Dharmasthala Case Women’s Commission Gains Support from ‘Who Killed the Women?’ Movement
x

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ

ಧರ್ಮಸ್ಥಳ ಪ್ರಕರಣ: ಮಹಿಳಾ ಆಯೋಗಕ್ಕೆ 'ಕೊಂದವರು ಯಾರು' ಆಂದೋಲನದ ಬೆಂಬಲ

"ಧರ್ಮಸ್ಥಳದಲ್ಲಿ ಮಹಿಳೆಯರನ್ನು ಕೊಂದವರು ಯಾರು?" ಎಂಬ ಆಂದೋಲನದಡಿ ಒಂದಾಗಿರುವ ಸಂಘಟನೆಗಳು, ಮಹಿಳಾ ಆಯೋಗದ ಅಧ್ಯಕ್ಷರ ನಡೆಯು ಸಕಾಲಿಕ ಮತ್ತು ಮಹತ್ವಪೂರ್ಣವಾದುದು ಎಂದು ಶ್ಲಾಘಿಸಿವೆ.


Click the Play button to hear this message in audio format

ಧರ್ಮಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಶಕಗಳಿಂದ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅನುಮಾನಾಸ್ಪದ ಸಾವುಗಳ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ವಿಶೇಷ ತನಿಖಾ ತಂಡಕ್ಕೆ (SIT) ಬರೆದಿರುವ ಪತ್ರಕ್ಕೆ ರಾಜ್ಯದ ಹಲವು ಮಹಿಳಾ ಸಂಘಟನೆಗಳು ಮತ್ತು ಸಾಮಾಜಿಕ ಹೋರಾಟಗಾರರು ಬೆಂಬಲ ವ್ಯಕ್ತಪಡಿಸಿದ್ದಾರೆ.

"ಧರ್ಮಸ್ಥಳದಲ್ಲಿ ಮಹಿಳೆಯರನ್ನು ಕೊಂದವರು ಯಾರು?" ಎಂಬ ಆಂದೋಲನದಡಿ ಒಂದಾಗಿರುವ ಸಂಘಟನೆಗಳು, ಮಹಿಳಾ ಆಯೋಗದ ಅಧ್ಯಕ್ಷರ ನಡೆಯು ಸಕಾಲಿಕ ಮತ್ತು ಮಹತ್ವಪೂರ್ಣವಾದುದು ಎಂದು ಶ್ಲಾಘಿಸಿವೆ.

ವಿಶೇಷ ತನಿಖಾ ತಂಡದ (SIT) ತನಿಖೆಯು ಕೇವಲ ನಿರ್ದಿಷ್ಟ ದೂರುಗಳಿಗೆ ಸೀಮಿತವಾಗಬಾರದು ಮತ್ತು ದಶಕಗಳಿಂದ ವರದಿಯಾಗಿರುವ ಮಹಿಳೆಯರ ಮೇಲಿನ ದೌರ್ಜನ್ಯ, ಲೈಂಗಿಕ ದೌರ್ಜನ್ಯ, ಮತ್ತು ಕೊಲೆ ಪ್ರಕರಣಗಳನ್ನೂ ಒಳಗೊಂಡಿರಬೇಕು ಎಂದು ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮೀ ಚೌಧರಿ ತಮ್ಮ ಪತ್ರದಲ್ಲಿ ಸ್ಪಷ್ಟನೆ ಕೋರಿದ್ದಾರೆ. ಈ ಕುರಿತು ವಿಸ್ತೃತ ವರದಿಯೊಂದನ್ನು ಸಲ್ಲಿಸುವಂತೆಯೂ ಅವರು ಎಸ್‌ಐಟಿಗೆ ಸೂಚಿಸಿದ್ದಾರೆ. ಈ ನಡೆಯನ್ನು ಮಹಿಳಾಪರ ಸಂಘಟನೆಗಳು ಸ್ವಾಗತಿಸಿವೆ.

