
ಎಐ ರಚಿತ ಚಿತ್ರ.
ಕ್ಯೂಆರ್ ಕೋಡ್ ಹಗರಣ: ಬಿಎಂಟಿಸಿ ಬಸ್‌ಗಳಲ್ಲಿ ಟಿಕೆಟ್ ಹಣ ಸ್ವಂತ ಖಾತೆಗೆ ವರ್ಗಾಯಿಸಿಕೊಂಡಿದ್ದ ಮೂವರು ಕಂಡಕ್ಟರ್‌ಗಳ ಅಮಾನತು
ನಗದು ರಹಿತ ಪ್ರಯಾಣ ಉತ್ತೇಜಿಸಲು ಬಿಎಂಟಿಸಿ ಜಾರಿಗೆ ತಂದಿದ್ದ ಯುಪಿಐ ಸ್ಕ್ಯಾನರ್‌ಗಳನ್ನು ಈ ನಿರ್ವಾಹಕರು ಬದಲಾಯಿಸಿ, ತಮ್ಮ ವೈಯಕ್ತಿಕ ಯುಪಿಐ ಕ್ಯೂಆರ್ ಕೋಡ್‌ಗಳನ್ನು ಪ್ರಯಾಣಿಕರಿಗೆ ನೀಡಿದ್ದು ತನಿಖೆ ವೇಳೆ ಬಹಿರಂಗಗೊಂಡಿತ್ತು.
ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ಬಸ್‌ಗಳಲ್ಲಿ ಅಳವಡಿಸಲಾಗಿದ್ದ ಯುಪಿಐ ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು, ಸಂಸ್ಥೆಗೆ ಸೇರಬೇಕಾದ ಲಕ್ಷಾಂತರ ರೂ. ಹಣವನ್ನು ತಮ್ಮ ವೈಯಕ್ತಿಕ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದ ಮೂವರು ಬಿಎಂಟಿಸಿ ನಿರ್ವಾಹಕರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ನಗದು ರಹಿತ ಪ್ರಯಾಣ ಉತ್ತೇಜಿಸಲು ಬಿಎಂಟಿಸಿ ಜಾರಿಗೆ ತಂದಿದ್ದ ಯುಪಿಐ ಸ್ಕ್ಯಾನರ್‌ಗಳನ್ನು ಈ ನಿರ್ವಾಹಕರು ಬದಲಾಯಿಸಿ, ತಮ್ಮ ವೈಯಕ್ತಿಕ ಯುಪಿಐ ಕ್ಯೂಆರ್ ಕೋಡ್‌ಗಳನ್ನು ಪ್ರಯಾಣಿಕರಿಗೆ ನೀಡುತ್ತಿದ್ದರು. ಪ್ರಯಾಣಿಕರು ಟಿಕೆಟ್‌ಗಾಗಿ ಸ್ಕ್ಯಾನ್ ಮಾಡಿ ಪಾವತಿಸಿದ ಹಣವು ನಿಗಮದ ಖಾತೆಗೆ ಹೋಗುವ ಬದಲು ನಿರ್ವಾಹಕರ ಸ್ವಂತ ಬ್ಯಾಂಕ್ ಖಾತೆಗಳಿಗೆ ಜಮೆಯಾಗುತ್ತಿತ್ತು. 2025ರ ಡಿಸೆಂಬರ್ ತಿಂಗಳಲ್ಲಿ ಬಿಎಂಟಿಸಿ ತಪಾಸಣಾ ತಂಡವು ನಡೆಸಿದ ದಿಢೀರ್ ಪರಿಶೀಲನೆಯ ವೇಳೆ ಈ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ತನಿಖೆಯ ವೇಳೆ, ಮೂವರು ಸಿಬ್ಬಂದಿ ಅಧಿಕೃತ ಸ್ಕ್ಯಾನರ್‌ಗಳ ಬದಲಿಗೆ ತಮ್ಮ ವೈಯಕ್ತಿಕ ಸ್ಕ್ಯಾನರ್‌ಗಳನ್ನು ಬಳಸಿ ಹಣ ಲಪಾಟಾಯಿಸುತ್ತಿರುವುದು ಸಾಬೀತಾಗಿದೆ. ಡಿಪೋ 23ರ ಸುರೇಶ್ ಎಂಬುವವರು 47,257 ರೂ., ಡಿಪೋ 3ರ ಮಂಚೇಗೌಡ ಎಂಬುವವರು 54,358 ರೂ. ಹಾಗೂ ಡಿಪೋ 14ರ ಅಶ್ಫಕ್ ಖಾನ್ ಎಂಬುವವರು 3,206 ರೂ. ಸೇರಿದಂತೆ ಒಟ್ಟು ಒಂದು ಲಕ್ಷಕ್ಕೂ ಅಧಿಕ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಈ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ವಂಚನೆಗಳನ್ನು ತಡೆಗಟ್ಟಲು ಬಿಎಂಟಿಸಿ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಪಾರದರ್ಶಕತೆಗಾಗಿ ಡೈನಾಮಿಕ್ ಕ್ಯೂಆರ್ ಆಧಾರಿತ ಯುಪಿಐ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಿದೆ. ಸಾರಿಗೆ ಸಚಿವರೂ ಕೂಡ ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಬಿಎಂಟಿಸಿ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

