Bharat Rice | ಬಡವರಿಗೆ ಸಿಗದ ಅಕ್ಕಿ; ಮಾಹಿತಿ ಕೇಳಿದರೆ ಬೆಚ್ಚಿಬೀಳುವ ಅಧಿಕಾರಿಗಳು!
x

Bharat Rice | ಬಡವರಿಗೆ ಸಿಗದ ಅಕ್ಕಿ; ಮಾಹಿತಿ ಕೇಳಿದರೆ ಬೆಚ್ಚಿಬೀಳುವ ಅಧಿಕಾರಿಗಳು!

ಭಾರತ್‌ ಅಕ್ಕಿ ಯೋಜನೆ ಜಾರಿಯಾಗಿ ತಿಂಗಳಲ್ಲೇ ಜನರಿಗೆ ಅಕ್ಕಿ ಸಿಗದ ಸ್ಥಿತಿ ನಿರ್ಮಾಣವಾಗಿದೆ. ಅಕ್ಕಿ ಎಲ್ಲಿ ಸಿಗುತ್ತದೆ? ಈವರೆಗೆ ಎಷ್ಟು ಮಾರಾಟವಾಗಿದೆ? ಎಂಬ ಯಾವ ಮಾಹಿತಿ ಕೇಳಿದರೂ ಅಧಿಕಾರಿಗಳು ಮೈಮೇಲೆ ಬಿಸಿನೀರು ಬಿದ್ದವರಂತೆ ಬೆಚ್ಚಿಬೀಳುತ್ತಿದ್ದಾರೆ!


ಕೇಂದ್ರ ಸರ್ಕಾರ ಭಾರೀ ಪ್ರಚಾರದೊಂದಿಗೆ ಶುರುವಾದ ʼಭಾರತ್‌ ಅಕ್ಕಿ(Bharat Rice)ʼ ಯೋಜನೆಯು ಆರಂಭಿಕ ಹಂತದಲ್ಲೇ ಹಳ್ಳ ಹಿಡಿಯುವ ಲಕ್ಷಣಗಳು ಕಾಣಿಸುತ್ತಿವೆ. 2024 ರ ಲೋಕಸಭಾ ಚುನಾವಣೆಗೆ ಕೆಲವೇ ವಾರ ಬಾಕಿ ಇರುವಾಗ ಬಡವರಿಗೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಅಕ್ಕಿ ವಿತರಿಸುತ್ತೇವೆ ಎಂದು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಭರ್ಜರಿ ಪ್ರಚಾರ ಮಾಡಿತ್ತಾದರೂ, ಒಂದೆರಡು ವಾರದಲ್ಲೇ ಆ ಅಕ್ಕಿ ಬಡವರಿಂದ ದೂರಾಗಿದೆ.

ಫೆಬ್ರುವರಿ 6 ರಂದು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ಸಾರ್ವಜನಿಕರಿಗೆ ʼಭಾರತ್ ಅಕ್ಕಿʼ ಚಿಲ್ಲರೆ ಮಾರಾಟವನ್ನು ಪ್ರಾರಂಭಿಸಿದ್ದು, ಎನ್‌ ಎ ಎಫ್‌ಇಡಿ (National Agricultural Cooperative Marketing Federation of India Ltd.-NAFED), ಎನ್‌ಸಿಸಿಎಫ್‌ (National Cooperative Consumers' Federation Of India Limited) ಮತ್ತು ಕೇಂದ್ರೀಯ ಭಂಡಾರ್ ಈ ಮೂರು ಏಜೆನ್ಸಿಗಳ ಮೂಲಕ ಭಾರತ್ ಬ್ರ್ಯಾಂಡ್ ಅಡಿಯಲ್ಲಿ ಅಕ್ಕಿಯನ್ನು ಮಾರಾಟ ಮಾಡಲಾಗುವುದಾಗಿ ಘೋಷಿಸಿತ್ತು. ಅಲ್ಲದೆ, ಫ್ಲಿಪ್‌ಕಾರ್ಟ್‌, ರಿಲಯನ್ಸ್‌, ಅಮೇಝಾನ್‌ ಮೊದಲಾದ ಆನ್‌ಲೈನ್‌ ಮಳಿಗೆಗಳಿಂದಲೂ ಈ ಅಕ್ಕಿಯನ್ನು ಖರೀದಿಸಬಹುದು ಎಂದು ಸರ್ಕಾರ ಹೇಳಿಕೊಂಡಿತ್ತು.

