
ನರೇಗಾ ಯೋಜನೆ ಮರು ಜಾರಿಗೆ ಸಿಎಂ ಪಟ್ಟು; ಹೊಸ -ಹಳೆಯ ಯೋಜನೆ ನಡುವಿನ ವ್ಯತ್ಯಾಸವೇನು?
ವಿಬಿ ಗ್ರಾಮ್ ಜಿ ಯೋಜನೆ ಕೈ ಬಿಡುವವರೆಗೂ ಹೋರಾಟ ಮುಂದುವರಿಸಲು ಸಿಎಂ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ. ರಾಜ್ಯ ಸರ್ಕಾರದ ಈ ವಿರೋಧದ ಹಿನ್ನೆಲೆಯಲ್ಲಿ ಮನರೇಗಾ ಯೋಜನೆ ಹಾಗೂ ವಿಬಿ ಗ್ರಾಮ್ ಜಿ ಯೋಜನೆ ನಡುವಿನ ವ್ಯತ್ಯಾಸಗಳ ಕುರಿತು ಚರ್ಚೆ ಆರಂಭವಾಗಿದೆ.
ಗ್ರಾಮೀಣ ಬದುಕಿನ ಜೀವನಾಡಿಯಂತಿದ್ದ ಮನರೇಗಾ ಯೋಜನೆಯನ್ನು ಕೆಲವು ತಿದ್ದುಪಡಿಗಳೊಂದಿಗೆ ಮರು ನಾಮಕರಣ ಮಾಡಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ರಾಜ್ಯ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ವಿಬಿ ಗ್ರಾಮ್ ಜಿ ಯೋಜನೆ ಕೈ ಬಿಡುವವರೆಗೂ ಹೋರಾಟ ಮುಂದುವರಿಸಲು ಸಿಎಂ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ. ರಾಜ್ಯ ಸರ್ಕಾರದ ಈ ವಿರೋಧದ ಹಿನ್ನೆಲೆಯಲ್ಲಿ ಮನರೇಗಾ ಯೋಜನೆ ಹಾಗೂ ವಿಬಿ ಗ್ರಾಮ್ ಜಿ ಯೋಜನೆ ನಡುವಿನ ವ್ಯತ್ಯಾಸಗಳ ಕುರಿತು ಚರ್ಚೆ ಆರಂಭವಾಗಿದೆ. ಎರಡೂ ಯೋಜನೆಗಳ ನಡುವಿನ ಬದಲಾವಣೆಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
ನರೇಗಾ-ವಿಬಿ ಗ್ರಾಮ್ ಜಿ ಯೋಜನೆ ವ್ಯತ್ಯಾಸಗಳೇನು?
ನರೇಗಾ ಯೋಜನೆಯಲ್ಲಿ ಪ್ರತಿ ವರ್ಷ 100 ಮಾನವ ದಿನಗಳ ಉದ್ಯೋಗ ಒದಗಿಸಲಾಗುತ್ತಿತ್ತು.
ವಿಬಿ ಗ್ರಾಮ್ ಜಿ ಯೋಜನೆಯಲ್ಲಿ ಉದ್ಯೋಗ ಖಾತ್ರಿಯನ್ನು 125 ದಿನಗಳಿಗೆ ಏರಿಸಲಾಗಿದೆ. ಆದರೆ, ಗ್ರಾಮೀಣ ಜನರಿಗೆ ಒದಗಿಸುವ ಗ್ರಾಮ ಪಂಚಾಯತಿ ಕಾಮಗಾರಿಗಳು ಕೇಂದ್ರ ಸರ್ಕಾರದ ನಿರ್ಧಾರದ ಮೇಲೆ ಅವಲಂಬಿತವಾಗಲಿದೆ.
ನರೇಗಾದಲ್ಲಿ ವರ್ಷದ ಸರ್ವ ಋತುವಿನಲ್ಲಿಯೂ ಕೆಲಸ ದೊರಕುತ್ತಿತ್ತು.
ವಿಬಿ ಗ್ರಾಮ್ ಜಿ ಯೋಜನೆಯಲ್ಲಿ ಕೃಷಿ ಚಟುವಟಿಕೆ ಸಂದರ್ಭದಲ್ಲಿ 60 ದಿನಗಳ ಕಾಲ ಕೆಲಸ ನೀಡುವುದಿಲ್ಲ. ಹಾಗಾಗಿ ಕೂಲಿಕಾರರು ಖಾಸಗಿಯಾಗಿ ಕಡಿಮೆ ವೇತನಕ್ಕೆ ದುಡಿಯಬೇಕಾದ ಅನಿವಾರ್ಯತೆ ಎದುರಾಗಲಿದೆ.
