
ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
ನರೇಗಾ ಹೆಸರು ಬದಲಾವಣೆ: ಸೀತಾ ರಾಮ ಅಲ್ಲ, ಇದು ‘ಗೋಡ್ಸೆ ರಾಮ’ : ಸಿಎಂ
ಗ್ರಾಮೀಣ ಭಾಗದಲ್ಲಿ ಬಡವರು, ಕೂಲಿ ಕಾರ್ಮಿಕರು ಹಾಗೂ ಸಣ್ಣ ರೈತರಿಗೆ ಮನರೇಗಾ ಕೆಲಸ ಕೊಡುವ ಕಾಯ್ದೆಯಾಗಿತ್ತು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು 2005ರಲ್ಲಿ ಮನರೇಗಾ ಕಾಯ್ದೆಯನ್ನು ಜಾರಿಗೆ ತಂದಿದ್ದರ ಫಲವಾಗಿ ಕಳೆದ ಇಪ್ಪತ್ತು ವರ್ಷದ ಅವಧಿಯಲ್ಲಿ 12.16 ಕೋಟಿ ಜನರು ಕೆಲಸ ಮಾಡಿದ್ದಾರೆ. ಇದರಲ್ಲಿ ಶೇ.53 ರಷ್ಟು ಮಹಿಳೆಯರೇ ಕೆಲಸ ಮಾಡಿ ಆರ್ಥಿಕವಾಗಿ ಕುಟುಂಬಕ್ಕೆ ನೆರವಾಗಿದ್ದರು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಮಂಗಳವಾರ(ಜ.13) ಅರಮನೆ ಮೈದಾನದಲ್ಲಿ ನಡೆದ ನರೇಗಾ ಬಚಾವ್ ಸಂಗ್ರಾಮ್ ಆಂದೋಲನದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಬಡವರು, ಕೂಲಿ ಕಾರ್ಮಿಕರು ಹಾಗೂ ಸಣ್ಣ ರೈತರಿಗೆ ಮನರೇಗಾ ಕೆಲಸ ಕೊಡುವ ಕಾಯ್ದೆಯಾಗಿತ್ತು. ನಿರುದ್ಯೋಗಿಗಳು ಹಾಗೂ ಆದಿವಾಸಿಗಳ ಸಮಸ್ಯೆಗಳಿಗೆ ಮನಮೋಹನ ಸಿಂಗ್ ಅವರ ಸರ್ಕಾರ ಪರಿಹಾರ ಕಂಡು ಹಿಡಿದಿತ್ತು ಎಂದರು.
ನೂತನ ಯೋಜನೆಯಲ್ಲಿ ರಾಮನಿಲ್ಲ
ಇತ್ತೀಚೆಗೆ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ಮನರೇಗಾ ಯೋಜನೆ ಬಗ್ಗೆ ಗಂಭೀರವಾಗಿ ಚರ್ಚಿಸಲಾಗಿದೆ. ಕೇಂದ್ರ ಸರ್ಕಾರ ಮನರೇಗಾ ರದ್ದು ಮಾಡಿ ವಿಬಿ ಜಿ ರಾಮ್ ಜಿ ಕಾಯ್ದೆ ಮಾಡಿದೆ. ಪ್ರಧಾನಿ ಮೋದಿ ಸರ್ಕಾರಕ್ಕೆ ಮಹಾತ್ಮ ಗಾಂಧಿಯವರ ಹೆಸರು ಬೇಕಾಗಿಲ್ಲ. ನೂತನ ಯೋಜನೆಯಲ್ಲಿ ಇರುವುದು ಶ್ರೀರಾಮನೂ ಅಲ್ಲ, ರಾಮನ ಹೆಸರೂ ಅಲ್ಲ, ದಶರಥ ರಾಮನೂ ಅಲ್ಲ, ಸೀತಾ ರಾಮನೂ ಅಲ್ಲ, ಕೌಸಲ್ಯಾ ರಾಮನೂ ಇಲ್ಲ. ಯೋಜನೆಯಲ್ಲಿರುವುದು ಗೋಡ್ಸೆ ರಾಮ, ಮೋದಿ ಸರ್ಕಾರ ಮತ್ತೊಮ್ಮೆ ಮಹಾತ್ಮ ಗಾಂಧಿಯನ್ನು ಕೊಂದು ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶೀಘ್ರವೇ ನೋಟಿನಲ್ಲಿ ಗಾಂಧಿ ಪೋಟೋ ಮಾಯ
ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಬಿಜೆಪಿಯವರು ಹಿಂದೆ ಗಾಂಧೀಜಿಯನ್ನ ಕೊಂದಿದ್ದರು. ಈಗ ಅವರ ಹೆಸರನ್ನೂ ಕೊಂದಿದ್ದಾರೆ. ಮುಂದೆ ನೋಟ್‌ನಲ್ಲಿರೋದನ್ನೂ ತೆಗೆಯುತ್ತಾರೆ. ಮಹಾತ್ಮ ಗಾಂಧೀಜಿ ಅವರ ಹೆಸರು ಹೇಳುವ ಹಕ್ಕನ್ನು ಬಿಜೆಪಿ ಕಳೆದುಕೊಂಡಿದೆ. ಎಲ್ಲಾ ತಾಲೂಕುಗಳಲ್ಲಿ ಹೋರಾಟ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು ಒಗ್ಗಟ್ಟು ಪ್ರದರ್ಶಿಸಿದರು.
