
ಮಗಳ ಮದುವೆ ಕನಸು ಕಂಡಿದ್ದ ತಂದೆಯ ರೋದನ: ಬಸ್ ಅವಘಡದಲ್ಲಿ ಮಡಿದ ನವ್ಯಾ ಪೋಷಕರ ಆಕ್ರಂದನ
ನವ್ಯ ಅವರ ತಂದೆ ಮಂಜಪ್ಪ, ಚನ್ನಪಟ್ಟಣದಲ್ಲಿ ಚಿಕ್ಕ ಕ್ಯಾಂಟೀನ್ ನಡೆಸುತ್ತಿದ್ದಾರೆ. ಓದು ಮುಗಿಸಿದ ಮಗಳಿಗೆ ಕೆಲಸ ಸಿಕ್ಕಿರುವುದನ್ನು ಜೀವನದ ದೊಡ್ಡ ಸಾಧನೆ ಎಂದು ಅಂದುಕೊಂಡಿದ್ದರು.
"ಅಪ್ಪ ಊಟ ಆಯ್ತಾ?" ಎಂದು ರಾತ್ರಿ ಫೋನ್‌ನಲ್ಲಿ ಪ್ರೀತಿಯಿಂದ ಕೇಳಿದ್ದ ಮಗಳ ದನಿ ಇನ್ಯಾವತ್ತೂ ಕೇಳಿಸುವುದಿಲ್ಲ ಎಂದು ಆ ತಂದೆಗೆ ತಿಳಿದಿರಲಿಲ್ಲ. ಏಪ್ರಿಲ್‌ನಲ್ಲಿ ಮದುವೆ ನಿಶ್ಚಯವಾಗಿ, ಬಂಗಾರ ಖರೀದಿಸಿ, ಹಾಲ್ ಬುಕ್ ಮಾಡಿ ಸಂಭ್ರಮದಲ್ಲಿದ್ದ ಮನೆಯೀಗ ಸ್ಮಶಾನ ಮೌನಕ್ಕೆ ಜಾರಿದೆ. ಚಿತ್ರದುರ್ಗದ ಹಿರಿಯೂರು ಬಳಿ ನಡೆದ ಬಸ್‌ಗೆ ಬೆಂಕಿ ಬಿದ್ದು ಸುಟ್ಟು ಹೋದ ಪ್ರಕರಣದಲ್ಲಿ ಸುಟ್ಟು ಕರಕಲಾಗಿರುವ ನವ್ಯ ಮಂಜಪ್ಪಣ್ಣ ಅವರ ಮನೆಯರ ರೋದನವಿದು.
ನವ್ಯಾ ಅವರ ತಂದೆ ಮಾತನಾಡಿರುವ ವಿಡಿಯೊ ಇಲ್ಲಿದೆ
ಏತನ್ಮಧ್ಯೆ, ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿನ ದೃಶ್ಯ ಮನಕಲಕುವಂತಿದೆ. ಇಲ್ಲಿ 5 ಮೃತದೇಹಗಳನ್ನು ಇರಿಸಲಾಗಿದ್ದು, ಅವು ಬೆಂಕಿಯ ತೀವ್ರತೆಗೆ ಸಂಪೂರ್ಣ ಸುಟ್ಟು ಕರಕಲಾಗಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ವೈದ್ಯರು ಡಿಎನ್‌ಎ ಪರೀಕ್ಷೆಯ ಮೊರೆ ಹೋಗಿದ್ದಾರೆ. ಮೃತ ರಶ್ಮಿ ಮತ್ತು ನವ್ಯಾ ಅವರ ಕುಟುಂಬಸ್ಥರು ಆಸ್ಪತ್ರೆಗೆ ದೌಡಾಯಿಸಿದ್ದು, ಅವರಿಂದ ರಕ್ತದ ಮಾದರಿ ಸಂಗ್ರಹಿಸಲಾಗಿದೆ.
