Notices issued to 6,000 traders who made transactions worth Rs 40 lakh: Commercial Tax Department clarifies
x

ಸಾಂದರ್ಭಿಕ ಚಿತ್ರ

40 ಲಕ್ಷ ರೂ. ವಹಿವಾಟು ನಡೆಸಿದ 6 ಸಾವಿರ ವ್ಯಾಪಾರಿಗಳಿಗೆ ನೋಟಿಸ್: ವಾಣಿಜ್ಯ ತೆರಿಗೆ ಇಲಾಖೆ ಸ್ಪಷ್ಟನೆ

ನೋಟಿಸ್‌ಗಳನ್ನು ಕಳೆದ 2021 ರಿಂದ 2024 ರವರೆಗೆ ಪ್ರತಿ ವರ್ಷ 40 ಲಕ್ಷ ರೂಪಾಯಿಗಿಂತ ಹೆಚ್ಚು ವ್ಯಾಪಾರ ವಹಿವಾಟು ನಡೆಸಿದವರಿಗೆ ಮಾತ್ರ ಬ್ಯಾಂಕ್ ದಾಖಲೆಗಳ ಆಧಾರದಲ್ಲಿ ನೀಡಲಾಗಿದೆ ಎಂದು ಚಂದ್ರಶೇಖರ್ ನಾಯಕ್ ಸ್ಪಷ್ಟಪಡಿಸಿದ್ದಾರೆ.


ರಾಜ್ಯದಲ್ಲಿ ಬೇಕರಿ, ಕಾಂಡಿಮೆಂಟ್ಸ್, ಚಹಾ ಮತ್ತು ತರಕಾರಿ ಅಂಗಡಿಯವರಿಗೆ ತೆರಿಗೆ ನೋಟಿಸ್ ನೀಡಿದ ಬಗ್ಗೆ ವ್ಯಾಪಾರಿಗಳಿಂದ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಕರ್ನಾಟಕ ಸರ್ಕಾರದ ವಾಣಿಜ್ಯ ತೆರಿಗೆ ಹೆಚ್ಚುವರಿ ಆಯುಕ್ತ ಚಂದ್ರಶೇಖರ್ ನಾಯಕ್ ಅವರು ಸ್ಪಷ್ಟನೆ ನೀಡಿದ್ದಾರೆ. 40 ಲಕ್ಷ ರೂಪಾಯಿಗಿಂತ ಹೆಚ್ಚು ವಹಿವಾಟು ನಡೆಸಿದ 6 ಸಾವಿರ ವ್ಯಾಪಾರಿಗಳಿಗೆ ಮಾತ್ರ ನೋಟಿಸ್ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ನೋಟಿಸ್‌ಗೆ ಯುಪಿಐ ದಾಖಲೆ ಆಧಾರ

ವಾಣಿಜ್ಯ ತೆರಿಗೆ ಇಲಾಖೆಯು ಸುಮಾರು 40 ಸಾವಿರ ಯುಪಿಐ (UPI) ವಹಿವಾಟು ದಾಖಲೆಗಳನ್ನು ಪರಿಶೀಲಿಸಿದೆ. ಅವುಗಳಲ್ಲಿ ವಾರ್ಷಿಕ 40 ಲಕ್ಷ ರೂಪಾಯಿಗಿಂತ ಹೆಚ್ಚು ವಹಿವಾಟು ನಡೆಸಿದ ಆರು ಸಾವಿರ ಮಾಲೀಕರನ್ನು ಗುರುತಿಸಿ ನೋಟಿಸ್‌ಗಳನ್ನು ಜಾರಿ ಮಾಡಲಾಗಿದೆ ಎಂದು ಚಂದ್ರಶೇಖರ್ ನಾಯಕ್ ಹೇಳಿದ್ದಾರೆ. ಈ ನೋಟಿಸ್‌ಗಳನ್ನು ಕಳೆದ 2021 ರಿಂದ 2024 ರವರೆಗೆ ಪ್ರತಿ ವರ್ಷ 40 ಲಕ್ಷ ರೂಪಾಯಿಗಿಂತ ಹೆಚ್ಚು ವ್ಯಾಪಾರ ವಹಿವಾಟು ನಡೆಸಿದವರಿಗೆ ಮಾತ್ರ ಬ್ಯಾಂಕ್ ದಾಖಲೆಗಳ ಆಧಾರದಲ್ಲಿ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬಡ್ಡಿ ಮನ್ನಾ ಮತ್ತು ಜಿಎಸ್‌ಟಿ ನೋಂದಣಿ

ಹಾಲು, ಬ್ರೆಡ್ ಮತ್ತು ತರಕಾರಿ ಮಾರಾಟದ ಬಗ್ಗೆ ಸೂಕ್ತ ದಾಖಲೆಗಳನ್ನು ನೀಡಿದರೆ ಬಡ್ಡಿಯನ್ನು ಮನ್ನಾ ಮಾಡಲಾಗುತ್ತದೆ ಎಂದು ನಾಯಕ್ ತಿಳಿಸಿದ್ದಾರೆ. ವಾರ್ಷಿಕ 40 ಲಕ್ಷ ರೂಪಾಯಿಗಿಂತ ಹೆಚ್ಚು ವಹಿವಾಟು ನಡೆಸುವವರು ಕಡ್ಡಾಯವಾಗಿ ಜಿಎಸ್‌ಟಿ (GST) ನೋಂದಣಿ ಮಾಡಿಕೊಳ್ಳಬೇಕು. ಕಂಪೋಸಿಷನ್ ಟ್ಯಾಕ್ಸ್ ಅಡಿ 1% ತೆರಿಗೆ ಕಟ್ಟುವ ಅವಕಾಶವೂ ಇದೆ ಎಂದು ಅವರು ವಿವರಿಸಿದರು.

ಹೂವು, ಹಣ್ಣು, ಹಾಲು ಸೇರಿದಂತೆ ಕೆಲವು ಉತ್ಪನ್ನಗಳು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿವೆ. ಒಂದು ವೇಳೆ ಇಂತಹ ವ್ಯಾಪಾರಿಗಳಿಗೂ ನೋಟಿಸ್ ಬಂದಿದ್ದರೆ, ಅವರು ಸೂಕ್ತ ಸ್ಪಷ್ಟೀಕರಣವನ್ನು ಇಲಾಖೆಗೆ ನೀಡಬಹುದು. ಅಲ್ಲದೆ, ಸರಕು ಖರೀದಿ ಮಾಡುವಾಗ ಜಿಎಸ್‌ಟಿ ಪಾವತಿ ಮಾಡಿದ್ದರೆ, ಮಾರಾಟದಲ್ಲಿ ಜಿಎಸ್‌ಟಿ ಪಾವತಿಸಬೇಕಾದ ಅವಶ್ಯಕತೆ ಇರುವುದಿಲ್ಲ. ಇದಕ್ಕೆ ಪೂರಕ ದಾಖಲೆಗಳನ್ನು ವಾಣಿಜ್ಯ ತೆರಿಗೆ ಇಲಾಖೆಗೆ ಸಲ್ಲಿಸಬೇಕು ಎಂದೂ ಅವರು ತಿಳಿಸಿದ್ದಾರೆ.

Read More
Next Story