ಭಾರತ್‌ ಅಕ್ಕಿ ಯೋಜನೆ ಜಾರಿಗೊಳಿಸುವ ವೇಳೆ ದಿನಬಳಕೆ ಸಾಮಾಗ್ರಿಗಳ ಬೆಲೆ ಏರಿಕೆಯನ್ನು ತಗ್ಗಿಸಲು ಈ ಯೋಜನೆಯನ್ನು ಆರಂಭಿಸಲಾಗಿದೆ ಎಂದು ಬಿಜೆಪಿ ಹೇಳಿಕೊಂಡಿತ್ತು. ದೇಶಾದ್ಯಂತ ಬಿಜೆಪಿಯ ಶಾಸಕರು-ಸಂಸದರು ಅಕ್ಕಿ ವಿತರಣೆಯ ಕಾರ್ಯಕ್ರಮಗಳನ್ನು ಭಾರೀ ಅಬ್ಬರದೊಂದಿಗೆ ಪ್ರಚಾರ ಮಾಡಿದ್ದರು. ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಬಿಜೆಪಿಯ ರಾಜ್ಯ ಪ್ರಮುಖರು ಮುಂದೆ ನಿಂತು ಅಕ್ಕಿ ವಿತರಣೆ ಮಾಡಿದ್ದರು.

ಕರ್ನಾಟಕ ಸರ್ಕಾರಕ್ಕೆ ಬಿಪಿಎಲ್‌ ಪಡಿತರ ಚೀಟಿದಾರರಿಗೆ ಉಚಿತವಾಗಿ ವಿತರಿಸಲು ಕೇಂದ್ರೀಯ ಆಹಾರ ನಿಗಮದಿಂದ ಅಕ್ಕಿ ಖರೀದಿಸಲು ಮುಂದಾಗಿದ್ದ ಕರ್ನಾಟಕ ಸರ್ಕಾರ, ಆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದಾಗ, ಅಕ್ಕಿ ದಾಸ್ತಾನು ಇಲ್ಲ ಎಂದು ನಿರಾಕರಿಸಲಾಗಿತ್ತು. ಆಗ ಕೆಜಿ ಅಕ್ಕಿಗೆ ರೂ.34 ತೆತ್ತು ಖರೀದಿಸಿ, ಜನರಿಗೆ ಉಚಿತವಾಗಿ ವಿತರಿಸುತ್ತೇವೆ ಎಂದು ಹೇಳಿದರೂ ನೀಡದೆ, ಈಗ ಚುನಾವಣೆ ಸಂದರ್ಭದಲ್ಲಿ ಕೆಜಿಗೆ 29 ರೂ.ಗಳಂತೆ ನೇರವಾಗಿ ಜನರಿಗೆ ಮಾರಾಟ ಮಾಡಲು ಹೊರಟಿದೆ. ಆ ಮೂಲಕ ಕೇಂದ್ರ ಸರ್ಕಾರ ಬಡವರಿಗೆ ನೀಡುವ ಅಕ್ಕಿಯಲ್ಲೂ ದಂಧೆ ಮಾಡುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು.

ಭಾರತ್‌ ಅಕ್ಕಿ ಯೋಜನೆಯಡಿಯಲ್ಲಿ ಪ್ರತಿ ಕೆಜಿಗೆ ರೂ. 29ರಂತೆ ಅಕ್ಕಿ ಮಾರಾಟ ಮಾಡಲು ಶಾಶ್ವತ ಮಳಿಗೆಗಳನ್ನು ತೆರೆಯದೇ, ಮೊಬೈಲ್‌ ವ್ಯಾನ್‌ಗಳ ಮೂಲಕ ಮಾರಾಟ ಮಾಡುವುದಾಗಿ ಹೇಳಲಾಗಿತ್ತು. ಆದರೆ, ಯಾವ ಏರಿಯಾದಲ್ಲಿ ಯಾವಾಗ ಅಕ್ಕಿ ಬರುತ್ತದೆ ಎಂಬ ಮಾಹಿತಿ ಬಡವರಿಗೆ ಇಲ್ಲ. ಜೊತೆಗೆ ಕಳೆದ ಕೆಲವು ದಿನಗಳಿಂದ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಈ ಭಾರತ್‌ ಅಕ್ಕಿ ವಿತರಣೆಯ ಮೊಬೈಲ್‌ ವ್ಯಾನುಗಳ ಜನರ ಕಣ್ಣಿಗೇ ಬೀಳುತ್ತಿಲ್ಲ. ಹಾಗಾಗಿ ʼಭಾರತ್‌ ಅಕ್ಕಿʼಗಾಗಿ ಕಾದು ಸಾರ್ವಜನಿಕರು ಹೈರಾಣಾಗಿದ್ದಾರೆ.

