Dharmasthala case | BJP demands SIT investigation into conspiracy by urban Naxals
x
ಸಾಂದರ್ಭಿಕ ಚಿತ್ರ

ಧರ್ಮಸ್ಥಳ ಪ್ರಕರಣ| ಗೃಹ ಸಚಿವರ ಭೇಟಿಯಾಗಿ ಎಸ್‌ಐಟಿ ಮುಖ್ಯಸ್ಥ; ಭೇಟಿಯ ಮಹತ್ವವೇನು?

ಇಷ್ಟು ದಿನ ಧಾರ್ಮಿಕ ಕ್ಷೇತ್ರಗಳ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದವರು ಈಗ ಗ್ರಾಮಾಂತರ ಪ್ರದೇಶದ ಮಾರಮ್ಮ, ಆಂಜನೇಯ ಸೇರಿ ಎಲ್ಲಾ ದೇವರನ್ನು ತರುತ್ತಿದ್ದಾರೆ. ಸದನದಲ್ಲಿ ಈ ಕುರಿತು ಚರ್ಚೆ ನಡೆಸಲಾಗುವುದು ಎಂದು ಆರ್‌. ಅಶೋಕ್‌ ತಿಳಿಸಿದರು.


Click the Play button to hear this message in audio format

ಧರ್ಮಸ್ಥಳದಲ್ಲಿ ನೂರಾರು ಅಸಹಜ ಸಾವುಗಳ ಕುರಿತಂತೆ ಎಸ್‌ಐಟಿ ತನಿಖೆ ಮುಂದುವರಿದಿದ್ದು, ಬುಧವಾರ ಎಸ್‌ಐಟಿ ಮುಖ್ಯಸ್ಥ ಪ್ರಣವ್‌ ಮೊಹಂತಿ ಅವರು ಬೆಳಗಾವಿ ಸುವರ್ಣ ಸೌಧದಲ್ಲಿ ಗೃಹ ಸಚಿವರನ್ನು ಭೇಟಿಯಾಗಿ ಚರ್ಚಿಸಿರುವುದು ತೀವ್ರ ಕುತೂಹಲ ಕೆರಳಿಸಿದೆ.

ಬೆಂಗಳೂರಿನಲ್ಲಿ ನಡೆದ ಮುಂಗಾರು ಅಧಿವೇಶನದಲ್ಲಿ ಧರ್ಮಸ್ಥಳ ಪ್ರಕರಣವು ಆಡಳಿತ ಹಾಗೂ ವಿಪಕ್ಷಗಳ ಮಧ್ಯೆ ದೊಡ್ಡ ಮಟ್ಟದ ಕೋಲಾಹಲ ಸೃಷ್ಟಿಸಿತ್ತು. ಧರ್ಮಸ್ಥಳದ ಪ್ರಕರಣದಲ್ಲಿ ಷಡ್ಯಂತ್ರ ನಡೆದಿದೆ ಎಂಬ ಆರೋಪವೂ ಕೇಳಿ ಬಂದಿತ್ತು.

ಕಳೆದ 15 ದಿನಗಳ ಹಿಂದೆ ಎಸ್‌ಐಟಿ ಅಧಿಕಾರಿಗಳು ಬೆಳ್ತಂಗಡಿಯ ಸಿವಿಲ್‌ ನ್ಯಾಯಾಲಯಕ್ಕೆ ಧರ್ಮಸ್ಥಳ ಪ್ರಕರಣದ ತನಿಖಾ ವರದಿ ನೀಡಿದ್ದರು. ವರದಿಯಲ್ಲಿ ಷಡ್ಯಂತ್ರ ನಡೆದಿದೆ ಎಂಬುದು ಬಹಿರಂಗವಾಗಿತ್ತು. ಈ ಮಧ್ಯೆ, ಎಸ್‌ಐಟಿ ತನಿಖೆ ಬಗ್ಗೆ ಪ್ರಗತಿಪರ ಹೋರಾಟಗಾರರು ಅನುಮಾನ ವ್ಯಕ್ತಪಡಿಸಿದ್ದರು. ಇದಕ್ಕೆ ಸ್ಪಷ್ಟೀಕರಣ ನೀಡಿದ್ದ ಪ್ರಣವ್‌ ಮೊಹಂತಿ ಅವರು, ಪ್ರಕರಣ ತನಿಖೆ ಇನ್ನೂ ಮುಗಿದಿಲ್ಲ. ಸಾಕಷ್ಟು ತನಿಖೆ ಬಾಕಿ ಇದೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದರು.

