
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
ಪ್ರಾದೇಶಿಕ ಅಸಮತೋಲನ| ಪ್ರೊ.ಆರ್.ಗೋವಿಂದರಾವ್ ವರದಿ ಬಂದ ಬಳಿಕ ಕ್ರಮ- ಸಿಎಂ
ನಂಜುಂಡಪ್ಪ ವರದಿ ಜಾರಿಯಾದ ನಂತರದಲ್ಲಿ ಡೈರಿ ಚಟುವಟಿಕೆಗಳು ಹೆಚ್ಚಾಗಿದ್ದು, ಕೆಎಂಎಫ್ ನಲ್ಲಿ ಪ್ರತಿ ದಿನ 1 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಪ್ರೊ.ಆರ್. ಗೋವಿಂದರಾವ್ ನೇತೃತ್ವದಲ್ಲಿ ರಚಿಸಿರುವ ಸಮಿತಿಯ ಅವಧಿಯನ್ನು ಮತ್ತೆರಡು ತಿಂಗಳ ಕಾಲ ವಿಸ್ತರಿಸಿದ್ದು, ವರದಿ ಬಂದ ನಂತರ ಪರಿಶೀಲಿಸಿ ಶಿಫಾರಸುಗಳನ್ನು ಜಾರಿ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಕೊನೆಯ ದಿನದ ಕಲಾಪದಲ್ಲಿ ಶುಕ್ರವಾರ(ಡಿ.19) ಮಾತನಾಡಿದ ಅವರು, "ವಿಶೇಷವಾಗಿ ಉತ್ತರ ಕರ್ನಾಟಕದ ಅಸಮತೋಲನ ನಿವಾರಣೆಗೆ ವರದಿ ಜಾರಿ ಮಾಡುತ್ತೇವೆ. ಕಿತ್ತೂರು ಕರ್ನಾಟಕ ಅಭಿವೃದ್ಧಿಗೆ 500 ಕೋಟಿ ರೂ. ಒದಗಿಸಬೇಕೆಂದು ಮನವಿ ಮಾಡಿದ್ದಾರೆ. ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು" ಎಂದರು.
ಸದನದಲ್ಲಿ ಯತ್ನಾಳ್ ಒಂದು ಗಂಟೆ ಮಾತು
ಬೆಳಗಾವಿ ಅಧಿವೇಶನ ಆರಂಭವಾದ ಎರಡನೇ ದಿನವೇ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಮಾತನಾಡಿರುವುದು ಈ ಬಾರಿಯ ವಿಶೇಷ. ಆಡಳಿತ ಪಕ್ಷದವರು 7 ಗಂಟೆ 13 ನಿಮಿಷ, ಬಿಜೆಪಿಯವರು 6 ಗಂಟೆ 59 ನಿಮಿಷ, ಜೆಡಿಎಸ್ 1ಗಂಟೆ 59 ನಿಮಿಷ ಹಾಗೂ ಶಾಸಕ ಯತ್ನಾಳ್ 1ಗಂಟೆ 4 ನಿಮಿಷ ಮಾತನಾಡಿದ್ದು ಒಟ್ಟು 17 ಗಂಟೆ 2 ನಿಮಿಷ ಮಾತನಾಡಿದ್ದಾರೆ. ಕೆಲವು ಶಾಸಕರು ಉತ್ತಮ ಸಲಹೆ ಕೊಟ್ಟಿದ್ದಾರೆ. ಕೆಲವರು ಟೀಕೆ ಮಾಡಿದ್ದಾರೆ. 39 ಜನ ಸದಸ್ಯರು ಉತ್ತರ ಕರ್ನಾಟಕದ ಬಗ್ಗೆ ಮಾತನಾಡಿದ್ದಾರೆ ಎಂದು ತಿಳಿಸಿದರು.
ಉತ್ತರ ಕರ್ನಾಟಕ ಹಿಂದುಳಿದಿದೆ ಎಂಬ ಕಾರಣಕ್ಕಾಗಿಯೇ 2001 ರಲ್ಲಿ ನಂಜುಂಡಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಯಿತು. ಅವರು ಅಧ್ಯಯನ ಮಾಡಿ 2002 ರಲ್ಲಿ ವರದಿ ನೀಡಿದ್ದು, 39 ತಾಲ್ಲೂಕುಗಳು ಅತ್ಯಂತ ಹಿಂದುಳಿದವು. 40 ತಾಲ್ಲೂಕುಗಳು ಅತಿ ಹಿಂದುಳಿದವು ಹಾಗೂ 35 ತಾಲ್ಲೂಕುಗಳು ಹಿಂದುಳಿದಿದ್ದು, ಒಟ್ಟು 114 ತಾಲ್ಲೂಕುಗಳು ಹಿಂದುಳಿದಿವೆ ಎಂದು ಗುರುತಿಸಿದ್ದಾರೆ ಎಂದರು.
