ಗೆರಟೆಗೂ ಬಂತು ಕಾಲ: ಅಡುಗೆ ಮನೆ ಕಸ ಚಿಪ್ಪಿಗೆ ದಕ್ಷಿಣ ಕನ್ನಡದಲ್ಲಿ ಭಾರೀ ಬೇಡಿಕೆ...
x

ಗೆರಟೆಗೂ ಬಂತು ಕಾಲ: ಅಡುಗೆ ಮನೆ ಕಸ ಚಿಪ್ಪಿಗೆ ದಕ್ಷಿಣ ಕನ್ನಡದಲ್ಲಿ ಭಾರೀ ಬೇಡಿಕೆ...

ಸುಟ್ಟು ಬೂದಿಯಾಗಿ ಅಥವಾ ಅಡುಗೆ ಮನೆ ತ್ಯಾಜ್ಯದಲ್ಲಿ ಎಲ್ಲೋ ಸೇರುತ್ತಿದ್ದ ತೆಂಗಿನಕಾಯಿ ಗೆರಟೆ ಈಗ ಒಳ್ಳೆಯ ಬೆಲೆ ಪಡೆಯುತ್ತಿದ್ದು,ಕೇರಳ ಮತ್ತು ತಮಿಳುನಾಡಿನಲ್ಲಿರುವ ಇದ್ದಿಲು ಫ್ಯಾಕ್ಟರಿಗಳು ಭಾರೀ ಬೇಡಿಕೆ ಇಡುತ್ತಿವೆ.


ಒಂದು ಕಾಲದಲ್ಲಿ ಪುಕ್ಕಟೆಯಾಗಿ ಕೊಟ್ಟರೂ ಬೇಡ ಎನ್ನುತ್ತಿದ್ದ ತೆಂಗಿನ ಕಾಯಿ ಚಿಪ್ಪಿಗೆ ಈಗ ಭಾರೀ ಡಿಮ್ಯಾಂಡ್! ಸುಟ್ಟು ಬೂದಿಯಾಗುತ್ತಿದ್ದ ಅಥವಾ ತ್ಯಾಜ್ಯದ ಗುಡ್ಡೆ ಸೇರುತ್ತಿದ್ದ ಗೆರಟೆಗಳು ಇಂದು ಲಕ್ಷಾಂತರ ರೂಪಾಯಿಗಳ ವಹಿವಾಟು ನಡೆಸುವ ಉದ್ಯಮವಾಗಿ ಬೆಳೆದು ನಿಂತಿವೆ. ಕರ್ನಾಟಕದ ಕರಾವಳಿಯಿಂದ ಹಿಡಿದು ಕೇರಳ, ತಮಿಳುನಾಡಿನವರೆಗೂ ಈ ಗೆರಟೆ ವ್ಯಾಪಾರ ಆರ್ಥಿಕ ಕ್ರಾಂತಿಯನ್ನೇ ಸೃಷ್ಟಿಸುತ್ತಿದೆ. ಅದರಲ್ಲೂ ದಕ್ಷಿಣ ಕನ್ನಡದಲ್ಲಿ ಅಡುಗೆಮನೆಯ ಕಸ 'ಚಿಪ್ಪು' ಸಂಗ್ರಹ ಉದ್ಯಮವಾಗಿ ಬೆಳೆದಿದೆ.

