ಅನರ್ಹ ಬಿಪಿಎಲ್ ಫಲಾನುಭವಿಗಳ ಪತ್ತೆಗೆ ಗ್ರಾಮ ಮಟ್ಟದ ಸಮಿತಿ: ಸಚಿವ ಮುನಿಯಪ್ಪ
x

ಅನರ್ಹ ಬಿಪಿಎಲ್ ಫಲಾನುಭವಿಗಳ ಪತ್ತೆಗೆ ಗ್ರಾಮ ಮಟ್ಟದ ಸಮಿತಿ: ಸಚಿವ ಮುನಿಯಪ್ಪ

ಸದನದ ಸದಸ್ಯರೆಲ್ಲರೂ ಸಹಕಾರ ಕೊಟ್ಟರೆ ಬಿಪಿಎಲ್ ಪಡೆದುಕೊಂಡ ಅನರ್ಹ ಫಲಾನುಭವಿಗಳ ಪರಿಷ್ಕರಣೆ ಕಾರ್ಯ ಪ್ರಾರಂಭವಾಗಲಿದೆ ಎಂದು ಸಚಿವ ಮುನಿಯಪ್ಪ ಅವರು ಹೇಳಿದ್ದಾರೆ.


ಅನರ್ಹ ಬಿಪಿಎಲ್ ಫಲಾನುಭವಿಗಳನ್ನು ಪತ್ತೆಹಚ್ಚಿ ತೆಗೆದು ಹಾಕಲು ಗ್ರಾಮ ಮಟ್ಟದಲ್ಲಿ ಸಮಿತಿ ರಚನೆ ಮಾಡುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ವಿಧಾನಪರಿಷತ್ತಿನಲ್ಲಿ ಸೋಮವಾರ ತಿಳಿಸಿದ್ದಾರೆ.

ಪ್ರಶ್ನೋತ್ತರ ಕಲಾಪದಲ್ಲಿ ಸಿ.ಟಿ.ರವಿ ಪ್ರಶ್ನೆಗೆ ಉತ್ತರಿಸಿದ ಅವರು, ಅಧಿವೇಶನ ಮುಗಿದ ನಂತರ ಮೊದಲು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗುವುದು. ನಂತರ ಗ್ರಾಮ ಮಟ್ಟದಲ್ಲಿ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಪಿಡಿಒ ಸೇರಿದಂತೆ ಮತ್ತಿತರರ ನೇತೃತ್ವದಲ್ಲಿ ಸಮಿತಿಯನ್ನು ರಚನೆ ಮಾಡಲಾಗುವುದು ಎಂದು ಹೇಳಿದರು.

ನಿಜವಾದ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳು ಸಿಗಬೇಕೆಂಬುದು ಸರ್ಕಾರದ ಉದ್ದೇಶ. ಸದನದ ಸದಸ್ಯರೆಲ್ಲರೂ ಸಹಕಾರ ಕೊಟ್ಟರೆ ಬಿಪಿಎಲ್ ಪಡೆದುಕೊಂಡ ಅನರ್ಹ ಫಲಾನುಭವಿಗಳ ಪರಿಷ್ಕರಣೆ ಕಾರ್ಯ ಪ್ರಾರಂಭವಾಗಲಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದರು.

ಈ ಹಿಂದೆ ಪರಿಷ್ಕರಣೆ ಮಾಡಲು ಹೊರಟಾಗ ದೊಡ್ಡ ವಿವಾದವೇ ಉಂಟಾಗಿತ್ತು. 99 ಎಪಿಎಲ್ ಕಾರ್ಡ್‌ಗಳು ಬಿಪಿಎಲ್​ಗೆ ಸೇರ್ಪಡೆಯಾದರೆ ಯಾರೂ ಕೇಳುವುದಿಲ್ಲ. ಆದರೆ ಒಂದೇ ಒಂದು ಬಿಪಿಎಲ್ ಕಾರ್ಡ್ ಬಿಟ್ಟು ಹೋದರೆ ದೊಡ್ಡ ವಿವಾದವನ್ನೇ ಸೃಷ್ಟಿ ಮಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಿಜವಾದ ಫಲಾನುಭವಿಗಳು ಸರ್ಕಾರಿ ಸವಲತ್ತುಗಳಿಂದ ವಂಚಿತರಾಗಬಾರದೆಂಬುದು ನಮ್ಮ ಉದ್ದೇಶ. ನಾವು ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಮಾಡಬೇಕು. ಹೀಗಾಗಿ ಪರಿಷ್ಕರಣೆ ಮಾಡಲು ಮುಂದಾಗಿದ್ದೇವೆ ಎಂದು ಸಚಿವರು ಸಮರ್ಥಿಸಿಕೊಂಡರು.