ದುಃಖದ ಮಡುವಿನಲ್ಲಿ ನವ್ಯಾ ತಂದೆ
ಮೃತ ನವ್ಯಾ ಅವರ ತಂದೆ ಮಂಜಪ್ಪ ಅವರ ಆಕ್ರಂದನ ಅಲ್ಲಿ ನೆರೆದಿದ್ದವರ ಕಣ್ಣಂಚಲ್ಲಿ ನೀರು ತರಿಸುತ್ತಿದೆ. "ಬಹಳ ಕಷ್ಟಪಟ್ಟು ಮಗಳನ್ನು ಓದಿಸಿದ್ದೆ. ಬಿಇ ಮುಗಿಸಿ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಕೆಲಸ ಮಾಡುತ್ತಿದ್ದಳು. ೨೦೨೬ರ ಏಪ್ರಿಲ್‌ನಲ್ಲಿ ಮದುವೆ ಫಿಕ್ಸ್ ಆಗಿತ್ತು. ಎಲ್ಲಾ ತಯಾರಿ ನಡೆಸಿದ್ವಿ. ರಜೆ ಇದೆ ಎಂದು ಫ್ರೆಂಡ್ಸ್ ಜೊತೆ ಗೋಕರ್ಣಕ್ಕೆ ಹೋಗ್ತೀನಿ ಅಂತ ಹೇಳಿದ್ಲು. ಭಾನುವಾರ ಬರ್ತೀನಿ ಅಂತ ಹೋದವಳು ಈಗ ಹೆಣವಾಗಿ ಕಂಡಿದ್ದಾಳೆ," ಎಂದು ಅವರು ಬಿಕ್ಕಳಿಸುತ್ತಿದ್ದಾರೆ.
ನವ್ಯ–ಮಾನಸ: ಗುರುತು ಸಿಗದ ಅಸ್ಥಿಪಂಜರಗಳು
ಮೃತದೇಹಗಳನ್ನು ಗುರುತಿಸುವ ಕೆಲಸವೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಬಿಂದು, ಗ್ರೇಯ, ಮಾನಸ, ನವ್ಯ ಮತ್ತು ರಶ್ಮಿ ಮಹಲೆ ಎಂಬ ಐವರ ಶವಗಳು ಪೂರ್ಣವಾಗಿ ಸುಟ್ಟು ಕರಕಲಾಗಿದ್ದರಿಂದ ಆರಂಭಿಕವಾಗಿ ಯಾರದು ಯಾವ ಶವ ಎಂಬುದು ಸ್ಪಷ್ಟವಾಗಿರಲಿಲ್ಲ. ಇವರಲ್ಲಿ ಬಿಂದು, ಗ್ರೇಯ ಮತ್ತು ರಶ್ಮಿ ಮಹಲೆ ಇವರ ಶವಗಳನ್ನು ಕುಟುಂಬಸ್ಥರು ಗುರುತಿಸಿದ್ದಾರೆ. ನವ್ಯ ಹಾಗೂ ಮಾನಸ ಅವರ ಶವಗಳು ಗುರುತು ಸಿಗದ ಸ್ಥಿತಿಯಲ್ಲಿಯೇ ಉಳಿದಿವೆ.
ಇಬ್ಬರ ಪೋಷಕರನ್ನೂ ಆಸ್ಪತ್ರೆಗೆ ಕರೆಯಿಸಿ ಶವಗಳನ್ನು ತೋರಿಸಲಾಯಿತಾದರೂ, ಸುಟ್ಟ ಸ್ಥಿತಿ ಭೀಕರವಾಗಿರುವುದರಿಂದ ಅವರು ಯಾರದೆಂದು ಖಚಿತಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ, ಪೊಲೀಸರು ಮತ್ತು ತಜ್ಞ ವೈದ್ಯರು ನವ್ಯ ಹಾಗೂ ಮಾನಸ ಇವರ ಅಸ್ಥಿಪಂಜರದಿಂದ ಮೂಳೆ ಮಾದರಿಗಳನ್ನು ಸಂಗ್ರಹಿಸಿದ್ದು, ಸಂಬಂಧಿಕರ ರಕ್ತದ ಮಾದರಿಗಳೊಂದಿಗೆ ಡಿಎನ್‌ಎ ಪರೀಕ್ಷೆಗೆ ಕಳುಹಿಸುವ ನಿರ್ಧಾರ ಕೈಗೊಂಡಿದ್ದಾರೆ. ಡಿಎನ್‌ಎ ವರದಿ ಬಂದ ನಂತರವೇ, ಈ ಎರಡು ಅಸ್ಥಿಪಂಜರಗಳಲ್ಲಿ ಯಾವುದು ನವ್ಯದು, ಯಾವುದು ಮಾನಸದದ್ದು ಎಂಬುದು ಅಧಿಕೃತವಾಗಿ ದೃಢಪಡಲಿದೆ.
