
ಅಪಘಾತದ ಸ್ಥಳಕ್ಕೆ ಐಜಿಪಿ ರವಿಕಾಂತಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಿತ್ರದುರ್ಗದಲ್ಲಿ ಬಸ್ ಹೊತ್ತಿ ಉರಿಯಲು ಕಾರಣವೇನು? ಐಜಿಪಿ ರವಿಕಾಂತೇ ಗೌಡ ಹೇಳಿದ್ದೇನು?
ಸೀ ಬರ್ಡ್ ಬಸ್‌ಗೆ ಕಂಟೇನರ್ ಲಾರಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ ಒಂಬತ್ತು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಐಜಿಪಿ ರವಿಕಾಂತೇ ಗೌಡ ಮಾಹಿತಿ ನೀಡಿದ್ದಾರೆ.
ಚಿತ್ರದುರ್ಗದಲ್ಲಿ 9ಜನರು ಸಜೀವ ದಹನಗೊಂಡ ಭೀಕರ ಬಸ್ ಅಪಘಾತದ ಸ್ಥಳಕ್ಕೆ ದಾವಣಗೆರೆ ಪೂರ್ವ ವಲಯದ ಪೊಲೀಸ್ ಮಹಾ ನಿರೀಕ್ಷಕ (ಐಜಿಪಿ) ಡಾ.ಬಿ.ಆರ್. ರವಿಕಾಂತೇಗೌಡ ಅವರು ಇಂದು ಬೆಳಗ್ಗೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಸೀ ಬರ್ಡ್ ಖಾಸಗಿ ಬಸ್‌ಗೆ ಕಂಟೇನರ್ ಲಾರಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ ಒಂಬತ್ತು ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ದುರ್ಘಟನೆಗೆ ಕಾರಣ ಏನು?
"ಬೆಂಗಳೂರಿನಿಂದ ಬರುತ್ತಿದ್ದ ಕಂಟೇನರ್ ಬಸ್‌ನ ಡೀಸೆಲ್ ಟ್ಯಾಂಕ್‌ಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ಕ್ಷಣಮಾತ್ರದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಬಸ್‌ನಲ್ಲಿದ್ದವರು ಸುಧಾರಿಸಿಕೊಳ್ಳುವ ಮುನ್ನವೇ ಈ ಮಹಾ ದುರಂತ ಸಂಭವಿಸಿದೆ. ಆ ಸಮಯದಲ್ಲಿ ಪ್ರಯಾಣಿಕರು ಗಾಢ ನಿದ್ದೆಯಲ್ಲಿದ್ದ ಕಾರಣ, ಕೆಲವರು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ದಾರುಣವಾಗಿ ಬಲಿಯಾಗಿದ್ದಾರೆ ಎಂದು ರವಿಕಾಂತಗೌಡ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಬಳಿ ಗುರುವಾರ ನಸುಕಿನ ಜಾವ ನಡೆದ ಭೀಕರ ರಸ್ತೆ ಅಪಘಾತದ ಕುರಿತು ಅವರು ಪ್ರಾಥಮಿಕ ತನಿಖಾ ವರದಿಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಘಟನೆಯಲ್ಲಿ ಅದೃಷ್ಟವಶಾತ್ ಕೆಲವರು ಪ್ರಾಣಾಪಾಯದಿಂದ ಪಾರಾಗಿದ್ದರೆ, ಕಂಟೇನರ್ ಚಾಲಕ ಸೇರಿದಂತೆ ಒಟ್ಟು ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ಅವರು ವಿವರಿಸಿದರು.
ಕ್ರಿಸ್ಮಸ್ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರಿಂದ ತುಂಬಿದ್ದ ಖಾಸಗಿ ಬಸ್, ಬುಧವಾರ ರಾತ್ರಿ 10. 30ರ ಸುಮಾರಿಗೆ ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿತ್ತು. ಗುರುವಾರ ಬೆಳಗಿನ ಜಾವ ಸುಮಾರು 2 ಗಂಟೆಯ ವೇಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಾಗ, ಎದುರುಗಡೆಯಿಂದ ಅತಿವೇಗವಾಗಿ ಬಂದ ಕಂಟೇನರ್ ಡಿವೈಡರ್ ಹಾರಿ ಬಂದು ಬಸ್‌ಗೆ ಅಪ್ಪಳಿಸಿದೆ. ಐಜಿಪಿ ಅವರು ತಿಳಿಸಿದಂತೆ, ಡಿಕ್ಕಿಯ ರಭಸಕ್ಕೆ ಡೀಸೆಲ್ ಟ್ಯಾಂಕ್ ಒಡೆದು ಬೆಂಕಿ ಹೊತ್ತಿಕೊಂಡಿದ್ದರಿಂದ ಸಾವು-ನೋವಿನ ಪ್ರಮಾಣ ಹೆಚ್ಚಾಗಲು ಕಾರಣವಾಯಿತು.
24 ಮಂದಿಗೆ ಗಾಯ: ಜಿಲ್ಲಾಡಳಿತ ಮಾಹಿತಿ
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಚಿತ್ರದುರ್ಗ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅವರು ರಕ್ಷಣಾ ಕಾರ್ಯದ ನೇತೃತ್ವ ವಹಿಸಿದ್ದರು. "ಘಟನೆಯಲ್ಲಿ ಗಾಯಗೊಂಡಿರುವ 24 ಮಂದಿಯನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದೆ. ಮೃತಪಟ್ಟವರ ದೇಹಗಳು ಸುಟ್ಟು ಕರಕಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು," ಎಂದು ಅವರು ತಿಳಿಸಿದರು.
ಪ್ರಧಾನಿಯಿಂದ ಪರಿಹಾರ, ರಾಷ್ಟ್ರಪತಿಗಳ ಸಂತಾಪ
ಈ ಹೃದಯವಿದ್ರಾವಕ ಘಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಕಂಬನಿ ಮಿಡಿದಿದ್ದಾರೆ. ಮೃತರ ಕುಟುಂಬಗಳಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರವನ್ನು ಪ್ರಧಾನಿ ಮೋದಿ ಘೋಷಿಸಿದ್ದಾರೆ.
ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, "ಊರಿಗೆ ತೆರಳುತ್ತಿದ್ದವರ ಪ್ರಯಾಣ ಹೀಗೆ ದುರಂತದಲ್ಲಿ ಅಂತ್ಯವಾಗಿರುವುದು ನೋವಿನ ಸಂಗತಿ. ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾರಣ ಪತ್ತೆಹಚ್ಚಲಾಗುವುದು," ಎಂದು ತಿಳಿಸಿದ್ದಾರೆ.