ಆ ಹಿನ್ನೆಲೆಯಲ್ಲಿ ಭಾರತ್‌ ಅಕ್ಕಿ ಎಲ್ಲಿ ಮತ್ತು ಯಾವಾಗ ಸಿಗುತ್ತದೆ? ಈವರೆಗೆ ಎಷ್ಟು ಅಕ್ಕಿ ವಿತರಿಸಲಾಗಿದೆ? ಬಡವರಿಗೆ ಎಷ್ಟು ಅನುಕೂಲವಾಗಿದೆ? ಎಂಬ ಮಾಹಿತಿಗಾಗಿ ʼದ ಫೆಡರಲ್‌ ಕರ್ನಾಟಕʼ ಅಧಿಕಾರಿಗಳನ್ನು ಸಂಪರ್ಕಿಸಿದರೆ ಅಧಿಕಾರಿಗಳು ಅಕ್ಷರಶಃ ಬಾಯಿ ಬಿಡುತ್ತಿಲ್ಲ!

ರಾಜ್ಯದಲ್ಲಿ ಇದುವರೆಗೂ ಎಷ್ಟು ಕ್ವಿಂಟಾಲ್‌ ಅಕ್ಕಿಯನ್ನು ವಿತರಿಸಲಾಗಿದೆ? ಯಾವ ಯಾವ ಏರಿಯಾಗಳಲ್ಲಿ ವಿತರಿಸಲಾಗಿದೆ? ಮತ್ತು ಯಾವ ಪ್ರದೇಶದಲ್ಲಿ ಯಾವ ದಿನ ಅಕ್ಕಿ ದೊರೆಯಲಿದೆ ಎಂಬುದರ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಸರಿಯಾದ ಯಾವುದೇ ಮಾಹಿತಿಯನ್ನು ನೀಡದೆ, ಒಬ್ಬರತ್ತ ಮತ್ತೊಬ್ಬರು ಬೊಟ್ಟು ಮಾಡಿ ಹೊಣೆಗಾರಿಕೆಯಿಂದ ನುಣುಚಿಕೊಂಡರು.

ಅದಾಗ್ಯೂ, ʼಭಾರತ್‌ ಅಕ್ಕಿಯನ್ನು ವಿತರಿಸುವ ದಿನ ಮತ್ತು ಸಮಯನ್ನು ಮೊದಲೇ ತಿಳಿಸಿದರೆ ಬೇರೆ ಏರಿಯಾಗಳ ಜನರೂ ಬಂದು ಖರೀದಿಸುವ ಸಾಧ್ಯತೆ ಇದೆ. ವಿತರಣೆಯ ಹೊಣೆ ಹೊತ್ತ ಏಜೆನ್ಸಿಗಳಲ್ಲಿ ದಾಸ್ತಾನಿನ ಕೊರತೆ ಇದೆ. ಬೇಡಿಕೆಗೆ ತಕ್ಕುದಾಗಿ ಪೂರೈಸಲು ಸಾಧ್ಯವಾಗುತ್ತಿಲ್ಲ, ಹಾಗಾಗಿ ಸಾರ್ವಜನಿಕರಿಗೆ ಮೊದಲೇ ಮಾಹಿತಿ ನೀಡುತ್ತಿಲ್ಲʼ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಅಧಿಕೃತ ಮಾಹಿತಿ ಪಡೆಯಲು ನಾಫೆಡ್‌ (NAFED)ನ ರಾಜ್ಯ ಮುಖ್ಯಸ್ಥೆ ಜ್ಯೋತಿ ಪಾಟೀಲ್‌ ಅವರನ್ನು ʼದಿ ಫೆಡೆರಲ್‌ ಕರ್ನಾಟಕʼ ಸಂಪರ್ಕಿಸಿದಾಗ ಸಮರ್ಪಕ ಮಾಹಿತಿ ನೀಡಲು ಅವರು ನಿರಾಕರಿಸಿದರು.