ತೆಂಗಿನ ಕಾಯಿಯನ್ನು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಆಹಾರ ಪದಾರ್ಥವಾಗಿ ಉಪಯೋಗಿಸುತ್ತಿದ್ದು, ಅದರಲ್ಲೂ ಕರ್ನಾಟಕದ ಕರಾವಳಿ ಭಾಗದಲ್ಲಿ, ಕೇರಳ ಮತ್ತು ತಮಿಳುನಾಡಿನಾದ್ಯಂತ ಬಳಕೆಯಿದೆ. ತೆಂಗಿನಕಾಯಿ ಎಣ್ಣೆ ಎಲ್ಲೆಡೆ ಬಳಕೆಯಿದ್ದರೂ, ಹಸಿ ತೆಂಗಿನಕಾಯಿಯನ್ನು ಅಡುಗೆಯಲ್ಲಿ ಹೆಚ್ಚು ಬಳಸುವುದು ಕರ್ನಾಟಕದ ಕರಾವಳಿ ಪ್ರದೇಶದಲ್ಲಿ. ತೆಂಗಿನಕಾಯಿ ಹಸಿಯಾಗಿ ಮತ್ತು ಎಣ್ಣೆ ಹೆಚ್ಚಿನ ಬಳಕೆಯದ್ದಾಗಿದ್ದರೆ, ಅದರ ಚಿಪ್ಪು ಒಂದು ಹಂತದ ಬೇಡಿಕೆಯಲ್ಲಿತ್ತು. ಆದರೆ ಇತ್ತೀಚೆಗೆ ಗೆರಟೆಯನ್ನು(ತೆಂಗಿನಕಾಯಿ ಒಳಗಿನ ಬಲು ಗಟ್ಟಿಯಾದ ಭಾಗ) ವಿವಿಧ ಕಾರ್ಖಾನೆಗಳ ಉಪಯೋಗಕ್ಕೆ ಬಳಸುವುದರಿಂದ ಹೆಚ್ಚಿನ ಬೇಡಿಕೆ ಕಂಡಿದೆ.

ಕಾಸರಗೋಡಿನ ತೆಂಗಿನಕಾಯಿ ವ್ಯಾಪಾರಿ ಎಸ್.ಕೆ ಹುಸೇನ್ ಅವರು ಈ ಬಗ್ಗೆ ಮಾತನಾಡುತ್ತಾ, ತೆಂಗಿನಕಾಯಿ ಗೆರಟೆ ಕರಕುಶಲ ಕಲೆಯವರಿಗೆ ಬಹಳ ಸಣ್ಣ ಪ್ರಮಾಣದಲ್ಲಿ ಮಾರಾಟವಾಗುತ್ತಿತ್ತು. ಆದರೀಗ ಇದ್ದಿಲು ಫ್ಯಾಕ್ಟರಿಗಳು ಹೆಚ್ಚಾದ ಕಾರಣ ಬೇಡಿಕೆಯೂ ಹೆಚ್ಚಾಗಿದೆ. ಈಗ ರೈತರು ಮಾತ್ರವಲ್ಲದೇ ದಿನಕ್ಕೆ ಒಂದೋ ಅರ್ಧ ತೆಂಗಿನಕಾಯಿ ಬಳಸುವ ಮನೆಮಂದಿ ಕೂಡಾ ತಿಂಗಳಿಗೊಮ್ಮೆ ತೆಂಗಿನಕಾಯಿ ಗೆರಟೆ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದಾರೆ. `` ಕೇರಳ ರಾಜ್ಯದಲ್ಲಿ ಆರು ಇದ್ದಿಲು ಫ್ಯಾಕ್ಟರಿಗಳಿರುವ ಬಗ್ಗೆ ಗೊತ್ತಿದೆ. ಅಲ್ಲದೇ ತಮಿಳುನಾಡಿನಿಂದಲೂ ಗೆರಟೆ ಬಗ್ಗೆ ವಿಚಾರಿಸಿಕೊಂಡು ಬರುತ್ತಾರೆ. ಹಾಗಾಗಿ ವ್ಯವಹಾರದಲ್ಲಿ ಈಗ ತೆಂಗಿನಕಾಯಿಯಷ್ಟೇ ಪ್ರಾಮುಖ್ಯತೆಯನ್ನು ಗೆರಟೆಗೂ ನೀಡುವಂತಾಗಿದೆ’’ ಎನ್ನುತ್ತಾರವರು.

