ದೆಹಲಿ ಅಂಗಳಕ್ಕೆ ಸಿಎಂ ಗಾದಿ ಫೈಟ್! ರಾಹುಲ್‌ ಭೇಟಿ ಬೆನ್ನಲ್ಲೇ ಡಿಕೆಶಿ ಅಚ್ಚರಿಯ ಪೋಸ್ಟ್‌
x
ರಾಹುಲ್‌ ಗಾಂಧಿ ಭೇಟಿ ಬೆನ್ನಲ್ಲೇ ಡಿಕೆ ಶಿವಕುಮಾರ್‌ ಪೋಸ್ಟ್‌

ದೆಹಲಿ ಅಂಗಳಕ್ಕೆ ಸಿಎಂ ಗಾದಿ ಫೈಟ್! ರಾಹುಲ್‌ ಭೇಟಿ ಬೆನ್ನಲ್ಲೇ ಡಿಕೆಶಿ ಅಚ್ಚರಿಯ ಪೋಸ್ಟ್‌

ಡಿ.ಕೆ. ಶಿವಕುಮಾರ್ ಅವರ ಇತ್ತೀಚಿನ ಸೋಷಿಯಲ್ ಮೀಡಿಯಾ ಪೋಸ್ಟ್ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. "ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ" ಎಂಬ ಅವರ ಮಾತುಗಳು ಸಿಎಂ ಗಾದಿಯ ಬದಲಾವಣೆಯ ಸೂಚನೆಯೇ?


ಕರ್ನಾಟಕ ಕಾಂಗ್ರೆಸ್‌ನಲ್ಲಿ 'ಸಿಎಂ ಕುರ್ಚಿ' ಬದಲಾವಣೆ ಚರ್ಚೆ ಹೊಸ ತಿರುವು ಪಡೆದುಕೊಂಡಿದೆ. ಒಂದೆಡೆ ರಾಹುಲ್ ಗಾಂಧಿ ಅವರ ದೆಹಲಿ ಬುಲಾವ್, ಮತ್ತೊಂದೆಡೆ ಡಿ.ಕೆ. ಶಿವಕುಮಾರ್ ಅವರ ನಿಗೂಢ ನಡೆಗಳು ರಾಜ್ಯ ರಾಜಕೀಯದಲ್ಲಿ ಭಾರಿ ಕುತೂಹಲ ಕೆರಳಿಸಿವೆ. ರಾಹುಲ್ ಗಾಂಧಿ ಅವರ ಭೇಟಿಯ ಮರುದಿನವೇ ಡಿ.ಕೆ. ಶಿವಕುಮಾರ್ ಅವರು ಹಾಕಿರುವ ಸೋಷಿಯಲ್ ಮೀಡಿಯಾ ಪೋಸ್ಟ್ ರಾಜ್ಯ ಕಾಂಗ್ರೆಸ್‌ನಲ್ಲಿ ಸಂಚಲನ ಮೂಡಿಸಿದೆ.

ಡಿ.ಕೆ.ಶಿ ಪೋಸ್ಟ್‌ನಲ್ಲೇನಿದೆ?

ಡಿ.ಕೆ. ಶಿವಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ "ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ" ಎಂದು ಬರೆದುಕೊಂಡಿದ್ದಾರೆ. ರಾಜಕೀಯ ಪ್ರಯತ್ನಗಳು (ಸಿಎಂ ಗಾದಿಗಾಗಿ ನಡೆಸುವ ಹೋರಾಟ) ಎಷ್ಟೇ ಅಡೆತಡೆಗಳನ್ನು ಎದುರಿಸಿದರೂ, ಅಂತಿಮವಾಗಿ 'ದೈವಬಲ' ಅಥವಾ 'ನ್ಯಾಯ' ತಮಗೆ ಸಿಗಲಿದೆ ಎಂಬುದು ಡಿಕೆಶಿಯವರ ನಂಬಿಕೆ ಇರಬಹುದು.

ಈ ಹಿಂದೆಯೂ ಅವರು ಸಂಕಷ್ಟದ ಅಥವಾ ಪ್ರಮುಖ ನಿರ್ಧಾರಗಳ ಸಂದರ್ಭದಲ್ಲಿ ಇಂತಹ ಆಧ್ಯಾತ್ಮಿಕ ಲೇಪಿತ ರಾಜಕೀಯ ಸಂದೇಶಗಳನ್ನು ನೀಡುತ್ತಾ ಬಂದಿದ್ದಾರೆ.