8 ವರ್ಷಗಳಲ್ಲಿ 31,000 ಕೋಟಿ ರೂ. ಗಳನ್ನು ಸರ್ಕಾರ ವೆಚ್ಚ ಮಾಡಬೇಕು. ಈ ಪೈಕಿ 15,000 ಕೋಟಿ ರೂ. ಸಾಮಾನ್ಯವಾಗಿ ಬರುತ್ತದೆ. ಜೊತೆಗೆ 16,000 ಕೋಟಿ ರೂ. ಗಳನ್ನು 8ವರ್ಷಗಳಲ್ಲಿ ವೆಚ್ಚ ಮಾಡಬೇಕು ಎಂದು ಶಿಫಾರಸು ಮಾಡಿದ್ದರು. ಪ್ರಸ್ತುತ 31,000 ಕೋಟಿ ರೂ. ಗಳಿಗಿಂತ ಹೆಚ್ಚು ವೆಚ್ಚ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 3,000 ಕೋಟಿ ರೂ. ವಿಶೇಷ ಅಭಿವೃದ್ಧಿ ಯೋಜನೆಯಡಿ ವೆಚ್ಚ ಮಾಡುತ್ತಿದ್ದೇವೆ. ಆದರೂ ಇನ್ನೂ ಉತ್ತರ ಕರ್ನಾಟಕ ಹಿಂದುಳಿದಿವೆ. 39 ರಲ್ಲಿ 27 ತಾಲ್ಲೂಕುಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿ ಬರುತ್ತವೆ. 31,000 ಕೋಟಿ ರೂ. ವೆಚ್ಚ ಮಾಡಿದರೂ ಪ್ರಾದೇಶಿಕ ಅಸಮತೋಲನ ಇನ್ನೂ ನಿವಾರಣೆಯಾಗಿಲ್ಲ ಎಂದು ಹೇಳಿದರು.
ತಲಾ ಆದಾಯದಲ್ಲಿ ಮೊದಲ ಸ್ಥಾನ
ವಿರೋಧ ಪಕ್ಷದ ನಾಯಕರು ತಲಾ ಆದಾಯದ ಬಗ್ಗೆ ಮಾತನಾಡಿದ್ದು, ಗ್ಯಾರಂಟಿ ಯೋಜನೆಗಳ ಬಗ್ಗೆ ಘೋಷಣೆ ಮಾಡಿದ ದಿನದಿಂದ ಇಂದಿನವರೆಗೆ ವಿರೋಧಿಸುತ್ತಲೇ ಬಂದಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ಮೇಲೆ ಕರ್ನಾಟಕ ತಲಾ ಆದಾಯದಲ್ಲಿ ದೇಶದಲ್ಲಿಯೇ ಮೊದಲನೇ ಸ್ಥಾನದಲ್ಲಿದೆ ಎಂದರು.
7 ರೂ. ಪ್ರೋತ್ಸಾಹಧನ : ಸಿಎಂ ಭರವಸೆ
ನಂಜುಂಡಪ್ಪ ವರದಿ ಜಾರಿಯಾದ ನಂತರದಲ್ಲಿ ಡೈರಿ ಚಟುವಟಿಕೆಗಳು ಹೆಚ್ಚಾಗಿದ್ದು, ಕೆಎಂಎಫ್ ನಲ್ಲಿ ಪ್ರತಿ ದಿನ 1 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಬೀದರ್, ಕಲಬುರಗಿ ಮತ್ತು ಯಾದಗಿರಿ ಹಾಲು ಒಕ್ಕೂಟದಲ್ಲಿ ಪ್ರತಿದಿನಕ್ಕೆ 67 ಸಾವಿರ ಲೀಟರ್ ಉತ್ಪಾದನೆಯಾಗುತ್ತಿದೆ. ಈ ಎರಡರ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಹಳೆ ಮೈಸೂರಿನಲ್ಲಿ ಒಂದು ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ 10 ಲಕ್ಷಕ್ಕೂ ಹೆಚ್ಚು ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ನಮ್ಮ ಸರ್ಕಾರ ಪ್ರತಿ ಲೀಟರ್ ಹಾಲಿಗೆ ಒಮ್ಮೆ ಮೂರು ರೂ. ಮತ್ತೊಮ್ಮೆ ನಾಲ್ಕು ರೂ. ಗಳ ಸಹಾಯಧನ ಹೆಚ್ಚಳ ಮಾಡಿದೆ. ಈ ಮೊತ್ತ ಸಂಪೂರ್ಣವಾಗಿ ರೈತರಿಗೆ ಹೋಗುತ್ತಿದೆ. ಬಿಜೆಪಿ ಸರ್ಕಾರ ಬಿಟ್ಟು ಹೋಗಿದ್ದ 600 ಕೋಟಿ ರೂ. ಗಳನ್ನು ನಮ್ಮ ಸರ್ಕಾರ ತೀರಿಸಿದೆ. ಮೇವಿನ ವೆಚ್ಚ ಹೆಚ್ಚಳವಾಗಿದೆ ಎಂಬ ಕಾರಣಕ್ಕೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಏಳು ರೂ. ಗಳ ಪ್ರೋತ್ಸಾಹಧನವನ್ನು ಈ ಅವಧಿಯಲ್ಲಿಯೇ ಕೊಡುತ್ತೇವೆ ಎಂದು ಭರವಸೆ ನೀಡಿದರು.
