
ಆಂದ್ಲೆ ಶ್ರೀ ಜಗದೀಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್
ಡಿಕೆ ಶಿವಕುಮಾರ್‌ಗೆ ಶುಭ ಸೂಚನೆ ನೀಡಿದ ಆಂದ್ಲೆ ಜಗದೀಶ್ವರಿ ದೇವಿ; ಯಾವುದು ಈ ಕಾರಣಿಕ ಕ್ಷೇತ್ರ?
ಹೆಲಿಕಾಪ್ಟರ್ ಮೂಲಕ ಗೋಕರ್ಣದ ಮಹಾಬಲೇಶ್ವರ ಮತ್ತು ಮಹಾಗಣಪತಿ ದೇವಸ್ಥಾನಗಳ ಭೇಟಿಯ ನಂತರ ಇಲ್ಲಿಗೆ ಬಂದ ಅವರು, ದೇವಿಯಿಂದ ಬಲಭಾಗದ ಹಿಂಗಾರ ಪ್ರಸಾದ ಪಡೆದು ರಾಜಕೀಯ ಭವಿಷ್ಯಕ್ಕೆ ಶುಭ ಸೂಚನೆ ದೊರೆತಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ವಿಷಯ ಇನ್ನೂ ಚಾಲ್ತಿಯಲ್ಲಿರುವಾಗ ಹಾಗೂ ಸಿದ್ದರಾಮಯ್ಯ ಅವರು ತಾವೇ ಪೂರ್ಣಾವಧಿ ಸಿಎಂ ಎಂದು ಮತ್ತೆ ಉದ್ಗರಿಸುತ್ತಿದ್ದಂತೆ, ಆ ಸ್ಥಾನದ ಪ್ರಬಲ ಆಕಾಂಕ್ಷಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಆಂಕೋಲಾದ ಕಾರಣಿಕ ಕ್ಷೇತ್ರವೊಂದಕ್ಕೆ ಹೆಲಿಕಾಪ್ಟರ್‌ನಲ್ಲಿ ಪಯಣಿಸಿ ಅಡಿಕೆ ಹೂವಿನ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಮೊಘಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಂದ್ಲೆ ಶ್ರೀ ಜಗದೀಶ್ವರಿ ದೇವಸ್ಥಾನಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಹೆಲಿಕಾಪ್ಟರ್ ಮೂಲಕ ಗೋಕರ್ಣದ ಮಹಾಬಲೇಶ್ವರ ಮತ್ತು ಮಹಾಗಣಪತಿ ದೇವಸ್ಥಾನಗಳ ಭೇಟಿಯ ನಂತರ ಇಲ್ಲಿಗೆ ಬಂದ ಅವರು, ದೇವಿಯಿಂದ ಬಲಭಾಗದ ಹಿಂಗಾರ (ಅಡಿಕೆ ಮರದ ಹೂವು) ಪ್ರಸಾದ ಪಡೆದು ರಾಜಕೀಯ ಭವಿಷ್ಯಕ್ಕೆ ಶುಭ ಸೂಚನೆ ದೊರೆತಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ಈ ದೇವಸ್ಥಾನದ ಮಹಿಮೆಯ ಬಗ್ಗೆ ಚರ್ಚೆ ಶುರುವಾಗಿದೆ. ಅಂದ ಹಾಗೆ ಈ ದೇವಸ್ಥಾನವು ಭಕ್ತರ ಭವಿಷ್ಯ ನುಡಿಯುವ 'ಹಿಂಗಾರ ಪ್ರಸಾದ'ಕ್ಕೆ ವಿಶೇಷ ಖ್ಯಾತಿ ಪಡೆದಿದ್ದು, ರಾಜಕೀಯ ನಾಯಕರಿಗೂ ಆಕರ್ಷಣೆಯ ಕೇಂದ್ರವಾಗಿದೆ.
ದೇವಸ್ಥಾನದ ಅರ್ಚಕ ಗಣೇಶ್ ನಾಯ್ಕ ಅವರೊಂದಿಗೆ ಒಂದೂವರೆ ತಾಸಿಗೂ ಹೆಚ್ಚು ಸಮಯ ಕಳೆದ ಡಿಕೆ ಶಿವಕುಮಾರ್, ತಮ್ಮ ಕುಟುಂಬಕ್ಕೆ, ಸಮಾಜಕ್ಕೆ ಮತ್ತು ರಾಜ್ಯದ ಒಳಿತಿಗಾಗಿ ಪ್ರಾರ್ಥಿಸಿದರು ಎಂದು ಅವರ ಆಪ್ತರು ಹೇಳಿದ್ದಾರೆ. ನಾಗದೇವತೆ ಮತ್ತು ತುಳಸಿಗೂ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದರು. ಐದು ವರ್ಷಗಳ ಹಿಂದೆ ಕುಟುಂಬ ಕೆಲಸಕ್ಕಾಗಿ ಇಲ್ಲಿಗೆ ಬಂದು ಹರಕೆ ಹೊತ್ತಿದ್ದರು. ಆ ಹರಕೆ ಈಗ ಈಡೇರಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಆಶೀರ್ವಾದಕ್ಕಾಗಿ ಮತ್ತೆ ಪ್ರಾರ್ಥಿಸಿದ್ದೇನೆ ಎಂದು ಅವರು ಹೇಳಿದರು.
