
ಚಿತ್ರದುರ್ಗ ಅಪಘಾತ: ಸಾವಿನ ಸಂಖ್ಯೆಯಲ್ಲಿ ಗೊಂದಲ- ಐವರು ಸಜೀವ ದಹನ?
ಚಿತ್ರದುರ್ಗದ ಹಿರಿಯೂರು ಬಳಿ ಖಾಸಗಿ ಬಸ್ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಸಜೀವ ದಹನವಾಗಿದ್ದಾರೆ. ಸಾವಿನ ಸಂಖ್ಯೆಯ ಗೊಂದಲ, ಪರಿಹಾರ ಘೋಷಣೆ ಮತ್ತು ಅಪಘಾತದ ಸಂಪೂರ್ಣ ವಿವರ ಇಲ್ಲಿದೆ.
ಚಿತ್ರದುರ್ಗದ ಹಿರಿಯೂರಿನ ಜವರಗೊಂಡ ಬಳಿ ಸಂಭವಿಸಿದ ಭೀಕರ ಅಪಘಾತದ ಸಾವಿನ ಸಂಖ್ಯೆಯಲ್ಲಿ ಭಾರೀ ಗೊಂದಲ ಸೃಷ್ಟಿಯಾಗಿದೆ. ವೇಗವಾಗಿ ಬಂದ ಟ್ರಕ್ ಒಂದು ಖಾಸಗಿ ಸ್ಲೀಪರ್ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್‌ಗೆ ಬೆಂಕಿ ಹೊತ್ತಿಕೊಂಡಿತ್ತು. ಮೊದಲಿಗೆ ಈ ದುರ್ಘಟನೆಯಲ್ಲಿ 15ಕ್ಕೂ ಹೆಚ್ಚು ಪ್ರಯಾಣಿಕರು ಮೃತಪಟ್ಟಿರುವ ಬಗ್ಗೆ ವರದಿಯಾಗಿತ್ತು. ಬಳಿಕ ಬೇರೆ ಬೇರೆ ವರದಿಗಳು ಪ್ರಕಟಗೊಂಡಿದ್ದು, ಸಾವಿನ ಸಂಖ್ಯೆ ಬಗ್ಗೆ ಭಾರೀ ಗೊಂದಲ ಮೂಡಿತು. ಇದೀಗ ಅಪಘಾತದಲ್ಲಿ ಕೇವಲ ಐವರು ವ್ಯಕ್ತಿಗಳು ಸಜೀವ ದಹನಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ.
9 ಜನ ಮೃತ ಎಂದಿದ್ಧ ಐಜಿಪಿ
ಆರಂಭದಲ್ಲಿ ಐಜಿಪಿ ರವಿಕಾಂತೇಗೌಡ ಅವರು 9 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದರು. ಆದರೆ ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಐವರು ಮಾತ್ರ ಸಾವನ್ನಪ್ಪಿದ್ದಾರೆ ಎಂದು ಸ್ಪಷ್ಟಪಡಿಸಿದರು. ಮೃತರಲ್ಲಿ ನಾಲ್ವರು ಬಸ್ ಪ್ರಯಾಣಿಕರು ಮತ್ತು ಟ್ರಕ್ ಚಾಲಕ ಸೇರಿದ್ದಾರೆ. ಮೂವರು ಪ್ರಯಾಣಿಕರು ಬಸ್ಸಿನಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಅವರ ಪತ್ತೆ ಕಾರ್ಯ ನಡೆಯುತ್ತಿದೆ.
ಘಟನೆ ವಿವರ
ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಈ ಬಸ್‌ನಲ್ಲಿ ಒಟ್ಟು 32 ಜನರಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ದಾಟಿ ಬಂದ ಕಂಟೈನರ್ ಲಾರಿಯು ನೇರವಾಗಿ ಬಸ್ಸಿನ ಡೀಸೆಲ್ ಟ್ಯಾಂಕ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಡೀಸೆಲ್ ಸೋರಿಕೆಯಾಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ಬಸ್ಸಿನ ಒಳಗೆ ಸಿಲುಕಿದ ಪ್ರಯಾಣಿಕರು ಸಜೀವ ದಹನವಾಗಿದ್ದಾರೆ.
ಶಾಲಾ ಮಕ್ಕಳ ಬಸ್ ಕೂದಲೆಳೆ ಅಂತರದಲ್ಲಿ ಪಾರು
ಅದೇ ಸಮಯದಲ್ಲಿ ಟಿ. ದಾಸರಹಳ್ಳಿಯಿಂದ ದಾಂಡೇಲಿಗೆ ತೆರಳುತ್ತಿದ್ದ 42 ಶಾಲಾ ಮಕ್ಕಳಿದ್ದ ಮತ್ತೊಂದು ಬಸ್ ಈ ಅಪಘಾತಕ್ಕೀಡಾದ ಬಸ್ಸಿನ ಹಿಂದೆಯೇ ಇತ್ತು. "ಮಕ್ಕಳ ಬಸ್ ಅಪಘಾತಕ್ಕೀಡಾದ ಬಸ್ಸಿನ ಹಿಂಭಾಗಕ್ಕೆ ತಗುಲಿ ರಸ್ತೆಯ ಪಕ್ಕಕ್ಕೆ ಸರಿದಿದೆ. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ" ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳುಗಳ ಸ್ಥಿತಿ
ಅಪಘಾತದಲ್ಲಿ 12 ಮಂದಿ ಗಾಯಗೊಂಡಿದ್ದು, ಒಂಬತ್ತು ಜನರನ್ನು ಶಿರಾ ಮತ್ತು ಮೂವರನ್ನು ತುಮಕೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಸುಟ್ಟ ಗಾಯಗಳಾಗಿದ್ದ ಒಬ್ಬರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪರಿಹಾರ ಘೋಷಣೆ
ಪ್ರಧಾನಿ ನರೇಂದ್ರ ಮೋದಿ: ಘಟನೆಗೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50,000 ರೂ. ಪರಿಹಾರ ಘೋಷಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50,000 ರೂ. ಘೋಷಿಸಿದ್ದು, ಘಟನೆಯ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.
ಡಿ.ಕೆ. ಶಿವಕುಮಾರ್: ಉಪಮುಖ್ಯಮಂತ್ರಿಗಳು ಘಟನೆಗೆ ತೀವ್ರ ಆಘಾತ ವ್ಯಕ್ತಪಡಿಸಿ ಸಂತಾಪ ಸೂಚಿಸಿದ್ದಾರೆ.
ಮೃತರ ಗುರುತು ಪತ್ತೆಗೆ DNA ಪರೀಕ್ಷೆ
ಮೃತರ ಗುರುತು ಪತ್ತೆ ಹಚ್ಚಲು ಡಿಎನ್ಎ (DNA) ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ಭೀಕರತೆಗೆ ಬಸ್ ಮತ್ತು ಟ್ರಕ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಹೆದ್ದಾರಿಯುದ್ದಕ್ಕೂ ವಾಹನದ ಅವಶೇಷಗಳು ಹರಡಿಕೊಂಡಿದ್ದವು.

