
ʼದ ಫೆಡರಲ್ ಕರ್ನಾಟಕʼ ಲಿಂಗರಾಜಪುರಂಗೆ ಭೇಟಿ ನೀಡಿ ಪ್ರತ್ಯಕ್ಷ ವರದಿ ಮಾಡಿತ್ತು. (ಪೋಟೋ: ರಘು ಆರ್.ಡಿ.)
ಲಿಂಗರಾಜಪುರಂ ಕಲುಷಿತ ನೀರಿನ ಮೂಲ ಪತ್ತೆ: ಜಲಮಂಡಳಿಯಿಂದ ಹಳೆಯ ಪೈಪ್ ಬದಲಾವಣೆ ನಿರ್ಧಾರ
ಸಮಸ್ಯೆ ಪತ್ತೆಯಾದ ತಕ್ಷಣವೇ ಜಲಮಂಡಳಿ ಕ್ರಮ ಕೈಗೊಂಡಿದ್ದು, ಹಳೆಯ ಪೈಪ್‌ಲೈನ್ ಸಂಪೂರ್ಣವಾಗಿ ಬದಲಾಯಿಸಲು ತೀರ್ಮಾನಿಸಿದೆ. ತುರ್ತಾಗಿ ದುರಸ್ತಿ ಕಾರ್ಯ ಪ್ರಾರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಿಂಗರಾಜಪುರಂ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಕಾಣಿಸಿಕೊಂಡಿದ್ದ ಕಲುಷಿತ ನೀರಿನ ಸಮಸ್ಯೆಗೆ ಕೊನೆಗೂ ಪರಿಹಾರ ದೊರೆತಿದೆ. ಬೆಂಗಳೂರು ಜಲಮಂಡಳಿ (BWSSB) ರೋಬೋಟಿಕ್ ತಂತ್ರಜ್ಞಾನವನ್ನು ಬಳಸಿ ನೀರಿನ ಮಾಲಿನ್ಯಕ್ಕೆ ಕಾರಣವಾದ ನಿಖರ ಸ್ಥಳ ಪತ್ತೆಹಚ್ಚಿದೆ.
ಸೋಮವಾರ ಬೆಳಿಗ್ಗೆ ಸುಮಾರು 10.30ರ ವೇಳೆಗೆ ನಡೆಸಲಾದ ರೋಬೋಟಿಕ್ ತಪಾಸಣೆಯಲ್ಲಿ, ಸುಮಾರು 40 ವರ್ಷಗಳ ಹಿಂದೆ ಅಳವಡಿಸಲಾದ ಹಳೆಯ ಪೈಪ್ ತುಕ್ಕು ಹಿಡಿದಿರುವುದು ಕಂಡುಬಂದಿದೆ. ಈ ತುಕ್ಕು ಹಿಡಿದ ಭಾಗ ಕರಗಿ ಹೋದ ಭಾಗದ ಮೂಲಕ ಕಲುಷಿತ ನೀರು ಶುದ್ಧ ನೀರಿನ ಮೂಲದಲ್ಲಿ ಸೇರುತ್ತಿದ್ದುದರಿಂದ ಸರಬರಾಜು ಆಗುತ್ತಿದ್ದ ಕುಡಿಯುವ ನೀರಿನ ಗುಣಮಟ್ಟ ಕುಸಿತಗೊಂಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಧಿತ ಪ್ರದೇಶದಲ್ಲಿ ಕಾಮಗಾರಿ
ಸಮಸ್ಯೆ ಪತ್ತೆಯಾದ ತಕ್ಷಣವೇ ಜಲಮಂಡಳಿ ಕ್ರಮ ಕೈಗೊಂಡಿದ್ದು, ಹಳೆಯ ಪೈಪ್‌ಲೈನ್ ಸಂಪೂರ್ಣವಾಗಿ ಬದಲಾಯಿಸಲು ತೀರ್ಮಾನಿಸಿದೆ. ತುರ್ತಾಗಿ ದುರಸ್ತಿ ಕಾರ್ಯ ಪ್ರಾರಂಭವಾಗಿದ್ದು, ಮುಂದಿನ ಕೆಲವು ದಿನಗಳಲ್ಲಿ ಕೆಲಸ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಕಾರ್ಯ ಮುಗಿದ ನಂತರ ಹೊಸ ಪೈಪ್‌ಗಳ ಮೂಲಕ ಶುದ್ಧ ನೀರು ಸರಬರಾಜು ಪುನರಾರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಲಮಂಡಳಿ ಅಧ್ಯಕ್ಷ ಡಾ. ವಿ. ರಾಮ್ ಪ್ರಸಾತ್ ಮನೋಹರ್ ತಾಂತ್ರಿಕ ಹಾಗೂ ಎಂಜಿನಿಯರಿಂಗ್ ತಂಡದ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ. “ರೋಬೋಟಿಕ್ ತಂತ್ರಜ್ಞಾನವನ್ನು ಬಳಸಿ ತ್ವರಿತವಾಗಿ ಸಮಸ್ಯೆಯ ಮೂಲ ಪತ್ತೆ ಹಚ್ಚಿದ ತಂಡದ ನೈಪುಣ್ಯ ಪ್ರಶಂಸನೀಯ. ಇಂತಹ ತಂತ್ರಜ್ಞಾನಾಧಾರಿತ ಕಾರ್ಯಪದ್ಧತಿಯು ಮುಂಬರುವ ದಿನಗಳಲ್ಲಿ ಜಲಮಂಡಳಿಯ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ,” ಎಂದು ಅವರು ಹೇಳಿದ್ದಾರೆ.
