
ಎಐ ಆಧಾರಿತ ಚಿತ್ರ
ಜೈಲುಗಳಲ್ಲಿ ಕ್ರಿಮಿನಲ್ ನೆಟ್‌ವರ್ಕ್‌ಗೆ ಬ್ರೇಕ್: ಬರಲಿದೆ 'ಎ, ಬಿ, ಸಿ' ವರ್ಗೀಕರಣ ಸೂತ್ರ!
ಕೈದಿಗಳ ಅಪರಾಧದ ಸ್ವರೂಪ, ನಡವಳಿಕೆ ಮತ್ತು ಅಪಾಯದ ತೀವ್ರತೆಯ ಆಧಾರದ ಮೇಲೆ 'ಎ', 'ಬಿ' ಮತ್ತು 'ಸಿ' ಎಂಬ ಮೂರು ವಿಭಾಗಗಳಾಗಿ ವರ್ಗೀಕರಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಐತಿಹಾಸಿಕ ಹೆಜ್ಜೆಯನ್ನಿಟ್ಟಿದೆ.
ರಾಜ್ಯದ ಅತ್ಯಂತ ದೊಡ್ಡ ಕಾರಾಗೃಹವಾಗಿರುವ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಒಳಗಿನ ಭದ್ರತೆಯನ್ನು ಬಲಪಡಿಸಲು, ಅಪರಾಧ ಜಾಲವನ್ನು ಬೇರುಸಹಿತ ಕಿತ್ತೆಸೆಯಲು ಮತ್ತು ಕೈದಿಗಳಲ್ಲಿ ಸುಧಾರಣೆ ತರಲು ರಾಜ್ಯ ಸರ್ಕಾರವು ಈಗ ಒಂದು ಮಹತ್ವದ ಆಡಳಿತಾತ್ಮಕ ಸುಧಾರಣೆಗೆ ಮುಂದಾಗಿದೆ.
ಕೈದಿಗಳನ್ನು ಅವರ ಅಪರಾಧದ ಸ್ವರೂಪ, ನಡವಳಿಕೆ ಮತ್ತು ಅಪಾಯದ ತೀವ್ರತೆಯ ಆಧಾರದ ಮೇಲೆ 'ಎ', 'ಬಿ' ಮತ್ತು 'ಸಿ' ಎಂಬ ಮೂರು ವಿಭಾಗಗಳಾಗಿ ವರ್ಗೀಕರಿಸಲು ಮುಂದಾಗಿದೆ. ಇದು ಕಾರಾಗೃಹ ಇತಿಹಾಸದಲ್ಲಿ ಒಂದು ನಿರ್ಣಾಯಕ ಹೆಜ್ಜೆಯಾಗಿದೆ.
ಈ ನಡುವೆ, ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಕಾರಾಗೃಹ ಡಿಜಿಪಿಯಾದ ಬಳಿಕ ಎ,ಬಿ ಮತ್ತು ಸಿ ವರ್ಗೀಕರಣವನ್ನು ರಾಜ್ಯಕ್ಕೆ ವಿಸ್ತರಣೆ ಮಾಡಲು ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ ಮಾತ್ರ ಇಂತಹ ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದರೆ, ಪ್ರಭಾವಿ ಅಪರಾಧಿಗಳು ಅಥವಾ ಭೂಗತ ಲೋಕದ ವ್ಯಕ್ತಿಗಳು ಬೇರೆ ಜಿಲ್ಲೆಗಳ ಕಾರಾಗೃಹಗಳಿಗೆ ಸ್ಥಳಾಂತರಗೊಂಡರೆ ಅಲ್ಲಿ ತಮ್ಮ ಅಕ್ರಮ ಚಟುವಟಿಕೆ ಮುಂದುವರಿಸುವ ಸಾಧ್ಯತೆ ಇರುತ್ತದೆ. ರಾಜ್ಯಾದ್ಯಂತ ಈ ನಿಯಮ ಜಾರಿಯಾದರೆ, ಅಪರಾಧಿ ಎಲ್ಲೇ ಇದ್ದರೂ ಒಂದೇ ರೀತಿಯ ಕಠಿಣ ನಿಯಮಗಳಿಗೆ ಒಳಪಡಬೇಕಾಗುತ್ತದೆ. ಹೀಗಾಗಿ ರಾಜ್ಯದ ಎಲ್ಲಾ ಜೈಲುಗಳಿಗೂ ವರ್ಗೀಕರಣ ನಿಯಮವನ್ನು ಜಾರಿಗೊಳಿಸಲು ಸಿದ್ಧತೆ ನಡೆಸಲಾಗಿದೆ.