ಸದನದಲ್ಲಿ ಧರ್ಮಸ್ಥಳ ಪ್ರಕರಣವು ಮತ್ತೆ ಆಡಳಿತ ಹಾಗೂ ವಿರೋಧ ಪಕ್ಷ ನಡುವೆ ಕೋಲಾಹಲ, ವಾಕ್ಸಮರಕ್ಕೆ ಕಾರಣವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಎಸ್‌ಐಟಿ ಮುಖ್ಯಸ್ಥರು ಗೃಹ ಸಚಿವರನ್ನು ಭೇಟಿಯಾಗಿದ್ದಾರೆ ಎನ್ನಲಾಗಿದೆ.

ತನಿಖೆಯ ಪ್ರಗತಿ, ನ್ಯಾಯಾಲಯಕ್ಕೆ ನೀಡಿರುವ ತನಿಖಾ ವರದಿಯ ಅಂಶಗಳು, ಡಿ.15ಕ್ಕೆ ಬೆಳ್ತಂಗಡಿಯಲ್ಲಿ ಕೊಂದವರು ಯಾರು? ಸಂಘಟನೆಯ ಸಮಾವೇಶ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಮಧ್ಯೆ, ಧರ್ಮಸ್ಥಳ ಪ್ರಕರಣದಲ್ಲಿ ಆರು ಜನರ ಷಡ್ಯಂತ್ರವಿದೆ. ಈ ಪ್ರಕರಣದ ಹಿಂದಿರುವ ತಿಮಿಂಗಿಲದ ಬಗ್ಗೆ ಎಸ್‌ಐಟಿ ತನಿಖೆ ನಡೆಸಬೇಕು ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ಆಗ್ರಹಿಸಿದರು.

ಬೆಳಗಾವಿ ಸುವರ್ಣಸೌಧದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದಲ್ಲಿ ನಗರ ನಕ್ಸಲರ ಕೈವಾಡವಿದೆ ಎಂದು ಬಿಜೆಪಿ ಮೊದಲಿನಿಂದಲೂ ಹೇಳುತ್ತಿದೆ. ಷಡ್ಯಂತ್ರ ಮಾಡುತ್ತಿರುವವರಿಗೆ ಹಣ ಸಹಾಯ ಮಾಡಿದ್ದು ಯಾರು, ಅವರ ಹಿಂದಿರುವ ತಿಮಿಂಗಿಲ ಯಾವುದು ಎಂಬುದನ್ನು ಎಸ್‌ಐಟಿ ಅಧಿಕಾರಿಗಳು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಶಬರಿಮಲೆ, ಶನಿ ಸಿಂಗಾಪುರ, ಧರ್ಮಸ್ಥಳದಂತಹ ಧಾರ್ಮಿಕ ಕ್ಷೇತ್ರಗಳ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ. ಇದೀಗ ಗ್ರಾಮಾಂತರ ಪ್ರದೇಶದಲ್ಲಿ ಮಾರಮ್ಮ, ಆಂಜನೇಯ ಸೇರಿದಂತೆ ಎಲ್ಲಾ ದೇವರನ್ನು ತರುತ್ತಿದ್ದಾರೆ. ಸದನದಲ್ಲಿ ಈ ಕುರಿತು ಚರ್ಚೆ ನಡೆಸಲಾಗುವುದು ಎಂದರು.

