Bharat Rice Bandh | ಬಹುಪ್ರಚಾರದ ʻಭಾರತ್‌ ಅಕ್ಕಿʼ ಬಂದ್, ಇದು ಅಧಿಕೃತ!
x

Bharat Rice Bandh | ಬಹುಪ್ರಚಾರದ ʻಭಾರತ್‌ ಅಕ್ಕಿʼ ಬಂದ್, ಇದು ಅಧಿಕೃತ!

ಲೋಕಸಭೆ ಚುನಾವಣೆಗೆ ಮುನ್ನ ಕೇಂದ್ರ ಸರ್ಕಾರ 2024ರ ಫೆಬ್ರವರಿ 2ರಂದು ಭಾರತ್‌ ಅಕ್ಕಿ ಎಂಬ ಹೊಸ ಅಕ್ಕಿ ಮತ್ತು ದಿನಸಿ ಪದಾರ್ಥಗಳನ್ನು ಅಗ್ಗದ ದರದಲ್ಲಿ ವಿತರಿಸುವ ಯೋಜನೆ ಆರಂಭಿಸಿತ್ತು. ಭಾರೀ ಪ್ರಚಾರ ಮತ್ತು ಜೋಷ್‌ನೊಂದಿಗೆ ಪ್ರಧಾನಿ ಮೋದಿಯವರು ಜಾರಿಗೊಳಿಸಿದ್ದ ಈ ಯೋಜನೆ ಇದೀಗ ದಿಢೀರನೇ ನಿಂತುಹೋಗಿದೆ!


ಭಾರೀ ಪ್ರಚಾರದೊಂದಿಗೆ ಜಾರಿಗೆ ಬಂದಿದ್ದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ʻಭಾರತ್‌ ಅಕ್ಕಿʼ ಯೋಜನೆ ಜುಲೈನಿಂದ ಸ್ಥಗಿತಗೊಂಡಿದೆ. ದೇಶದ ಬಡವರು ಮತ್ತು ಮಧ್ಯಮವರ್ಗದ ಜನರಿಗೆ ಅಗ್ಗದ ಬೆಲೆಯಲ್ಲಿ ಅಕ್ಕಿ ಮತ್ತು ಇತರೆ ಅಗತ್ಯ ದಿನಸಿ ವಸ್ತುಗಳನ್ನು ವಿತರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಕಳೆದ ಫೆಬ್ರವರಿಯಲ್ಲಿ ʼಭಾರತ್‌ ರೈಸ್‌ʼ ಅಕ್ಕಿ ವಿತರಣೆಯನ್ನು ಆರಂಭಿಸಿತ್ತು. ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಬಡವರ ಅಕ್ಕಿ, ಭಾರತ್‌ ಅಕ್ಕಿ ಎಂಬ ಘೋಷಣೆಯೊಂದಿಗೆ ಜಾರಿಗೆ ಬಂದಿದ್ದ ಅಕ್ಕಿ, ಇದೀಗ ಚುನಾವಣೆ ಮುಗಿಯುತ್ತಿದ್ದಂತೆ ಸ್ಥಗಿತಗೊಂಡಿದೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯುವ ಉದ್ದೇಶದಿಂದ ಕಡಿಮೆ ದರದಲ್ಲಿ ಗುಣಮಟ್ಟದ ಅಕ್ಕಿ ವಿತರಿಸಲು ಈ ಯೋಜನೆಯನ್ನು ಕೇಂದ್ರ ಸರ್ಕಾರ 2024ರ ಫೆಬ್ರವರಿ 2ರಂದು ಆರಂಭಿಸಿತ್ತು. ನ್ಯಾಷನಲ್‌ ಅಗ್ರಿಕಲ್ಚರ್‌ ಕೋ ಆಪರೇಟಿವ್‌ ಮಾರ್ಕೆಟಿಂಗ್‌ ಫೆಡರೇಷನ್‌ ಆಫ್‌ ಇಂಡಿಯಾ ಲಿಮಿಟೆಡ್‌ (ನಾಫೆಡ್‌) ರಿಯಾಯಿತಿ ದರದ ಭಾರತ್‌ ಅಕ್ಕಿ, ಬೇಳೆ, ಗೋಧಿ ಹಿಟ್ಟಿನ ಮಾರಾಟದ ಜವಾಬ್ದಾರಿ ಹೊತ್ತಿತ್ತು.