ವರ್ಗೀಕರಣದ ರೂಪುರೇಷೆ ಮತ್ತು ಉದ್ದೇಶ
ಈ ಹೊಸ ಯೋಜನೆಯ ಮುಖ್ಯ ಉದ್ದೇಶವೆಂದರೆ ಜೈಲನ್ನು ಕೇವಲ ಶಿಕ್ಷೆ ನೀಡುವ ಸ್ಥಳವನ್ನಾಗಿ ಮಾಡದೆ, ಅದನ್ನು ಒಂದು ಸುಧಾರಣಾ ಕೇಂದ್ರವನ್ನಾಗಿ ಪರಿವರ್ತಿಸುವುದು ಮತ್ತು ಒಳಗಿನಿಂದ ನಡೆಯುವ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕುವುದಾಗಿದೆ.
'ಎ' ವಿಭಾಗ: ಹೈ-ಪ್ರೊಫೈಲ್ ಮತ್ತು ಕುಖ್ಯಾತ ಅಪರಾಧಿಗಳು
ಈ ವಿಭಾಗವು ಕಾರಾಗೃಹದ ಅತ್ಯಂತ ಕಟ್ಟುನಿಟ್ಟಿನ ವಲಯವಾಗಿರುತ್ತದೆ. ಸರಣಿ ಹಂತಕರು, ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾದವರು, ಭೂಗತ ಜಗತ್ತಿನ ದೊರೆಗಳು, ರೌಡಿ ಶೀಟರ್‌ಗಳು, ಸಂಘಟಿತ ಅಪರಾಧ ತಂಡದ ನಾಯಕರನ್ನು ಹೈ ಪ್ರೊಫೈಲ್ ಅಪರಾಧಿಗಳಾಗಿರುತ್ತಾರೆ. ಇವರನ್ನು ಸಂಪೂರ್ಣ ಹೈ-ಸೆಕ್ಯೂರಿಟಿ ಸೆಲ್‌ಗಳಲ್ಲಿ ಇರಿಸಲಾಗುತ್ತದೆ. ಇವರಿಗೆ ಇತರ ಕೈದಿಗಳೊಂದಿಗೆ ಬೆರೆಯಲು ಅವಕಾಶವಿರುವುದಿಲ್ಲ. ಸಿಸಿಟಿವಿ ಕಣ್ಗಾವಲು ಮತ್ತು ಬಾಹ್ಯ ಪ್ರಪಂಚದೊಂದಿಗೆ ಸಂಪರ್ಕ ಕಡಿತಗೊಳಿಸಲು ಜಾಮರ್‌ಗಳ ಅಳವಡಿಕೆ ಇಲ್ಲಿ ಕಡ್ಡಾಯವಾಗಿರುತ್ತದೆ.
ಇವರ ಮೇಲೆ 24/7 ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿಗಾ ಇಡಲಾಗುತ್ತದೆ. 'ಎ' ವಿಭಾಗದ ಮೂಲಕ ಸರ್ಕಾರವು ಜೈಲಿನೊಳಗಿನ 'ಗ್ಯಾಂಗ್ ಸಂಸ್ಕೃತಿ'ಯನ್ನು ಕೊನೆಗಾಣಿಸಲು ಬಯಸಿದೆ. ಕುಖ್ಯಾತ ಅಪರಾಧಿಗಳು ಜೈಲಿನಲ್ಲಿದ್ದುಕೊಂಡೇ ಹೊರಗಿನ ಪ್ರಪಂಚದೊಂದಿಗೆ ಸಂಪರ್ಕ ಸಾಧಿಸಿ ಹಫ್ತಾ ವಸೂಲಿ ಅಥವಾ ಕೊಲೆ ಸಂಚು ರೂಪಿಸುವುದನ್ನು ತಡೆಯುವುದು ಇದರ ಪ್ರಮುಖ ಗುರಿ.
