
ಸಚಿವ ಕೆ.ಜೆ. ಜಾರ್ಜ್, ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹ್ಮದ್
ಡಿಕೆಶಿ 'ಕಸ ಗುಡಿಸುವ' ಹೇಳಿಕೆ ಬೆನ್ನಲ್ಲೇ ಆಪ್ತರೊಂದಿಗೆ ಸಿಎಂ ಸಿದ್ದರಾಮಯ್ಯ ರಹಸ್ಯ ಸಭೆ!
ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಭಾಗವಹಿಸಲು ಶುಕ್ರವಾರ ದೆಹಲಿಗೆ ತೆರಳಲಿರುವ ಸಿಎಂ ಸಿದ್ದರಾಮಯ್ಯ, ತನ್ನ ಆಪ್ತರೊಂದಿಗೆ ಹೈಕಮಾಂಡ್ ಮುಂದೆ ಏನೆಲ್ಲಾ ವಿಷಯಗಳ ಬಗ್ಗೆ ಮಾತನಾಡಬೇಕು ಎಂಬುದರ ಬಗ್ಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ ರಾಜಕೀಯದಲ್ಲಿ ನಾಯಕತ್ವ ಗೊಂದಲದ ಚರ್ಚೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಮತ ಇಲ್ಲ ಎಂದು ಹೇಳತ್ತಲೇ ಸಿಎಂ ಸಿದ್ದರಾಮಯ್ಯ ತಮ್ಮ ಆಪ್ತರೊಂದಿಗೆ ತಡರಾತ್ರಿ ಸಭೆ ನಡೆಸಿರುವುದು ರಾಜಕೀಯ ವಲಯದಲ್ಲಿ ಬಹಳಷ್ಟು ಮಹತ್ವ ಪಡೆದುಕೊಂಡಿದೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಇತ್ತೀಚೆಗೆ ಮಾತನಾಡುತ್ತಾ, "ನಾನು ಕೇವಲ ವೇದಿಕೆ ಮೇಲೆ ಭಾಷಣ ಮಾಡುತ್ತಾ ರಾಜಕಾರಣ ಮಾಡಿದವನಲ್ಲ, ಪಕ್ಷದ ಕಚೇರಿಯಲ್ಲಿ ಕಸ ಗುಡಿಸಿದ್ದೇನೆ, ಪಕ್ಷದ ಬಾವುಟ ಕಟ್ಟಿದ್ದೇನೆ" ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ನೀಡಿದ್ದ ಬೆನ್ನಲ್ಲೇ ಸಿಎಂ ರಹಸ್ಯ ಸಭೆ ನಡೆಸಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಗುರುವಾರ (ಡಿ.25) ರಾತ್ರಿ, ಸಿಎಂ ಸಿದ್ದರಾಮಯ್ಯ ತಮ್ಮ ಭದ್ರತಾ ಸಿಬ್ಬಂದಿಯನ್ನು ಬಿಟ್ಟು, ಸಚಿವ ಕೆ.ಜೆ ಜಾರ್ಜ್ ಫಾರ್ಮ್ ಹೌಸ್‌ಗೆ ತೆರಳಿದ್ದ ಸಿಎಂ, ಸಚಿವ ಜಮೀರ್ ಅಹಮ್ಮದ್, ಹೆಚ್.ಸಿ ಮಹದೇವಪ್ಪ, ಕೆ.ವೆಂಕಟೇಶ್ ಸೇರಿದಂತೆ ಕೆಲ ಆಪ್ತರ ಜೊತೆ ರಹಸ್ಯ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೈಕಮಾಂಡ್ ಆಹ್ವಾನದ ಮೇರೆಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಭಾಗವಹಿಸಲು ಶುಕ್ರವಾರ ದೆಹಲಿಗೆ ತೆರಳಲಿರುವ ಸಿಎಂ ಸಿದ್ದರಾಮಯ್ಯ, ತನ್ನ ಆಪ್ತರೊಂದಿಗೆ ಹೈಕಮಾಂಡ್ ಮುಂದೆ ಏನೆಲ್ಲಾ ಚರ್ಚೆ ನಡೆಸಬೇಕು, ಸಂಪುಟ ಪುನಾರಚನೆ ಕರಿತು ಅನುಮತಿ ಪಡೆಯವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ.
ಡಿಸಿಎಂ ಹೇಳಿದ್ದೇನು ?
ಗುರುವಾರ(ಡಿ.25) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್, ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿದ್ದರು. ಖರ್ಗೆ ಅವರನ್ನು ಭೇಟಿ ಅದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, "ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಪಕ್ಷದ ಕಚೇರಿಯಲ್ಲಿ ಕಸ ಗುಡಿಸಿದ್ದೇನೆ, ಬಾವುಟ ಕಟ್ಟಿದ್ದೇನೆ ಎಂದಿದ್ದರು. ಅಲ್ಲದೆ, ವೇದಿಕೆಗೆ ಬಂದು ಕೇವಲ ಭಾಷಣ ಮಾಡಿಕೊಂಡು ಹೋಗಿಲ್ಲ" ಎಂದಿದ್ದರು.
ಪ್ರತ್ಯೇಕ ಸಭೆಗಳ ಹೆಚ್ಚಳ
ರಾಜ್ಯ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಿದ ನಂತರ ಕಾಂಗ್ರೆಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನಡುವಿನ ನಾಯಕತ್ವ ಗೊಂದಲ ಹೆಚ್ಚಾಗುತ್ತಲೇ ಇದೆ. ಕಳೆದೊಂದು ತಿಂಗಳಿನಿಂದಲೂ ಸಿಎಂ ಆಪ್ತ ಸಚಿವರಾದ ಡಾ.ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಮಹದೇವಪ್ಪ ಹಾಗೂ ವಿಧಾನಪರಿಷತ್ ಶಾಸಕ ಬಿ.ಕೆ. ಹರಿಪ್ರಸಾದ್ ಸೇರಿದಂತೆ ಇತರೆ ನಾಯಕರು ಆಗಿಂದಾಗೆ ಸಭೆಗಳನ್ನು ಸೇರಿ ಸಿಎಂ ಪರವಾಗಿ ಬೆಂಬಲ ಸೂಚಿಸುತ್ತಲೇ ಇದ್ದಾರೆ.
ಇನ್ನೂ ತನ್ನ ಅಣ್ಣನನ್ನು ಸಿಎಂ ಪಟ್ಟದಲ್ಲಿ ಕೂರಿಸಲೇ ಬೇಕು ಎಂದು ಪಣ ತೊಟ್ಟಿರುವ ಮಾಜಿ ಸಂಸದ ಡಿ.ಕೆ. ಸುರೇಶ್ ತಮ್ಮ ಆಪ್ತ ಶಾಸಕರಾದ ಇಕ್ಬಾಲ್ ಹುಸೇನ್, ಬಾಲಕೃಷ್ಣ , ನಯಾನ ಮೊಟಮ್ಮ ಸೇರಿದಂತೆ ಇನ್ನಿತರ ಶಾಸಕರೊಂದಿಗೆ ದೆಹಲಿ ಪ್ರವಾಸ ಮಾಡಿದ್ದರು. ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಡಿಸಿಎಂ ತನ್ನ ಆಪ್ತರ ಫಾರಂ ಹೌಸ್‌ನಲ್ಲಿ ಸಭೆ ಡಿನ್ನರ್ ಪಾರ್ಟಿ ಮಾಡಿದ್ದರು. ಸಿಎಂ ಸಿದ್ದರಾಮಯ್ಯ ತನ್ನ ಆಪ್ತ ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ಸಭೆ ನಡೆಸಿದ್ದರು.

