
ಜಮೀರ್ ಅಹ್ಮದ್ ಖಾನ್
2028 ರವರೆಗೂ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ; ಸಚಿವ ಜಮೀರ್ ಅಹ್ಮದ್ ಖಾನ್
ಪ್ರಸ್ತುತ ಸಿಎಂ ಸ್ಥಾನ ಖಾಲಿ ಇಲ್ಲ, ಅದೇ ರೀತಿ ಕೆಪಿಸಿಸಿ ಅಧ್ಯಕ್ಷರ ಸ್ಥಾನವೂ ಖಾಲಿ ಇಲ್ಲ. 2028ರ ಚುನಾವಣೆಯಲ್ಲಿ 150 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ, ಆಗ ಡಿ.ಕೆ. ಶಿವಕುಮಾರ್ ಸಿಎಂ ಆಗಬಹುದು ಎಂದು ಜಮೀರ್ ಅಹ್ಮದ್ ಖಾನ್ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2028 ರವರೆಗೂ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲಿದ್ದಾರೆ. ಡಿ.ಕೆ. ಶಿವಕುಮಾರ್ ಕೂಡ ಮುಖ್ಯಮಂತ್ರಿಯಾಗಬೇಕು, ಆದರೆ 2028 ಕ್ಕೆ ಅವರು ಸಿಎಂ ಆಗಲಿ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ಬುಧವಾರ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಪ್ರಸ್ತುತ ಸಿಎಂ ಸ್ಥಾನ ಖಾಲಿ ಇಲ್ಲ, ಅದೇ ರೀತಿ ಕೆಪಿಸಿಸಿ ಅಧ್ಯಕ್ಷರ ಸ್ಥಾನವೂ ಖಾಲಿ ಇಲ್ಲ. 2028ರ ಚುನಾವಣೆಯಲ್ಲಿ 150 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ, ಆಗ ಡಿ.ಕೆ. ಶಿವಕುಮಾರ್ ಅವರೇ ಸಿಎಂ ಆಗಬಹುದು ಎಂದು ತಿಳಿಸಿದರು.
ದೆಹಲಿಯಲ್ಲಿ ನಡೆದ ಸ್ಫೋಟದ ವಿಚಾರವಾಗಿ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್, ಚುನಾವಣೆಗೆ ಒಂದು ದಿನ ಮುಂಚಿತವಾಗಿಯೇ ಬಾಂಬ್ ಸ್ಫೋಟ ನಡೆದಿದ್ದು ಹೇಗೆ?, ಬಿಹಾರ ಚುನಾವಣೆಗೆ ಒಂದು ದಿನ ಮುನ್ನವೇ ಬ್ಲಾಸ್ಟ್ ಹೇಗಾಯಿತು? ಎಂದು ಪ್ರಶ್ನಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ. ರಾಜಕೀಯಕ್ಕಾಗಿ ಬಾಂಬ್ ಸ್ಫೋಟ ನಡೆದಿದೆ ಎಂಬ ಸುದ್ದಿ ಇದೆ. ಹಾಗೇನಾದರೂ ಆಗಿದ್ದರೆ ಯಾರಿಗೂ ಒಳ್ಳೆಯದಾಗಲ್ಲ. ರಾಜಕೀಯ ಲಾಭಕ್ಕೆ ಮಾಡಿದವರಿಗೂ ಒಳ್ಳೆಯದಾಗಲ್ಲ, ಅವರ ಕುಟುಂಬಕ್ಕೂ ಒಳ್ಳೆಯದಾಗಲ್ಲ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಗಳಾಗಲಿ, ಪ್ರಧಾನಿಯಾಗಲಿ ಯಾರೂ ಶಾಶ್ವತವಾಗಿ ಇಲ್ಲಿ ಗೂಟ ಹೊಡೆದುಕೊಂಡು ಇರುವುದಿಲ್ಲ ಎಂದ ಅವರು, ಸ್ಫೋಟದ ಬಗ್ಗೆ ಅನುಮಾನ ಅಲ್ಲ, ಆದರೆ ಪ್ರಶ್ನೆ ಕೇಳುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಭಯೋತ್ಪಾದಕರಿಗೆ ಜಾತಿಯೇ ಇಲ್ಲ. ಇಸ್ಲಾಂ ಧರ್ಮದಲ್ಲಿ ಭಯೋತ್ಪಾದನೆಗೆ ಯಾರೂ ಅವಕಾಶವೇ ಕೊಟ್ಟಿಲ್ಲ. ಭಯೋತ್ಪಾದನೆಯಲ್ಲಿ ತೊಡಗಿಸಿಕೊಂಡವರು ಇಸ್ಲಾಂ ಧರ್ಮದವರೇ ಅಲ್ಲ. ಯಾವ ಧರ್ಮದಲ್ಲೂ ಹೀಗೆ ಮಾಡಿ ಅಂತ ಹೇಳಿಕೊಡಲ್ಲ. ಹಾಗೆ ಮಾಡಿದರೆ ಹುಳ ಬಿದ್ದು ಸಾಯುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಬಿಹಾರ ಚುನಾವಣೆ ನ.11 ರಂದು ನಡೆದಿದೆ. ಚುನಾವಣೆಗೆ ಒಂದು ದಿನದ ಮುಂಚೆ ಸ್ಫೋಟ ಆಗಿದೆ. ಭಯೋತ್ಪಾದಕರಿಗೆ ರಾಜಕೀಯ ಸಂಪರ್ಕವಿತ್ತು ಎನ್ನುವುದನ್ನು ನಾನು ಅಲ್ಲಿ ಇಲ್ಲಿ ಕೇಳಿದ್ದೇನೆ. ಎಲ್ಲ ಊಹಾಪೋಹಗಳು ಸೃಷ್ಟಿಯಾಗುತ್ತಿವೆ. ಹಾಗೇನಾದರೂ ಆಗಿದ್ದರೆ ಯಾರಿಗೂ ಒಳ್ಳೆಯದಾಗಲ್ಲ. ರಾಜಕೀಯದಲ್ಲಿ ಇರುವವರು ಜಾತಿ ತಾರತಮ್ಯವನ್ನೂ ಮಾಡಬಾರದು ಎಂದು ಜಮೀರ್ ಅಹ್ಮದ್ ಖಾನ್ ಹೇಳಿದರು.
ದೆಹಲಿ ಸ್ಫೋಟ ಆಗಬಾರದಿತ್ತು, ಆಗಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