ಎಲ್ಲಾ ತಾಲೂಕಿನಲ್ಲಿಯೂ ಪಾದಯಾತ್ರೆ
ಎಐಸಿಸಿ ಕೊಟ್ಟ ಕಾರ್ಯಕ್ರಮವನ್ನು ಎಲ್ಲಾ ಶಾಸಕರು ಹಾಗೂ ಜಿಲ್ಲಾಧ್ಯಕ್ಷರು ಮಾಡಲೇಬೇಕು. ಇದರಲ್ಲಿ ಯಾವ ದಾಕ್ಷಿಣ್ಯವೂ ಇಲ್ಲ, ಯಾರು ಕೆಲಸ ಮಾಡುವುದಿಲ್ಲವೋ ಅವರನ್ನು ಜವಬ್ದಾರಿಯಿಂದ ಮುಕ್ತಗೊಳಿಸುತ್ತೇವೆ. ಬುಧವಾರ (ಜ.14) ಸಚಿವ ಸಂಪುಟದಲ್ಲಿ ಚರ್ಚೆಯಾಗಲಿದೆ. ಹತ್ತು ದಿನದೊಳಗೆ ಎಲ್ಲಾ ಕ್ಷೇತ್ರಗಳಲ್ಲಿ ಧರಣಿ ಮಾಡಬೇಕು, ಕಡ್ಡಾಯವಾಗಿ ಹತ್ತು ಕಿ.ಮೀ. ಪಾದಯಾತ್ರೆ ಮಾಡಬೇಕು. ತಾಲೂಕು ಕಚೇರಿಗೆ ಮನವಿ ಕೊಡಬೇಕು, ಈ ಕಾರ್ಯಕ್ರಮದಲ್ಲಿ ಯಾವ ರಾಜಿಯೂ ಇಲ್ಲ, ಶಿಕಾರಿಪುರ ಸೇರಿದಂತೆ ಐದಾರು ಕಡೆ ನಾನೇ ಬರುತ್ತೇನೆ ಎಂದು ತಿಳಿಸಿದರು.
ಶೀಘ್ರವೇ ಸ್ಥಳೀಯ ಸಂಸ್ಥೆ ಚುನಾವಣೆ
ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲೇ ನಾವು ತೀರ್ಮಾನಿಸಿದ್ದೆವು. ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಜಿಪಂ, ತಾಪಂ ಚುನಾವಣೆ ನಡೆಸುತ್ತೇವೆ. ಯಾವುದೇ ತೊಡಕು ಇದ್ದರೂ ನಿವಾರಣೆ ಮಾಡಲಾಗುವುದು. ನಾವು ಮಾಡಿದ ಕೆಲಸ, ಗ್ಯಾರಂಟಿಯಿಂದ ಸರ್ಕಾರ ಬಂದಿದೆ. ಹಲವು ಬೋರ್ಡ್ ಹಾಗೂ ಪಾಲಿಕೆಗಳಿಗೆ ನಾಮ ನಿರ್ದೇಶನ ಮಾಡಲು ಎಐಸಿಸಿಗೆ ಪಟ್ಟಿ ಕಳುಹಿಸಲಾಗಿದ್ದು, ಕೆಲವು ತಾಂತ್ರಿಕ ಕಾರಣಗಳಿಂದ ಇನ್ನೂ ನೇಮಕ ಮಾಡಲು ಸಾಧ್ಯವಾಗಿಲ್ಲ ಎಂದರು.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, "ನರೇಗಾ ಯೋಜನೆ ಗ್ರಾಮೀಣ ಜನರಿಗೆ ಲೈಫ್ ಲೈನ್ ರೀತಿ ಇತ್ತು. ಪ್ರತಿದಿನ 12 ಕೋಟಿ ಜನರಿಗೆ ಉದ್ಯೋಗ ಸೃಷ್ಟಿಸುವ ಅವಕಾಶವಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಗಾಂಧಿ ಇತಿಹಾಸ ಅಳಿಸುವುದಕ್ಕಾಗಿಯೇ ವಿಬಿ ಜಿ ರಾಮ್ ಜಿ ಎಂದು ಹೆಸರಿಟ್ಟಿದ್ದಾರೆ. ಆದರೆ ಇವರು ಕೇವಲ ಹೆಸರು ಬದಲಾಯಿಸಿಲ್ಲ, ಜನರ ಉದ್ಯೋಗ, ಜೀವನೋಪಾಯವನ್ನೇ ಕಳೆದುಕೊಳ್ಳುವಂತೆ ಮಾಡಿದ್ದಾರೆ. ಗ್ರಾಮೀಣ ಜನರ ಬದುಕು ನಮಗೆ ಬಹಳ ಮುಖ್ಯ, ಆರ್‌ಎಸ್ಎಸ್, ಬಿಜೆಪಿಯವರು ಗಾಂಧಿಯನ್ನು ಎಷ್ಟು ದ್ವೇಷಿಸುತ್ತಾರೆ. ಇದು ರಾಮರಾಜ್ಯದ ಯೋಜನೆಯಲ್ಲ ನಾಥೂರಾಂ ಗೂಡ್ಸೆ ಯೋಜನೆ. ಅದಕ್ಕಾಗಿ ಗಾಂಧಿಜೀ ಹೆಸರು ಬದಲಾವಣೆ ಮಾಡಿದ್ದಾರೆ. ನಿಮ್ಮ ರಾಮರಾಜ್ಯದಲ್ಲಿ ಗ್ರಾಮೀಣ ಜನರಿಗೆ ಉದ್ಯೋಗ ಇಲ್ಲವೇ, ಜನರಿಗೆ ಬದಕುವ ಹಕ್ಕು ಇಲ್ಲವೇ ಎಂದು ಪ್ರಶ್ನಿಸಿದರು.