ನರೇಗಾದಲ್ಲಿ ಪಂಚಾಯತ್‌ಗಳಿಗೆ ಕೆಲಸದ ಬೇಡಿಕೆಯಷ್ಟೇ ಅನುದಾನ ಲಭ್ಯವಿದ್ದು, ಅದಕ್ಕೆ ಅನುಗುಣವಾಗಿ ಕೆಲಸದ ಯೋಜನೆ ತಯಾರಿಸಿ, ಉದ್ಯೋಗಗಳನ್ನು ಹಂಚಿಕೆ ಮಾಡಲಾಗುತ್ತಿತ್ತು.
ವಿಬಿ ಗ್ರಾಮ್ ಜಿ ಯೋಜನೆಯಲ್ಲಿ ಕೂಲಿಕಾರ್ಮಿಕರು ಈಗ ಕೇಂದ್ರ ಸರ್ಕಾರ ಕೆಲಸ ನಿರ್ಧರಿಸುವುದಕ್ಕೆ ಮತ್ತು ಅನುದಾನ ನೀಡುವುದಕ್ಕೆ ಕಾಯಬೇಕು. ಒಂದು ವೇಳೆ ಆ ಪಂಚಾಯತಿಗೆ ಅನುದಾನ ಸಿಗದೇ ಹೋದರೆ ಕೂಲಿಕಾರರಿಗೂ ಕೆಲಸ ಇರುವುದಿಲ್ಲ.
ನರೇಗಾದಲ್ಲಿ ಕೆಲಸದ ದಿನನಗಳನ್ನು ದಾಖಲೆ ಪುಸ್ತಕ, ತಂತ್ರಾಂಶದಲ್ಲಿ ದಾಖಲಿಸಲಾಗುತ್ತಿತ್ತು.
ವಿಬಿ ಗ್ರಾಮ್ ಜಿ ಯೋಜನೆಯಲ್ಲಿ ಕೂಲಿಕಾರ್ಮಿಕರು ಒತ್ತಾಯಪೂರ್ವಕವಾಗಿ ಬಯೋಮೆಟ್ರಿಕ್ ದೃಢೀಕರಣ, NMMS ಹಾಗೂ ಇನ್ನಿತರ ಪರೀಕ್ಷಿಸದ ತಂತ್ರಜ್ಞಾನಗಳನ್ನು ಬಳಸಬೇಕಾಗುತ್ತದೆ. ಅವರಿಗೆ ಅರ್ಥವಾಗದ ಇಂತಹ ಪ್ರಕ್ರಿಯೆಗಳಿಂದಾಗಿ ತಮ್ಮ ಕೆಲಸವನ್ನು ದಾಖಲಿಸಲಾಗದೆ ಯೋಜನೆಯ ಲಾಭದಿಂದ ವಂಚಿತರಾಗಬೇಕಾಗುತ್ತದೆ.
ನರೇಗಾದಲ್ಲಿ ಭಾರತದ ಪ್ರತಿ ಗ್ರಾಮವೂ ಈ ಯೋಜನೆಯ ಲಾಭ ಪಡೆಯಬಹುದಾಗಿತ್ತು.
ವಿಬಿ ಗ್ರಾಮ್ ಜಿ ಯಲ್ಲಿ ಕೇಂದ್ರ ಸರ್ಕಾರದಿಂದ ಅಧಿಸೂಚಿಸಲ್ಪಟ್ಟ ಗ್ರಾಮಗಳಲ್ಲಿನ ಕಾರ್ಮಿಕರು ಮಾತ್ರ ಉದ್ಯೋಗದ ಲಾಭ ಪಡೆಯುತ್ತಾರೆ. ಅಧಿಸೂಚನೆಯಿಂದ ಹೊರತಾದ ಗ್ರಾಮಗಳ ಕಾರ್ಮಿಕರು ಉದ್ಯೋಗದಿಂದ ವಂಚಿತರಾಗುತ್ತಾರೆ.
ನರೇಗಾದಲ್ಲಿ ಕೂಲಿಯನ್ನು ಬೆಲೆಯೇರಿಕೆಗೆ ಸರಿದೂಗಿಸಲಾಗುತ್ತಿತ್ತು.
ವಿಬಿ ಗ್ರಾಮ್ ಜಿ ಯಲ್ಲಿ ಕೂಲಿಗೆ ಯಾವುದೇ ಖಾತರಿ ಇಲ್ಲ. ಕೂಲಿಯು ಇದೀಗ ಕೇಂದ್ರ ಸರ್ಕಾರವು ಪಂಚಾಯತಿಗೆ ನೀಡುವ ಅನುದಾನದ ಮೇಲೆ ನಿರ್ಧಾರವಾಗಲಿದೆ.