“ಭಾರತ್‌ ಅಕ್ಕಿಯ ವಿತರಣೆಗೆ ಅಕ್ಕಿ ಕೊರತೆ ಇದೆಯೇ, ಎಷ್ಟು ಪ್ರಮಾಣದಲ್ಲಿ ಅಕ್ಕಿ ವಿತರಿಸಲಾಗಿದೆ ಮತ್ತು ಈಗಿನ ಸ್ಥಿತಿಗತಿಯೇನು” ಎಂಬ ಪ್ರಶ್ನೆಯನ್ನು ನಾವು ಮುಂದಿಟ್ಟಾಗ, ಜ್ಯೋತಿ ಪಾಟೀಲ್‌, “ಭಾರತ್‌ ಅಕ್ಕಿಯ ಕುರಿತಾದ ಯಾವುದೇ ಮಾಹಿತಿ ಬೇಕಿದ್ದರೂ ದೆಹಲಿಯ ಕೇಂದ್ರ ಕಚೇರಿಯನ್ನೇ ಸಂಪರ್ಕಿಸಬೇಕು. ಭಾರತ್‌ ಅಕ್ಕಿ ವಿತರಣೆಗೆ ನಾಫೆಡ್‌, ಕೇಂದ್ರೀಯ ಭಂಡಾರ್‌ ಮತ್ತು ಎನ್‌ಸಿಸಿಎಫ್‌ಗಳಿಗೂ ಜವಾಬ್ದಾರಿ ನೀಡಲಾಗಿದೆ. ಆಯಾ ಏಜೆನ್ಸಿಗಳಿಗೆ ಹಂಚಿಕೆ ಮಾಡಿದ ಅಕ್ಕಿಯನ್ನು ವಿತರಿಸಲಾಗುತ್ತಿದೆ” ಎಂದು ತಿಳಿಸಿದರು. ʼರಾಜ್ಯದಲ್ಲಿ ಎಷ್ಟು ಪ್ರಮಾಣದಲ್ಲಿ ವಿತರಿಸಲಾಗಿದೆ?ʼ ಎಂದು ಪ್ರಶ್ನಿಸಿದಾಗ, ʼಹೆಚ್ಚಿನ ಮಾಹಿತಿ ಬೇಕಿದ್ದರೆ ದೆಹಲಿ ಹೆಡ್‌ ಕ್ವಾರ್ಟರ್ಸ್ ಸಂಪರ್ಕಿಸಿʼ ಎಂದು ಅವರು ಕರೆ ಕಡಿತ ಮಾಡಿದರು.

ಕೇಂದ್ರೀಯ ಭಂಡಾರ್‌ ಅಧಿಕಾರಿಗಳನ್ನು ಸಂಪರ್ಕಿಸಲು ʼದ ಫೆಡರಲ್‌ʼ ಪ್ರಯತ್ನಿಸಿತಾದರೂ ಅತ್ತ ಕಡೆಯಿಂದ ಕರೆ ಸ್ವೀಕರಿಸಲಿಲ್ಲ.

ಬಳಿಕ, ಭಾರತ್‌ ಅಕ್ಕಿ ಕುರಿತ ಮಾಹಿತಿಗಾಗಿ ʼಎನ್‌ಸಿಸಿಎಫ್‌ʼ ಕಚೇರಿಯನ್ನು ಸಂಪರ್ಕಿಸಲಾಯಿತು. ಅಲ್ಲೂ ಇದೇ ರೀತಿಯ ಅನುಭವ ಎದುರಿಸಬೇಕಾಯಿತು. ಭಾರತ್‌ ಅಕ್ಕಿಯ ಬಗ್ಗೆ ಯಾವುದೇ ಮಾಹಿತಿ ಬೇಕಿದ್ದರೂ ಇವರನ್ನು ಸಂಪರ್ಕಿಸಿ ಎಂದು ʼಕುಮಾರ್‌ʼ ಎಂಬವರ ದೂರವಾಣಿ ಸಂಖ್ಯೆಯನ್ನು ಎನ್‌ಸಿಸಿಎಫ್‌ʼ ಕಚೇರಿಯವರು ನೀಡಿದರು.

