
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಸ್ ಚಾಲಕ ಮಹಮದ್ ರಫೀಕ್ ಇಂದು ಮೃತಪಟ್ಟಿದ್ದಾರೆ.
ಚಿತ್ರದುರ್ಗ ಬಸ್ ಅಪಘಾತ|ಚಿಕಿತ್ಸೆ ಫಲಿಸದೇ ಚಾಲಕ ಸಾವು, ಮೃತರ ಸಂಖ್ಯೆ 7ಕ್ಕೆ ಏರಿಕೆ
ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಸೀಬರ್ಡ್ ಟ್ರಾವೆಲ್ಸ್ ಬಸ್‌ಗೆ ವೇಗವಾಗಿ ಬಂದ ಕಂಟೈನರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬಸ್ ಬೆಂಕಿಗಾಹುತಿಯಾಗಿತ್ತು.
ಚಿತ್ರದುರ್ಗದ ಹಿರಿಯೂರು ಬಳಿ ನಡೆದ ಭೀಕರ ಬಸ್ ಅಪಘಾತದಲ್ಲಿ ಮೃತಪಟ್ಟವರು ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಗಂಭೀರವಾಗಿ ಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೀಬರ್ಡ್ ಟ್ರಾವೆಲ್ಸ್ ಬಸ್ ಚಾಲಕ ಮಹಮದ್ ರಫೀಕ್ ಅವರು ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ. ಇದರೊಂದಿಗೆ ದುರಂತದಲ್ಲಿ ಬಲಿಯಾದವರ ಒಟ್ಟು ಸಂಖ್ಯೆ 7ಕ್ಕೆ ಏರಿಕೆಯಾಗಿದೆ.
ಘಟನೆ ವಿವರ
ಈ ಭೀಕರ ಘಟನೆಯು ನಿನ್ನೆ ಮುಂಜಾನೆ ಸುಮಾರು 2:30ರ ಸುಮಾರಿಗೆ ಹಿರಿಯೂರು ಸಮೀಪದ ಗೊರ್ಲತ್ತು ಕ್ರಾಸ್ ಬಳಿ ಸಂಭವಿಸಿತ್ತು. ಬೆಂಗಳೂರಿನಿಂದ ಗೋಕರ್ಣಕ್ಕೆ 33 ಪ್ರಯಾಣಿಕರೊಂದಿಗೆ ತೆರಳುತ್ತಿದ್ದ ಸೀಬರ್ಡ್ ಎಕ್ಸಿಕ್ಯೂಟಿವ್ ಸ್ಲೀಪರ್ ಬಸ್‌ಗೆ ಎದುರಿನಿಂದ ಬಂದ ಕಂಟೈನರ್ ಲಾರಿಯೊಂದು ಡಿವೈಡರ್ ದಾಟಿ ನೇರವಾಗಿ ಡಿಕ್ಕಿ ಹೊಡೆದಿತ್ತು. ಈ ಡಿಕ್ಕಿಯ ರಭಸಕ್ಕೆ ಬಸ್‌ಗೆ ಬೆಂಕಿ ಹೊತ್ತಿಕೊಂಡು ಇಡೀ ವಾಹನ ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಈ ಘಟನೆಯಲ್ಲಿ ಈಗಾಗಲೇ ಬಿಂಧು, ಅವರ ನಾಲ್ಕೂವರೆ ವರ್ಷದ ಮಗಳು ಗ್ರೇಯಾ, ಮಾನಸ, ನವ್ಯ, ರಶ್ಮಿ ಮತ್ತು ಕಂಟೈನರ್ ಚಾಲಕ ಮೃತಪಟ್ಟಿದ್ದರು. ಈಗ ಬಸ್ ಚಾಲಕನ ಸಾವಿನೊಂದಿಗೆ ಒಟ್ಟು ಬಲಿ ಸಂಖ್ಯೆ 7ಕ್ಕೆ ತಲುಪಿದೆ.
ಗಾಯಾಳುಗಳಿಗೆ ಮುಂದುವರಿದ ಚಿಕಿತ್ಸೆ
ಪ್ರಸ್ತುತ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಬರ್ನ್ ವಾರ್ಡ್‌ನಲ್ಲಿ ಮಂಜುನಾಥ್, ದೇವಿಕಾ ಮತ್ತು ಕೀರ್ತನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಜುನಾಥ್ ಅವರ ಸ್ಥಿತಿ ಗಂಭೀರವಾಗಿದ್ದು ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದಂತೆ ದೇವಿಕಾ ಮತ್ತು ಕೀರ್ತನ್ ಶೀಘ್ರವೇ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ. ಲಾರಿ ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯವೇ ಈ ಭೀಕರ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಈ ದುರಂತದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಮತ್ತು ಕೇಂದ್ರ ಸರ್ಕಾರ 2 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಿದೆ.

