Ex-post Yadavattu; Welcome CM D.K. Shivakumar, says Congress MLC
x

ವಿಮಾನ ನಿಲ್ದಾಣದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ಸ್ವಾಗತಿಸಿದ ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ

ತಪ್ಪೋ? ಮನದಾಳದ ಮಾತೋ..?: ಡಿಕೆಶಿಗೆ ಸೋಶಿಯಲ್ ಮೀಡಿಯಾದಲ್ಲಿ 'ಸಿಎಂ" ಪಟ್ಟಕಟ್ಟಿದ ಎಂಎಲ್‌ಸಿ!

ಅಧಿವೇಶನದ ಎರಡನೇ ದಿನದ ಕಲಾಪದಲ್ಲಿ ಪಾಲ್ಗೊಳ್ಳಲು ಡಿಸಿಎಂ ಡಿ.ಕೆ. ಶಿವಕುಮಾರ್‌ ವಿಮಾನದ ಮೂಲಕ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ ಹಾಜರಿದ್ದ ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ ಡಿಕೆಶಿಯನ್ನು ಸ್ವಾಗತಿಸಿದರು.


Click the Play button to hear this message in audio format

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಗುಸುಗುಸು ಕೇಳಿಬರುತ್ತಿರುವ ಬೆನ್ನಲ್ಲೇ, ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನಕ್ಕೆ ಮತ್ತೊಂದು ವಿವಾದದ ಕಿಡಿ ಹೊತ್ತಿಕೊಂಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಸ್ವಾಗತಿಸುವ ಭರದಲ್ಲಿ ವಿಧಾನಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಅವರು ಮಾಡಿದ ಒಂದು 'ಎಕ್ಸ್' (ಟ್ವಿಟರ್) ಪೋಸ್ಟ್, ಇದು ಕೇವಲ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಎಂಬ ಜಿಜ್ಞಾಸೆಯನ್ನು ಹುಟ್ಟುಹಾಕಿದೆ.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಹೋದರರೂ ಆಗಿರುವ ಚನ್ನರಾಜ್ ಹಟ್ಟಿಹೊಳಿ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು "ಮುಖ್ಯಮಂತ್ರಿಗಳು" ಎಂದು ಸಂಬೋಧಿಸಿರುವುದು ಅಧಿವೇಶನದ ಮೊಗಸಾಲೆಯಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.

ಆಗಿದ್ದೇನು? ಎಕ್ಸ್‌ ಪೋಸ್ಟ್‌ನಲ್ಲೇನಿದೆ?

ಚಳಿಗಾಲದ ಅಧಿವೇಶನದ ಎರಡನೇ ದಿನದ ಕಲಾಪದಲ್ಲಿ ಭಾಗವಹಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಮಾನದ ಮೂಲಕ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ಅವರನ್ನು ಸ್ವಾಗತಿಸಲು ವಿಧಾನಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಹಾಜರಿದ್ದರು.

ಎಂಎಲ್‌ಸಿ ಚನ್ನರಾಜ್‌ ಹಟ್ಟಿಹೊಳಿ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್‌

ಗತದ ಫೋಟೋವನ್ನು ಹಂಚಿಕೊಳ್ಳುವಾಗ ಹಟ್ಟಿಹೊಳಿ ಅವರ ಅಧಿಕೃತ ಖಾತೆಯಲ್ಲಿ, "ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ಆಗಮಿಸಿರುವ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ಅವರನ್ನು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು," ಎಂದು ಬರೆದುಕೊಳ್ಳಲಾಗಿತ್ತು. ಕೇವಲ ಒಂದು ಪದದ ಬದಲಾವಣೆ ಈಗ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಉದ್ದೇಶಪೂರ್ವಕವೋ? ಅಥವಾ ಅಚಾತುರ್ಯವೋ?

ಈಗಾಗಲೇ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬಣಗಳ ನಡುವೆ ನಾಯಕತ್ವಕ್ಕಾಗಿ ಶೀತಲ ಸಮರ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗಳು ಮತ್ತು ದಲಿತ ಸಿಎಂ ಕೂಗುಗಳ ನಡುವೆ, ಡಿಕೆಶಿ ಪಾಳಯದಿಂದ ಬಂದ ಈ ಪೋಸ್ಟ್ ಕೇವಲ 'ಟೈಪಿಂಗ್ ಮಿಸ್ಟೇಕ್' ಎಂದು ಒಪ್ಪಿಕೊಳ್ಳಲು ರಾಜಕೀಯ ಪಂಡಿತರು ತಯಾರಿಲ್ಲ.

ಸೋಷಿಯಲ್ ಮೀಡಿಯಾ ನಿರ್ವಾಹಕರು ಅಚಾತುರ್ಯದಿಂದ ಈ ತಪ್ಪು ಮಾಡಿದ್ದಾರೆಯೇ ಅಥವಾ ಡಿ.ಕೆ. ಶಿವಕುಮಾರ್ ಅವರನ್ನು ಸಿಎಂ ಕುರ್ಚಿಯಲ್ಲಿ ನೋಡಬಯಸುವ ಆಪ್ತರ 'ಮನದಾಳದ ಮಾತು' ಹೀಗೆ ಹೊರಬಂದಿದೆಯೇ ಎಂಬುದು ಯಕ್ಷಪ್ರಶ್ನೆಯಾಗಿದೆ. ಅಧಿವೇಶನ ಮುಗಿದ ನಂತರ ನಾಯಕತ್ವ ಬದಲಾವಣೆ ಖಚಿತ ಎಂಬ ಊಹಾಪೋಹಗಳಿಗೆ ಈ ಪೋಸ್ಟ್ ತುಪ್ಪ ಸುರಿದಂತಾಗಿದೆ.

ತೇಪೆ ಹಚ್ಚಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಸಹೋದರನ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ. "ದಯಮಾಡಿ ಯಾರೂ ತಪ್ಪು ತಿಳಿಯಬೇಡಿ, ಆಗಿರುವ ತಪ್ಪಿಗೆ ವಿಷಾದ ವ್ಯಕ್ತಪಡಿಸುತ್ತೇನೆ. ನಮ್ಮ ಸಾಮಾಜಿಕ ಜಾಲತಾಣ ಮೇಲ್ವಿಚಾರಣೆ ಮಾಡುವವರು ಸಂದೇಶ ಪೋಸ್ಟ್ ಮಾಡುವ ವೇಳೆ ಆದ ಆಚಾತುರ್ಯವಿದು. ನಾನು ಮೊದಲಿನಿಂದಲೂ ಪಕ್ಷದ ಶಿಸ್ತಿನ ಸಿಪಾಯಿ. ನನ್ನ ತಮ್ಮ ಕೂಡ ಪಕ್ಷದ ಶಿಸ್ತಿನ ಸಿಪಾಯಿ," ಎಂದು ಸಮಜಾಯಿಷಿ ನೀಡಿದ್ದಾರೆ.

ಹೈಕಮಾಂಡ್ ಮಾತೇ ಅಂತಿಮ: ಗೊಂದಲಕ್ಕೆ ತೆರೆ ಎಳೆಯುವ ಯತ್ನ

ನಾಯಕತ್ವ ಬದಲಾವಣೆ ವಿಚಾರದಲ್ಲಿ ಗೊಂದಲ ಬೇಡ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಮನವಿ ಮಾಡಿದ್ದಾರೆ. "ಸ್ವತಃ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ಅನಗತ್ಯ ಗೊಂದಲಕ್ಕೆ ಎಡೆಮಾಡಿಕೊಡಬಾರದು," ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನಿಸಿದ್ದಾರೆ.

Read More
Next Story