
ಬಿಪಿಎಲ್ ಸ್ಥಾನಮಾನ ರದ್ದತಿ ವಿರೋಧಿಸಿ ಪ್ರತಿಭಟನೆ ನಡೆಸಿದರು.
ಮಾಹಿತಿ ನೀಡದೇ ಬಿಪಿಎಲ್ ಕಾರ್ಡ್ ರದ್ದು; ಪಡಿತರದಾರರಿಂದ ಪ್ರತಿಭಟನೆ
ಬೆಂಗಳೂರಿನ ನ್ಯಾಯಬೆಲೆ ಅಂಗಡಿಗಳು ಬಿಪಿಎಲ್‌ನಿಂದ ಎಪಿಎಲ್‌ಗೆ ಬದಲಾಗಿರುವ ಕಾರ್ಡ್‌ದಾರರ ಪಟ್ಟಿಯನ್ನು ಪ್ರದರ್ಶಿಸುತ್ತಿವೆ. ಆದರೆ, ಸೂಚನೆ ನೀಡದೇ ಎಪಿಎಲ್‌ಗೆ ಬದಲಾಯಿಸಲಾಗಿದೆ ಎಂದು ದೂರಲಾಗಿದೆ.
ಬಿಪಿಎಲ್ ಕಾರ್ಡ್‌ಗಳನ್ನು ಯಾವುದೇ ಸೂಚನೆ ಇಲ್ಲದೆ ಎಪಿಎಲ್‌ಗೆ ಬದಲಾಯಿಸಿರುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ನಗರದಾದ್ಯಂತದ ಸುಮಾರು 150 ಅಸಂಘಟಿತ ಕಾರ್ಮಿಕರು ಮತ್ತು ಕೊಳೆಗೇರಿ ನಿವಾಸಿಗಳು ಬೆಂಗಳೂರಿನ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಯಾವುದೇ ಮುನ್ಸೂಚನೆ ನೀಡದೆ ರಾಜ್ಯ ಸರ್ಕಾರವು ಬಿಪಿಎಲ್ ಸ್ಥಾನಮಾನವನ್ನು ರದ್ದುಪಡಿಸಿರುವುದಕ್ಕೆ ಆಕ್ರೋಶ ಹೊರಹಾಕಿದರು. ನಗರದ ನ್ಯಾಯಬೆಲೆ ಅಂಗಡಿಗಳು ಬಿಪಿಎಲ್ ಕಾರ್ಡ್‌ನಿಂದ ಎಪಿಎಲ್ ಗೆ ಬದಲಾಯಿಸಿವೆ. ಅಂತಹವರ ಪಟ್ಟಿಯನ್ನು ಪಡಿತರ ವಿತರಣಾ ಅಂಗಡಿಗಳ ಮುಂದೆ ಪ್ರದರ್ಶಿಸಲಾಗಿದೆ ಎಂದು ಆಯುಕ್ತೆ ವಿ.ವಿ. ಜ್ಯೋತ್ಸ್ನಾ ಅವರ ಮುಂದೆ ಅಳಲು ತೋಡಿಕೊಂಡರು.
ನ್ಯಾಯಬೆಲೆ ಅಂಗಡಿಗಳು ಬಿಪಿಎಲ್‌ನಿಂದ ಎಪಿಎಲ್‌ಗೆ ಬದಲಾಯಿಸಲಾದ ಕುಟುಂಬಗಳ ಪಟ್ಟಿಯನ್ನು ಪ್ರದರ್ಶಿಸುತ್ತಿರುವುದನ್ನು ಪ್ರಶ್ನಿಸಿದರು. ಅನಿಯಂತ್ರಿತ ಹಾಗೂ ಅಸ್ಪಷ್ಟ ನಿಯಮಾವಳಿಗಳ ಆಧಾರದ ಮೇಲೆ ಬಿಪಿಎಲ್ ಸ್ಥಾನಮಾನ ಕಸಿಯಲಾಗಿದೆ ಎಂದು ನಾಗರಿಕ ಕಾರ್ಯಕರ್ತ ವಿನಯ್ ಕೆ. ಶ್ರೀನಿವಾಸ ಆರೋಪಿಸಿದ್ದಾರೆ.
