ಚಿತ್ರದುರ್ಗ ಬಸ್‌ ಅಪಘಾತ| 40 ಮಕ್ಕಳನ್ನು ಉಳಿಸಿ, ಉರಿಯುವ ಬಸ್‌ನಿಂದ 9 ಜೀವಗಳನ್ನು ರಕ್ಷಿಸಿದ ರಿಯಲ್ ಹೀರೊ
x

ಸಾವಿನ ದವಡೆಯಿಂದ 'ಗ್ರೇಟ್ ಎಸ್ಕೇಪ್' ಘಟನೆಯ ಕುರಿತು 'ದ ಫೆಡರಲ್ ಕರ್ನಾಟಕ'ದೊಂದಿಗೆ ಮಾತನಾಡಿದ ಚಾಲಕ, ಅಂದಿನ ಭೀಕರ ಕ್ಷಣಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

ಚಿತ್ರದುರ್ಗ ಬಸ್‌ ಅಪಘಾತ| 40 ಮಕ್ಕಳನ್ನು ಉಳಿಸಿ, ಉರಿಯುವ ಬಸ್‌ನಿಂದ 9 ಜೀವಗಳನ್ನು ರಕ್ಷಿಸಿದ ರಿಯಲ್ ಹೀರೊ

ಮಕ್ಕಳನ್ನು ಸುರಕ್ಷಿತವಾಗಿ ಇಳಿಸಿದ ತಕ್ಷಣ ಚಾಲಕ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಬೆಂಕಿ ಹೊತ್ತಿಕೊಂಡಿದ್ದ ಸೀಬರ್ಡ್ ಬಸ್‌ನಿಂದ ಓಡಿಹೋಗಿ ಗಾಜನ್ನು ಒಡೆದು ಒಳಗೆ ಸಿಲುಕಿದ್ದ ಒಂಬತ್ತು ಜನರನ್ನು ಅವರು ರಕ್ಷಣೆ ಮಾಡಿದ್ದಾರೆ.


Click the Play button to hear this message in audio format

ಎದುರಿಗೆ ಕಂಡಿದ್ದು ಸಾವಿನ ಕೆನ್ನಾಲಿಗೆ.. ಕ್ಷಣಮಾತ್ರದಲ್ಲಿ ಕಣ್ಣೆದುರೇ ಭೀಕರ ಅನಾಹುತ.. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಧೈರ್ಯಗೆಡದ ಚಾಲಕರೊಬ್ಬರ ಸಮಯಪ್ರಜ್ಞೆ ಮತ್ತು ಸಾಹಸದಿಂದಾಗಿ 40 ಶಾಲಾ ಮಕ್ಕಳ ಪ್ರಾಣ ಉಳಿದಿದೆ. ಅಷ್ಟೇ ಅಲ್ಲ, ಬೆಂಕಿಯ ಚೆಂಡಾಗಿದ್ದ ಬಸ್‌ನಿಂದ ಒಂಬತ್ತು ಪ್ರಯಾಣಿಕರನ್ನು ರಕ್ಷಿಸುವ ಮೂಲಕ ಚಾಲಕ ಸಚಿನ್​​ ಮಾನವೀಯತೆ ಮೆರೆದಿದ್ದಾರೆ.

ಚಿತ್ರದುರ್ಗದಲ್ಲಿ ನಡೆದ ಭೀಕರ ರಸ್ತೆ ಅಪಘಾತದ ವೇಳೆ ದಾಂಡೇಲಿಗೆ ಪ್ರವಾಸಕ್ಕೆ ಹೊರಟಿದ್ದ ಶಾಲಾ ಮಕ್ಕಳ ಬಸ್‌ ಚಾಲಕ ತೋರಿದ ಈ ಚಾಕಚಕ್ಯತೆ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸಾವಿನ ದವಡೆಯಿಂದ ಪಾರಾದ ಈ 'ಗ್ರೇಟ್ ಎಸ್ಕೇಪ್' ಘಟನೆಯ ಕುರಿತು 'ದ ಫೆಡರಲ್ ಕರ್ನಾಟಕ' ಜೊತೆಗೆ ಮಾತನಾಡಿದ ಅವರು, ಕರಾಳ ಕ್ಷಣಗಳನ್ನು ನೆನೆದು ಕಣ್ಣೀರಿಟ್ಟರು.
'ದ ಫೆಡರಲ್ ಕರ್ನಾಟಕ' ಚಾಲಕನೊಂದಿಗೆ ನಡೆಸಿದ ಸಂದರ್ಶನದ ವಿಡಿಯೋ ಇಲ್ಲಿದೆ.