ಎನ್‌ಸಿಸಿಎಫ್‌ ಕಚೇರಿಯ ಅರೆಕಾಲಿಕ ಸಿಬ್ಬಂದಿಯಾದ ಕುಮಾರ್‌ ಅವರಿಗೆ ಕರೆ ಮಾಡಿ ʼಭಾರತ್‌ ಅಕ್ಕಿ ವಿತರಣೆ ಹೇಗಾಗುತ್ತಿದೆ? ವಿತರಣೆಗೆ ಅಕ್ಕಿ ಕೊರತೆ ಇದೆಯೇ?ʼ ಎಂದು ಪ್ರಶ್ನಿಸಿದಾಗ, “ನಮಗೆ ಎಫ್‌ಸಿಐ ನೀಡಿರುವ ಅಕ್ಕಿಯನ್ನು ನಾವು ವಿತರಿಸುತ್ತಿದ್ದೇವೆ. ಮೊದಲ ಹಂಚಿಕೆಯಲ್ಲಿ ನೀಡಿದ ಅಕ್ಕಿ ಖಾಲಿಯಾಗುತ್ತಾ ಬಂದಿದೆ” ಎಂದರು. ʼಮುಂದಿನ ಹಂಚಿಕೆ ಹೇಗೆ ಮತ್ತು ಯಾವಾಗ ಅಕ್ಕಿ ನಡೆಯುತ್ತದೆ?ʼ ಎಂದು ಪ್ರಶ್ನಿಸಿದಾಗ, “ಅದೆಲ್ಲಾ ಎಫ್‌ಸಿಐ ಮಾಹಿತಿ ನೀಡಬೇಕು, ಅವರನ್ನು ಸಂಪರ್ಕಿಸಿ” ಕುಮಾರ್‌ ಕರೆ ಕಡಿತ ಮಾಡಿದರು.

ನಂತರ, ಎಫ್‌ಸಿಐ (Food Corporation of India -FCI) ವ್ಯವಸ್ಥಾಪಕ ನಿರ್ಮಲ್‌ ಎಂಬವರನ್ನು ಸಂಪರ್ಕಿಸಿ, ಮಾಹಿತಿ ಕೇಳಿದಾಗ, “ಜನರಿಗೆ ಅಕ್ಕಿ ತಲುಪುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಏಜೆನ್ಸಿಗಳಿಗೆ, ಯಾವ ರೀತಿ ಹಂಚಿಕೆ ಮಾಡಲಾಗುತ್ತಿದೆ?” ಎಂದು ನಾವು ಕೇಳಿದಾಗ, "ಕೇಂದ್ರೀಯ ಭಂಡಾರ್‌, ನಾಫೆಡ್‌ ಮತ್ತು ಎನ್‌ಸಿಸಿಎಫ್‌ ಏಜೆನ್ಸಿಗಳಿಗೆ ಅಕ್ಕಿ ವಿತರಿಸುವ ಜವಾಬ್ದಾರಿ ಮಾತ್ರ ನಮಗಿದೆ. ನಾವು ಅವರಿಗೆ ವಿತರಿಸುತ್ತಿದ್ದೇವೆ. ಆ ಏಜೆನ್ಸಿಗಳು ಜನರಿಗೆ ಅಕ್ಕಿ ವಿತರಿಸಬೇಕು. ಹೆಚ್ಚಿನ ಮಾಹಿತಿ ಬೇಕಿದ್ದರೆ ಏಜೆನ್ಸಿಗಳನ್ನೇ ಸಂಪರ್ಕಿಸಬೇಕು" ಎಂದು ಅವರು ಕೂಡಾ ಅಸ್ಪಷ್ಟ ಮಾಹಿತಿ ನೀಡಿ ನುಣುಚಿಕೊಂಡರು. ಎನ್‌ಸಿಸಿಎಫ್‌ ಬೆಂಗಳೂರು ಶಾಖಾ ವ್ಯವಸ್ಥಾಪಕ ಬಿಜಯ್‌ ಟಿ ಜಾನ್‌ ಅವರನ್ನು ಸಂಪರ್ಕಿಸಲಾಯಿತು. ಆದರೆ, ಭಾರತ್‌ ಅಕ್ಕಿ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಅವರು ತಾವು ಬೆಂಗಳೂರಿನಲ್ಲಿ ಇಲ್ಲ ಎಂದು ಕರೆ ಕಡಿತ ಮಾಡಿದರು.