ರಾಜ್ಯದಲ್ಲಿ ಒಟ್ಟು 2,95,000 ಬಿಪಿಎಲ್ ಪಡಿತರ ಫಲಾನುಭವಿಗಳಿದ್ದರು. ಇದರಲ್ಲಿ ಪ್ರಸ್ತುತ 2,40,000 ಫಲಾನುಭವಿಗಳು ಸರ್ಕಾರದ ಸವಲತ್ತು ಪಡೆಯುತ್ತಿದ್ದಾರೆ. ಇದರಲ್ಲಿ ಕೆಲವು ಅನರ್ಹರು ಸೇರ್ಪಡೆಯಾಗಿದ್ದಾರೆ. ಪರಿಷ್ಕರಣೆ ನಂತರ ಎಪಿಎಲ್‌ಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದರು.

ನಮಗೆ ಕೇಂದ್ರ ಸರ್ಕಾರ 1.10 ಕೋಟಿ ಫಲಾನುಭವಿಗಳನ್ನು ಮಾತ್ರ ಪಟ್ಟಿಗೆ ಸೇರ್ಪಡೆ ಮಾಡಲು ಅವಕಾಶ ನೀಡಿದೆ. ರಾಜ್ಯದಲ್ಲಿ ಒಟ್ಟು4.50 ಕೋಟಿ ಫಲಾನುಭವಿಗಳಿಗೆ ಸವಲತ್ತು ನೀಡಲಾಗುತ್ತಿದೆ. ಬಿಪಿಎಲ್ ಪಟ್ಟಿಯಿಂದ 25 ಲಕ್ಷ ಪಡಿತರ ಚೀಟಿಗಳನ್ನು ತೆಗೆದು ಹಾಕಬೇಕಿದೆ. ಪರಿಷ್ಕರಣೆ ವೇಳೆ ಕೆಲವು ಗೊಂದಲಗಳು ಉಂಟಾಗುವುದು ಸಹಜ. ಹೀಗಾಗಿ ಜನಪ್ರತಿನಿಧಿಗಳು ಸಹಕಾರ ಕೊಡಬೇಕೆಂದು ಮನವಿ ಮಾಡಿದರು.

ಸರ್ವ ಪಕ್ಷಗಳ ಸದಸ್ಯರ ಸಹಕಾರವಿಲ್ಲದೆ ಇದನ್ನು ಅನುಷ್ಠಾನ ಮಾಡಲು ಸಾಧ್ಯವಿಲ್ಲ. ಮುಖ್ಯಮಂತ್ರಿಯವರು ಯಾವುದೇ ಕಾರಣಕ್ಕೂ ನಿಜವಾದ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ಕ್ರಮವಹಿಸಿ ಎಂದು ಸೂಚನೆ ಕೊಟ್ಟಿದ್ದಾರೆ. ಏಕಕಾಲದಲ್ಲಿ ಪ್ರಕ್ರಿಯೆ ಸರ್ವರ್, ಕಂಪ್ಯೂಟರ್ ಸೇರಿದಂತೆ ಹಲವು ತಾಂತ್ರಿಕ ಕಾರಣಗಳು ಎದುರಾಗುತ್ತವೆ ಎಂದು ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ಸದಸ್ಯ ಸಿ.ಟಿ.ರವಿ, ಬಿಪಿಎಲ್ ಕಾರ್ಡ್ ಪರಿಷ್ಕರಣೆಯಿಂದ ಸಾಕಷ್ಟು ಗೊಂದಲ ಉಂಟಾಗಿದೆ. ಸರ್ಕಾರ ನಮ್ಮನ್ನು ಯಾವಾಗ ತೆಗೆದುಹಾಕುತ್ತದೆ ಎಂಬ ಆತಂಕದಲ್ಲಿ ನೈಜ ಫಲಾನುಭವಿಗಳು ಆತಂಕದಲ್ಲಿದ್ದಾರೆ. ನಿಜವಾದ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ಸರ್ಕಾರ ಕ್ರಮ ವಹಿಸಬೇಕೆಂದು ಸಲಹೆ ನೀಡಿದರು.

Read More
Next Story