ಗೋಕರ್ಣಕ್ಕೆ ಹೊರಟಿದ್ದ ಮೂವರು ಸ್ನೇಹಿತೆಯರಲ್ಲಿ, ಹಿಂತಿರುಗಿದ್ದು ಒಬ್ಬಳೇ
ಟೆಕ್ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ನವ್ಯ ಕಳೆದ ಎರಡು ವರ್ಷಗಳಿಂದ ತನ್ನ ಹೆತ್ತೂರು ಬಿಟ್ಟು ಬೆಂಗಳೂರಿನಲ್ಲಿ ಮಿಲನ ಮತ್ತು ಮಾನಸ ಎಂಬ ಇಬ್ಬರು ಸ್ನೇಹಿತೆಯರೊಂದಿಗೆ ವಾಸಿಸುತ್ತಿದ್ದರು. ಡಿಸೆಂಬರ್ 24ರ ಸಂಜೆ ಏಳು ಗಂಟೆ ಸುಮಾರಿಗೆ ತಾಯಿಯೊಂದಿಗೆ ಆತ್ಮೀಯವಾಗಿ ಫೋನ್‌ನಲ್ಲಿ ಮಾತನಾಡಿದ್ದ ನವ್ಯ, ಬಳಿಕ ಮಿಲನ ಮತ್ತು ಮಾನಸದೊಂದಿಗೆ ಗೋಕರ್ಣ, ಮುರುಡೇಶ್ವರ ಮತ್ತು ಸಿಗಂದೂರು ದರ್ಶನಕ್ಕಾಗಿ ಪ್ರವಾಸಕ್ಕೆ ಹೊರಟಿದ್ದರು. ದುರಂತದಲ್ಲಿ ಮೂವರು ಗೆಳತಿಯರಲ್ಲಿ ಕೇವಲ ಮಿಲನ ಮಾತ್ರ ಪ್ರಾಣಾಪಾಯದಿಂದ ಪಾರಾಗಿದ್ದಾಳೆ
ಮಗಳ ಶವವೂ ಗುರುತಿಸಲಾಗದ ತಂದೆಯ ನೋವು
ನವ್ಯ ಅವರ ತಂದೆ ಮಂಜಪ್ಪ, ಚನ್ನಪಟ್ಟಣದಲ್ಲಿ ಚಿಕ್ಕ ಕ್ಯಾಂಟೀನ್ ನಡೆಸುತ್ತಿದ್ದಾರೆ. ಓದು ಮುಗಿಸಿದ ಮಗಳಿಗೆ ಕೆಲಸ ಸಿಕ್ಕಿರುವುದನ್ನು ಜೀವನದ ದೊಡ್ಡ ಸಾಧನೆ ಎಂದು ಅಂದುಕೊಂಡಿದ್ದ ಅವರೀಗ ಈಗ ಮಗಳ ಮುಖವೂ ಕಾಣದ ಸ್ಥಿತಿ ಎದುರಾಗಿದೆ. ಶವ ಗುರುತಿಸುವ ಸಲುವಾಗಿ ಅವರನ್ನು ತುರ್ತಾಗಿ ಚಿತ್ರದುರ್ಗಕ್ಕೆ ಕರೆಯಿಸಲಾಗಿತ್ತು . ಆದರೆ, ಮಂಜಪ್ಪ ಮತ್ತು ಅವರ ಪತ್ನಿ ಇಬ್ಬರೂ ಅಸ್ಥಿಪಂಜರಗಳನ್ನು ನೋಡಿದ್ದರೂ 'ಇದು ನಮ್ಮ ಮಗಳದೇ' ಎಂದು ಹೇಳಲು ಸಾಧ್ಯವಾಗುತ್ತಿಲ್ಲ.
