
ಮೃತಪಟ್ಟ ಯುವಕರು
ಚಿಕ್ಕಬಳ್ಳಾಪುರ ಅಪಘಾತದಲ್ಲಿ ಮೃತಪಟ್ಟ ನಾಲ್ವರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ
ಮೃತರ ಮನೆಗಳಿಗೆ ಶಾಸಕ ಪ್ರದೀಪ್ ಈಶ್ವರ್ ಭೇಟಿ ನೀಡಿದ ಸಾಂತ್ವನ ಹೇಳಿ, ಅಂತ್ಯಕ್ರಿಯೆಗೆ ನೆರವು ನೀಡಿದ್ದಲ್ಲದೆ, ಕುಟುಂಬದವರಿಗೆ ಉದ್ಯೋಗ ಕೊಡಿಸುವ ಭರವಸೆ ನೀಡಿದ್ದಾರೆ.
ಜಿಲ್ಲೆಯ ಅಜ್ಜವಾರ ಗೇಟ್ ಬಳಿ ಗುರುವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ನಾಲ್ವರು ಯುವಕರ ಕುಟುಂಬಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಲಾ 5 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಿದ್ದಾರೆ.
ಅಜ್ಜವಾರ ಗ್ರಾಮದ ನಿವಾಸಿಗಳಾದ ಮನೋಜ್, ನರಸಿಂಹಮೂರ್ತಿ, ನಂದೀಶ್ ಹಾಗೂ ಅರುಣ್ ಎಂಬ ಸ್ನೇಹಿತರು ಕ್ರಿಸ್‌ಮಸ್ ಅಂಗವಾಗಿ ನಗರದ ಚರ್ಚ್‌ಗೆ ಭೇಟಿ ಒಂದೇ ಬೈಕ್‌ನಲ್ಲಿ ಗ್ರಾಮಕ್ಕೆ ವಾಪಸಾಗುತ್ತಿದ್ದ ವೇಳೆ, ಶಿಡ್ಲಘಟ್ಟ ಕಡೆಯಿಂದ ಅತೀ ವೇಗವಾಗಿ ಬಂದ ಟಿಪ್ಪರ್ ಲಾರಿ ಅಜ್ಜವಾರ ಗೇಟ್ ಸಮೀಪ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ನಾಲ್ವರೂ ಯುವಕರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಮೃತರ ಪೈಕಿ ನರಸಿಂಹಮೂರ್ತಿ ಎಂಬುವವರು ಕೇವಲ ಆರು ತಿಂಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದರು. ಮೃತರೆಲ್ಲರೂ ಬಡ ಕುಟುಂಬದವರಾಗಿದ್ದು, ಮನೆಯ ಆಧಾರಸ್ತಂಭಗಳನ್ನೇ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್ ಮೃತರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದು, ಅಂತ್ಯಕ್ರಿಯೆಗೆ ವೈಯಕ್ತಿಕ ಆರ್ಥಿಕ ನೆರವು ನೀಡುವುದರ ಜೊತೆಗೆ ಕುಟುಂಬದ ಸದಸ್ಯರಿಗೆ ಉದ್ಯೋಗ ಕೊಡಿಸುವ ಭರವಸೆ ನೀಡಿದ್ದಾರೆ. ಸದ್ಯ ಟಿಪ್ಪರ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚಿತ್ರದುರ್ಗದಲ್ಲಿ ಕೆನ್ನಾಲಿಗೆ ಚಾಚಿದ ಬೆಂಕಿ; ಏಳು ಸಾವು:
ಇನ್ನೊಂದು ಭೀಕರ ಘಟನೆಯಲ್ಲಿ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸಮೀಪದ ಗೊರ್ಲತ್ತು ಕ್ರಾಸ್ ಬಳಿ ಗುರುವಾರ ಮುಂಜಾನೆ ಸಂಭವಿಸಿದ ಬಸ್ ಅಪಘಾತದಲ್ಲಿ ಏಳು ಜನರು ಮೃತಪಟ್ಟಿದ್ದಾರೆ. ಬೆಂಗಳೂರಿನಿಂದ ಗೋಕರ್ಣಕ್ಕೆ 33 ಪ್ರಯಾಣಿಕರೊಂದಿಗೆ ತೆರಳುತ್ತಿದ್ದ ಸೀಬರ್ಡ್ ಎಕ್ಸಿಕ್ಯೂಟಿವ್ ಸ್ಲೀಪರ್ ಬಸ್‌ಗೆ, ಎದುರಿನಿಂದ ಬಂದ ಕಂಟೈನರ್ ಲಾರಿಯೊಂದು ಡಿವೈಡರ್ ದಾಟಿ ನೇರವಾಗಿ ಡಿಕ್ಕಿ ಹೊಡೆದಿತ್ತು.
ಡಿಕ್ಕಿಯ ರಭಸಕ್ಕೆ ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಇಡೀ ವಾಹನ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಲಾರಿ ಚಾಲಕನ ಅಜಾಗರೂಕತೆಯೇ ಈ ಭೀಕರ ಅವಘಡಕ್ಕೆ ಕಾರಣ ಎನ್ನಲಾಗಿದ್ದು, ಮೃತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಹಬ್ಬದ ಸಂಭ್ರಮದ ನಡುವೆಯೇ ರಾಜ್ಯದ ಈ ಎರಡು ಪ್ರತ್ಯೇಕ ಅಪಘಾತಗಳು ತೀವ್ರ ಶೋಕವನ್ನುಂಟು ಮಾಡಿವೆ.