'ಬಿ' ವಿಭಾಗ: ಮಧ್ಯಮ ಮಟ್ಟದ ಅಪರಾಧಿಗಳು
ಯಾರು ಇರುತ್ತಾರೆ?: ಎರಡನೇ ಬಾರಿ ಜೈಲಿಗೆ ಬಂದವರು, ಗಂಭೀರ ಅಪರಾಧ ಎಸಗಿದರೂ, ಜೈಲಿನ ನಿಯಮಗಳನ್ನು ಪಾಲಿಸುವ ಮತ್ತು ಸುಧಾರಣೆಯ ಲಕ್ಷಣ ತೋರಿಸುವ ಕೈದಿಗಳನ್ನು ಇಲ್ಲಿ ಇಡಲಾಗುತ್ತದೆ. ಇವರಿಗೆ ನಿಯಮಿತ ಭದ್ರತೆಯಡಿ ಕೆಲವು ಸೌಲಭ್ಯಗಳನ್ನು ನೀಡಲಾಗುತ್ತದೆ. ಇವರ ನಡವಳಿಕೆಯನ್ನು ನಿರಂತರವಾಗಿ ಗಮನಿಸಿ, ಅವರು 'ಸಿ' ವರ್ಗಕ್ಕೆ ಬಡ್ತಿ ಪಡೆಯಲು ಅಥವಾ 'ಎ' ವರ್ಗಕ್ಕೆ ಇಳಿಯಲು ಅವಕಾಶವಿರುತ್ತದೆ. ಇವರ ಮೇಲೆ ನಿರಂತರ ನಿಗಾ ಇರುತ್ತದೆ. ಆದರೆ 'ಎ' ವಿಭಾಗದಷ್ಟು ಕಟ್ಟುನಿಟ್ಟಾದ ಏಕಾಂತ ವಾಸ ಇರುವುದಿಲ್ಲ. ಇವರಿಗೆ ಕಾರಾಗೃಹದ ಒಳಾಂಗಣದಲ್ಲಿ ಕೆಲವು ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶವಿರುತ್ತದೆ.
ಈ ವರ್ಗವು ಕೈದಿಗಳ ವರ್ತನೆಯನ್ನು ಗಮನಿಸಲು ಒಂದು ವೇದಿಕೆಯಾಗಿದೆ. ಇಲ್ಲಿರುವ ಕೈದಿಗಳು ತಮ್ಮ ನಡವಳಿಕೆಯನ್ನು ತಿದ್ದಿಕೊಂಡರೆ 'ಸಿ' ವಿಭಾಗಕ್ಕೆ ಬಡ್ತಿ ಪಡೆಯುವ ಅಥವಾ ನಡವಳಿಕೆ ಕೆಟ್ಟರೆ 'ಎ' ವಿಭಾಗಕ್ಕೆ ತಳ್ಳಲ್ಪಡುವ ಸಾಧ್ಯತೆ ಇರುತ್ತದೆ. ಇದು ಕೈದಿಗಳಲ್ಲಿ ಶಿಸ್ತು ಮೂಡಿಸಲು ಸಹಕಾರಿಯಾಗಲಿದೆ.
'ಸಿ' ವಿಭಾಗ: ಕಡಿಮೆ ಅಪಾಯಕಾರಿ/ಸುಧಾರಣಾಕಾಂಕ್ಷಿಗಳು
ಮೊದಲ ಬಾರಿ ಸಣ್ಣಪುಟ್ಟ ಅಪರಾಧಗಳಿಗಾಗಿ ಜೈಲಿಗೆ ಬಂದವರು, ಆಕಸ್ಮಿಕವಾಗಿ ಅಪರಾಧ ಎಸಗಿದವರು ಮತ್ತು ಜೈಲಿನ ನಿಯಮಗಳನ್ನು ಚಾಚೂತಪ್ಪದೆ ಪಾಲಿಸುವ ಉತ್ತಮ ನಡತೆಯ ಕೈದಿಗಳನ್ನು ಇಡಲಾಗುತ್ತದೆ. ಇವರನ್ನು ಸುಧಾರಣಾ ಕೇಂದ್ರಗಳಲ್ಲಿ ಇರಿಸಿ, ಕೌಶಲ್ಯ ಅಭಿವೃದ್ಧಿ ಮತ್ತು ಮುಖ್ಯವಾಹಿನಿಗೆ ತರಲು ಒತ್ತು ನೀಡಲಾಗುತ್ತದೆ. ಇವರಿಗೆ ಶಿಕ್ಷೆಗಿಂತ ಹೆಚ್ಚಾಗಿ ಪುನರ್ವಸತಿ ಕಡೆಗೆ ಗಮನ ನೀಡಲಾಗುತ್ತದೆ. ಕೌಶಲ ಅಭಿವೃದ್ಧಿ, ಶಿಕ್ಷಣ ಮತ್ತು ವೃತ್ತಿಪರ ತರಬೇತಿಗಳನ್ನು ಇಲ್ಲಿ ನೀಡಲಾಗುತ್ತದೆ. ಅಪರಾಧ ಪ್ರಪಂಚಕ್ಕೆ ಹೊಸದಾಗಿ ಬಂದವರು ಕುಖ್ಯಾತ ಅಪರಾಧಿಗಳ ಸಂಪರ್ಕಕ್ಕೆ ಬಂದು 'ಪಳಗಿದ ಅಪರಾಧಿಗಳಾಗಿ' ಹೊರಹೋಗಬಾರದು ಎಂಬುದು ಈ ವರ್ಗೀಕರಣದ ಹಿಂದಿನ ಮಾನವೀಯ ಆಶಯವಾಗಿದೆ.