ಕರಾವಳಿಯಲ್ಲಿ ಗೆರಟೆ ಸಂಗ್ರಹ ಹೆಚ್ಚು

ಕರ್ನಾಟಕ ಕರಾವಳಿಯಲ್ಲಿ ಹೆಚ್ಚಿನ ಮನೆಗಳಲ್ಲಿ ಪ್ರತೀದಿನ ತೆಂಗಿನಕಾಯಿ ಬಳಸುವ ಕಾರಣಕ್ಕೆ ಗೆರಟೆ ಸಂಗ್ರಹ ಮಾಡುವವರು ಕೂಡಾ ಹೆಚ್ಚಾಗಿದ್ದಾರೆ. ದಿನಂಪ್ರತಿ ಮನೆಬಾಗಿಲಿಗೆ ಹೋಗಿ ಒಂದು ತೆಂಗಿನಕಾಯಿಯ ಒಂದು ಭಾಗ ಗೆರಟೆಗೆ ರೂ.೧ ರಿಂದ ರೂ. ೧.೫೦ವರೆಗೆ ನೀಡಿ ಖರೀದಿಸುತ್ತಾರೆ. ಹೀಗೆ ಖರೀದಿಸಿದ ಗೆರಟೆಯನ್ನು ತೆಂಗಿನಕಾಯಿ ವ್ಯಾಪಾರದ ಅಂಗಡಿಗಳಿಗೆ ಕಿಲೋ ಗ್ರಾಮ್ಸ್ ಲೆಕ್ಕಾಚಾರದಲ್ಲಿ ಮಾರಾಟಮಾಡುತ್ತಾರೆ.

ತಮಿಳುನಾಡಿನ ಮಧುರೈ ಮೂಲದ ಕುಮಾರನ್ ಮಂಗಳೂರಿನ ಪಡೀಲ್-ಬಜಾಲ್ ಪರಿಸರದಲ್ಲಿ ಗೆರಟೆ ಸಂಗ್ರಹಿಸುತ್ತಿದ್ದು, ವಾರಕ್ಕೆ ಕನಿಷ್ಠ ರೂ.2500 ಸಂಪಾದಿಸುವುದಾಗಿ ಹೇಳುತ್ತಾರೆ..

ಪುತ್ತೂರಿನ ಎಮ್ ಎಸ್ ಟ್ರೇಡರ್ಸ್​​ ಮಾಲಿಕ ಶರೀಫ್ ಹೇಳುವಂತೆ, ತೆಂಗಿನಕಾಯಿ ಚಿಪ್ಪು ಕಿಲೋ ಒಂದರ ರೂ.25 ರಿಂದ ರೂ.100ರ ಬೆಲೆಯಲ್ಲಿ ಕಳೆದ ವರ್ಷ ಕೇರಳದ ಫ್ಯಾಕ್ಟರಿ ಒಂದಕ್ಕೆ ಮಾರಾಟವಾಗಿದೆ. ಈ ವರ್ಷ ಬೆಲೆ ಹೆಚ್ಚುತ್ತಲೇ ಇದ್ದು, ರೂ.150 ತಲುಪಬಹುದು. ತಾಜಾ ಆಗಿರುವ ಚಿಪ್ಪು ಇನ್ನಷ್ಟು ಬೇಡಿಕೆ ಪಡೆದುಕೊಳ್ಳುತ್ತದೆ. ಹಿಂದೆ ತೆಂಗಿನಕಾಯಿ ಸಿಪ್ಪೆಯಿಂದ ನಾರು, ಕೊಕೊಪಿಟ್, ಹಾಗೆಯೇ ನಾರಿನ ಉತ್ಪನ್ನಗಳ ತಯಾರಿಕೆಗೆ ಬಳಸಲಾಗುತ್ತಿತ್ತು. ಈಗ ಅದರ ಡಿಮಾಂಡ್ ಕಡಿಮೆಯಾಗಿದೆ. ಬದಲಿಗೆ ಗೆರಟೆಗೆ ಡಿಮಾಂಡ್ ಬಂದಿದೆ, ಎನ್ನುತ್ತಾರೆ.