ಕೇವಲ ಕೆಎಸ್ಎಫ್ಸಿ ಲೇಔಟ್ಗೆ ಮಾತ್ರ ಪೂರೈಕೆ ಸ್ಥಗಿತ
ಲಿಂಗರಾಜಪುರಂ ಪ್ರದೇಶಕ್ಕೆ ಒಟ್ಟಾರೆಯಾಗಿ ನೀರಿನ ಸಂಪರ್ಕ ಕಡಿತಗೊಳಿಸಲಾಗಿದೆ ಎಂಬ ಸುದ್ದಿಯನ್ನು ಬೆಂಗಳೂರು ಜಲಮಂಡಳಿ ನಿರಾಕರಿಸಿದೆ. ಕೇವಲ ಕಲುಷಿತ ನೀರಿನ ಸಮಸ್ಯೆ ಎದುರಿಸುತ್ತಿರುವ 'ಕೆಎಸ್ಎಫ್ಸಿ ಲೇಔಟ್' ವ್ಯಾಪ್ತಿಯಲ್ಲಿ ಮಾತ್ರ ನೀರು ಸರಬರಾಜನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಮಂಡಳಿ ತಿಳಿಸಿದೆ.
ರೋಬೋಟಿಕ್ ತಂತ್ರಜ್ಞಾನದ ಮೂಲಕ ನಡೆಸಿದ ತಪಾಸಣೆಯಲ್ಲಿ ಕೆಎಸ್ಎಫ್ಸಿ ಲೇಔಟ್‌ನಲ್ಲಿರುವ 40 ವರ್ಷ ಹಳೆಯ ಪೈಪ್ ತುಕ್ಕು ಹಿಡಿದಿರುವುದು ಪತ್ತೆಯಾಗಿತ್ತು. ಈ ಒಂದು ನಿರ್ದಿಷ್ಟ ಪೈಪ್‌ಲೈನ್ ಬದಲಿಸುವ ಉದ್ದೇಶದಿಂದ ಈ ಲೇಔಟ್‌ನಲ್ಲಿ ಮಾತ್ರ ಪೂರೈಕೆ ನಿಲ್ಲಿಸಲಾಗಿದೆಯೇ ಹೊರತು, ಇಡೀ ಲಿಂಗರಾಜಪುರಂ ಭಾಗಕ್ಕಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಲಿಂಗರಾಜಪುರಂನ ಉಳಿದ ಭಾಗಗಳಲ್ಲಿ ನೀರಿನ ಸರಬರಾಜು ಎಂದಿನಂತೆ ಇರಲಿದೆ. ಕೆಎಸ್ಎಫ್ಸಿ ಲೇಔಟ್‌ನ ಬಾಧಿತ ಬೀದಿಗಳಲ್ಲಿ ಪೈಪ್ ಬದಲಾವಣೆ ಕಾರ್ಯ ನಡೆಯುವವರೆಗೆ ಮಾತ್ರ ನೀರು ಸ್ಥಗಿತಗೊಂಡಿರುತ್ತದೆ. ಈ ಭಾಗದ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದ್ದು, ದುರಸ್ತಿ ಕಾರ್ಯ ಮುಗಿದ ತಕ್ಷಣ ಶುದ್ಧ ನೀರು ಪೂರೈಕೆಯಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

