
ಮಾಜಿ ಸಿಎಂ ವೀರಪ್ಪ ಮೋಯ್ಲಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
"ಪಶ್ಚಾತ್ತಾಪ ಪಡಬೇಡಿ, ಸರದಿ ಬಂದಾಗ ಅವಕಾಶ ಸಿಗುತ್ತದೆ": ಖರ್ಗೆಗೆ ಮೊಯ್ಲಿ ತಿರುಗೇಟು
"1979 ರಿಂದ 1995 ರವರೆಗೆ ನಾನೇ ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ನಿರ್ವಹಿಸಿದ್ದೆ. ಆದರೆ, ಆಗ ನನ್ನ ಬದಲು ಆರ್. ಗುಂಡೂರಾವ್, ಎಸ್. ಬಂಗಾರಪ್ಪ ಮತ್ತು ಅದಕ್ಕೂ ಮುನ್ನ ವೀರೇಂದ್ರ ಪಾಟೀಲರು ಮುಖ್ಯಮಂತ್ರಿಗಳಾದರು ಎಂದು ಮಾಜಿ ಸಿಎಂ ಮೊಯ್ಲಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲವೆಂದು ಇತ್ತೀಚೆಗೆ ಅಸಮಾಧಾನ ವ್ಯಕ್ತಪಡಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ತಮ್ಮದೇ ಅನುಭವದ ಮೂಲಕ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. "ನಮಗೆ ಅರ್ಹತೆ ಇದ್ದರೆ, ಸರದಿ ಬಂದರೆ ಮುಖ್ಯಮಂತ್ರಿ ಆಗೇ ಆಗುತ್ತೇವೆ. ಅದಕ್ಕಾಗಿ ಪಶ್ಚಾತ್ತಾಪ ಪಡುವುದು ಬೇಡ," ಎಂದು ಅವರು ಕಿವಿಮಾತು ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ವೀರಪ್ಪ ಮೊಯ್ಲಿ, ತಮ್ಮ ರಾಜಕೀಯ ಜೀವನದ ಆರಂಭಿಕ ದಿನಗಳನ್ನು ನೆನಪಿಸಿಕೊಂಡರು. "1979 ರಿಂದ 1995 ರವರೆಗೆ ನಾನೇ ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ನಿರ್ವಹಿಸಿದ್ದೆ. ಆದರೆ, ಆಗ ನನ್ನ ಬದಲು ಆರ್. ಗುಂಡೂರಾವ್, ನಂತರ ಎಸ್. ಬಂಗಾರಪ್ಪ ಮತ್ತು ಅದಕ್ಕೂ ಮುನ್ನ ವೀರೇಂದ್ರ ಪಾಟೀಲರು ಮುಖ್ಯಮಂತ್ರಿಗಳಾದರು. 1980ರಲ್ಲೇ ನಾನು ಸಿಎಂ ಆಗಬೇಕಿತ್ತು, ಆಗಲಿಲ್ಲ. ಹತ್ತು ವರ್ಷ ಕಾಯಬೇಕಾಯಿತು. ಹಾಗಂತ, ನಾನು ಸಿಎಂ ಆಗಲಿಲ್ಲವಲ್ಲ ಎಂದು ಎಂದಿಗೂ ಪಶ್ಚಾತ್ತಾಪ ಪಡಲಿಲ್ಲ," ಎಂದು ಹೇಳಿದರು.
ಈ ಹೇಳಿಕೆಯು, "1999ರಲ್ಲಿ ನಾನು ಪಕ್ಷ ಸಂಘಟಿಸಿದ್ದರೂ, ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾದರು" ಎಂದು ಖರ್ಗೆ ಅವರು ಇತ್ತೀಚೆಗೆ ವಿಜಯಪುರದಲ್ಲಿ ವ್ಯಕ್ತಪಡಿಸಿದ್ದ ಬೇಸರಕ್ಕೆ ನೇರ ಪ್ರತಿಕ್ರಿಯೆ ಎಂದು ವಿಶ್ಲೇಷಿಸಲಾಗಿದೆ.
ಡಿಸಿಎಂ ಡಿ.ಕೆ. ಶಿವಕುಮಾರ್‌ಗೂ ಪರೋಕ್ಷ ಸಂದೇಶ
ಉಪಮುಖ್ಯಮಂತ್ರಿ ಹುದ್ದೆಯಲ್ಲಿರುವವರು ಮುಖ್ಯಮಂತ್ರಿಯಾಗಲು ಆಸೆಪಡುವುದು ಸಹಜ ಎಂದು ಉಲ್ಲೇಖಿಸಿದ ಮೊಯ್ಲಿ, "ಡಿಸಿಎಂ ಆದವರು ಸಿಎಂ ಆಗಬೇಕು ಅಂತ ಆಸೆ ಪಡುತ್ತಾರೆ. ಆದರೆ, ಕೆಲವೊಂದು ಬಾರಿ ಡಿಸಿಎಂ ಆಗಿಯೇ ನಿವೃತ್ತಿಯಾಗಬಹುದು. ನನಗೆ ಸಿಗಲಿಲ್ಲ ಎಂದು ಪಶ್ಚಾತ್ತಾಪ ಪಡುವುದು ಬೇಡ," ಎಂದು ಹೇಳಿದರು. ಇದು ಹಾಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ನೀಡಿದ ಪರೋಕ್ಷ ಕಿವಿಮಾತು ಎಂದು ವ್ಯಾಖ್ಯಾನಿಸಲಾಗಿದೆ.
"ನಾವು ಎಷ್ಟು ವರ್ಷ ಮುಖ್ಯಮಂತ್ರಿ ಆಗಿದ್ದೆವು ಎನ್ನುವುದು ಮುಖ್ಯವಲ್ಲ, ಆ ಅವಧಿಯಲ್ಲಿ ಏನು ಕೆಲಸ ಮಾಡಿದೆವು ಎಂಬುದು ಮುಖ್ಯ. ನನ್ನಿಂದಲೇ ಪಕ್ಷ ಅಧಿಕಾರಕ್ಕೆ ಬಂತು ಎಂದು ಯಾರೂ ಹೇಳಲಿಕ್ಕಾಗುವುದಿಲ್ಲ," ಎಂದು ಮೊಯ್ಲಿ ಅಭಿಪ್ರಾಯಪಟ್ಟರು.