ಎಸ್‌ಐಟಿ ರಚನೆಯ ಹಿನ್ನೆಲೆ

ಕೆಲವು ತಿಂಗಳ ಹಿಂದೆ, ವ್ಯಕ್ತಿಯೊಬ್ಬ ತಾನು ಆ ಪ್ರದೇಶದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ಹೇಳಿಕೆ ನೀಡಿದ್ದ. ಈ ಆಘಾತಕಾರಿ ವಿಷಯವನ್ನು ಆಧರಿಸಿ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು 2025ರ ಜುಲೈ 4 ರಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, ಕಳೆದ ಎರಡು ದಶಕಗಳಲ್ಲಿ ನಡೆದ ಮಹಿಳೆಯರ ನಾಪತ್ತೆ, ಅಸಹಜ ಸಾವು, ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸಲು ಎಸ್‌ಐಟಿ ರಚಿಸುವಂತೆ ಒತ್ತಾಯಿಸಿದ್ದರು. ಅವರ ಮನವಿಗೆ ಸ್ಪಂದಿಸಿದ ಸರ್ಕಾರವು ಎಸ್‌ಐಟಿಯನ್ನು ರಚಿಸಿತ್ತು.

ಎಸ್‌ಐಟಿ ತನಿಖೆಯು ಕೇವಲ ದೂರುದಾರನ ಹೇಳಿಕೆ ಮತ್ತು 'ತಲೆಬುರುಡೆ-ಮೂಳೆಗಳ' ಸುತ್ತಲಿನ ಮಾಧ್ಯಮ ಪ್ರಚಾರಕ್ಕೆ ಸೀಮಿತವಾದಂತೆ ಕಾಣುತ್ತಿದೆ ಎಂದು ಮಹಿಳಾ ಸಂಘಟನೆಗಳು ತೀವ್ರ ಕಳವಳ ವ್ಯಕ್ತಪಡಿಸಿವೆ. ಇದರಿಂದಾಗಿ ಮೂಲ ಉದ್ದೇಶವಾದ ಮಹಿಳೆಯರ ಮೇಲಿನ ದೌರ್ಜನ್ಯಗಳ ತನಿಖೆ ದಾರಿ ತಪ್ಪುತ್ತಿದೆ ಎಂದು ಸಂಘಟನೆಗಳು ಆತಂಕ ಹೊರಹಾಕಿವೆ.

ಮಾಧ್ಯಮಗಳ ವಿರುದ್ಧ ಆಕ್ರೋಶ

ತಮ್ಮ ಸಾಂವಿಧಾನಿಕ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿರುವ ಮಹಿಳಾ ಆಯೋಗದ ಅಧ್ಯಕ್ಷರ ವಿರುದ್ಧ ಕೆಲವು ಮಾಧ್ಯಮಗಳು ನಡೆಸುತ್ತಿರುವ ವೈಯಕ್ತಿಕ ದಾಳಿಯನ್ನು ಪ್ರಕಟಣೆಯಲ್ಲಿ ತೀವ್ರವಾಗಿ ಖಂಡಿಸಲಾಗಿದೆ. ಇದು ಮಹಿಳಾ ವಿರೋಧಿ ಧೋರಣೆಯಾಗಿದ್ದು, ಪತ್ರಿಕಾಧರ್ಮ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ತೋರುತ್ತಿರುವ ಅಗೌರವ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.

ಸತ್ಯ ಮತ್ತು ನ್ಯಾಯಕ್ಕಾಗಿ ರಾಜಕೀಯೇತರವಾಗಿ, ತಾತ್ವಿಕ ನಿಲುವು ತಳೆದ ಡಾ. ನಾಗಲಕ್ಷ್ಮೀ ಚೌಧರಿ ಅವರ ಕಾರ್ಯವನ್ನು ಸಾರ್ವಜನಿಕರು ಶ್ಲಾಘಿಸಬೇಕು ಎಂದು ರೂಪಾ ಹಾಸನ್, ಮಾಳಿಗೆ ಸಿರಿಮನೆ, ಜ್ಯೋತಿ ಎ., ಮಧು ಭೂಷಣ್, ಆಶಾ ರಮೇಶ್, ಡು ಸರಸ್ವತಿ ಸೇರಿದಂತೆ ಹಲವು ಹೋರಾಟಗಾರರು ತಿಳಿಸಿದ್ದಾರೆ.

Read More
Next Story