ವಾಕ್‌ ಸ್ವಾತಂತ್ರ್ಯಕ್ಕೆ ಕಡಿವಾಣ

ರಾಜ್ಯ ಸರ್ಕಾರ ದ್ವೇಷ ಭಾಷಣ ಕುರಿತು ಅಧಿವೇಶನದಲ್ಲಿ ವಿಧೇಯಕ ಮಂಡಿಸಲು ಸಿದ್ಧತೆ ನಡೆಸಿದೆ. ವಾಕ್ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಉದ್ದೇಶ ಹೊಂದಿದೆ. ಇದೊಂದು ದೊಡ್ಡ ಪಿತೂರಿ. ತಪ್ಪು ಮಾಡಿದವರಿಗೆ, ಅವಾಚ್ಯ ಶಬ್ದ ಬಳಕೆಗೆ ಈಗಾಗಲೇ ಕಾನೂನು ಇದ್ದು, ಹೊಸ ವಿಧೇಯಕ ಅವಶ್ಯಕತೆ ಇಲ್ಲ ಎಂದು ಅಶೋಕ್‌ ಹೇಳಿದರು.

ಗ್ಯಾರಂಟಿಗೆ ಸ್ವಪಕ್ಷೀಯರಿಂದಲೇ ವಿರೋಧ

ರಾಜ್ಯ ಸರ್ಕಾರ ನೀಡುತ್ತಿರುವ ಪಂಚ ಗ್ಯಾರಂಟಿ ಯೋಜನೆಗಳಿಗೆ ಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿದೆ. ಇಷ್ಟು ದಿನ ಬಿಜೆಪಿಯವರನ್ನು ಗ್ಯಾರಂಟಿ ವಿರೋಧಿಗಳು ಎನ್ನತ್ತಿದ್ದರು. ಈಗ ಕಾಂಗ್ರೆಸ್ ಶಾಸಕರೇ ತಮ್ಮ ಕ್ಷೇತ್ರಗಳಿಗೆ ಅನುದಾನ ನೀಡಿ, ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಎಂದು ಕೇಳುತ್ತಿದ್ಧಾರೆ. ಕಾಂಗ್ರೆಸ್‌ಗೆ ಚುನಾವಣೆ ಗೆಲ್ಲಲಷ್ಟೇ ಗ್ಯಾರಂಟಿ ಬೇಕಾಗಿತ್ತು ಎಂದು ಲೇವಡಿ ಮಾಡಿದರು.

ರಾಜ್ಯ ಸರ್ಕಾರ ನಿಷ್ಕ್ರಿಯ

ಉತ್ತರ ಕರ್ನಾಟಕ ಭಾಗದ ಎಲ್ಲಾ ರಸ್ತೆಗಳು ಹಾಳಾಗಿವೆ. ಕಾಂಗ್ರೆಸ್ ಸರ್ಕಾರ ಮುಂದಿನ ದಿನಗಳಲ್ಲಾದರೂ ಅಭಿವೃದ್ಧಿ ಕೆಲಸ ಮಾಡುತ್ತಾರೆ ಎಂದುಕೊಂಡಿದ್ದೇನೆ. ವಿವಿಧ ಇಲಾಖೆಗಳಲ್ಲಿ ಶೇ 63 ಭ್ರಷ್ಟಾಚಾರ ಇದೆ ಎಂಬ ಆರೋಪ ರಾಜ್ಯ ಸರ್ಕಾರದ ಮೇಲಿದೆ. ಅಧಿಕಾರಿಗಳು ಜನಸಾಮಾನ್ಯರನ್ನು ಲೂಟಿ ಮಾಡುತ್ತಿದ್ದಾರೆ. ಸರ್ಕಾರ ನಿಷ್ಕ್ರಿಯವಾಗಿದೆ ಎಂದು ಗುತ್ತಿಗೆದಾರರು, ಲೋಕಾಯುಕ್ತರು ಹಾಗೂ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ ಎಂದು ತಿಳಿಸಿದರು.

Read More
Next Story