ಪರಪ್ಪನ ಅಗ್ರಹಾರ ಜೈಲು ವಿಡಿಯೋ ವೈರಲ್ ಪ್ರಕರಣ: ವಿಜಯಲಕ್ಷ್ಮೀ ದರ್ಶನ್‌ ವಿಚಾರಣೆ ಸದ್ಯಕ್ಕಿಲ್ಲ!
x

ವಿಜಯಲಕ್ಷ್ಮೀ ದರ್ಶನ್‌ 

ಪರಪ್ಪನ ಅಗ್ರಹಾರ ಜೈಲು ವಿಡಿಯೋ ವೈರಲ್ ಪ್ರಕರಣ: ವಿಜಯಲಕ್ಷ್ಮೀ ದರ್ಶನ್‌ ವಿಚಾರಣೆ ಸದ್ಯಕ್ಕಿಲ್ಲ!

ಕುದುರೆಮಂಜನ ಹೇಳಿಕೆಯಂತೆ ಗುಬ್ಬಚ್ಚಿ ಸೀನ ಮತ್ತು ವಿಲ್ಸನ್ ಗಾರ್ಡನ್ ನಾಗ ಮಾಹಿತಿ ನೀಡಿದರೆ ದರ್ಶನ್‌ ಪತ್ನಿಯನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆ ಮೂಲಗಳು ತಿಳಿಸಿವೆ.


Click the Play button to hear this message in audio format

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡುತ್ತಿರುವ ವಿಡಿಯೋ ವೈರಲ್ ಆದ ಪ್ರಕರಣಕ್ಕೆ ಸಂಬಂಧಿಸಿಂತೆ ಆ ವಿಡಿಯೋದಲ್ಲಿ ಡ್ಯಾನ್ಸ್ ಮಾಡಿದ್ದ ರೌಡಿಶೀಟರ್ ಮಂಜುನಾಥ್ ಅಲಿಯಾಸ್ ಕುದುರೆ ಮಂಜ ತನಿಖೆ ವೇಳೆ ಸ್ಫೋಟಕ ವಿಚಾರಗಳನ್ನು ಬಯಲುಮಾಡಿದ್ದಾನೆ.

ತನಿಖೆ ವೇಳೆ ಸ್ಫೋಟಕ ಮಾಹಿತಿಗಳನ್ನು ಆತ ಬಿಚ್ಚಿಟ್ಟಿದ್ದಾನೆ ಎಂದು ಮೂಲಗಳು ಖಚಿತಪಡಿಸಿವೆ. ಜೈಲಿನಲ್ಲಿ ಕೈದಿಗಳು ಹುಟ್ಟುಹಬ್ಬ ಆಚರಿಸುವುದು, ಡ್ಯಾನ್ಸ್ ಮಾಡುವುದು, ಮೊಬೈಲ್ ಬಳಸಿ ಮೋಜು ಮಸ್ತಿ ಮಾಡಿರುವ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಮಂಜುನಾಥ್ ಅಲಿಯಾಸ್ ಕುದುರೆ ಮಂಜ ಎಂಬ ರೌಡಿಶೀಟರ್‌ನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕೊಲೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಮಂಜುನಾಥ್, ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿದ್ದ.

ಇದಕ್ಕೆ ಮುನ್ನ ಪೊಲೀಸರು ಕೊಲೆ ಆರೋಪದಲ್ಲಿ ಜೈಲು ಸೇರಿರುವ ಸಿನಿಮಾ ನಟ ದರ್ಶನ್ ಆಪ್ತ ಧನ್ವೀರ್‌ನನ್ನು ವಿಚಾರಣೆ ನಡೆಸಿದ್ದರು. ಆತ ತಾನೂ ಯಾರಿಗೂ ಮೊಬೈಲ್‌ ಮೂಲಕ ವಿಡಿಯೋ ಕಳುಹಿಸಿಲ್ಲ ಎಂದು ಹೇಳಿದ್ದ.

ಪರಪ್ಪನ ಅಗ್ರಹಾರ ಪೊಲೀಸರ ವಿಚಾರಣೆ ವೇಳೆ ಕುದುರೆ ಮಂಜ, ಜೈಲಿನಲ್ಲಿ ಡ್ಯಾನ್ಸ್ ಮಾಡಿದ್ದು ನಿಜ ಎಂದು ಒಪ್ಪಿಕೊಂಡಿದ್ದಾನೆ. ಮಾತ್ರವಲ್ಲದೆ, ತಾನೇ ಈ ವಿಡಿಯೋವನ್ನು ಗುಬ್ಬಚ್ಚಿ ಸೀನ ಮತ್ತು ವಿಲ್ಸನ್ ಗಾರ್ಡನ್ ನಾಗ ಎಂಬ ರೌಡಿಶೀಟರ್‌ಗಳಿಗೆ ಹಂಚಿಕೊಂಡಿದ್ದಾಗಿ ಬಾಯ್ಬಿಟ್ಟಿದ್ದಾನೆ.

