
ಸಾಂದರ್ಭಿಕ ಚಿತ್ರ
ಹದಿನೈದು ದಿನಗಳಲ್ಲೇ ಸಿಗಲಿದೆ ಇ-ಖಾತೆ, ಅಭಿವೃದ್ಧಿಯಾಗಲಿದೆ ಗ್ರಾಮ ಪಂಚಾಯಿತಿ ಆರ್ಥಿಕತೆ
ತಂತ್ರಾಂಶದ ಮೂಲಕ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾರ್ವಜನಿಕರ ಆಸ್ತಿಗಳಿಗೆ ಡಿಜಿಟಲ್ ఇ -ಸ್ವತ್ತು ಪ್ರಮಾಣ ಪತ್ರ (ನಮೂನೆ- 11ಎ ಮತ್ತು ನಮೂನೆ 11ಬಿ) ವಿತರಣೆಯನ್ನು ಆರಂಭಿಸಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಗ್ರಾಮೀಣ ಭಾಗದ ಆಸ್ತಿ ಮಾಲೀಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಇನ್ನು ಮುಂದೆ ಹಳ್ಳಿಗಳಲ್ಲಿರುವ ತಮ್ಮ ಮನೆ, ನಿವೇಶನಗಳ ಖಾತೆಗಾಗಿ ಪಂಚಾಯಿತಿ ಕಚೇರಿಗಳಿಗೆ ಅಲೆಯುವ ತಾಪತ್ರಯ ತಪ್ಪಲಿದೆ. ರಾಜ್ಯ ಸರ್ಕಾರ 'ಇ-ಸ್ವತ್ತು 2.0' ಎಂಬ ಹೊಸ ತಂತ್ರಾಂಶವನ್ನು ಜಾರಿಗೆ ತಂದಿದ್ದು, ಇದರಿಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಆಸ್ತಿಗಳಿಗೆ ಸುಲಭವಾಗಿ ಮತ್ತು ತ್ವರಿತವಾಗಿ ಡಿಜಿಟಲ್ ಪ್ರಮಾಣ ಪತ್ರಗಳು ಸಿಗಲಿವೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸೋಮವಾರ ಈ ನೂತನ ತಂತ್ರಾಂಶಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸರ್ಕಾರದ ಈ ನಡೆಯ ಹಿಂದಿನ ಉದ್ದೇಶವನ್ನು ಸ್ಪಷ್ಟಪಡಿಸಿದರು. ಆಸ್ತಿ ಸಂಬಂಧಿತ ಸೇವೆಗಳನ್ನು ಪಾರದರ್ಶಕವಾಗಿ ಜನರಿಗೆ ತಲುಪಿಸುವುದು ಒಂದೆಡೆಯಾದರೆ, ಮತ್ತೊಂದೆಡೆ ಇದರಿಂದ ಗ್ರಾಮ ಪಂಚಾಯಿತಿಗಳ ಆರ್ಥಿಕ ಆದಾಯವೂ ವೃದ್ಧಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಈ ಹೊಸ ವ್ಯವಸ್ಥೆಯು ಸ್ಥಳೀಯ ಸರ್ಕಾರಗಳಾದ ಗ್ರಾಮ ಪಂಚಾಯಿತಿಗಳನ್ನು ಆರ್ಥಿಕವಾಗಿ ಹೆಚ್ಚು ಸದೃಢಗೊಳಿಸಲು ಪೂರಕವಾಗಲಿದೆ ಎಂಬುದು ಅವರ ಅಭಿಮತ.
ಈ ಹೊಸ ತಂತ್ರಾಂಶದ ಮೂಲಕ ಸಾರ್ವಜನಿಕರು ತಮ್ಮ ಆಸ್ತಿಗಳಿಗೆ ಸಂಬಂಧಿಸಿದ ನಮೂನೆ-11ಎ ಮತ್ತು ನಮೂನೆ-11ಬಿ ಪ್ರಮಾಣ ಪತ್ರಗಳನ್ನು ಡಿಜಿಟಲ್ ರೂಪದಲ್ಲಿ ಪಡೆಯಬಹುದಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಲ್ಪಿಸಿರುವ ಈ ಸೌಲಭ್ಯದಿಂದ ಹಳ್ಳಿಗರು ತಮ್ಮ ಆಸ್ತಿ ದಾಖಲೆಗಳನ್ನು ಅತ್ಯಂತ ಸುಲಭವಾಗಿ ಪಡೆದುಕೊಳ್ಳಲು ಸಾಧ್ಯವಾಗಲಿದೆ. ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಗ್ರಾಮ ಪಂಚಾಯಿತಿ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಕ್ತ ತರಬೇತಿಯನ್ನು ನೀಡಲಾಗಿದೆ ಎಂದು ಸಿಎಂ ಮಾಹಿತಿ ನೀಡಿದರು.