ದೇವಸ್ಥಾನದ ರಹಸ್ಯ ಇತಿಹಾಸ ಮತ್ತು ಶಕ್ತಿ
ಹಸಿರು ಬೆಟ್ಟ-ಗುಡ್ಡಗಳಿಂದ ಕೂಡಿರುವ ಈ ಗ್ರಾಮದ ಖಾಸಗಿ ದೇವಾಲಯವು ಕಳೆದ 15 ವರ್ಷಗಳ ಹಿಂದೆ ಸ್ಥಳೀಯ ನಿವಾಸಿ ಗಣೇಶ್ ನಾಯ್ಕ ಅವರ ಕನಸಿನಲ್ಲಿ ಜಗದೀಶ್ವರಿ ತಾಯಿ ತೋರುತ್ತಾ ತನ್ನ ಪ್ರತಿಷ್ಠೆಗಾಗಿ ಆದೇಶಿಸಿದಳು ಎಂಬ ನಂಬಿಕೆಯಿಂದ ಪ್ರತಿಷ್ಠಾಪನೆಗೊಂಡಿದೆ. ಅವರ ಕುಟುಂಬವು ತಮ್ಮ ಜಮೀನಿನಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿದ ನಂತರ, ಇದು ಶುದ್ಧ ಭಕ್ತಿಯ ಮೂಲಕ ಭಕ್ತರ ಬೇಡಿಕೆಗಳಿಗೆ ಪ್ರತಿಕ್ರಿಯಿಸುವ ಶಕ್ತಿ ಕ್ಷೇತ್ರವಾಗಿ ಖ್ಯಾತಿ ಪಡೆದಿದೆ. ದೇವಿಯ ಶಕ್ತಿಯು ಭಕ್ತರ ಇಚ್ಛೆಗಳನ್ನು ಈಡೇರಿಸುವಲ್ಲಿ ಸಾಕ್ಷಾತ್ಕಾರವಾಗಿ ಕೆಲಸ ಮಾಡುತ್ತದೆ ಎಂದು ನಂಬಿಕೆಯಿದೆ.
ಹಿಂಗಾರ ಪ್ರಸಾದದ ಭವಿಷ್ಯ
ಈ ದೇವಸ್ಥಾನದ ಅತ್ಯಂತ ವಿಶೇಷತೆಯೆಂದರೆ 'ಹಿಂಗಾರ ಪ್ರಸಾದ' ವಿಧಾನ. ಐದು ವಿಧಗಳಲ್ಲಿ ಪ್ರಸಾದ ನೀಡುವ ದೇವಿ - ಹೂ ಪ್ರಸಾದ, ಹಿಂಗಾರ ಮುಡಿ, ನೇರ ಪ್ರಶ್ನೆ ಉತ್ತರ ಮತ್ತು ಇನ್ನಿರುವ ರಹಸ್ಯ ವಿಧಾನಗಳ ಮೂಲಕ ಭಕ್ತರ ಪ್ರಶ್ನೆಗಳಿಗೆ ಉತ್ತರ ನೀಡುತ್ತಾಳೆ. ದೇವಿಯ ತಲೆಯ ಬಲಭಾಗದಿಂದ ಹಿಂಗಾರ ಬಿದ್ದರೆ ಭಕ್ತನ ಬೇಡಿಕೆ ಒಂದು ತಿಂಗಳೊಳಗೆ ಈಡೇರುತ್ತದೆ ಎಂಬ ನಂಬಿಕೆಯಿದೆ. ಇಂದು ಡಿಕೆ ಶಿವಕುಮಾರ್ ಅವರಿಗೆ ಸಹ ಈ ಬಲಭಾಗದ ಹಿಂಗಾರ ಪ್ರಸಾದ ದೊರೆತು, ರಾಜಕೀಯ ಭವಿಷ್ಯಕ್ಕೆ ಶುಭ ಸೂಚನೆ ನೀಡಿದೆ ಎಂದು ಸ್ವತಃ ಅವರು ಹೇಳಿಕೊಂಡಿದ್ದಾರೆ.
