
ಕೆ.ಎಸ್.ಈಶ್ವರಪ್ಪ
ಎಸ್‌ಟಿಗೆ ಕುರುಬ ಸೇರ್ಪಡೆ ಹೋರಾಟಕ್ಕೆ ಸಿಎಂ ಬೆಂಬಲ ನೀಡಲಿ -ಕೆ.ಎಸ್.ಈಶ್ವರಪ್ಪ
ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವ ಕುರಿತ ಹೋರಾಟವನ್ನು ನಾನೇ ಆರಂಭಿಸಿದ್ದು, ಅದನ್ನು ಇತ್ತೀಚೆಗೆ ಸಿದ್ದರಾಮಯ್ಯ ಕೂಡ ಒಪ್ಪಿಕೊಂಡಿದ್ದಾರೆ ಎಂದು ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸುವ ಹೋರಾಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಬಲ ನೀಡುತ್ತಾರೋ, ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದ್ದಾರೆ.
ಕುರುಬ ಸಮುದಾಯ ಇಲ್ಲದಿದ್ದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಿರಲಿಲ್ಲ. ಕುರುಬ ಸಮುದಾಯವನ್ನು ಎಸ್.ಟಿ.ಗೆ ಸೇರಿಸುವ ಕುರಿತು ಹೋರಾಟವನ್ನು ನಾನೇ ಆರಂಭಿಸಿದೆ. ಇದನ್ನು ಸ್ವತಃ ಸಿಎಂ ಸಿದ್ದರಾಮಯ್ಯ ಕೂಡ ಒಪ್ಪಿಕೊಂಡಿದ್ದಾರೆ. ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಕೂಡ ಹೇಳಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಕುರುಬ ಸಮುದಾಯ ಕಷ್ಟದಲ್ಲಿದೆ. ಈ ಬಗ್ಗೆ ಕುಲಶಾಸ್ತ್ರ ಅಧ್ಯಯನದಲ್ಲೂ ತಿಳಿದು ಬಂದಿದೆ. ಈ ಹಿಂದೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರಕ್ಕೆ ಶಿಫಾರಸು ಮಾಡಲು ಮುಂದಾಗಿದ್ದರು. ನ್ಯಾಯಬದ್ಧವಾದ ಕುಲಶಾಸ್ತ್ರ ಅಧ್ಯಯನ ಕೂಡ ಆಗಿದೆ ಎಂದು ತಿಳಿಸಿದರು.
ಉಗ್ರಪ್ಪ ಹೇಳಿಕೆಗೆ ಆಶ್ಚರ್ಯ
ಉಗ್ರಪ್ಪ ಅವರು, 'ನಮ್ಮ ತಟ್ಟೆಯ ಅನ್ನ ಯಾಕೆ ಕಸಿದುಕೊಳ್ತೀರಿ' ಎಂದು ಹೇಳಿದ್ದು ಆಶ್ಚರ್ಯ ತಂದಿದೆ. ನಾವು ಯಾರ ತಟ್ಟೆಯ ಅನ್ನವನ್ನೂ ಕಸಿಯುತ್ತಿಲ್ಲ, ಬಿಟ್ಟು ಹೋಗಿರುವ ಕುರುಬ ಸಮುದಾಯವನ್ನು ಎಸ್.ಟಿ.ಗೆ ಸೇರಿಸಿ ಎಂದು ಮಾತ್ರ ಕೇಳುತ್ತಿದ್ದೇವೆ ಎಂದು ಈಶ್ವರಪ್ಪ ಹೇಳಿದರು.
ಮೀಸಲಾತಿ ಶೇ. 20ಕ್ಕೆ ಹೆಚ್ಚಲಿ
ನಿರಂಜನಾನಂದಪುರಿ ಶ್ರೀಗಳ ನೇತೃತ್ವದಲ್ಲಿ ಬಿ.ಎಲ್. ಸಂತೋಷ್ ಅವರನ್ನೂ ಭೇಟಿಯಾಗಿ ಮನವಿ ಸಲ್ಲಿಸಲಾಗಿತ್ತು. ಬಿಟ್ಟು ಹೋಗಿರುವ ಕುರುಬ ಸಮುದಾಯವನ್ನು ಎಸ್.ಟಿ.ಗೆ ಸೇರಿಸಬೇಕು. ಎಸ್.ಟಿ ಮೀಸಲಾತಿಯು ಶೇ. 20ರವರೆಗೂ ಹೋಗಲಿ. ಛತ್ತೀಸ್‌ಗಢ ಸೇರಿ ಬೇರೆ ರಾಜ್ಯಗಳಲ್ಲಿ ಶೇ. 22ರವರೆಗೆ ಮೀಸಲಾತಿ ಇದೆ. ಈ ಸಂಬಂಧ ವಿಜಯಪುರದಲ್ಲಿ ಇದೇ ಅ.24ರಂದು ಸಭೆ ಸೇರಲಿದ್ದು, ಮತ್ತಷ್ಟು ಚರ್ಚೆ ನಡೆಸುತ್ತೇವೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ತಿಳಿಸಿದರು.