State Tribal Research Institute recommends inclusion of Kuruba community in ST category
x

ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸಬೇಕು ಎಂದು ವರದಿ ನೀಡಿರುವ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ

ಎಸ್‌ಟಿಗೆ ಕುರುಬ ಸಮುದಾಯ | ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಶಿಫಾರಸು; ಹೋರಾಟದ ಹಾದಿ ಏನು?

ಕುರುಬ ಸಮುದಾಯವು ಕುಲಕಸುಬು ಆಧರಿಸಿ ಜೀವನ ರೂಪಿಸಿಕೊಂಡಿದೆ. ತಮ್ಮದೇ ಆದ ಸಂಸ್ಕೃತಿ, ಕಲೆ, ನೃತ್ಯ, ನ್ಯಾಯ-ಪಂಚಾಯತಿ, ರೂಢಿ ಸಂಪ್ರದಾಯಗಳನ್ನು ಆಚರಿಸಿಕೊಂಡು ಬಂದಿದೆ.


Click the Play button to hear this message in audio format

ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ರಾಜ್ಯ ಸರ್ಕಾರದ ಪ್ರಯತ್ನಕ್ಕೆ ಪೂರಕವಾಗಿ ಮಹತ್ವದ ಬೆಳವಣಿಗೆಯಲ್ಲಿ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯು ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸಬೇಕು ಎಂದು ಶಿಫಾರಸು ಮಾಡಿದೆ. ಕುರುಬ ಜನಾಂಗವು ಕೇಂದ್ರ ಸರ್ಕಾರದ ಲೋಕೂರ್‌ ಸಮಿತಿಯ ಐದು ಮಾನದಂಡಗಳು ಹಾಗೂ ಬುಡಕಟ್ಟು ಲಕ್ಷಣಗಳನ್ನು ಹೊಂದಿದೆ ಎಂದು ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ.

ರಾಜ್ಯದ 25 ಜಿಲ್ಲೆಗಳಲ್ಲಿ ವಾಸ ಮಾಡುತ್ತಿರುವ ಈ ಲಕ್ಷಣಗಳಿರುವ ಕುರುಬರು ಇದ್ದಾರೆ. ಹೀಗಾಗಿ ಈ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಅರ್ಹವಾಗಿದೆ. ಕುರುಬ ಸಮುದಾಯವು ಕುಲಕಸುಬು ಆಧರಿಸಿ ಜೀವನ ರೂಪಿಸಿಕೊಂಡಿದೆ. ತಮ್ಮದೇ ಆದ ಸಂಸ್ಕೃತಿ, ಕಲೆ, ನೃತ್ಯ, ನ್ಯಾಯ-ಪಂಚಾಯತಿ, ರೂಢಿ - ಸಂಪ್ರದಾಯ ಆಚರಿಸಿಕೊಂಡು ಬಂದಿದೆ. ರಾಜ್ಯದಲ್ಲಿ ಹಲವು ಕಡೆ ಪ್ರತ್ಯೇಕವಾಗಿ ಈ ಸಮುದಾಯ ವಾಸಿಸುತ್ತಿದೆ. ಸಾಮಾಜಿಕ, ಶೈಕ್ಷಣಿಕವಾಗಿಯೂ ಹಿಂದುಳಿದಿದೆ. ಹಾಗಾಗಿ ಕುರುಬ ಸಮುದಾಯವನ್ನ ಎಸ್‌ಟಿಗೆ ಸೇರಿಸಬಹುದೆಂದು ವರದಿ ಹೇಳಿದೆ.

ರಾಜ್ಯದಲ್ಲಿ ಕುರುಬ, ಕುರುಬನ್, ಧನಗರ್, ಗೊರೆಯ, ಕುರುಬ್‌, ಕುರುಂಬನ್‌ ಎಂಬ ಪದಗಳಲ್ಲಿ ಧನಗರ್‌, ಹಾಲುಮತಸ್ಥರು ಗುರುತಿಸಿಕೊಂಡಿದ್ದಾರೆ. ಈ ಸಂಬಂಧ ಕುಲಶಾಸ್ತ್ರೀಯ ಅಧ್ಯಯನದಲ್ಲೂ ತಿಳಿಸಲಾಗಿದೆ ಎಂದು ಬುಡಕಟ್ಟು ಸಂಶೋಧನಾ ಸಂಸ್ಥೆ ತಿಳಿಸಿದೆ.

ವರದಿ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಿದ್ದು, ಆ ಬಳಿಕ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಲಿದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಎಸ್‌ಟಿಗೆ ಸೇರಿಸಲು ಸರ್ಕಾರ ನಿರಂತರ ಪ್ರಯತ್ನ

ಬಹು ವರ್ಷದ ಬೇಡಿಕೆಯಾಗಿರುವ ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸುವ ಚರ್ಚೆಗಳು ಜೋರಾಗಿದೆ. ಇತ್ತೀಚೆಗೆ ರಾಜ್ಯ ಸರ್ಕಾರದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆಸಲು ಉದ್ದೇಶಿಸಿದ್ದ ಸಭೆಯನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿತ್ತು.