ಈ ಯೋಜನೆ ಅಡಿ 29 ರೂ.ಗೆ 1 ಕೆಜಿ ಅಕ್ಕಿ, 27.50 ರೂ.ಗೆ 1 ಕೆಜಿ ಗೋಧಿ ಹಿಟ್ಟು ಹಾಗೂ 60 ರೂ.ಗೆ 1 ಕೆಜಿ ಕಡಲೆ ಬೆಳೆ ವಿತರಣೆ ಮಾಡಲಾಗುತ್ತಿತ್ತು. ಶ್ರೀಸಾಮಾನ್ಯರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ದಿನಸಿ ವಿತರಿಸುವುದು ಇದರ ಉದ್ದೇಶವಾಗಿತ್ತು. ಭಾರತ್‌ ಅಕ್ಕಿಗೆ ಗ್ರಾಹಕರಿಂದ ಹೆಚ್ಚಿನ ಬೇಡಿಕೆಯಿತ್ತು. ಜನ ಸಂದಣಿ ಹೆಚ್ಚಿರುವ ಜಾಗಗಳಲ್ಲಿ ಮೊಬೈಲ್‌ ವ್ಯಾನ್‌ ಮೂಲಕ ಅಕ್ಕಿ, ಬೆಳೆಗಳನ್ನು ಗ್ರಾಹಕರಿಗೆ ನೀಡಲಾಗುತ್ತಿತ್ತು. ಸರ್ಕಾರದ ಮಾಹಿತಿಯ ಪ್ರಕಾರ ದೇಶಾದ್ಯಂತ ಈವರೆಗೆ 5 ಸಾವಿರ ಟನ್ ಭಾರತ್‌ ಅಕ್ಕಿ ಮಾರಾಟ ಮಾಡಲಾಗಿದೆ.

ಯಾಕೆ ಬಂದ್‌ ಎಂಬ ಮಾಹಿತಿ ಅಧಿಕಾರಿಗಳಿಗೂ ಇಲ್ಲ!

ಆದರೆ ಇದೀಗ ಏಕಾಏಕಿ ಭಾರತ್‌ ಬ್ರಾಂಡಿನ ಅಕ್ಕಿಯ ಸರಬರಾಜನ್ನು ನಿಲ್ಲಿಸಲಾಗಿದೆ. ಸದ್ಯ ಅಕ್ಕಿ ಪೂರೈಕೆ ಇಲ್ಲ. ಹೀಗಾಗಿ, ಸದ್ಯಕ್ಕೆ ವಿತರಣೆ ಸ್ಥಗಿತಗೊಳಿಸಲಾಗಿದೆ. ಯಾವ ಕಾರಣಕ್ಕೆ ಪೂರೈಕೆಯನ್ನು ಸ್ಥಗಿತ ಮಾಡಲಾಗಿದೆ ಎನ್ನುವುದು ತಿಳಿದುಬಂದಿಲ್ಲ ಎಂಬುದು ವಿತರಣೆ ಅಥವಾ ಮಾರಾಟದ ಹೊಣೆ ಹೊತ್ತಿದ್ದ ಏಜೆನ್ಸಿಗಳ ಅಧಿಕಾರಿಗಳ ಮಾಹಿತಿ. ಆದರೆ, ನಿಖರವಾಗಿ ಏಕೆ ಸರಬರಾಜು ನಿಲ್ಲಿಸಲಾಗಿದೆ? ಮತ್ತೆ ಪುನರಾರಂಭವಾಗುವುದೇ? ಅಥವಾ ಇಲ್ಲವೇ? ಎಂಬ ಯಾವ ಮಾಹಿತಿಯೂ ತಮಗೆ ಇಲ್ಲ. ಆ ಕುರಿತ ಯಾವುದೇ ಅಧಿಕೃತ ಮಾಹಿತಿಯೂ ಕೇಂದ್ರ ಸರ್ಕಾರದಿಂದ ಬಂದಿಲ್ಲ ಎಂಬುದು ಏಜೆನ್ಸಿಗಳ ಅಸಹಾಯಕ ಉತ್ತರ.

ಭಾರತ್‌ ಅಕ್ಕಿ ಇದ್ದಕ್ಕಿದ್ದಂತೆ ಬಂದ್‌ ಆಗಿರುವ ಬಗ್ಗೆ, ಭಾರತ್‌ ಬ್ರಾಂಡ್‌ ಸಾಮಗ್ರಿಗಳ ವಿತರಣೆಯ ಹೊಣೆ ಹೊತ್ತಿರುವ ಸಂಸ್ಥೆಗಳಲ್ಲಿ ಒಂದಾದ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳ (NAFED) ಕರ್ನಾಟಕ ವಿಭಾಗದ ಮುಖ್ಯಸ್ಥರಾದ ವಿನಯ್‌ ಕುಮಾರ್‌ ಅವರನ್ನು ʻದ ಫೆಡರಲ್‌ ಕರ್ನಾಟಕʼ ಸಂಪರ್ಕಿಸಿತು. ಅವರು ಅಕ್ಕಿ ವಿತರಣೆ ಸ್ಥಗಿತದ ಕುರಿತು ಮಾಹಿತಿ ನೀಡಿ, ʻʻಜೂ.10 ರವರೆಗೆ ದಾಸ್ತಾನು ಬಂದಿದೆ. ಜುಲೈ 1ರಿಂದ ವಿತರಣೆ ಮಾಡಲು ದಾಸ್ತಾನು ಬಂದಿಲ್ಲ. ಇದು ಕೇಂದ್ರ ಸಚಿವರ ನಿರ್ಧಾರವಾಗಿದ್ದು, ಯಾಕೆ ನಿಲ್ಲಿಸಲಾಗಿದೆ ಎಂಬ ಬಗ್ಗೆ ನಮಗೆ ಮಾಹಿತಿ ಇಲ್ಲ. ಆ ಸಂಬಂಧ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲʼʼ ಎಂದು ತಿಳಿಸಿದರು.

ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿದ್ದ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಲು ʻಭಾರತ್‌ʼ ಬ್ರ್ಯಾಂಡ್‌ ಅಕ್ಕಿ ಮಾರಾಟ ಆರಂಭಿಸುತ್ತಿದ್ದೇವೆ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳ (NAFED), ರಾಷ್ಟ್ರೀಯ ಸಹಕಾರ ಗ್ರಾಹಕರ ಮಹಾಮಂಡಳ (NCCF) ಹಾಗೂ ಕೇಂದ್ರೀಯ ಭಂಡಾರಗಳು ಮತ್ತು ಇ-ಕಾಮರ್ಸ್‌ ವೇದಿಕೆಗಳ ಮೂಲಕ ಅಕ್ಕಿ ಮಾರಾಟ ಮಾಡಲಾಗುತ್ತಿತ್ತು.

ಮಾರ್ಚ್‌ನಲ್ಲಿಯೇ ವಿತರಣೆ ಅಸ್ತವ್ಯಸ್ತ

ಭಾರೀ ಪ್ರಚಾರ ಮತ್ತು ದೊಡ್ಡ ದೊಡ್ಡ ಘೋಷಣೆಯೊಂದಿಗೆ ದೇಶಾದ್ಯಂತ ಜಾರಿಗೆ ಬಂದಿದ್ದ ಭಾರತ್‌ ಅಕ್ಕಿ ಯೋಜನೆ, ವಾಸ್ತವವಾಗಿ ಸುಸೂತ್ರವಾಗಿ ಜಾರಿಯಾಗಿದ್ದು ಆರಂಭದ ಒಂದು ತಿಂಗಳಷ್ಟೇ. ಕರ್ನಾಟಕದ ಮಟ್ಟಿಗಂತೂ ಜಾರಿಯಾಗಿ ಒಂದೇ ತಿಂಗಳಲ್ಲಿ ಭಾರತ್‌ ಅಕ್ಕಿ ಬೀದಿ ಬೀದಿ ಮಾರಾಟ ಬಹುತೇಕ ಸ್ಥಗಿತವಾಗಿತ್ತು. ನಗರ ಪ್ರದೇಶದ ಕೆಲವು ನಿರ್ದಿಷ್ಟ ಮಾಲ್‌ಗಳಲ್ಲಿ ಮಾತ್ರ ಆ ಅಕ್ಕಿ ದೊರೆಯುತ್ತಿತ್ತು. ಬೆಂಗಳೂರಿನಂತಹ ಪ್ರಮುಖ ನಗರದಲ್ಲೇ ಮಾರ್ಚ್‌ ಎರಡನೇ ವಾರದ ಹೊತ್ತಿಗೇ ಭಾರತ್‌ ಅಕ್ಕಿ ಬಂದಷ್ಟೇ ವೇಗವಾಗಿ ಕಾಣೆಯಾಗಿತ್ತು. ಆ ಕುರಿತು ಫ್ಯಾಕ್ಟ್‌ ಚೆಕ್‌ ನಡೆಸಿದ ʼದ ಫೆಡರಲ್‌ ಕರ್ನಾಟಕʼ ರಿಯಾಲಿಟಿ ಚೆಕ್‌ ಸ್ಟೋರಿ ಮಾಡಿತ್ತು.

ಆಗಲೂ ನಾಫೆಡ್‌ ಮತ್ತು ಇತರೆ ಏಜೆನ್ಸಿಗಳ ಅಧಿಕಾರಿಗಳು ಭಾರತ್‌ ಅಕ್ಕಿ ವಿತರಣೆ ಸ್ಥಗಿತವಾಗಿರುವ ಕುರಿತು ಯಾವುದೇ ಮಾಹಿತಿ ನೀಡಲು ಹಿಂಜರಿದಿದ್ದರು. ಆದರೆ, ಅದೇ ಹೊತ್ತಿಗೆ ಪ್ರತಿಷ್ಠಿತ ಮಾಲ್‌ಗಳಲ್ಲಿ ಮಾತ್ರ ಅಕ್ಕಿ ದೊರೆಯುತ್ತಿತ್ತು. ಅಲ್ಲದೆ, ಕೆಲವು ಪ್ರದೇಶಗಳಲ್ಲಿ ಭಾರತ್‌ ಅಕ್ಕಿಯನ್ನು ಖರೀದಿಸಿ ದಿನಸಿ ಅಂಗಡಿಗಳಲ್ಲಿ ದುಬಾರಿ ದರದಲ್ಲಿ ಚಿಲ್ಲರೆ ಮಾರಾಟ ಮಾಡಲಾಗುತ್ತಿದೆ ಎಂಬ ವ್ಯಾಪಕ ದೂರುಗಳು ಕೂಡ ಕೇಳಿಬಂದಿದ್ದವು.

Read More
Next Story