ವರ್ಗೀಕರಣದಿಂದಾಗುವ ಪ್ರಯೋಜನಗಳು
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳನ್ನು 'ಎ', 'ಬಿ' ಮತ್ತು 'ಸಿ' ಎಂದು ಮೂರು ವಿಭಾಗಗಳಾಗಿ ವರ್ಗೀಕರಿಸುವುದರಿಂದ ಜೈಲು ಆಡಳಿತ ಮತ್ತು ಸಮಾಜಕ್ಕೆ ಹಲವಾರು ಪ್ರಯೋಜನಗಳಿವೆ. ಕೈದಿಗಳನ್ನು ಪ್ರತ್ಯೇಕಿಸುವುದರಿಂದ, ಜೈಲಿನ ಒಳಗಿನಿಂದಲೇ ಹೊರಗಿನ ಜಗತ್ತಿನ ಮೇಲೆ ನಿಯಂತ್ರಣ ಸಾಧಿಸುವ 'ಕ್ರಿಮಿನಲ್ ನೆಟ್‌ವರ್ಕ್' ಅನ್ನು ಕಡಿತಗೊಳಿಸಬಹುದು. ಭದ್ರತಾ ಸಿಬ್ಬಂದಿಗೆ ಯಾರ ಮೇಲೆ ಹೆಚ್ಚು ನಿಗಾ ಇಡಬೇಕು ಎಂಬ ಸ್ಪಷ್ಟತೆ ಇರುತ್ತದೆ, ಇದರಿಂದ ಸಿಬ್ಬಂದಿ ಕೊರತೆಯ ನಡುವೆಯೂ ದಕ್ಷ ನಿರ್ವಹಣೆ ಸಾಧ್ಯವಾಗಲಿದೆ.
ಅಪರಾಧ ಜಾಲದ ಧ್ವಂಸ
ಜೈಲಿನೊಳಗೆ ಕುಖ್ಯಾತ ರೌಡಿಗಳು ಮತ್ತು ಹೈ-ಪ್ರೊಫೈಲ್ ಅಪರಾಧಿಗಳು ಒಂದೇ ಕಡೆ ಇರುವುದರಿಂದ ಜೈಲಿನೊಳಗಿಂದಲೇ ತಮ್ಮ ಗ್ಯಾಂಗ್‌ಗಳನ್ನು ಮುನ್ನಡೆಸುವ ಸಾಧ್ಯತೆ ಇರುತ್ತದೆ. ವರ್ಗೀಕರಣ ಮಾಡುವುದರಿಂದ, ಇಂತಹ ಪ್ರಭಾವಿ ಕೈದಿಗಳನ್ನು ಪ್ರತ್ಯೇಕಿಸಿ ಅವರ ಸಂಪರ್ಕ ಜಾಲವನ್ನು ಕಡಿಯಲು ಸಾಧ್ಯವಾಗುತ್ತದೆ. ಇದರಿಂದ ಜೈಲಿನೊಳಗಿನಿಂದ ನಡೆಯುವ ಹಫ್ತಾ ವಸೂಲಿ ಅಥವಾ ಸಂಚುಗಳಿಗೆ ಬ್ರೇಕ್ ಬೀಳುತ್ತದೆ.
'ಕ್ರೈಮ್ ಸ್ಕೂಲಿಂಗ್' ತಡೆಗಟ್ಟುವುದು
ಸಣ್ಣಪುಟ್ಟ ತಪ್ಪು ಮಾಡಿ ಮೊದಲ ಬಾರಿ ಜೈಲಿಗೆ ಬಂದವರು, ಕುಖ್ಯಾತ ಅಪರಾಧಿಗಳ ಜೊತೆ ಕಾಲ ಕಳೆದರೆ, ಅವರಿಂದ ಅಪರಾಧದ ತಂತ್ರಗಳನ್ನು ಕಲಿತು ದೊಡ್ಡ ಅಪರಾಧಿಗಳಾಗಿ ಹೊರಬರುವ ಅಪಾಯವಿರುತ್ತದೆ. ವರ್ಗೀಕರಣ ಮಾಡುವುದರಿಂದ ಹೊಸಬರು ಹಳೆಯ ಅಪರಾಧಿಗಳ ಪ್ರಭಾವಕ್ಕೆ ಒಳಗಾಗುವುದು ತಪ್ಪುತ್ತದೆ.