ಅಂದಿನ ಸಭೆಯ ಸೂಚನಾ ಪತ್ರದಲ್ಲಿ ಎರಡು ಅಜೆಂಡಾಗಳನ್ನು ಉಲ್ಲೇಖಿಸಲಾಗಿತ್ತು. ಮೊದಲನೆಯದ್ದಾಗಿ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವುದು, ಎರಡನೆಯದ್ದು ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಕುರುಬ ಸಮುದಾಯವು ರಾಜ್ಯದ ಗೊಂಡ ಸಮುದಾಯದ ಜತೆ ಸಾಮ್ಯತೆ ಹೊಂದಿರುವ ಬಗ್ಗೆ ಚರ್ಚೆಯಾಗಿತ್ತು. ಸಭೆಗೆ ಅಗತ್ಯ ಮಾಹಿತಿ ಮತ್ತು ದಾಖಲೆಗಳೊಂದಿಗೆ ಹಾಜರಾಗುವಂತೆ ಪರಿಶಿಷ್ಟ ಪಂಗಡ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿತ್ತು.

ಮೀಸಲಾತಿಯಲ್ಲಿ ಕುರುಬ ಸಮುದಾಯ

ಪ್ರಸ್ತುತ ರಾಜ್ಯದಲ್ಲಿ ಕುರುಬ ಸಮುದಾಯವು ʼ2ಎʼ ಗ್ರೂಪ್ ನಲ್ಲಿದ್ದು, ಶೇ.15 ರಷ್ಟು ಮೀಸಲಾತಿ ಸೌಲಭ್ಯ ಪಡೆಯುತ್ತಿದೆ. ಆದರೆ, 2ಎ ಗುಂಪಿನಲ್ಲಿ ವಿಶ್ವಕರ್ಮ, ಕುಂಬಾರ, ದೇವಾಂಗ, ನೇಕಾರ, ಮಡಿವಾಳ, ಅಗಸ, ತಿಗಳ, ಪಟ್ಟೇಗಾರ, ಬೌದ್ಧ ಸೇರಿದಂತೆ 100 ಕ್ಕೂ ಹೆಚ್ಚು ಸಮುದಾಯಗಳಿವೆ. ಹಾಗಾಗಿ ಮೀಸಲಾತಿಯಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗುವುದಿಲ್ಲ ಎಂಬ ಬೇಸರ ಕುರುಬ ಸಮುದಾಯದಲ್ಲಿದೆ.

ಇನ್ನು ಪರಿಶಿಷ್ಟ ಪಂಗಡಕ್ಕೆ ರಾಜ್ಯದಲ್ಲಿ ಶೇ.7 ರಷ್ಟು ಮೀಸಲಾತಿ ಸೌಲಭ್ಯ ನೀಡಲಾಗಿದೆ. ವಾಲ್ಮೀಕಿ, ನಾಯಕ ಸಮುದಾಯ ಸೇರಿದಂತೆ 51 ಸಮುದಾಯಗಳು ಎಸ್‌ಟಿ ಮೀಸಲಾತಿಯ ಲಾಭ ಹಾಗೂ ಸೌಲಭ್ಯವನ್ನು ಪಡೆಯುತ್ತಿವೆ. ಒಂದು ವೇಳೆ ಕುರುಬ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರ್ಪಡೆ ಮಾಡಿದರೆ, ಈಗಿನ ಶೇ.7 ರ ಮೀಸಲಾತಿಯಲ್ಲಿ ಕುರುಬ ಸಮುದಾಯವೂ ಪಾಲು ಪಡೆಯಬೇಕಾಗುತ್ತದೆ.

