ಬೆಂಗಳೂರು: ಬಿಎಂಟಿಸಿ ಬಸ್‌ಗೆ ಸಿಲುಕಿ ಬೈಕ್ ಸವಾರ ಸಾವು
x

ಬೆಂಗಳೂರು: ಬಿಎಂಟಿಸಿ ಬಸ್‌ಗೆ ಸಿಲುಕಿ ಬೈಕ್ ಸವಾರ ಸಾವು

ವಿಷಯ ತಿಳಿಯುತ್ತಿದ್ದಂತೆಯೇ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.


Click the Play button to hear this message in audio format

ಬೆಂಗಳೂರು ನಗರ ಸಾರಿಗೆ ಬಿಎಂಟಿಸಿ ಬಸ್​​ಗೆ ಸಿಲುಕಿ ಬೈಕ್‌ ಸವಾರ ಬಲಿಯಾಗಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಸಮೀಪದ ನೀಲಾದ್ರಿ ನಗರ ರಸ್ತೆಯಲ್ಲಿ ನಡೆದಿದೆ.

ಬೈಕ್ ಸವಾರ ರಸ್ತೆಯಲ್ಲಿದ್ದ ಹಂಪ್ ದಾಟುವ ವೇಳೆ ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ. ಇದೇ ವೇಳೆ ವೇಗವಾಗಿ ಬಂದ ಬಿಎಂಟಿಸಿ ಬಸ್ ಸವಾರನ ತಲೆಯ ಮೇಲೆ ಹರಿದಿದೆ. ಅಪಘಾತದ ತೀವ್ರತೆಗೆ ಸವಾರನ ತಲೆ ಸಂಪೂರ್ಣ ಅಪ್ಪಚ್ಚಿಯಾಗಿದ್ದು, ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ‌ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸರಣಿ ಅಪಘಾತಗಳಿಂದ ಹೆಚ್ಚಿದ ಆತಂಕ

'ಕಿಲ್ಲರ್ ಬಿಎಂಟಿಸಿ' ಎಂದೇ ಇತ್ತೀಚೆಗೆ ಕುಖ್ಯಾತಿ ಪಡೆಯುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್‌ಗಳಿಂದ ಸರಣಿ ಅಪಘಾತಗಳು ವರದಿಯಾಗುತ್ತಲೇ ಇವೆ. ಕಳೆದ ಜನವರಿ 6ರಂದು ಕೆ.ಆರ್. ಸರ್ಕಲ್ ಬಳಿ ಬಿಎಂಟಿಸಿ ಬಸ್ ಹಾಗೂ ಖಾಸಗಿ ಬಸ್ ನಡುವೆ ಡಿಕ್ಕಿ ಸಂಭವಿಸಿತ್ತು. ಆ ಘಟನೆಯಲ್ಲಿ ಎರಡೂ ಬಸ್‌ಗಳ ಕಿಟಕಿ ಗಾಜುಗಳು ಪುಡಿಯಾಗಿದ್ದವು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲವಾದರೂ, ಕೆ.ಆರ್. ಸರ್ಕಲ್ ಸುತ್ತಮುತ್ತ ಸುಮಾರು ಒಂದು ಗಂಟೆ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.

ದಿನೇ ದಿನೇ ಹೆಚ್ಚುತ್ತಿರುವ ಬಿಎಂಟಿಸಿ ಬಸ್‌ಗಳ ಅಪಘಾತ ಸರಣಿಯಿಂದಾಗಿ ರಸ್ತೆಗಿಳಿಯಲು ಸಾರ್ವಜನಿಕರು ಭಯಪಡುವಂತಾಗಿದೆ. ಚಾಲಕರ ಅತಿವೇಗ ಮತ್ತು ಅಜಾಗರೂಕತೆಯೇ ಇಂತಹ ಅವಘಡಗಳಿಗೆ ಪ್ರಮುಖ ಕಾರಣ ಎಂಬ ಆರೋಪಗಳು ಕೇಳಿಬರುತ್ತಿವೆ.

Read More
Next Story