ಪ್ರತ್ಯೇಕ ಸಂಖ್ಯೆಯ ಸಹಾಯವಾಣಿ
ವಿಶೇಷವೆಂದರೆ, ಈ ಹೊಸ ವ್ಯವಸ್ಥೆಯಲ್ಲಿ ಎದುರಾಗಬಹುದಾದ ಯಾವುದೇ ತಾಂತ್ರಿಕ ಅಥವಾ ಆಡಳಿತಾತ್ಮಕ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಸಿದ್ಧವಿದ್ದು, ಇದಕ್ಕಾಗಿ ಪ್ರತ್ಯೇಕವಾಗಿ 9483476000 ಸಂಖ್ಯೆಯ ಸಹಾಯವಾಣಿಯನ್ನೂ ಸ್ಥಾಪಿಸಲಾಗಿದೆ. ಅಲ್ಲದೆ, ನಿಯಮಗಳ ಜಾರಿಗೆ ಅನುಕೂಲವಾಗುವಂತೆ 'ಪಂಚತಂತ್ರ' ತಂತ್ರಾಂಶದಲ್ಲೂ ಅಗತ್ಯ ಮಾರ್ಪಾಡುಗಳನ್ನು ಮಾಡಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಬೆಂಗಳೂರು ನಗರದಲ್ಲಿ ಈಗಾಗಲೇ ಯಶಸ್ವಿಯಾಗಿ 25 ಲಕ್ಷ ಇ-ಖಾತೆಗಳನ್ನು ವಿತರಿಸಿರುವ ಮಾದರಿಯಲ್ಲೇ ಗ್ರಾಮೀಣ ಭಾಗದಲ್ಲೂ ಕ್ರಾಂತಿಕಾರಿ ಬದಲಾವಣೆ ತರುವ ಇಂಗಿತ ವ್ಯಕ್ತಪಡಿಸಿದರು. ರಾಜ್ಯದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ಸುಮಾರು 95.76 ಲಕ್ಷ ಆಸ್ತಿಗಳಿಗೆ ಈ ತಂತ್ರಾಂಶದ ಮೂಲಕ ಪ್ರಮಾಣ ಪತ್ರ ನೀಡುವ ಬೃಹತ್ ಗುರಿಯನ್ನು ಸರ್ಕಾರ ಹೊಂದಿದೆ. ಅರ್ಜಿದಾರರು ಅರ್ಜಿ ಸಲ್ಲಿಸಿದ ಕೇವಲ ಹದಿನೈದು ದಿನಗಳ ಒಳಗಾಗಿ ದಾಖಲೆಗಳನ್ನು ಪರಿಶೀಲಿಸಿ ಇ-ಖಾತೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಭರವಸೆ ನೀಡಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಈ ನಿಟ್ಟಿನಲ್ಲಿ ತ್ವರಿತವಾಗಿ ಕಾರ್ಯನಿರ್ವಹಿಸಬೇಕೆಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ರಾಜ್ಯದಲ್ಲಿ ಇ-ಖಾತೆಗೆ ಸಂಬಂಧಿಸಿದಂತೆ ʼದ ಫೆಡರಲ್ ಕರ್ನಾಟಕʼ ಸರಣಿ ವರದಿ ಪ್ರಕಟಿಸಿತ್ತು.
E-Khata Part 1: ಏನಿದು ಇ- ಖಾತಾ? ಪಡೆಯುವುದು ಹೇಗೆ? ಭೂ ಅಕ್ರಮಗಳಿಗೆ ಹೇಗೆ ವಿರಾಮ?
E Khata Part 2: ಮೂರು ಜಿಲ್ಲೆಗಳಲ್ಲಿ ರಿಯಾಲಿಟಿ ಚೆಕ್: ದಾಖಲೆಗಳ ಕೊರತೆ, ಖಾತೆ ವಿಳಂಬ; ಹಳ್ಳಿಗರು ಹೈರಾಣು