ಕುದುರೆ ಮಂಜನ ಈ ಹೇಳಿಕೆಯಿಂದಾಗಿ ಇದೀಗ ಗುಬ್ಬಚ್ಚಿ ಸೀನ ಮತ್ತು ವಿಲ್ಸನ್ ಗಾರ್ಡನ್ ನಾಗ ತನಿಖೆಯ ಬಲೆಗೆ ಬಿದ್ದಿದ್ದಾರೆ. ಸದ್ಯ ಇವರಿಬ್ಬರೂ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದು, ಪೊಲೀಸರು ಕೋರ್ಟ್ ಅನುಮತಿ ಪಡೆದು ಅವರನ್ನು ವಿಚಾರಣೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಹಿಂದೆ ದರ್ಶನ್ ಜೊತೆಗೆ ರಾಜಾತಿಥ್ಯ ಪಡೆದಿದ್ದ ಈ ಇಬ್ಬರನ್ನು ನಂತರ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲಾಗಿತ್ತು.

ಕೋರ್ಟ್ ಅನುಮತಿ ನೀಡಿದರೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ಕರೆತಂದು ಇವರಿಬ್ಬರನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಒಂದು ವೇಳೆ ಅನುಮತಿ ಸಿಗದಿದ್ದಲ್ಲಿ, ಪೊಲೀಸರೇ ಹಿಂಡಲಗಾ ಜೈಲಿಗೆ ತೆರಳಿ ಆರೋಪಿಗಳಿಂದ ಹೆಚ್ಚಿನ ಮಾಹಿತಿ ಹಾಕಲಿದ್ದಾರೆ ಎಂದು ತಿಳಿದುಬಂದಿದೆ.

ವಿಜಯಲಕ್ಷ್ಮೀ ದರ್ಶನ್​ಗೆ ಸದ್ಯ ರಿಲೀಫ್

ವಿಡಿಯೋ ವೈರಲ್ ಪ್ರಕರಣದ ವಿಚಾರಣೆ ವೇಳೆ ನಟ ಧನ್ವೀರ್, ವಿಜಯಲಕ್ಷ್ಮೀ ದರ್ಶನ್ ಅವರ ಹೆಸರನ್ನು ಪ್ರಸ್ತಾಪಿಸಿದ್ದರು ಎಂಬ ಊಹಾಪೋಹಗಳು ಹರಿದಾಡಿದ್ದವು. ಆದರೆ, ಇದೀಗ ಕುದುರೆ ಮಂಜನ ಹೇಳಿಕೆಯಿಂದಾಗಿ, ಈ ಪ್ರಕರಣದಿಂದ ವಿಜಯಲಕ್ಷ್ಮೀ ದರ್ಶನ್ ಅವರಿಗೆ ಎದುರಾಗಿದ್ದ ಸಂಕಷ್ಟ ದೂರವಾದಂತಾಗಿದೆ.

ವಿಡಿಯೋ ಬಹಿರಂಗದ ಹಿಂದೆ ವಿಜಯಲಕ್ಷ್ಮಿ ಅವರ ಪಾತ್ರದ ಬಗ್ಗೆಯೂ ಪೊಲೀಸರಿಗೆ ಅನುಮಾನ ಮೂಡಿತ್ತು. ಆರೋಪಿ ಧನ್ವೀರ್‌ ನೀಡಿದ ಮಾಹಿತಿ ಮೇಲೆ ದರ್ಶನ್‌ ಪತ್ನಿಯನ್ನು ವಿಚಾರಣೆ ನಡೆಸಲು ಪೊಲೀಸರು ಸಿದ್ಧತೆ ನಡೆಸಿದ್ದರು.

ಜೈಲಿನ ಕೈದಿಗಳು ರಾಜಾಥಿತ್ಯ ಪಡೆಯುತ್ತಿರುವ ಹಾಗೂ ಡಾನ್ಸ್‌ ಮಾಡುತ್ತಿರುವ ವಿಡಿಯೋ ಸಂಬಂಧ ದರ್ಶನ್‌ ಅತ್ಮೀಯ ಧನ್ವೀರ್‌ , ವಿಚಾರಣೆ ವೇಳೆ ತಾನು ಜೈಲಿನಿಂದಲೇ ವಿಡಿಯೋವನ್ನು ವಿಜಯಲಕ್ಷ್ಮಿ ಅವರಿಗೆ ಕಳುಹಿಸಿದ್ದಾಗಿ ಮಾಹಿತಿ ನೀಡಿದ್ದ ಎನ್ನಲಾಗಿದೆ. ಆದರೆ, ಈಗ ಕುದುರೆ ಮಂಜನ ಹೇಳಿಕೆ ಬಳಿಕ ಪೊಲೀಸರು ವಿಜಯಲಕ್ಷ್ಮಿ ಅವರನ್ನು ತನಿಖೆಗೆ ಒಳಪಡಿಸುವ ಅಥವಾ ನೋಟಿಸ್‌ ನೀಡಿ ವಿಚಾರಣೆ ನಡೆಸುವ ಸಾಧ್ಯತೆ ಇಲ್ಲ. ಕುದುರೆಮಂಜನ ಹೇಳಿಕೆಯಂತೆ ಪೊಲೀಸರು ವಿಚಾರಣೆ ನಡೆಸಲಿರುವ ಗುಬ್ಬಚ್ಚಿ ಸೀನ ಮತ್ತು ವಿಲ್ಸನ್ ಗಾರ್ಡನ್ ನಾಗ ಒಂದು ವೇಳೆ ಮಾಹಿತಿ ನೀಡಿದರೆ ಬಳಿಕ ದರ್ಶನ್‌ ಪತ್ನಿಯನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆ ಮೂಲಗಳು ತಿಳಿಸಿವೆ.

Read More
Next Story