ಮೀಸಲಾತಿಗೆ ಕೆ.ಎಸ್‌.ಈಶ್ವರಪ್ಪ ಪ್ರಯತ್ನ

ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಆಗಿನ ಬಿಜೆಪಿ ಮುಖಂಡ ಹಾಗೂ ಕುರುಬ ಸಮುದಾಯದ ನಾಯಕ ಕೆ.ಎಸ್‌.ಈಶ್ವರಪ್ಪ ನೇತೃತ್ವದಲ್ಲಿ ಕುರುಬ ಸಂಘಟನೆಗಳು ಮತ್ತು ಮಠಗಳು ರಾಜ್ಯಾದ್ಯಂತ ಸಮಾವೇಶ ನಡೆಸಿ ಕುರುಬ ಸಮುದಾಯವನ್ನು ಎಸ್‌ಟಿ ಪಂಗಡಕ್ಕೆ ಸೇರಿಸಬೇಕೆಂದು ಒತ್ತಾಯಿಸಿದ್ದವು. ಆಗಿನ ಸರ್ಕಾರವೂ ಪರಿಶೀಲನೆ ನಡೆಸುವ ಭರವಸೆ ನೀಡಿತ್ತು. ಆ ಮೂಲಕ ಕುರುಬ ಸಮುದಾಯದ ಜನರಿಗೆ ಉದ್ಯೋಗ, ಶಿಕ್ಷಣ ಮತ್ತಿತರ ಕ್ಷೇತ್ರಗಳಲ್ಲಿ ಹೆಚ್ಚಿನ ಮೀಸಲಾತಿ ಒದಗಿಸುವ ಸಂಬಂಧ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಬಗ್ಗೆ ಹೆಚ್ಚು ಬೇಡಿಕೆ ಬಂದಿತ್ತು.

ಪರಿಶಿಷ್ಟ ಪಂಗಡದ ಮೀಸಲಾತಿಗೆ ಒತ್ತಾಯಿಸಿ ಕನಕಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ 2022ರ ಜನವರಿ 15ರಂದು ಕಾಗಿನೆಲೆಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಫೆ.7ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಿ, ಎಸ್‌ಟಿಗೆ ಸೇರಿಸುವಂತೆ ಹಕ್ಕೊತ್ತಾಯ ಮಾಡಲಾಗಿತ್ತು.

ಕೇಂದ್ರಕ್ಕೆ ಶಿಫಾರಸು ಮಾಡಿದ್ದ ರಾಜ್ಯ ಸರ್ಕಾರ

ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸಬೇಕೆಂದು 2023 ರಲ್ಲಿ ರಾಜ್ಯ ಸರ್ಕಾರವು ಕೇಂದ್ರಕ್ಕೆ ಶಿಫಾರಸು ಮಾಡಿತ್ತು.

ಮೈಸೂರು, ಚಾಮರಾಜನಗರ ಜಿಲ್ಲೆಯ ಕೆಲ ಭಾಗಗಳಲ್ಲಿ ಕಾಡು ಕುರುಬರು, ಜೇನು ಕುರುಬರು ಎಸ್‌ಟಿ ಮೀಸಲಾತಿಯ ಸೌಲಭ್ಯ ಪಡೆಯುತ್ತಿದ್ದಾರೆ. ಉಳಿದವರು 2 'ಎ' ಪಟ್ಟಿಯಲ್ಲಿದ್ದಾರೆ. ಹೀಗಾಗಿ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬೇಕು ಎಂದು ಶಿಫಾರಸು ಮಾಡಿತ್ತು. 'ಕುರುಬರು ಭಾರತದ ಮೂಲ ನಿವಾಸಿಗಳು. 1868 ಮತ್ತು 1901ರ ಜನಗಣತಿಯಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿತ್ತು. ಸ್ವಾತಂತ್ರ್ಯಾ ನಂತರ ಕೈಬಿಡಲಾಗಿದೆ. ದೇವರಾಜ ಅರಸು ಆಡಳಿತದ ಅವಧಿಯಲ್ಲಿ ಜೇನು ಕುರುಬ ಮತ್ತು ಕಾಡು ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದ್ದರು. ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ಸೌಲಭ್ಯ ಸಿಗುತ್ತಿದೆ. ಹೀಗಾಗಿ ರಾಜ್ಯದಲ್ಲೂ ಕುರುಬರನ್ನೂ ಎಸ್‌ಟಿ ಪಟ್ಟಿಗೆ ಸೇರಿಸಬೇಕು ಎಂಬುದು ಸಮುದಾಯದ ಬೇಡಿಕೆಯಾಗಿದೆ.

ಎಸ್‌ಟಿಗೆ ಕುರುಬರ ಸೇರ್ಪಡೆಗೆ ವಿರೋಧ

ಪರಿಶಿಷ್ಟ ಪಂಗಡಕ್ಕೆ ಕುರುಬ ಮತ್ತು ಇತರೆ ಸಮುದಾಯಗಳನ್ನು ಸೇರಿಸುವ ಸರ್ಕಾರದ ಪ್ರಯತ್ನಗಳಿಗೆ ಎಸ್‌ಟಿ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಈಗಾಗಲೇ ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಎಸ್‌ಟಿ ಫಲಾನುಭವಿಗಳಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಯಾವುದೇ ಕಾರಣಕ್ಕೂ ಕುರುಬರ ಸಮುದಾಯವನ್ನು ಎಸ್‌ಟಿಗೆ ಸೇರಿಸಬಾರದು ಎಂದು ಒತ್ತಾಯಿಸಿ ಇತ್ತೀಚೆಗೆ ಹೊಸಪೇಟೆಯಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದ್ದರು.

Read More
Next Story