`ಕೋಲ್ ಎಕ್ಸ್ಪ್ರೆಸ್’ ಎಂಬ ಲಾರಿಯ ಬಶೀರ್, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸೀಸನ್‌ನಲ್ಲಿ ವಾರಕ್ಕೆ 10 ರಿಂದ 15 ಲೋಡ್ ಗೆರಟೆ ಸಾಮಾನ್ಯವಾಗಿ ಸಂಗ್ರಹಿಸಲಾಗುತ್ತಿದ್ದು, ಎಲ್ಲವೂ ಸ್ಟರ್ಧಾತ್ಮಕ ದರದಲ್ಲಿ ಕೇರಳದ ಫ್ಯಾಕ್ಟರಿಗಳಿಗೆ ಮಾರಾಟವಾಗುತ್ತದೆ. ಮಳೆಗಾಲದಲ್ಲಿ ಗೆರಟೆ ಬೆಲೆ ಕಡಿಮೆಯಾಗುತ್ತದೆ ಏಕೆಂದರೆ ಹೆಚ್ಚಿನವು ಮಳೆನೀರಿಗೆ ಒದ್ದೆಯಾಗಿ ಹೆಚ್ಚಿನ ಭಾರವಿರುತ್ತದೆ. ಹಾಗೆಯೇ ತೇವಾಂಶವಿಲ್ಲದ ಒಣಗಿದ ಗೆರಟೆಗೆ ಬೇಡಿಕೆ ಇರುತ್ತದೆ, ಎನ್ನುತ್ತಾರೆ.

ಆಗ ಬೂದಿ, ಈಗ ಕಾಸು

ತೆಂಗಿನಕಾಯಿ ಬೆಳೆಗಾರ ಕೃಷ್ಣ ಭಟ್, ಕಳೆದ ಕೆಲವು ವರ್ಷಗಳಿಂದ ಗೆರಟೆ ಕೂಡಾ ಮಾರಾಟ ಮಾಡುತ್ತಿದ್ದೇವೆ. ಅದಕ್ಕೂ ಮೊದಲು ಗೆರಟೆಯನ್ನು ರಾಶಿ ಹಾಕಿ ಸುಟ್ಟು ಬೂದಿ ಮಾಡುತ್ತಿದ್ದೆವು. ಇಲ್ಲವಾದಲ್ಲಿ ರಾಶಿಹಾಕಿಡಲು ಜಾಗ ಸಾಲುತ್ತಿರಲಿಲ್ಲ. ಈಗ ತೆಂಗಿನಕಾಯಿ ಸಿಪ್ಪೆ ಒಡೆದು ಕೊಬ್ಬರಿ ಮಾರಾಟ ಮಾಡುವಾಗಲೇ ಗೆರಟೆಯೂ ಮಾರಾಟವಾಗುತ್ತದೆ. ‘ಈ ವಹಿವಾಟು ಒಂದು ರೀತಿಯಲ್ಲಿ `ಕಸದಿಂದ ರಸ’ ಪಡೆದಂತೆ’, ಎಂದು ಅಭಿಪ್ರಾಯ ಪಡುತ್ತಾರೆ.

ಗೆರಟೆಯ ಬಳಕೆ ಎಲ್ಲಿ?

ಗೆರಟೆಯಿಂದ ತಯಾರಿಸಿದ ಗೃಹೋಪಯೋಗಿ ಸಾಧನಗಳು ಜನಪ್ರಿಯವಾಗಿತ್ತು. ಅಡುಗೆ ಮನೆಗೆ ಬೇಕಾಗುವ ಸೌಟು, ಕಪ್‌ಗಳು, ಹಾಗೇ ಅಲಂಕಾರಿಕ ವಸ್ತುಗಳು ಬಹಳ ಹಿಂದಿನ ಕಾಲದಿಂದ ಬೇಡಿಕೆಯಲ್ಲಿತ್ತು. ಬೇಗನೇ ಕೊಳೆಯದ ಕಾರಣ ತೋಟಗಳಲ್ಲಿ ಗಿಡಗಳ ಬುಡಗಳಿಗೆ ಹಾಕಿ ಬೇರು ಸರಾಗವಾಗಿ ಸಂಚರಿಸಲು ಪ್ರಯೋಜನಕಾರಿ ಎಂದೂ ಬಳಸಲಾಗುತ್ತದೆ.