ಭದ್ರತೆಯ ಬಲವರ್ಧನೆ ಮತ್ತು ಸಂಪನ್ಮೂಲ ಬಳಕೆ
ಎಲ್ಲಾ ಕೈದಿಗಳ ಮೇಲೆ ಒಂದೇ ರೀತಿಯ ನಿಗಾ ಇಡುವುದು ಕಷ್ಟದ ಕೆಲಸ. ವರ್ಗೀಕರಣದ ನಂತರ, ಹೆಚ್ಚು ಅಪಾಯಕಾರಿ ಕೈದಿಗಳಿರುವ 'ಎ' ವಿಭಾಗಕ್ಕೆ ಹೆಚ್ಚಿನ ಸಿಸಿಟಿವಿ, ಜಾಮರ್‌ಗಳು ಮತ್ತು ಶಸ್ತ್ರಸಜ್ಜಿತ ಸಿಬ್ಬಂದಿಯನ್ನು ನಿಯೋಜಿಸಬಹುದು. ಇದರಿಂದ ಭದ್ರತಾ ವೆಚ್ಚ ಮತ್ತು ಮಾನವ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಬಳಸಬಹುದು.
ಸುಧಾರಣೆ ಮತ್ತು ಪುನರ್ವಸತಿಗೆ ಹೆಚ್ಚಿನ ಒತ್ತು
'ಸಿ' ವಿಭಾಗದಲ್ಲಿರುವ ಕೈದಿಗಳು ಸುಧಾರಣೆಗೆ ಅರ್ಹರಾಗಿರುತ್ತಾರೆ. ಇವರಿಗೆ ವೃತ್ತಿಪರ ತರಬೇತಿ, ಕೌಶಲ ಅಭಿವೃದ್ಧಿ, ಶಿಕ್ಷಣ ಮತ್ತು ಯೋಗ-ಧ್ಯಾನದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸುಲಭವಾಗುತ್ತದೆ. ಇವರು ಶಿಕ್ಷೆ ಮುಗಿಸಿ ಹೊರಬಂದಾಗ ಸಮಾಜದಲ್ಲಿ ಗೌರವಯುತ ಜೀವನ ನಡೆಸಲು ಈ ವ್ಯವಸ್ಥೆ ದಾರಿ ಮಾಡಿಕೊಡುತ್ತದೆ.
ಜೈಲಿನೊಳಗೆ ಗಲಭೆಗಳ ನಿಯಂತ್ರಣ
ಬೇರೆ ಬೇರೆ ಗುಂಪುಗಳ ರೌಡಿ ಶೀಟರ್ಗಳನ್ನು ಒಂದೇ ಕಡೆ ಇರಿಸಿದಾಗ ಜೈಲಿನೊಳಗೆ ಗ್ಯಾಂಗ್ ವಾರ್ ಅಥವಾ ಗಲಭೆಗಳು ನಡೆಯುವ ಸಾಧ್ಯತೆ ಇರುತ್ತದೆ. ಅವರನ್ನು ಪ್ರತ್ಯೇಕ ವಿಭಾಗಗಳಲ್ಲಿ ಇರಿಸುವುದರಿಂದ ಜೈಲಿನೊಳಗೆ ಶಿಸ್ತು ಮತ್ತು ಶಾಂತಿ ಕಾಪಾಡಲು ಸಾಧ್ಯವಾಗುತ್ತದೆ.
ಸಣ್ಣಪುಟ್ಟ ಕೈದಿಗಳ ರಕ್ಷಣೆ
ಜೈಲಿನಲ್ಲಿ ಹಿರಿಯ ಅಥವಾ ಪ್ರಭಾವಿ ಕೈದಿಗಳು ಹೊಸಬರ ಮೇಲೆ ದಬ್ಬಾಳಿಕೆ ನಡೆಸುವುದು, ದೈಹಿಕವಾಗಿ ಹಿಂಸಿಸುವುದು ಅಥವಾ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುವ ಘಟನೆಗಳು ನಡೆಯುತ್ತಿರುತ್ತವೆ. ವರ್ಗೀಕರಣದಿಂದ ಸಣ್ಣಪುಟ್ಟ ಅಪರಾಧ ಎಸಗಿದವರಿಗೆ ಜೈಲಿನೊಳಗೆ ಸುರಕ್ಷಿತ ವಾತಾವರಣ ಸಿಗುತ್ತದೆ.
