
ಗೃಹ ಸಚಿವ ಡಾ.ಜಿ. ಪರಮೇಶ್ವರ್
ತುಮಕೂರಿಗೆ ಲಾಲ್ಬಾಗ್ ಮಾದರಿ ಉದ್ಯಾನವನ; ಸಮಗ್ರ ಅಭಿವೃದ್ಧಿಗೆ ಪರಮೇಶ್ವರ್ ಮಾಸ್ಟರ್ ಪ್ಲಾನ್
ತುಮಕೂರು ಜಿಲ್ಲೆಯ ಕೃಷಿ, ಆರೋಗ್ಯ, ಶಿಕ್ಷಣ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿನ ವಾಸ್ತವಿಕ ಸಮಸ್ಯೆಗಳನ್ನು ನೀಗಿಸುವಂತಹ ಮೌಲಿಕ ಯೋಜನೆಗಳಿಗೆ ಬಜೆಟ್ನಲ್ಲಿ ಆದ್ಯತೆ ನೀಡುವುದು ಅತಿ ಮುಖ್ಯವಾಗಿದೆ ಎಂದು ಅವರು ಒತ್ತಿ ಹೇಳಿದರು.
ತುಮಕೂರು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು 2026-27ನೇ ಸಾಲಿನ ಆಯವ್ಯಯದಲ್ಲಿ ನವೀನ ಹಾಗೂ ದೀರ್ಘಕಾಲೀನ ಯೋಜನೆಗಳನ್ನು ಅಳವಡಿಸಲು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ಅಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಿದ್ದಾರೆ. ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ನಡೆದ ಬಜೆಟ್ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಅಭಿವೃದ್ಧಿ ಯೋಜನೆಗಳು ಕೇವಲ ತಾತ್ಕಾಲಿಕ ಅಗತ್ಯಗಳಿಗೆ ಸೀಮಿತವಾಗಬಾರದು ಎಂದು ಪ್ರತಿಪಾದಿಸಿದ ಸಚಿವರು, ಭವಿಷ್ಯದ ದೃಷ್ಟಿಕೋನವನ್ನು ಹೊಂದಿರುವ ಮತ್ತು ದೀರ್ಘಕಾಲೀನ ಲಾಭ ನೀಡುವಂತಹ ಪ್ರಸ್ತಾವನೆಗಳನ್ನು ಸಿದ್ಧಪಡಿಸುವಂತೆ ನಿರ್ದೇಶಿಸಿದರು. ಸಾಮಾನ್ಯ ಯೋಜನೆಗಳಿಗೆ ಪ್ರತಿವರ್ಷ ಅನುದಾನ ಸಿಗುತ್ತಲೇ ಇರುತ್ತದೆ, ಆದರೆ ಈ ಬಾರಿ ತುಮಕೂರು ಜಿಲ್ಲೆಯ ಕೃಷಿ, ಆರೋಗ್ಯ, ಶಿಕ್ಷಣ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿನ ವಾಸ್ತವಿಕ ಸಮಸ್ಯೆಗಳನ್ನು ನೀಗಿಸುವಂತಹ ಮೌಲಿಕ ಯೋಜನೆಗಳಿಗೆ ಬಜೆಟ್ನಲ್ಲಿ ಆದ್ಯತೆ ನೀಡುವುದು ಅತಿ ಮುಖ್ಯವಾಗಿದೆ ಎಂದು ಅವರು ಒತ್ತಿ ಹೇಳಿದರು.
ತುಮಕೂರು ಜಿಲ್ಲೆಯಲ್ಲಿ ಸೇಬು ಮತ್ತು ಹುಣಸೆಹಣ್ಣು ಸೇರಿದಂತೆ ವಿವಿಧ ಹಣ್ಣುಗಳ ಉತ್ಪಾದನೆ ಗಣನೀಯವಾಗಿ ಹೆಚ್ಚುತ್ತಿದೆ. ಆದರೆ, ಸಮರ್ಪಕ ಶೀತಲೀಕರಣ ಘಟಕಗಳ ಕೊರತೆಯಿಂದಾಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಣ್ಣುಗಳ ಗುಣಮಟ್ಟ ಕಾಪಾಡಲು ಹಾಗೂ ಮೌಲ್ಯವರ್ಧನೆಗಾಗಿ ಜಿಲ್ಲೆಯಲ್ಲಿ ಸುಸಜ್ಜಿತ ಶೀತಗೃಹಗಳನ್ನು ಸ್ಥಾಪಿಸಲು ವಿಶೇಷ ಅನುದಾನ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸುವುದಾಗಿ ಸಚಿವರು ತಿಳಿಸಿದರು. ಅಲ್ಲದೆ, ನಗರದ ಸೌಂದರ್ಯೀಕರಣದ ದೃಷ್ಟಿಯಿಂದ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾಜಕಾಲುವೆಗಳ ಸಮರ್ಪಕ ನಿರ್ವಹಣೆ ಹಾಗೂ ನಗರದ ಹೊರವಲಯದಲ್ಲಿ ಬೆಂಗಳೂರಿನ ಕಬ್ಬನ್ ಪಾರ್ಕ್ ಅಥವಾ ಲಾಲ್ಬಾಗ್ ಮಾದರಿಯ ಬೃಹತ್ ಉದ್ಯಾನವನಗಳನ್ನು ಅಭಿವೃದ್ಧಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಗೆ ಹೊಸ ಉದ್ದಿಮೆಗಳನ್ನು ಆಕರ್ಷಿಸಲು ಮೂಲಸೌಕರ್ಯಗಳ ಪಾತ್ರ ದೊಡ್ಡದಿದೆ. ಕುಡಿಯುವ ನೀರು ಮತ್ತು ಉತ್ತಮ ರಸ್ತೆ ಸಂಪರ್ಕ ಒದಗಿಸಿದಲ್ಲಿ ತುಮಕೂರು ಜಿಲ್ಲೆ ಉದ್ಯೋಗ ಮತ್ತು ವಸತಿ ದೃಷ್ಟಿಯಿಂದ ರಾಜ್ಯದ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಲಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸಮಗ್ರ ವರದಿ ಸಿದ್ಧಪಡಿಸಬೇಕು ಎಂದು ಪರಮೇಶ್ವರ್ ತಿಳಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