ಕ್ಷಣಾರ್ಧದಲ್ಲಿ ಪಾರಾದ ಮಕ್ಕಳು: ಘಟನೆ ನಡೆದಿದ್ದು ಹೀಗೆ

"ನಾನು ಬಸ್‌ನಲ್ಲಿ 40 ಮಕ್ಕಳನ್ನು ಕರೆದುಕೊಂಡು ದಾಂಡೇಲಿಗೆ ಹೋಗುತ್ತಿದ್ದೆ. ಸೀಬರ್ಡ್ ಬಸ್ ನನ್ನ ವಾಹನವನ್ನು ಓವರ್‌ಟೇಕ್ ಮಾಡಿ ಸುಮಾರು 80 ಅಡಿ ಮುಂದೆ ಹೋಗಿತ್ತು. ಅಷ್ಟರಲ್ಲಿ, ಎದುರುಗಡೆಯಿಂದ ಅತಿವೇಗವಾಗಿ ಬಂದ ಕಂಟೇನರ್ ಡಿವೈಡರ್ ಹಾರಿ ನೇರವಾಗಿ ಸೀಬರ್ಡ್ ಬಸ್ಸಿಗೆ ಡಿಕ್ಕಿ ಹೊಡೆಯಿತು. ಆ ಕ್ಷಣ ನಾನು ಮಧ್ಯದ ಲೇನ್‌ನಲ್ಲಿದ್ದೆ. ಅಪಾಯದ ಮುನ್ಸೂಚನೆ ಸಿಗುತ್ತಿದ್ದಂತೆಯೇ ತಕ್ಷಣ ಎಚ್ಚೆತ್ತು ಬಸ್ಸನ್ನು ಎಡಕ್ಕೆ ತಿರುಗಿಸಿದೆ. ಅಷ್ಟರಲ್ಲಿ ಅಪಘಾತಕ್ಕೀಡಾದ ಬಸ್ ನನ್ನ ವಾಹನಕ್ಕೆ ಸ್ವಲ್ಪ ತಗುಲಿತ್ತು. ಆದರೂ ಧೈರ್ಯಗುಂದದೆ ಸ್ಟೀರಿಂಗ್ ನಿಯಂತ್ರಿಸಿ, ಸರ್ವಿಸ್ ರಸ್ತೆಯ ಎಡಭಾಗಕ್ಕೆ ಬಸ್ಸನ್ನು ಸುರಕ್ಷಿತವಾಗಿ ನಿಲ್ಲಿಸಿದೆ. ನನ್ನ ಸಮಯಪ್ರಜ್ಞೆಯಿಂದ ಬಸ್ಸಿನಲ್ಲಿದ್ದ ಎಲ್ಲ ಮಕ್ಕಳು ಸುರಕ್ಷಿತವಾಗಿ ಉಳಿದರು," ಎಂದು ಚಾಲಕ ನಿಟ್ಟುಸಿರು ಬಿಟ್ಟರು.

ಪ್ರಾಣದ ಹಂಗು ತೊರೆದು 9 ಜನರ ರಕ್ಷಣೆ

ತಮ್ಮ ಬಸ್ಸಿನಲ್ಲಿದ್ದ ಮಕ್ಕಳನ್ನು ಸುರಕ್ಷಿತವಾಗಿ ಇಳಿಸಿದ ತಕ್ಷಣ ಚಾಲಕ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಮಾನವೀಯತೆ ಅವರಲ್ಲಿ ಜಾಗೃತವಾಯಿತು. ಬೆಂಕಿ ಹೊತ್ತಿ ಉರಿಯುತ್ತಿದ್ದ ಸೀಬರ್ಡ್ ಬಸ್ಸಿನತ್ತ ಓಡಿದ ಅವರು, ಪ್ರಾಣದ ಹಂಗು ತೊರೆದು ರಕ್ಷಣಾ ಕಾರ್ಯಕ್ಕಿಳಿದರು.