ಉತ್ತಮ ನಡತೆಗೆ ಪ್ರೇರಣೆ
ಕೈದಿಗಳ ನಡವಳಿಕೆಯನ್ನು ಕಾಲಕಾಲಕ್ಕೆ ಮೌಲ್ಯಮಾಪನ ಮಾಡುವುದರಿಂದ, 'ಬಿ' ವಿಭಾಗದ ಕೈದಿಗಳು ಉತ್ತಮ ನಡತೆ ತೋರಿದರೆ 'ಸಿ' ವಿಭಾಗಕ್ಕೆ ಬಡ್ತಿ ಪಡೆಯಬಹುದು ಎಂಬ ಆಸೆ ಇರುತ್ತದೆ. ಇದು ಕೈದಿಗಳು ಜೈಲಿನ ನಿಯಮಗಳನ್ನು ಪಾಲಿಸಲು ಮತ್ತು ಹಿಂಸಾಚಾರದಿಂದ ದೂರವಿರಲು ಪ್ರೇರಣೆ ನೀಡುತ್ತದೆ.
ಜೈಲು ಅಧಿಕಾರಿಗಳಿಗೆ ಯಾವ ಕೈದಿಗೆ ಯಾವ ಮಟ್ಟದ ಸ್ವಾತಂತ್ರ್ಯ ನೀಡಬೇಕು, ಯಾರಿಗೆ ಪೆರೋಲ್ ನೀಡುವಾಗ ಹೆಚ್ಚಿನ ಜಾಗ್ರತೆ ವಹಿಸಬೇಕು ಎಂಬ ನಿರ್ಧಾರಗಳನ್ನು ತೆಗೆದುಕೊಳ್ಳಲು ಈ ವರ್ಗೀಕರಣವು ಸ್ಪಷ್ಟವಾದ ಮಾಹಿತಿ ನೀಡುತ್ತದೆ.
ದರ್ಶನ್ ಘಟನೆ ಬಳಿಕ ಗಂಭೀರ ಚಿಂತನೆ
ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಬಂದ ಬಳಿಕ ನಡೆದ ಘಟನೆಯಿಂದಾಗಿ ಕೈದಿಗಳನ್ನು 'ಎ', 'ಬಿ' ಮತ್ತು 'ಸಿ' ಎಂದು ವರ್ಗೀಕರಿಸುವ ಈ ನಿರ್ದಿಷ್ಟ ಯೋಜನೆಯು ಮುನ್ನೆಲೆಗೆ ಬಂತು. ದರ್ಶನ್ ಜೈಲಿನ ಲಾನ್‌ನಲ್ಲಿ ಕುಳಿತು ಸಿಗರೇಟ್ ಸೇದುತ್ತಾ, ಕಾಫಿ ಕುಡಿಯುತ್ತಾ ರೌಡಿ ಶೀಟರ್‌ಗಳೊಂದಿಗೆ ರಾಜಾತಿಥ್ಯ ಪಡೆಯುತ್ತಿರುವ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು.
ಈ ಘಟನೆಯು ರಾಜ್ಯಾದ್ಯಂತ ಭಾರಿ ಚರ್ಚೆಗೆ ಹಾಗೂ ಸರ್ಕಾರದ ವಿರುದ್ಧ ಟೀಕೆಗೆ ಕಾರಣವಾಯಿತು. ಈ ಹಗರಣದ ಬೆನ್ನಲ್ಲೇ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮತ್ತು ಜೈಲು ಇಲಾಖೆಯ ಉನ್ನತ ಅಧಿಕಾರಿಗಳು ಜೈಲು ಸುಧಾರಣೆಯ ಬಗ್ಗೆ ಸರಣಿ ಸಭೆಗಳನ್ನು ನಡೆಸಿದರು. ಈ ಸಮಯದಲ್ಲಿ, ಜೈಲಿನೊಳಗೆ ನಡೆಯುವ ಅಕ್ರಮಗಳನ್ನು ತಡೆಯಲು ಮತ್ತು ಪ್ರಭಾವಿ ಕೈದಿಗಳನ್ನು ಸಾಮಾನ್ಯ ಕೈದಿಗಳಿಂದ ಪ್ರತ್ಯೇಕಿಸಲು ಈ ವರ್ಗೀಕರಣದ ಯೋಜನೆಯನ್ನು ಜಾರಿಗೆ ತರುವ ಬಗ್ಗೆ ತೀರ್ಮಾನಿಸಲಾಯಿತು ಎಂದು ಕಾರಾಗೃಹ ಇಲಾಖೆಯ ಮೂಲಗಳು ಹೇಳಿವೆ.