ಇನ್ನೊಂದೆಡೆ, ಆನ್ಲೈನ್‌ ಮಳಿಗೆಗಳಾದ ಅಮೇಝಾನ್‌, ಫ್ಲಿಪ್‌ಕಾರ್ಟ್ ನಲ್ಲಿ ಭಾರತ್‌ ರೈಸ್‌ ಲಭ್ಯವಿದೆಯೇ ಎಂದು ʼದಿ ಫೆಡೆರಲ್‌ ಕರ್ನಾಟಕʼ ಪರಿಶೀಲಿಸಿತು. ಅಮೇಝಾನ್‌ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಭಾರತ್‌ ಅಕ್ಕಿ ದೊರೆಯುತ್ತಿಲ್ಲ ಎಂಬ ಮಾಹಿತಿ ಸಿಕ್ಕಿತು. ರಿಲಯನ್ಸ್‌ ಜಿಯೋ ಮಾರ್ಟ್‌ ವೆಬ್‌ನಲ್ಲಿ ಭಾರತ್‌ ಅಕ್ಕಿ, ಭಾರತ್‌ ಅಟ್ಟವನ್ನು ಪಟ್ಟಿ ಮಾಡಲಾಗಿದೆಯಾದರೂ ಬೆಂಗಳೂರು, ದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲೂ ʼಔಟ್‌ ಆಫ್‌ ಸ್ಟಾಕ್‌ʼ ಎಂದು ತೋರಿಸುತ್ತಿದೆ. ಬಿಗ್‌ ಬಾಸ್ಕೆಟ್‌.ಕಾಂ ನಲ್ಲಿ ಭಾರತ್‌ ದಾಲ್‌ ಅನ್ನು ಪಟ್ಟಿ ಮಾಡಲಾಗಿದೆಯಾದರೂ ಅದೂ ಔಟ್‌ ಆಫ್‌ ಸ್ಟಾಕ್‌ ಎಂದು ತೋರಿಸುತ್ತಿದೆ. ಅಂದರೆ, ಆನ್‌ಲೈನ್‌ ಮಳಿಗೆಗಳಲ್ಲೂ ಭಾರತ್‌ ಅಕ್ಕಿ, ಬೇಳೆ ಸಿಗುತ್ತಿಲ್ಲ!

ಒಟ್ಟಾರೆ, ಭಾರತ್‌ ಅಕ್ಕಿ ಯೋಜನೆಯ ಪ್ರಸ್ತುತ ಸ್ಥಿತಿಗತಿಯೇನು? ಎಲ್ಲೆಲ್ಲಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ? ಈವರೆಗೆ ಎಷ್ಟು ವಿತರಣೆ ಮಾಡಲಾಗಿದೆ? ಬಡವರಿಗೆ ಯಾವಾಗ, ಎಲ್ಲಿ ಅಕ್ಕಿ ಸಿಗುತ್ತದೆ? ಎಂಬ ಮಾಹಿತಿ ಕೇಳಿದೊಡನೆ ಅಕ್ಕಿ ವಿತರಣೆಯ ಹೊಣೆ ಹೊತ್ತ ಸಂಸ್ಥೆಗಳ ಅಧಿಕಾರಿಗಳು ಮೈಮೇಲೆ ಬಿಸಿನೀರು ಬಿದ್ದವರಂತೆ ಬೆಚ್ಚಿಬೀಳುತ್ತಿದ್ದಾರೆ! ಸ್ಪಷ್ಟವಾಗಿ ಯಾವ ಮಾಹಿತಿಯನ್ನೂ ನೀಡಲು ಅವರು ನಿರಾಕರಿಸುತ್ತಿದ್ದಾರೆ! ಇದು ನಿಜಕ್ಕೂ ಕಗ್ಗಂಟಿನ ಒಗಟಾಗಿದೆ.

Read More
Next Story