ಗೆರಟೆಯನ್ನು ಕರಕುಶಲ ವಸ್ತುಗಳನ್ನು ತಯಾರಿಸುವುದು ಸಣ್ಣ ಪ್ರಮಾಣದ ಉದ್ಯಮವಾದರೆ, ಇದ್ದಿಲು ತಯಾರಿಸಲು ಬಳಸುತ್ತಿರುವುದು ದೊಡ್ಡ ಪ್ರಮಾಣದ್ದಾಗಿದೆ. ಗೆರಟೆಯನ್ನು ಸುಟ್ಟಾಗ ದೊರೆಯುವ ಇದ್ದಿಲನ್ನು ನೀರು ಶುದ್ಧೀಕರಣ ಘಟಕಗಳಲ್ಲಿ,ಹೋಟೆಲುಗಳಲ್ಲಿ ಬಾರ್ಬೆಕ್ಯೂ /ಗ್ರಿಲ್‌ಗೆ, ಇಲೆಕ್ಟಿçಕ್ ಗ್ರಿಡ್‌ಗಳಿಗೆ ಮತ್ತು ಬೇರೆ ಬೇರೆ ಕಾರ್ಖಾನೆಗಳಲ್ಲಿ ಬಳಸಲಾಗುತ್ತದೆ. ಭಾರತದಿಂದ ಮುಖ್ಯವಾಗಿ ಆಫ್ರಿಕಾ ಮತ್ತು ಯುರೋಪಿಯನ್ ದೇಶಗಳಿಗೆ ರಫ್ತು ಕೂಡಾ ಆಗುತ್ತಿದೆ. ಆನ್‌ಲೈನ್ ಶಾಪ್‌ಗಳಲ್ಲಿ ಇದ್ದಿಲು ಮಾರಾಟವಾಗುತ್ತಿದೆ.

ಕೃಷಿಕ ಕೃಷ್ಣ ಭಟ್ ಹೇಳುವಂತೆ, ತೆಂಗನ್ನು ಕಲ್ಪವೃಕ್ಷ ಎಂದು ಕರೆದಿರುವುದು ಇದೇ ಕಾರಣಕ್ಕೆ. ತೆಂಗಿನ ಪ್ರತಿಯೊಂದು ಭಾಗವೂ ಉಪಯುಕ್ತವಾಗಿದೆ. ತೆಂಗಿನ ಗೆರಟೆಯನ್ನು ಸುಟ್ಟಾಗ ಅತ್ಯುತ್ತಮ ಗುಣಮಟ್ಟದ ಕಾರ್ಬನ್ ಸಿಗುತ್ತದೆ. ವಿವಿಧ ರೀತಿಯ ಕೈಗಾರಿಕೆಗಳಲ್ಲಿ ಕಾರ್ಬನ್, ಚಾರ್‌ಕೋಲ್ ಎಂಬ ರೀತಿಯಲ್ಲಿ ಉಪಯೋಗವಾಗುತ್ತದೆ. “ತೆಂಗಿನ ಗೆರಟೆಯನ್ನು ಇತ್ತೀಚಿನ ದಶಕಗಳಲ್ಲಿ ಆಧುನಿಕ ಯಂತ್ರಗಳ ಮೂಲಕ ಸಂಸ್ಕರಿಸಲಾಗುತ್ತಿದೆ. ಹಾಗಾಗಿ ಗುಣಮಟ್ಟದ ಇದ್ದಿಲು ಸಿಗುತ್ತಿದೆ. ಅಂತೆಯೇ ಬೇಡಿಕೆ ಕೂಡಾ ಹೆಚ್ಚಿz’’ೆ, ಎನ್ನುತ್ತಾರೆ.

ಅಂತೂ ತ್ಯಾಜ್ಯವೆಂದು ಪರಿಗಣಿಸಲ್ಪಡುತ್ತಿದ್ದ ಗೆರಟೆಗೆ ಇನ್ನಷ್ಟು ಬೇಡಿಕೆ ಬರುತ್ತಿದ್ದು, ತ್ಯಾಜ್ಯವಿಲೇವಾರಿಯ ಸಮಸ್ಯೆ ಪರಿಹಾರದ ಜೊತೆಗೆ ಆರ್ಥಿಕವಾಗಿಯೂ ಲಾಭದಾಯಕ ಎಂದು ಸಾಬೀತಾಗುತ್ತಿದೆ.

Read More
Next Story