"ನಾನು ಓಡಿಹೋಗಿ ಬಸ್ಸಿನ ಗಾಜನ್ನು ಒಡೆದು ಒಳಗೆ ಸಿಲುಕಿದ್ದ ಒಂಬತ್ತು ಜನರನ್ನು ಒಬ್ಬೊಬ್ಬರನ್ನಾಗಿ ಎಳೆದು ಹೊರಹಾಕಿದೆ. ಆ ವೇಳೆ ಅಲ್ಲಿಗೆ ಬಂದ ಮತ್ತೊಬ್ಬ ವ್ಯಕ್ತಿಯೂ ನನಗೆ ಸಾಥ್ ನೀಡಿದರು. ಆದರೆ, ನಮ್ಮ ಕಣ್ಣೆದುರೇ ನೋಡನೋಡುತ್ತಿದ್ದಂತೆಯೇ ಇಡೀ ಬಸ್ ಬೆಂಕಿಗೆ ಆಹುತಿಯಾಯಿತು," ಎಂದು ಅವರು ಘಟನೆಯ ತೀವ್ರತೆಯನ್ನು ವಿವರಿಸಿದರು.

'ನನ್ನ ಮಗು ಎಲ್ಲಿದೆ?' ತಾಯಿಯ ಆಕ್ರಂದನ

ಅಪಘಾತದ ಭೀಕರತೆ ಎಷ್ಟಿತ್ತೆಂದರೆ, ಬೆಂಕಿಯ ಜ್ವಾಲೆ ಎಲ್ಲವನ್ನೂ ಆವರಿಸಿತ್ತು. "ಬಸ್ಸಿನಿಂದ ಹೇಗೋ ಹೊರಬಂದ ಮಹಿಳೆಯೊಬ್ಬರು 'ನನ್ನ ಮಗು ಒಳಗಿದೆ, ಕಾಪಾಡಿ' ಎಂದು ಕಿರುಚುತ್ತಿದ್ದರು. ಆದರೆ ಆ ಸಮಯದಲ್ಲಿ ಬೆಂಕಿಯ ತೀವ್ರತೆ ವಿಪರೀತವಾಗಿದ್ದರಿಂದ ನಾವು ಅಸಹಾಯಕರಾಗಿ ನಿಲ್ಲಬೇಕಾಯಿತು. ಕಣ್ಣೆದುರೇ ಜೀವಗಳು ಕಮರುತ್ತಿದ್ದರೂ ಏನೂ ಮಾಡಲಾಗದ ಆ ಪರಿಸ್ಥಿತಿ ಈಗಲೂ ನನ್ನನ್ನು ಕಾಡುತ್ತಿದೆ," ಎಂದು ಚಾಲಕ ಭಾವುಕರಾಗಿ ಕಣ್ಣೀರು ಹಾಕಿದರು.

ಜೀವನಪರ್ಯಂತ ಮರೆಯಲಾಗದ ಕರಾಳ ರಾತ್ರಿ

"ನನ್ನ ಬಸ್ಸಿನಲ್ಲಿದ್ದ ಮಕ್ಕಳನ್ನು ಆ ದೇವರೇ ಕಾಪಾಡಿದ್ದಾನೆ ಎಂದು ಅನ್ನಿಸುತ್ತದೆ. ಕೇವಲ ಕಂಟೇನರ್ ಚಾಲಕನ ನಿರ್ಲಕ್ಷ್ಯ ಮತ್ತು ತಪ್ಪಿನಿಂದ ಇಷ್ಟೆಲ್ಲಾ ಅವಾಂತರವಾಯಿತು. ಈ ಘಟನೆಯ ಆಘಾತದಿಂದ ನಾನು ಇನ್ನೂ ಹೊರಬರಲು ಸಾಧ್ಯವಾಗುತ್ತಿಲ್ಲ. ಸಾಯುವವರೆಗೂ ನಾನು ಈ ದಿನವನ್ನು ಮರೆಯಲಾರೆ," ಎಂದು ಹೇಳುವಾಗ ಅವರ ಧ್ವನಿ ನಡುಗುತ್ತಿತ್ತು.

Read More
Next Story