Dharmasthala case: SIT team leaves for Dakshina Kannada, opens office in Belthangady
x

ಸಾಂದರ್ಭಿಕ ಚಿತ್ರ

ಧರ್ಮಸ್ಥಳ ಪ್ರಕರಣ | ದಕ್ಷಿಣ ಕನ್ನಡದತ್ತ ಎಸ್‌ಐಟಿ ತಂಡ, ಬೆಳ್ತಂಗಡಿಯಲ್ಲಿ ಕಚೇರಿ ಆರಂಭ

ಎಸ್‌ಐಟಿ ತಂಡವು ಧರ್ಮಸ್ಥಳದತ್ತ ಪ್ರಯಾಣ ಆರಂಭಿಸಿದ್ದು, ಇದಕ್ಕೂ ಮೊದಲು ಸಿಐಡಿ ಕಚೇರಿಯಲ್ಲಿ ಸಭೆ ಸೇರಿದ್ದ ಅಧಿಕಾರಿಗಳು ತನಿಖೆಯ ಕುರಿತು ಅಗತ್ಯ ರೂಪರೇಷೆಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಧರ್ಮಸ್ಥಳ ಗ್ರಾಮದ ಸುತ್ತಮುತ್ತ ನಡೆದಿವೆ ಎನ್ನಲಾದ ಕೊಲೆ ಹಾಗೂ ಅತ್ಯಾಚಾರಗಳ ತನಿಖೆ ನಡೆಸಲು ರಾಜ್ಯ ಸರ್ಕಾರ ನೇಮಿಸಿದ್ದ ವಿಶೇಷ ತನಿಖಾ ತಂಡ(ಎಸ್‌ಐಟಿ) ಬೆಳ್ತಂಗಡಿಯಲ್ಲಿ ಕಚೇರಿ ತೆರೆದಿದ್ದು ತನಿಖೆ ನಡೆಸಲು ಅಗತ್ಯ ಸಿದ್ದತೆ ನಡೆಸಿದೆ.

ಶುಕ್ರವಾರ ಮಧ್ಯಾಹ್ನ ಎಸ್‌ಐಟಿ ತಂಡವು ಧರ್ಮಸ್ಥಳದತ್ತ ಪ್ರಯಾಣ ಆರಂಭಿಸಿದ್ದು, ಇದಕ್ಕೂ ಮೊದಲು ಸಿಐಡಿ ಕಚೇರಿಯಲ್ಲಿ ಸಭೆ ಸೇರಿದ್ದ ಅಧಿಕಾರಿಗಳು ತನಿಖೆಯ ಕುರಿತು ಅಗತ್ಯ ರೂಪರೇಷೆಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಧರ್ಮಸ್ಥಳ ಗ್ರಾಮದ ಬಳಿ ನೂರಾರು ಶವಗಳನ್ನು ಹೂತು ಹಾಕಿದ್ದು, ಆ ಸ್ಥಳವನ್ನು ತೋರಿಸುತ್ತೇನೆ ಎಂದು ವ್ಯಕ್ತಿಯೊಬ್ಬ ವಕೀಲರ ಮೂಲಕ ನ್ಯಾಯಾಧೀಶರ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದ್ದ. ಈ ಕುರಿತು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನೂರಾರು ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳ ಕುರಿತು ಸ್ಥಳೀಯ ಪೊಲೀಸರಿಂದ ತನಿಖೆ ನಡೆಸಲು ಸಾಧ್ಯವಿಲ್ಲ. ಆದ್ದರಿಂದ ವಿಶೇಷ ತನಿಖಾ ತಂಡವನ್ನು ನೇಮಿಸುವಂತೆ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳು, ವಕೀಲರು ಹಾಗೂ ರಾಜ್ಯ ಮಹಿಳಾ ಆಯೋಗದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಪ್ರಕರಣ ತೀವ್ರ ಸ್ವರೂಪ ಪಡಯುತ್ತಿದ್ದಂತೆ ರಾಜ್ಯ ಸರ್ಕಾರ ಹಿರಿಯ ಐಪಿಎಸ್‌ ಅಧಿಕಾರಿ ಪ್ರಣವ್‌ ಮೊಹಂತಿ ನೇತೃತ್ವದಲ್ಲಿ ನಾಲ್ವರು ಐಪಿಎಸ್‌ ಅಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿತ್ತು.

ನೇಮಕಾತಿ ವಿಭಾಗದ ಡಿಐಜಿ ಎಂ.ಎನ್‌. ಅನುಚೇತ್‌ ನೇತೃತ್ವದ ತಂಡ ದಕ್ಷಿಣ ಕನ್ನಡಕ್ಕೆ ತೆರಳಿದ್ದು, ಎಸ್‌ಪಿ ಜಿತೇಂದ್ರ ಕುಮಾರ್‌ ದಯಾಮ್‌ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದೆ. ಇತ್ತೀಚೆಗಷ್ಟೇ ಎಸ್‌ಐಟಿಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ನೇಮಕ ಮಾಡಿ ಆದೇಶಿಸಿದ್ದು, ಶೀಘ್ರವೇ ಎಸ್‌ಐಟಿಗೆ ವರದಿ ಮಾಡಿಕೊಳ್ಳಲಿದ್ದಾರೆ. ಕಚೇರಿಯಲ್ಲಿ ಕಂಪ್ಯೂಟರ್‌ ಸೇರಿದಂತೆ ತನಿಖೆಗೆ ಬೇಕಾದ ಎಲ್ಲಾ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Read More
Next Story