"ಮಗಳ ಭವಿಷ್ಯಕ್ಕಾಗಿ ದಿನರಾತ್ರಿ ಕಷ್ಟಪಟ್ಟು ಕ್ಯಾಂಟೀನ್ ನೋಡಿಕೊಂಡೆ. ಅವಳ ಮದುವೆ ಕನಸು ಕಂಡೇ ಬದುಕುತ್ತಿದ್ದೆವು. ಆದರೆ ಇಂದು ಮನೆ ಖಾಲಿ, ಮನಸ್ಸು ಬರಿದಾಗಿದೆ," ಎಂದು ಮಂಜಪ್ಪ ಗೋಳಾಡುತ್ತಿರುವ ದೃಶ್ಯ ನೋಡುಗರ ಕಣ್ಣಲ್ಲೂ ನೀರು ತರಿಸುವಂತಿದೆ
ಏನಿದು ಘಟನೆ?
ಡಿಸೆಂಬರ್ 24ರಂದು (ಬುಧವಾರ) ನಸುಕಿನ ಜಾವ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೆ.ಆರ್.ಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಈ ಭೀಕರ ಅಪಘಾತ ಸಂಭವಿಸಿತ್ತು. ಬೆಂಗಳೂರಿನಿಂದ ಗೋಕರ್ಣದತ್ತ ಹೊರಟಿದ್ದ 'ಸೀಬರ್ಡ್' ಖಾಸಗಿ ಬಸ್‌ಗೆ, ಎದುರು ರಸ್ತೆಯ ಡಿವೈಡರ್ ಹಾರಿ ಬಂದ ಕಂಟೈನರ್ ಲಾರಿ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ಬಸ್‌ನ ಡೀಸೆಲ್ ಟ್ಯಾಂಕ್ ಒಡೆದು ಕ್ಷಣಾರ್ಧದಲ್ಲಿ ಬಸ್ ಸಂಪೂರ್ಣ ಬೆಂಕಿಗಾಹುತಿಯಾಗಿತ್ತು. ಈ ದುರಂತದಲ್ಲಿ ಹಲವರು ಸಜೀವ ದಹನವಾಗಿದ್ದು, ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
40 ಮಕ್ಕಳ ಜೀವ ಉಳಿಸಿದ ಚಾಲಕನ ಸಮಯಪ್ರಜ್ಞೆ
ಈ ಭೀಕರ ದುರಂತದ ನಡುವೆಯೂ ಒಂದು ಪವಾಡ ನಡೆದಿದೆ. ಅಪಘಾತಕ್ಕೀಡಾದ ಬಸ್‌ನ ಹಿಂದೆಯೇ 40 ಶಾಲಾ ಮಕ್ಕಳಿದ್ದ ಮತ್ತೊಂದು ಬಸ್ ಬರುತ್ತಿತ್ತು. ಕಂಟೈನರ್ ಲಾರಿ ಬಸ್‌ಗೆ ಡಿಕ್ಕಿ ಹೊಡೆದ ತಕ್ಷಣ, ಹಿಂದಿನ ಬಸ್‌ನ ಚಾಲಕ ಸಚಿನ್ ಅವರು ಸಮಯಪ್ರಜ್ಞೆ ಮೆರೆದಿದ್ದಾರೆ. ತಕ್ಷಣವೇ ತಮ್ಮ ಬಸ್ ಅನ್ನು ರಸ್ತೆ ಬದಿಯ ತಗ್ಗು ಪ್ರದೇಶಕ್ಕೆ ಇಳಿಸಿ ನಿಲ್ಲಿಸುವ ಮೂಲಕ 40 ಶಾಲಾ ಮಕ್ಕಳ ಪ್ರಾಣ ಉಳಿಸಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಪ್ರಾಣದ ಹಂಗು ತೊರೆದು ಉರಿಯುತ್ತಿದ್ದ ಬಸ್‌ನತ್ತ ಓಡಿ ಹೋಗಿ, ಕಿಟಕಿ ಗಾಜು ಒಡೆದು ಸುಮಾರು 9 ಜನರನ್ನು ಹೊರಗೆ ಎಳೆದು ರಕ್ಷಿಸಿದ್ದಾರೆ. ಅವರ ಈ ಸಾಹಸಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