ದರ್ಶನ್ ರಾಜಾತಿಥ್ಯ ಹಗರಣ ಹೊರಬಂದ ನಂತರ, ಜೈಲು ಆಡಳಿತವನ್ನು ಸಂಪೂರ್ಣವಾಗಿ ಹಸನು ಮಾಡಲು ಈ ವರ್ಗೀಕರಣದ ಯೋಚನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಮೊದಲು ಇಂತಹ ವರ್ಗೀಕರಣದ ಚರ್ಚೆಗಳು ನಡೆಯುತ್ತಿದ್ದರೂ, ಅದು ಅಧಿಕೃತವಾಗಿ ಜಾರಿಗೆ ಬಂದಿದ್ದು ಮತ್ತು ಕಟ್ಟುನಿಟ್ಟಿನ ನಿಯಮಗಳೊಂದಿಗೆ ರೂಪುಗೊಂಡಿದೆ ಎಂದು ಹೇಳಲಾಗಿದೆ.
ಎದುರಾಗುವ ತಾಂತ್ರಿಕ ಸವಾಲುಗಳು
ರಾಜ್ಯದ ಹಲವು ಜೈಲುಗಳು ಹಳೆಯ ಮಾದರಿಯ ಕಟ್ಟಡಗಳಾಗಿವೆ. ಇವುಗಳನ್ನು ಈಗಿನ 'ಎ' ವರ್ಗದ (ಹೈ-ಸೆಕ್ಯೂರಿಟಿ) ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸುವುದು ಇಂಜಿನಿಯರಿಂಗ್ ದೃಷ್ಟಿಯಿಂದ ಸವಾಲಿನ ಕೆಲಸವಾಗಿರುತ್ತದೆ. ರಾಜ್ಯಾದ್ಯಂತ ಸಾವಿರಾರು ಜೈಲು ಸಿಬ್ಬಂದಿ ಇದ್ದಾರೆ. ವರ್ಗೀಕರಣದ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಮತ್ತು ಆಧುನಿಕ ಕಣ್ಗಾವಲು ಉಪಕರಣಗಳನ್ನು ಬಳಸಲು ಇವರಿಗೆ ವಿಶೇಷ ತರಬೇತಿ ನೀಡಬೇಕಾಗುತ್ತದೆ. ರಾಜ್ಯದ ಎಲ್ಲಾ ಜೈಲುಗಳಲ್ಲಿ ಸಿಸಿಟಿವಿ, ಜಾಮರ್, ಮತ್ತು ಪ್ರತ್ಯೇಕ ಸೆಲ್‌ಗಳ ನಿರ್ಮಾಣಕ್ಕೆ ದೊಡ್ಡ ಮೊತ್ತದ ಅನುದಾನದ ಅವಶ್ಯಕತೆ ಇರುತ್ತದೆ ಎಂದು ಹೆಸರೇಳಲು ಇಚ್ಛಿಸದ ಕಾರಾಗೃಹದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕೇವಲ ವರ್ಗೀಕರಣ ಮಾಡಿದರೆ ಸಾಲದು, ಪ್ರತಿಯೊಂದು ಜೈಲನ್ನು 'ಸ್ಮಾರ್ಟ್ ಜೈಲು'ಗಳನ್ನಾಗಿ ಪರಿವರ್ತಿಸಬೇಕು. ಕೃತಕ ಬುದ್ಧಿಮತ್ತೆ ಆಧಾರಿತ ಸಿಸಿಟಿವಿಗಳು ಕೈದಿಗಳ ಸಂಶಯಾಸ್ಪದ ನಡವಳಿಕೆಯನ್ನು ಪತ್ತೆಹಚ್ಚಬಲ್ಲವು. ಒಬ್ಬ ಕೈದಿಯನ್ನು 'ಎ' ಅಥವಾ 'ಬಿ' ವರ್ಗಕ್ಕೆ ಸೇರಿಸುವಾಗ ಯಾವುದೇ ರಾಜಕೀಯ ಅಥವಾ ಆಮಿಷಗಳಿಗೆ ಒಳಗಾಗದಂತೆ ತಡೆಯಲು, ಈ ಸಮಿತಿಯಲ್ಲಿ ನ್ಯಾಯಾಂಗ ಅಥವಾ ನಿವೃತ್ತ ಪೊಲೀಸ್ ಅಧಿಕಾರಿಗಳಿರಬೇಕು. 'ಸಿ' ವರ್ಗದ ಕೈದಿಗಳಿಗೆ ಪ್ರತಿ ಜಿಲ್ಲೆಯ ವಿಶೇಷತೆಗೆ ಅನುಗುಣವಾಗಿ ಉದ್ಯೋಗ ತರಬೇತಿ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ತಿಳಿಸಿದರು.