ರಾಹುಲ್ ಗಾಂಧಿ ನೀಡಿದ ‘ದಿಲ್ಲಿ’ ಸಂದೇಶ

ನಿನ್ನೆ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರೊಂದಿಗೆ ನಡೆಸಿದ ಪ್ರತ್ಯೇಕ ಚರ್ಚೆಯಲ್ಲಿ ಯಾವುದೇ ಅಂತಿಮ ತೀರ್ಮಾನವನ್ನು ಪ್ರಕಟಿಸಿಲ್ಲ. "ಬೆಂಗಳೂರಿನಲ್ಲಿ ಏನೂ ಹೇಳಲ್ಲ, ಎಲ್ಲವನ್ನೂ ದೆಹಲಿಗೆ ಬಂದಾಗ ಮಾತನಾಡೋಣ" ಎಂದು ರಾಹುಲ್ ಹೇಳಿರುವುದು ಸಂಚಲನ ಮೂಡಿಸಿದೆ. ಇದರರ್ಥ, ಕರ್ನಾಟಕದ ನಾಯಕತ್ವ ಬದಲಾವಣೆಯ ಫೈಲ್ ಈಗ ಅಧಿಕೃತವಾಗಿ ದೆಹಲಿಯ ಹೈಕಮಾಂಡ್ ಅಂಗಳಕ್ಕೆ ಶಿಫ್ಟ್ ಆಗಿದೆ.

ಮೈಸೂರಿಗೆ ‘ಜತೆ’ಯಾಗಿ ಪಯಣ, ವಾಪಸ್ ಬರುವಾಗ ‘ಪ್ರತ್ಯೇಕ’!

ಅತ್ಯಂತ ಆಶ್ಚರ್ಯಕರ ಬೆಳವಣಿಗೆ ಎಂದರೆ, ಮೈಸೂರಿಗೆ ಸಿದ್ದರಾಮಯ್ಯ ಅವರ ಜೊತೆ ಒಟ್ಟಿಗೆ ತೆರಳಿದ್ದ ಡಿ.ಕೆ. ಶಿವಕುಮಾರ್ ಅವರು, ಬೆಂಗಳೂರಿಗೆ ವಾಪಸ್ ಬರುವಾಗ ಸಿಎಂ ಜೊತೆಗೆ ಬರಲಿಲ್ಲ. ರಾಹುಲ್ ಗಾಂಧಿ ಎದುರು ನಡೆದ ಚರ್ಚೆಯ ಫಲಿತಾಂಶ ಡಿಕೆಶಿಯವರಿಗೆ ಸಮಾಧಾನ ತಂದಿಲ್ಲವೇ? ಅಥವಾ ತಮ್ಮ ಅಸಮಾಧಾನವನ್ನು ಹೊರಹಾಕಲು ಅವರು ಪ್ರತ್ಯೇಕ ಪ್ರಯಾಣದ ಹಾದಿ ಹಿಡಿದರೇ? ಎಂಬ ಪ್ರಶ್ನೆ ಮೂಡಿದೆ. ಹೈಕಮಾಂಡ್ ಎದುರು 'ಒಗ್ಗಟ್ಟು' ಪ್ರದರ್ಶಿಸಿದರೂ, ವಾಸ್ತವದಲ್ಲಿ ಅಂತರ ಹೆಚ್ಚುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ.

ದೆಹಲಿ ಅಖಾಡಕ್ಕೆ ಸಿದ್ಧತೆ

ರಾಹುಲ್ ಗಾಂಧಿ ಅವರ ಆಹ್ವಾನದಂತೆ ಇಬ್ಬರೂ ನಾಯಕರು ದೆಹಲಿಗೆ ತೆರಳಬೇಕಿದೆ. ದೆಹಲಿಯಲ್ಲಿ ನಡೆಯಲಿರುವ ಈ ಸಭೆಯು ಸಿದ್ದರಾಮಯ್ಯ ಅವರ ಅಧಿಕಾರ ಮುಂದುವರಿಕೆ ಅಥವಾ ಡಿಕೆಶಿಯವರ ಪಟ್ಟಾಭಿಷೇಕದ ಬಗ್ಗೆ ಅಂತಿಮ ಮುದ್ರೆ ಒತ್ತಲಿದೆ. ಡಿಕೆಶಿ ಅವರ 'ಪ್ರಾರ್ಥನೆ' ಫಲಿಸುತ್ತದೆಯೇ ಅಥವಾ ಸಿದ್ದರಾಮಯ್ಯ ಅವರ 'ಪ್ರಯತ್ನ' ಯಶಸ್ವಿಯಾಗುತ್ತದೆಯೇ ಎಂಬುದು ಈಗ ದೆಹಲಿ ದರ್ಬಾರ್‌ನಲ್ಲಿ ನಿರ್ಧಾರವಾಗಲಿದೆ.

Read More
Next Story