ರಾಜ್ಯ ಸರ್ಕಾರವು ಬಿಪಿಎಲ್ ಅರ್ಹತೆಯ ಮಾನದಂಡ ಮರುಪರಿಶೀಲಿಸಿ, ತಪ್ಪಾಗಿ ಬಿಪಿಎಲ್ ಕಾರ್ಡ್‌ದಾರರನ್ನು ಹೊರಗಿಡುವ ಪರಿಶೀಲನಾ ಪ್ರಕ್ರಿಯೆಯಲ್ಲಿ ನಾಗರಿಕ ಹಾಗೂ ಸಾಮಾಜಿಕ ಸಂಸ್ಥೆಗಳನ್ನು ಒಳಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಆಯುಕ್ತೆ ಜ್ಯೋತ್ಸ್ನಾ ಅವರು, ಬಿಪಿಎಲ್ ಪಟ್ಟಿಯಿಂದ ತೆಗೆದುಹಾಕಲಾದ ಕುಟುಂಬಗಳು ಇಲಾಖೆಗೆ ಔಪಚಾರಿಕ ದೂರು ಸಲ್ಲಿಸಬಹುದು ಎಂದು ತಿಳಿಸಿದರು.
ಈ ವರ್ಷದ ಜನವರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅರ್ಹರ ಕಾರ್ಡ್ ರದ್ದುಗೊಳಿಸಬಾರದೆಂದು ಅಧಿಕಾರಿಗಳಿಗೆ ಸೂಚಿಸಿದ್ದರು. ಅನರ್ಹ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸ್ವಯಂಪ್ರೇರಣೆಯಿಂದ ಹಿಂತಿರುಗಿಸಲು ಅವಕಾಶ ನೀಡಬೇಕು. ಬಳಿಕ ನೋಟಿಸ್ ನೀಡುವ ಮೂಲಕ ಮಾತ್ರ ಕಾರ್ಡ್ ರದ್ದುಗೊಳಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದರು.
ಬೆಂಗಳೂರಿನಲ್ಲೇ ಅಧಿಕ ಅನರ್ಹ ಬಿಪಿಎಲ್ ಕಾರ್ಡ್
ರಾಜ್ಯದ 31 ಜಿಲ್ಲೆಗಳ ಪೈಕಿ ಬೆಂಗಳೂರಲ್ಲಿಯೇ ಅತ್ಯಧಿಕ ಬಿಪಿಎಲ್ ಕಾರ್ಡ್ ಹೊಂದಿರುವುದು ಗಮನಾರ್ಹ. ರಾಜ್ಯದಲ್ಲಿ 8 ಲಕ್ಷಕ್ಕೂ ಹೆಚ್ಚು ಅನರ್ಹರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿಯೇ ಒಂದು ಲಕ್ಷಕ್ಕೂ ಹೆಚ್ಚು ಅನರ್ಹರು ಬಿಪಿಎಲ್ ಕಾರ್ಡ್‌ದಾರರು ಇದ್ದಾರೆ ಎಂಬುದು ಆಹಾರ ಮತ್ತು ಸರಬರಾಜು ಇಲಾಖೆ ತಿಳಿಸಿದೆ.
ಆರ್ಥಿಕವಾಗಿ ಬಡ ಕುಟುಂಬಗಳಿಗೆ ಮಾತ್ರ ಮೀಸಲಾಗಿರುವ ಬಿಪಿಎಲ್ ಕಾರ್ಡ್‌ಗಳ ಸಂಖ್ಯೆ ಬೆಂಗಳೂರಿನಲ್ಲಿ ನಿರಂತರವಾಗಿ ಹೆಚ್ಚುತ್ತಿರುವುದು ಚರ್ಚೆಗೂ ಕಾರಣವಾಗಿದೆ. ನಗರದಲ್ಲಿ ಜೀವನಮಟ್ಟ ಉತ್ತಮವಾಗಿದ್ದು, ಲಕ್ಷಾಂತರ ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆದಿರುವುದು ಅಧಿಕಾರಿಗಳಿಗೆ ಅಚ್ಚರಿಯಾಗಿದೆ.
ಅನೇಕರ ಬಳಿ ಖಾಸಗಿ ಮನೆ, ವಾಹನ, ಹಾಗೂ ಉತ್ತಮ ಆದಾಯ ಇದ್ದರೂ ಸಹ ಬಿಪಿಎಲ್ ಕಾರ್ಡ್ ಬಳಸಿ ಪಡಿತರ ಧಾನ್ಯ ಮತ್ತು ಅನಿಲ ಸಬ್ಸಿಡಿ ಪಡೆಯುತ್ತಿರುವುದಾಗಿ ಇಲಾಖೆಗೆ ದೂರುಗಳು ಬಂದಿವೆ. ಹೀಗಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮರುಪರಿಶೀಲನೆ ಅಭಿಯಾನ ಕೈಗೊಂಡಿದ್ದು, ನಿಜವಾಗಿಯೂ ಬಡ ಕುಟುಂಬಗಳಿಗೆ ಮಾತ್ರ ಕಾರ್ಡ್ ತಲುಪುವಂತೆ ಕ್ರಮ ಕೈಗೊಳ್ಳಲು ಮುಂದಾಗಿದೆ. ಅಕ್ರಮವಾಗಿ ಕಾರ್ಡ್ ಪಡೆದವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.