆಡಳಿತಾಧಿಕಾರಿಗಳು, ಪ್ರಾಂಶುಪಾಲರು ಹಾಗೂ ಹಿರಿಯ ಉಪನ್ಯಾಸಕರನ್ನೊಳಗೊಂಡ ಸಮಿತಿಯು ನಿಯಮಗಳ ಅನುಸಾರ ಮೆರಿಟ್ ಆಧಾರದ ಮೇಲೆ ಖಾಲಿ ಇರುವ ಸೀಟುಗಳನ್ನು ಭರ್ತಿಮಾಡಿಕೊಳ್ಳಲು ಅನುಮತಿ ನೀಡಿದ್ದಾರೆ.
ಸರ್ಕಾರಿ ಮತ್ತು ಖಾಸಗಿ ಅಲೈಡ್ ಆರೋಗ್ಯ ವಿಜ್ಞಾನ ಕಾಲೇಜುಗಳಲ್ಲಿನ ಉಳಿಕೆ ಸೀಟುಗಳಿಗೆ ಪ್ರವೇಶಾತಿ ಕುರಿತು ಪೂರ್ವ ಪ್ರಚಾರ ಕೈಗೊಂಡು, ನಿಯಮಾನುಸಾರ ಪಾರದರ್ಶಕವಾಗಿ ಯಾವುದೇ ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ಸಂಗ್ರಹಿಸದೆ ಕೇವಲ ಬೋಧನಾ ಶುಲ್ಕ ಪಡೆದು ಭರ್ತಿ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.
ಮಾನದಂಡಗಳೇನು ?
* ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವತಿಯಿಂದ ಯಾವುದೇ ಸೀಟು ಹಂಚಿಕೆಯಾಗದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಬೇಕು.
* ಹೊಸದಾಗಿ ಸೇರ್ಪಡೆಯಾಗಿರುವ ಕಾಲೇಜುಗಳು ಮತ್ತು ಕೋರ್ಸುಗಳಿಗೆ ಸೀಟ್ ಮ್ಯಾಟ್ರಿಕ್‌ನ್ನು ರೋಸ್ಟರ್ ಪದ್ಧತಿಯಂತೆ ಪರಿಗಣಿಸಬೇಕು.
* ಕೆಇಎನಲ್ಲಿ ಹಂಚಿಕೆ ಮಾಡಿ ಉಳಿಕೆಯಾಗಿರುವ ಅಲೈಡ್ ಆರೋಗ್ಯ ವಿಜ್ಞಾನ ಸೀಟುಗಳನ್ನು ಪರಿಗಣಿಸಬೇಕು.
* ವಿದ್ಯಾರ್ಥಿ ಪ್ರವೇಶಾತಿ ಅನುಮೋದನೆಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸೂಚಿಸಿದ ಅವಶ್ಯಕ ಮೂಲ ದಾಖಲೆಗಳನ್ನು ಪರಿಶೀಲಿಸಿ ಪಡೆಯಬೇಕು.
* ಹಂಚಿಕಯಾದ ಸೀಟುಗಳ ಪಟ್ಟಿಯನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಪೋರ್ಟಲ್‌ನಲ್ಲಿ ನಿಗಧಿತ ಸಮಯದಲ್ಲಿ ಅಪ್ಲೋಡ್ ಮಾಡಬೇಕು.