ವರ್ಗೀಕರಣ ರಾಜ್ಯಕ್ಕೆ ವಿಸ್ತರಣೆ
ವರ್ಗೀಕರಣ ವ್ಯವಸ್ಥೆಯು ಕೇವಲ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮಾತ್ರವಲ್ಲದೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಅನ್ವಯವಾಗುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಇತ್ತೀಚೆಗೆ ಕಾರಾಗೃಹ ಇಲಾಖೆಗೆ ಡಿಜಿಪಿಯಾಗಿ ಬಂದಿರುವ ಅಲೋಕ್ ಕುಮಾರ್ ಈ ಸೂಚನೆ ನೀಡಿದ್ದಾರೆ. ಈ ಕುರಿತು ದ ಫಡರಲ್ ಕರ್ನಾಟಕದ ಜತೆ ಮಾತನಾಡಿದ ಅಧಿಕಾರಿಯೊಬ್ಬರು ಇತ್ತೀಚಿನ ವರ್ಷಗಳಲ್ಲಿ ಕುಖ್ಯಾತ ರೌಡಿಗಳನ್ನು ಬೆಂಗಳೂರಿನಿಂದ ರಾಜ್ಯದ ಇತರೆ ಜಿಲ್ಲೆಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಈ ಹೊಸ ವರ್ಗೀಕರಣದ ಮೂಲಕ ಅಲ್ಲಿಯೂ 'ಹೈ-ಸೆಕ್ಯೂರಿಟಿ' ವಲಯಗಳನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಅಲೋಕ್ ಕುಮಾರ್ ಅವರು ಕಾರಾಗೃಹದ ಡಿಜಿಪಿಯಾಗಿ ಅಧಿಕಾರವಹಿಸಿಕೊಂಡ ನಂತರ ಎಲ್ಲಾ ಜೈಲುಗಳಲ್ಲಿಯೂ ವರ್ಗೀಕರಣ ಪದ್ಧತಿಯನ್ನು ಅಳವಡಿಕೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದು ಹೇಳಿದರು.
ರಾಜ್ಯದ ವಿವಿಧ ಜೈಲುಗಳಲ್ಲಿ ಹಂಚಿಹೋಗಿರುವ ಒಂದು ಗ್ಯಾಂಗ್‌ನ ಸದಸ್ಯರ ನಡುವೆ ಸಂಪರ್ಕ ಇರದಂತೆ ತಡೆಯಲು ಈ ವರ್ಗೀಕರಣ ಸಹಕಾರಿಯಾಗಲಿದೆ. ಜಿಲ್ಲಾ ಮಟ್ಟದ ಜೈಲುಗಳಲ್ಲಿ ಸ್ಥಳೀಯ ಪ್ರಭಾವಿ ವ್ಯಕ್ತಿಗಳು ಜೈಲು ಸಿಬ್ಬಂದಿಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ.
ರಾಜ್ಯಮಟ್ಟದ ಏಕರೂಪದ ವರ್ಗೀಕರಣ ನೀತಿಯು ಸ್ಥಳೀಯ ಸಿಬ್ಬಂದಿಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ರಾಜ್ಯದ ಎಲ್ಲಾ ಕೈದಿಗಳ ನಡವಳಿಕೆ ಮತ್ತು ವರ್ಗೀಕರಣದ ಮಾಹಿತಿಯು ಒಂದೇ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಾಗುವುದರಿಂದ, ಯಾವ ಕೈದಿಯನ್ನು ಎಲ್ಲಿಗೆ ವರ್ಗಾಯಿಸಬೇಕು ಮತ್ತು ಯಾರಿಗೆ ಹೆಚ್ಚಿನ ಭದ್ರತೆ ಬೇಕು ಎಂದು ನಿರ್ಧರಿಸುವುದು ಸುಲಭವಾಗುತ್ತದೆ.