ನಮ್ಮ ಸರ್ಕಾರ 2013ರಿಂದ 2018 ರವರೆಗೆ 118 ಭರವಸೆಗಳ ಪೈಕಿ 115 ಭರವಸೆಗಳನ್ನು ಈಡೇರಿಸಿತ್ತು.ಈ ಬಾರಿ 593 ಭರವಸೆಗಳನ್ನು ಈಡೇರಿಸಲಾಗುವುದು. ಬಿಜೆಪಿ ಅವಧಿಯಲ್ಲಿ 600 ರಲ್ಲಿ 60 ಭರವಸೆಗಳನ್ನು ಈಡೇರಿಸಿದ್ದಾರೆ. ಇವರಿಗೆ ನಮ್ಮ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ ಎಂದು ಟೀಕಿಸಿದರು.
ವರ್ಷಕ್ಕೆ 5,000 ಕೋಟಿ ರೂ. ವೆಚ್ಚ
ಹೈದರಾಬಾದ್ ಕರ್ನಾಟಕಕ್ಕೆ 371 ಜೆ ವಿಶೇಷ ಸ್ಥಾನಮಾನ ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ. ಈ ಪ್ರಸ್ತಾವನೆಯನ್ನು ಬಿಜೆಪಿ ಆಡಳಿತ ಅವಧಿಯಲ್ಲಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ತಿರಸ್ಕರಿಸಿದ್ದರು. ಹಾಗಾಗಿ ಕಲ್ಯಾಣ ಕರ್ನಾಟಕದ ಬಗ್ಗೆ ಮಾತನಾಡಲು ವಿರೋಧ ಪಕ್ಷದವರಿಗೆ ಯಾವುದೇ ನೈತಿಕತೆ ಇಲ್ಲ. 2025-26ನೇ ಸಾಲಿನಲ್ಲಿ 1,800 ಕೋಟಿ ರೂ. ವೆಚ್ಚವಾಗಿದೆ. ಈ ವರ್ಷ 5,000 ಕೋಟಿ ರೂ. ವೆಚ್ಚವಾಗಲೇಬೇಕು ಎಂದು ಸೂಚಿಸಲಾಗಿದೆ. ಇಷ್ಟೆಲ್ಲಾ ವೆಚ್ಚಮಾಡಿದರೂ ಶಿಕ್ಷಣ, ಪೌಷ್ಟಿಕತೆ, ಆರೋಗ್ಯದ ಕ್ಷೇತ್ರಗಳಲ್ಲಿ ಹಿಂದುಳಿದಿದೆ. ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ಕೊಡಬೇಕು ಎಂದು ಸೂಚಿಸಿ ಪ್ರೊ. ಛಾಯಾ ದೇವಡಗಾಂವಕರ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಇವರು ವರದಿಯನ್ನು ಸಲ್ಲಿಸಿದ್ದು, ಸರ್ಕಾರ ಪರಿಶೀಲಿಸಿ ಜಾರಿಗೆ ತರಲಾಗುವುದು. ಇದರಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾಕ್ಷರತೆ ಸುಧಾರಣೆಯಾಗಲಿದೆ ಎಂದರು.
300 ಕೆಪಿಎಸ್ ಶಾಲೆಗಳ ಆರಂಭ
ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತು ನೀಡಿದ್ದು, ಹೆಚ್ಚು ಆಸ್ಪತ್ರೆಗಳನ್ನು ಸ್ಥಾಪಿಸಲು ಸೂಚಿಸಲಾಗಿದೆ. 371ಜೆ ಜಾರಿಯಾದ ಮೇಲೆ 10,000 ವೈದ್ಯಕೀಯ, 8,000 ಎಂಜಿನಿಯರಿಂಗ್, 12,000 ಡೆಂಟಲ್ ಮತ್ತಿತರ ಕೋರ್ಸುಗಳಿಗೆ ಸೇರಿದ್ದಾರೆ. ಶೇ. 80 ಭರ್ತಿ ಪ್ರಕ್ರಿಯೆ ಸ್ಥಳೀಯವಾಗಿಯೇ ಆಗಬೇಕೆಂದು ಸೂಚಿಸಿದೆ. ರಾಜ್ಯದಲ್ಲಿ 900 ಕೆಪಿಎಸ್ ಶಾಲೆಗಳನ್ನು ತೆರೆಯಲಾಗುವುದು. ಈ ಭಾಗದ ಅಭಿವೃದ್ಧಿಗೆ 300 ಕೆಪಿಎಸ್ ಶಾಲೆಗಳನ್ನು ತೆರೆಯಲು ಸೂಚಿಸಿದೆ ಎಂದು ಮಾಹಿತಿ ನೀಡಿದರು.