ಕೌನ್ಸಿಲಿಂಗ್ ನಿರಾಕರಿಸಿದ್ದ ಕೆಇಎ
ಹೊಸದಾಗಿ ಸೇರ್ಪಡೆಯಾಗಿರುವ ಕೆಲವು ಕಾಲೇಜುಗಳು ಮತ್ತು ಕೋರ್ಸುಗಳಿಗೆ ಕೌನ್ಸಲಿಂಗ್ ನಡೆಸಿದಲ್ಲಿ ಹಿಂದಿನ ಸುತ್ತುಗಳಲ್ಲಿ ಆಯ್ಕೆ ಮಾಡಿ ಕಾಲೇಜಿನಲ್ಲಿ ಪ್ರವೇಶಾತಿ ಪಡೆದಿರುವವರು ಸೀಟು ಹಂಚಿಕೆಗಳಿಗೆ ಪ್ರಶ್ನೆ ಮಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕೌನ್ಸಿಲಿಂಗ್ ನಲ್ಲಿ ಕಟ್ ಆಫ್ ದಿನಾಂಕವು ಅತ್ಯಂತ ಮಹತ್ವದ್ದಾಗಿರುತ್ತದೆ. ಈ ಹಂತದಲ್ಲಿ ವಿಳಂಬವಾದ ಕೌನ್ಸಿಲಿಂಗ್ ಮಾಡುವುದು ಸಂಪೂರ್ಣ ಶೈಕ್ಷಣಿಕ ಕ್ಯಾಲೆಂಡರ್‌ಗೆ ಅಡ್ಡಿಯಾಗುತ್ತದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಹಲವಾರು ಚಟುವಟಿಕೆಗಳಲ್ಲಿ ಕಾರ್ಯನಿರತವಾಗಿರುವುದರಿಂದ ಅಲೈಡ್ ಆರೋಗ್ಯ ವಿಜ್ಞಾನ ಕೋರ್ಸುಗಳಿಗೆ 2025-26 ನೇ ಸಾಲಿಗೆ ಕೌನ್ಸಿಲಿಂಗ್ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಇತ್ತೀಚೆಗೆ ಪತ್ರ ಬರೆದಿತ್ತು. ಆದ್ದರಿಂದ ವೈದ್ಯಕೀಯ ಕಾಲೇಜಿನ ನಿರ್ದೇಶಕರುಗಳ ಅಧ್ಯಕ್ಷತೆಯಲ್ಲಿ ಕೌನ್ಸಿಲಿಂಗ್ ನಡೆಸುವಂತೆ ವೈದ್ಯಕೀಯ ಶಿಕ್ಷಣ ಇಲಾಖೆ ಆದೇಶಿಸಿದೆ.
ಏನಿದು ಅಲೈಡ್ ಕಾಲೇಜು ?
ಅಲೈಡ್ ಆರೋಗ್ಯ ವಿಜ್ಞಾನ ಕಾಲೇಜುಗಳೆಂದರೆ ವೈದ್ಯಕೀಯ ಶಿಕ್ಷಣಕ್ಕೆ ಪೂರಕವಾದ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ, ರೇಡಿಯಾಲಜಿ, ಅನೆಸ್ತೇಷಿಯಾ ಟೆಕ್ನಾಲಜಿ ಸೇರಿದಂತೆ ಪ್ರಮುಖವಾಗಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಬರುವ ಪ್ರಮುಖ ಕಾಲೇಜುಗಳಾಗಿವೆ.
ಪ್ರಮುಖ ಸರ್ಕಾರಿ ಅಲೈಡ್ ಕಾಲೇಜುಗಳು
ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಮೈಸೂರು ಮೆಡಿಕಲ್ ಕಾಲೇಜು, ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಸಂಸ್ಥೆ, ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಪ್ರಮುಖ ಕಾಲೇಜುಗಳಾಗಿವೆ.
ಪ್ರಮುಖ ಖಾಸಗಿ ಅಲೈಡ್ ಕಾಲೇಜುಗಳು
ಸೆಂಟ್ ಜಾನ್ಸ್ ಮೆಡಿಕಲ್ ಕಾಲೇಜು, ಎಂ.ಎಸ್. ರಾಮಯ್ಯ ಮೆಡಿಕಲ್ ಕಾಲೇಜು, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, ಕಸ್ತೂರ ಬಾ ಮೆಡಿಕಲ್ ಕಾಲೇಜು ಮಣಿಪಾಲ, ಜೆಎಸ್‌ಎಸ್ ಮೆಡಿಕಲ್ ಕಾಲೇಜು ಮೈಸೂರು, ವೈದೇಹಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಕಾಲೇಜು, ನಿಟ್ಟೆ ವಿಶ್ವವಿದ್ಯಾನಿಲಯ ಮಂಗಳೂರು, ಎಸ್‌ಡಿಎಂ ಕಾಲೇಜ್ ಆಫ್ ಮೆಡಿಕಲ್ ಸೈನ್ಸ್ ಧಾರವಾಡ ಸೇರಿದಂತೆ ಹಲವು ಖಾಸಗಿ ಕಾಲೇಜುಗಳಿವೆ.