ನರೇಗಾದಲ್ಲಿ ವೇತನವನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರವೇ ನೀಡುತ್ತಿತ್ತು.
ವಿಬಿ ಗ್ರಾಮ್ ಜಿಯಲ್ಲಿ ವೇತನವನ್ನು ವಿಭಜಿಸಲಾಗಿದ್ದು ಶೇ 60 ರಷ್ಟು ಕೇಂದ್ರ ಸರ್ಕಾರ ನೀಡಿದರೆ, ಶೇ 40 ರಷ್ಟು ಅನುದಾನವನ್ನು ರಾಜ್ಯಗಳು ನೀಡಬೇಕಿದೆ. ಆದರೆ, ಈಗಾಗಲೇ ಅನುದಾನದ ಕೊರತೆ ಎದುರಿಸುತ್ತಿರುವ ರಾಜ್ಯಗಳು ಹೆಚ್ಚುವರಿ ಹೊರೆ ಹೊರಬೇಕಾಗುತ್ತದೆ.
ನರೇಗಾದಲ್ಲಿ ಗುತ್ತಿಗೆದಾರರಿಗೆ ಅವಕಾಶವಿರಲಿಲ್ಲ. ವಿಬಿ ಗ್ರಾಮ್ ಜಿಯಲ್ಲಿ ಈಗ ಗುತ್ತಿಗೆದಾರರಿಗೆ ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಕೂಲಿಕಾರ್ಮಿಕರು ಕೇಂದ್ರ ಸರ್ಕಾರದ ಬೃಹತ್ ಯೋಜನೆಗಳಿಗೆ ಗುತ್ತಿಗೆದಾರರ ಅಡಿ ಕೂಲಿಯಾಳಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಬಹುದು.
ಬಿ ಗ್ರಾಮ್ ಜಿ ಯೋಜನೆ ದುಷ್ಪರಿಣಾಮಗಳೇನು?
- ನಿರುದ್ಯೋಗದ ಪ್ರಮಾಣ ಹೆಚ್ಚಳ
- ಕನಿಷ್ಠ ವೇತನದ ರಕ್ಷಣೆಯಿಲ್ಲದೆ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ
- ಕಾರ್ಮಿಕರ ಶೋಷಣೆ ಮತ್ತು ಒತ್ತಡ ಹೆಚ್ಚಳ
- ಉದ್ಯೋಗದಲ್ಲಿ ಮಹಿಳೆಯರ ಪಾಲುದಾರಿಕೆ ಇಳಿಕೆ
- ದಲಿತ ಮತ್ತು ಆದಿವಾಸಿ ಕುಟುಂಬಗಳ ಮೇಲೆ ಅಧಿಕ ಒತ್ತಡ ಸೃಷ್ಟಿ
- ಬಲವಂತದ ವಲಸೆ, ಗ್ರಾಮೀಣ ಜೀವನೋಪಾಯಗಳ ಕುಸಿತ ಮತ್ತು ಗ್ರಾಮೀಣ ಸಂಕಷ್ಟ ತೀವ್ರಗೊಳ್ಳುವ ಸಾಧ್ಯತೆ
- ಪಂಚಾಯ್ತಿಗಳು ಕೇವಲ ಅನುಷ್ಠಾನಗೊಳಿಸುವ ಸಂಸ್ಥೆಗಳಾಗಿ ಸೀಮಿತಗೊಳ್ಳಲಿವೆ.
- ಸ್ಥಳೀಯ ಕಾಮಗಾರಿಗಳನ್ನು ನಿರ್ಧರಿಸುವಲ್ಲಿ ಪಂಚಾಯಿತಿಗಳ ಅಧಿಕಾರ ಮೊಟಕು.
- ಗ್ರಾಮೀಣ ಆಸ್ತಿಗಳನ್ನು ನಿರ್ಮಿಸುವಂತೆ ಜನರು ಬೇಡಿಕೆ ಇಡುವುದು ಅಸಾಧ್ಯ.
ರಾಜ್ಯ ಸರ್ಕಾರದ ಬೇಡಿಕೆಗಳೇನು?
- ವಿಕಸಿತ ಭಾರತ್ ಗ್ರಾಮ್ ಜಿ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು.
- ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಮರು ಜಾರಿಗೊಳಿಸಬೇಕು.
- ಜನರ ಉದ್ಯೋಗದ ಹಕ್ಕನ್ನು ಪುನರ್ ಸ್ಥಾಪಿಸಬೇಕು.
- ಪಂಚಾಯತಿಗಳ ಸ್ವಯಂ ಆಡಳಿತದ ಹಕ್ಕನ್ನು ಮರುಸ್ಥಾಪಿಸಬೇಕು.