ಪ್ರತಿದಿನ ಬ್ರಾಹ್ಮ ಮುಹೂರ್ತದಲ್ಲಿ ಜಲಾಭಿಷೇಕ, ಎಳ್ಳು ನೀರು, ಪಂಚಾಮೃತ, ಹಾಲು ಅಭಿಷೇಕ, 9 ಬಗೆಯ ಆರತಿ, ಬಲಿ ಸೇವೆ ಮತ್ತು ಪಟ್ಟೆ-ಸೀರೆ ಅರ್ಪಣೆ ನಡೆಯುತ್ತದೆ. ಮಂಗಳವಾರ, ಶುಕ್ರವಾರ ಮತ್ತು ಅಮಾವಾಸ್ಯೆಯಂದು ದಂಪತಿಗಳು ಭಿಕ್ಷೆ ನೀಡುತ್ತಾರೆ. ಇಷ್ಟಾರ್ಥ ಪೂಜೆಯ ಸಮಯದಲ್ಲಿ ಗರ್ಭಗೃಹಕ್ಕೆ ಭಕ್ತರ ಆಪ್ತರನ್ನು ಹೊರತುಪಡಿಸಿ ಉಳಿದವರಿಗೆ ಪ್ರವೇಶ ನಿರಾಕರಿಸಲಾಗುತ್ತದೆ. ಅಲ್ಲಿನ ಶಕ್ತಿಯ ಬಗ್ಗೆ ಯಾವುದೇ ಗುಟ್ಟು ಹೊರಕ್ಕೆ ಬಿಡದಂತೆ ಕಟ್ಟುನಿಟ್ಟು ಆದೇಶ ನೀಡುವ ಈ ವಿಧಾನವು ದೇವಸ್ಥಾನದ ವಿಶೇಷತೆಯಾಗಿದೆ.
ಸಿಎಂ ಬದಲಾವಣೆ ಚರ್ಚೆ
ದೇಗುಲಕ್ಕೆ ಭೇಟಿ ನೀಡಿ ಬಂದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, "ಎರಡುವರೆ ವರ್ಷ ಮುಖ್ಯಮಂತ್ರಿ ಹುದ್ದೆಗೆ ಒಪ್ಪಂದ ಆಗಿರುವುದು ನಿಜ, ಆದರೆ ಸಿದ್ದರಾಮಯ್ಯ ಅವರು 5 ವರ್ಷ ಪೊರೈಸಬಾರದು ಎಂದು ಎಂದಿಗೂ ಹೇಳಿಲ್ಲ" ಎಂದು ಸ್ಪಷ್ಟಪಡಿಸಿದರು. ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಒಲವು ಇದ್ದ ಕಾರಣದಿಂದಲೇ ಅವರು ಮುಖ್ಯಮಂತ್ರಿಯಾಗಿದ್ದಾರೆ. ನಮ್ಮಿಬ್ಬರ ನಡುವೆ ಸ್ಪಷ್ಟ ಒಪ್ಪಂದವಿದ್ದು, ಪಕ್ಷದ ನಿರ್ಧಾರಕ್ಕೆ ತಲೆಬಾಗುತ್ತೇವೆ ಎಂದು ಹೇಳಿದರು. ಮುಖ್ಯಮಂತ್ರಿ ಸ್ಥಾನದ ಇಚ್ಛೆ ಮತ್ತು ಅಧಿಕಾರ ಹಸ್ತಾಂತರ ದಿನಾಂಕ ನಿಗದಿಯಾಗಿದೆಯೇ ಎಂಬ ಪ್ರಶ್ನೆಗೆ ಅರ್ಥಗರ್ಭಿತ ಮುಗುಳನಗು ಮಾಡಿ ಅಲ್ಲಿಂದ ತೆರಳಿದ್ದಾರೆ. "ದೇವರ ಎದುರಿನ ವಿಚಾರಗಳನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದೇನೆ, ಎಲ್ಲಿಯೂ ಹಂಚಿಕೊಳ್ಳಲಾರೆ" ಎಂದು ಸೇರಿಸಿದ್ದಾರೆ.
2019ರಲ್ಲಿಯೂ ಭೇಟಿ ನೀಡಿದ್ದರು ಡಿಕೆಶಿ
2019ರಲ್ಲಿ ಸಹ ಇಲ್ಲಿಯೇ ಭೇಟಿ ನೀಡಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಪದವಿ ಮತ್ತು ಕಾನೂನು ಸಂಕಷ್ಟಗಳಿಂದ ಮುಕ್ತಿ ಪಡೆದಿದ್ದ ಡಿಕೆ ಶಿವಕುಮಾರ್‌ಗೆ ಈಗಲೂ ದೇವಿಯ ಕೃಪೆಯೇ ರಾಜಕೀಯ ಯಶಸ್ಸಿನ ಕಾರಣ ಎಂದು ಭಕ್ತರು ನಂಬುತ್ತಾರೆ.
ಈ ಸಂದರ್ಭದಲ್ಲಿ ಸಚಿವ ಮಂಕಾಳ ವೈದ್ಯ, ಶಾಸಕ ಸತೀಶ್ ಸೈಲ್, ಮಾಜಿ ಶಾಸಕಿ ಶಾರದಾ ಶೆಟ್ಟಿ, ಜಿಲ್ಲಾಧಿಕಾರಿ ಲಕ್ಷ್ಮೀಪ್ರೀಯಾ ಇದ್ದರು.

